ಯಕ್ಷ ಸಾಧಕರು 292

"ಯಕ್ಷ ಸಿರಿಲತೆ ಮತ್ತು ಕಲಾ ಶ್ರೀನಿಧಿ"

ಕರಾವಳಿ ತೀರದ ಜನರು ತಮ್ಮ ದೈನಂದಿನ ಬದುಕಲ್ಲಿ ಹಾಸು ಹೊಕ್ಕಾಗಿಸಿ ಬೆಳೆಸಿ ಉಳಿಸಿದ ಕಲೆಯೇ ಯಕ್ಷಗಾನ ಕಲೆ. ಅದು ಯಾವ ಪೂರ್ವ ವಾಸನೆ ಇಲ್ಲದವರನ್ನು ಕೂಡ ತನ್ನೊಳಗೆ ಸೆಳೆದುಕೊಂಡು ಹೇಗೆ ಬೆಳೆಸುತ್ತದೆ ಅನ್ನೋದೇ ಯಕ್ಷ ಪ್ರಶ್ನೆ. ಹಾಗೇ ಬೆಳೆದು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ತಾಯಿ ಮಗನ ಬಗ್ಗೆ ಇಂದು ನಮ್ಮ ಲೇಖನದಲ್ಲಿ ಪರಿಚಯ ಮಾಡುತ್ತಿದ್ದೇವೆ.

ಶ್ರೀಲತಾ ಹೊಳ್ಳ:-
ಉಡುಪಿ ಜಿಲ್ಲೆಯ ಸಾಲಿಗ್ರಾಮದ ನರಸಿಂಹ ಮಧ್ಯಸ್ಥ ಮತ್ತು ಸೀತಮ್ಮ ದಂಪತಿಯರ ಪುತ್ರಿಯಾಗಿ 23-02-1973 ರಂದು ಜನನ. ಎಂಟನೇ ತರಗತಿ ಇವರ ವಿದ್ಯಾಭ್ಯಾಸ. ಶ್ರೀಯುತ ಶ್ರೀನಿವಾಸ ಸಾಸ್ತಾನ ಇವರ ಯಕ್ಷಗಾನ ಗುರುಗಳು.


ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ:-
ಕುಟುಂಬದಲ್ಲಿ ಯಕ್ಷಗಾನದ ಹಿನ್ನೆಲೆ ಇಲ್ಲದಿದ್ದರೂ ಎಳವೆಯಿಂದಲೂ ಯಕ್ಷಗಾನವನ್ನು ನೋಡಿ ಬೆಳೆದು ಸ್ವಯಂ ಆಸಕ್ತಿಯಿಂದ ಈ ಕ್ಷೇತ್ರಕ್ಕೆ ಬಂದದ್ದು.




ನೆಚ್ಚಿನ ಪ್ರಸಂಗಗಳು:-
ಶಶಿಪ್ರಭಾ ಪರಿಣಯ, ಜಾಂಬವತಿ ಕಲ್ಯಾಣ, ಶ್ವೇತಕುಮಾರ ಚರಿತ್ರೆ, ಕನಕಾಂಗಿ ಕಲ್ಯಾಣ, ಕಂಸ ವಧೆ, ಪಂಚವಟಿ, ಕೃಷ್ಣಾರ್ಜುನ ಕಾಳಗ.

ನೆಚ್ಚಿನ ವೇಷಗಳು:-
ಶೂರ್ಪನಖಿ, ಕರಾಳನೇತ್ರೆ, ಪೂತನಿ, ಚಾಣೂರ, ದೂತಿ, ರಜಕ, ಭೀಮ, ಸತ್ರಾರ್ಜಿತ, ಕಂಸ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ನಡೆ ಮತ್ತು ಪಾತ್ರಗಳ ಕುರಿತಾಗಿ ವಿವರವಾದ ಅಧ್ಯಯನ. ತನ್ನ ಪಾತ್ರದ ಆಳ - ಅಗಲ ಮತ್ತು ವ್ಯಾಪ್ತಿಯಲ್ಲಿ ಹೇಗೆ ಉತ್ತಮವಾಗಿ ಮತ್ತು ವಿಭಿನ್ನವಾಗಿ ಪ್ರದರ್ಶನ ನೀಡಬಹುದೆಂಬ ಚಿಂತನೆ ಮಾಡಿ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಶ್ರೀಲತಾ ಹೊಳ್ಳ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಗಂಡುಕಲೆಯೆಂದೇ ಪ್ರಸಿದ್ಧವಾದ ಯಕ್ಷಗಾನ ಕಲೆಯಲ್ಲಿ ಮಹಿಳೆಯರಿಗೆ ಅವಕಾಶವಿಲ್ಲದ ಪರಿಸ್ಥಿತಿ ಹಿಂದೊಮ್ಮೆ ಇತ್ತು. ಅವರ ದೈಹಿಕ, ಮಾನಸಿಕ, ಸಾಮಾಜಿಕ ಸ್ಥಿತಿ ಈ ಕಲೆಯಲ್ಲಿ ಮಹಿಳೆಯರು ತೊಡಗಿಕೊಳ್ಳಲು ಅಡ್ಡಿಯಾಗುತ್ತಿತ್ತು. ಆದರೆ ಈಗ ವ್ಯವಸ್ಥೆಯಲ್ಲಿ ಬದಲಾವಣೆಯಾಗಿದೆ. ಮಹಿಳೆಯರು ಯಕ್ಷಗಾನವನ್ನು ಕಲಿಯಲು, ಕಲಿಸುವ ಅವಕಾಶಗಳಿವೆ. ಪೂರಕ ಅಧ್ಯಯನ, ಪುರಾಣಗಳ ಬಗೆಗಿನ ಜ್ಞಾನ, ಹೆಜ್ಜೆಗಾರಿಕೆಯಲ್ಲಿನ ಗಟ್ಟಿತನ ಮತ್ತು ಉತ್ತಮ ಅಭಿನಯದಿಂದಾಗಿ ಪುರುಷರಿಗೆ ಕಡಿಮೆ ಇಲ್ಲದಂತೆ ಮಹಿಳೆಯರು ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.



ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ:-
♦️ ಹೆಚ್ಚು ಹೆಚ್ಚು ಪ್ರದರ್ಶನಗಳನ್ನು ನೀಡುವುದರ ಮೂಲಕ ಯಕ್ಷಗಾನವನ್ನು ಪ್ರಪಂಚದ ಮೂಲೆ ಮೂಲೆಗೆ ತಲುಪಿಸುವ ಯೋಚನೆ ಇದೆ.
♦️ ಯಕ್ಷಶ್ರೀ ಕಲಾ ವೃಂದದ ಮೂಲಕ ಯಕ್ಷಗಾನ ಕಲಿಕಾಸಕ್ತರಿಗೆ ತರಬೇತಿ ನೀಡುವುದರ ಮೂಲಕ ಸಾಮಾನ್ಯ ಜನರೂ ವ್ಯವಸ್ಥಿತ ಪ್ರದರ್ಶನ ನೀಡುವಂತೆ ಮಾಡುವುದು.
♦️ ಕಲಿಕಾ ಹಂತದಲ್ಲಿರುವ ಮಕ್ಕಳು ತಮ್ಮ ಮುಖವರ್ಣಿಕೆಯನ್ನು ಮತ್ತು ವೇಷಭೂಷಣಗಳನ್ನು  ತಾವೇ ಸ್ವತಃ ಮಾಡಿಕೊಳ್ಳುವಂತೆ ತರಬೇತುಗೊಳಿಸುವುದು.

ಯಕ್ಷಗಾನವನ್ನು ನಿರಂತರ ಕಲಿಯುತ್ತಾ, ಕಲಿಸುತ್ತಾ ಒಬ್ಬ ಮಹಿಳೆಯಾಗಿ 18 ವರ್ಷಗಳಿಂದ 2000ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದಾರೆ. ಯಕ್ಷಗಾನದ ಪುಂಡು ವೇಷ, ಕಿರೀಟ ವೇಷ, ಹಾಸ್ಯ ಮತ್ತು ಬಣ್ಣದ ವೇಷ ಹೀಗೆ ಎಲ್ಲಾ ರೀತಿಯ ವೇಷಗಳನ್ನು ನಿರ್ವಹಿಸಿ ಮೆಚ್ಚುಗೆ ಪಡೆದ ಶ್ರೀಲತಾರವರು ಬಡಗು ಮತ್ತು ತೆಂಕು ಎರಡೂ ತಿಟ್ಟುಗಳಲ್ಲಿಯೂ ಪಾತ್ರ ನಿರ್ವಹಿಸುವ ಛಾತಿಯುಳ್ಳವರು. ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ ಸಾಮರ್ಥ್ಯ, ಸ್ಪಷ್ಟ ಉಚ್ಚಾರಣೆ, ಉತ್ತಮ ಹೆಜ್ಜೆಗಾರಿಕೆ ಮತ್ತು ಭಾವಪೂರ್ಣ ಅಭಿನಯದಿಂದಾಗಿ ತನ್ನದೇ ಛಾಪು ಮೂಡಿಸಿದ್ದಾರೆ. ಯಕ್ಷಗಾನ ಕಲೆಯು ಪರಿಶ್ರಮ ಮತ್ತು ಶ್ರದ್ಧೆಯನ್ನು ಅವಶ್ಯವಾಗಿ ಬಯಸುತ್ತದೆ. ಒಬ್ಬ ಗೃಹಿಣಿಯಾಗಿ ಮಕ್ಕಳು ಮತ್ತು ಗೃಹ ನಿರ್ವಹಣೆಯ ಜೊತೆಗೆ ಈ ಕಲೆಯನ್ನು ಗಂಭೀರವಾಗಿ ತೆಗೆದುಕೊಂಡು ಪ್ರದರ್ಶನಗಳನ್ನು ನೀಡುವಲ್ಲಿನ ಅವರ ತಾಳ್ಮೆ, ಪರಿಶ್ರಮದ ಜೊತೆಗೆ ಕಲೆಯೆಡೆಗಿನ ತುಡಿತ ಮತ್ತು ಪ್ರೀತಿಯನ್ನು ಎತ್ತಿ ಹಿಡಿಯುತ್ತದೆ. ಹಲವು ನುರಿತ ಕಲಾವಿದರೊಂದಿಗಿನ ಸಮನ್ವಯದಿಂದ ತಮ್ಮದೇ ತಂಡದ ಮೂಲಕ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸುತ್ತಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಭಾರತದಾದ್ಯಂತ ಹಲವಾರು ಪ್ರದರ್ಶನಗಳನ್ನು ನೀಡಿದ್ದಷ್ಟೇ ಅಲ್ಲದೇ ದುಬೈನಲ್ಲಿ ಕೂಡ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದು ಹಾಗೂ ಅತಿಥಿ ಕಲಾವಿದರಾಗಿ ಹಲವು ತಂಡಗಳೊಂದಿಗೆ ಪ್ರದರ್ಶನ ನೀಡಿರುತ್ತಾರೆ.

ಗೌರವ ಪ್ರಶಸ್ತಿ ಮತ್ತು ಸನ್ಮಾನ:-
♦️ ಬ್ರಹ್ಮ ಚೇತನ ಸಂಘ ಬೆಂಗಳೂರು.
♦️ ಆಯುರ್ವೇದ ಅಕಾಡೆಮಿ ಬೆಂಗಳೂರು.
♦️ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಅಭಿಜಾತೆ ಸನ್ಮಾನ.
♦️ ಯಕ್ಷಸಂಜೀವಿನಿ ಟ್ರಸ್ಟ್ ಬೆಂಗಳೂರು.
♦️ ಶ್ರೀ ಸರ್ವೇ ಜನಾಃ ಆರ್ಟ್ಸ್ ಮತ್ತು ಕಲ್ಚರಲ್ ಟ್ರಸ್ಟ್ ವತಿಯಿಂದ ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ.
♦️ ಅಕ್ಕನ ಮನೆ ಪ್ರತಿಷ್ಠಾನ ಬೆಂಗಳೂರು ಇವರಿಂದ ದೇಸೀ ದಿಬ್ಬಣ ಕಲಾಸಿರಿ ಪ್ರಶಸ್ತಿ.
♦️ ಸಲಾರ್ ಪುರಿಯ ಸತ್ವ ಲಾರೆಲ್ ಹೈಟ್ಸ್ ಅಪಾರ್ಟ್ಮೆಂಟ್ ಬೆಂಗಳೂರು ಇವರಿಂದ ಕನ್ನಡ ರಾಜ್ಯೋತ್ಸವದಂದು ಸನ್ಮಾನ.
ಇನ್ನೂ ಹಲವಾರು ಸನ್ಮಾನ ಗೌರವಗಳು ಲಭಿಸಿವೆ.




ಶ್ರೀಲತಾ ಹೊಳ್ಳ ಅವರು 2.05.1994ರಂದು ಶ್ರೀನಿವಾಸ ಹೊಳ್ಳ ಅವರನ್ನು ಮದುವೆಯಾಗಿ ಮಕ್ಕಳಾದ ಶ್ರೀನಿಧಿ ಹೊಳ್ಳ ಹಾಗೂ ಶ್ರೀವತ್ಸ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.

ಶ್ರೀನಿಧಿ ಹೊಳ್ಳ ಎಂ.ಎಸ್:-
ಶ್ರೀನಿವಾಸ ಹೊಳ್ಳ ಮತ್ತು ಶ್ರೀಲತಾ ಹೊಳ್ಳ ದಂಪತಿಯ ಸುಪುತ್ರನಾಗಿ 15 -03-1998ರಂದು ಜನನ. ಪಿಯುಸಿ ಇವರ ವಿದ್ಯಾಭ್ಯಾಸ.
ದಿ.ವೇಣುಗೋಪಾಲ, ಶಂಕರ ಬಾಳಕುದ್ರು, ಶ್ರೀನಿವಾಸ ಸಾಸ್ತಾನ, ಕೃಷ್ಣಮೂರ್ತಿ ತುಂಗ ಇವರ ಯಕ್ಷಗಾನ ಗುರುಗಳು. ಯಕ್ಷಗಾನ ರಂಗಕ್ಕೆ ಬರಲು ಇವರ ತಾಯಿಯೇ ಪ್ರೇರಣೆ.

ನೆಚ್ಚಿನ ಪ್ರಸಂಗಗಳು:-
ಜಾಂಬವತಿ ಕಲ್ಯಾಣ, ಅಭಿಮನ್ಯು ಕಾಳಗ, ವೃಷಸೇನ ಕಾಳಗ, ಕೃಷ್ಣಾರ್ಜುನ ಕಾಳಗ, ದಕ್ಷಯಜ್ಞ, ಭಸ್ಮಾಸುರ ಮೋಹಿನಿ.







ನೆಚ್ಚಿನ ವೇಷಗಳು:-
ಜಾಂಬವ, ಕಂಸ, ಕೃಷ್ಣ, ಅರ್ಜುನ, ದಾರುಕ, ದಾಕ್ಷಾಯಿಣಿ, ವೀರಮಣಿ, ಶತ್ರುಪ್ರಸೂದನ.

ಪ್ರಸಂಗ ಸಾಹಿತ್ಯದ ಪೂರ್ಣ ಅಧ್ಯಯನ, ಪಾತ್ರಗಳ ಕುರಿತಾದ ಅಧ್ಯಯನ ಮಾಡಿ ರಂಗಕ್ಕೆ ಹೋಗುವ ಮೊದಲು ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಶ್ರೀನಿಧಿ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದ ಇಂದಿನ ಸ್ಥಿತಿ ಬಹಳಷ್ಟು ಸುಧಾರಿಸಿದೆ. ಹಿಂದೆ ಒಂದು ಪ್ರದರ್ಶನ ಕಾಣಬೇಕಿದ್ದರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ರಂಗಪರಿಕರಗಳೊಡನೆ ಪ್ರಯಾಣಿಸುವುದೇ ದುಸ್ತರವಾಗಿತ್ತು. ಆರು ತಿಂಗಳ ಮಳೆಗಾಲದಲ್ಲಿ ಪ್ರದರ್ಶನಗಳು ನಡೆಯುತ್ತಿರಲಿಲ್ಲ. ಆದರೆ ಕಾಲ ಬದಲಾದಂತೆ ಉತ್ತಮ ಸಂಪರ್ಕ ವ್ಯವಸ್ಥೆಗಳಿಂದಾಗಿ ಹೆಚ್ಚು ಹೆಚ್ಚು ಪ್ರದರ್ಶನಗಳೂ ಸಾಧ್ಯವಾಗಿದೆ. ಬಯಲಾಟದ ಮೇಳಗಳ ಸಂಖ್ಯೆ ಅಧಿಕವಾಗಿದ್ದು ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಪ್ರದರ್ಶನಗಳು ಮುಂಗಡವಾಗಿ ಕಾಯ್ದಿರಿಸಲಾಗಿರುವುದು ಯಕ್ಷಗಾನದ ನಿರಂತರತೆಗೆ ಸಾಕ್ಷಿಯಾಗಿದೆ. ಸೀಮಿತ ಪರಿಕರಗಳ ಬಳಕೆ. ಕಾಲ ಕಳೆದಂತೆ ಉತ್ತಮವಾದ ಮತ್ತು ವೈವಿಧ್ಯಮಯ ಪರಿಕರಗಳೊಂದಿಗೆ ಆಕರ್ಷಕ ಪ್ರದರ್ಶನ ಕೊಡುವಂತೆ ಬದಲಾಗಿದೆ.. ಯುವ ಜನತೆ ಕೂಡ ಯಕ್ಷಗಾನದ ಕಲಿಕೆಯ ಕಡೆ ಆಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಕಲಾವಿದರು ಅಧ್ಯಯನಶೀಲರಾಗುವ ಅಗತ್ಯತೆ ಮನಗಂಡಿದ್ದಾರೆ. ಸಾಂಪ್ರದಾಯಿಕ ಶೈಲಿಯ ಯಕ್ಷಗಾನದ ಪೂರ್ಣ ಪ್ರಮಾಣದಲ್ಲಿ ಕಾಣಲು ಅಸಾಧ್ಯವಾದರೂ ಕಾಲಕ್ಕೆ ತಕ್ಕಂತೆ ಹೊಸತನದ ಬದಲಾವಣೆ ಜನರಿಗೆ ಒಪ್ಪಿಗೆಯಾಗಿದೆ. ಆಧುನಿಕತೆ ಬೆಳೆದಂತೆಲ್ಲ ಯಕ್ಷಗಾನದ ವ್ಯಾಪ್ತಿ ಬರೀ ಮಲೆನಾಡು ಕರಾವಳಿಯನ್ನು ಮೀರಿ ದೇಶ - ವಿದೇಶದಾದ್ಯಂತ ತಲುಪಿದೆ.

ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ:-
♦ ಹೆಚ್ಚು ಹೆಚ್ಚು ಪ್ರದರ್ಶನಗಳನ್ನು ನೀಡುವುದರ ಮೂಲಕ ಯಕ್ಷಗಾನವನ್ನು ಪ್ರಪಂಚದ ಮೂಲೆ ಮೂಲೆಗೆ ತಲುಪಿಸುವ ಯೋಜನೆ.
♦ ಆಸಕ್ತರಿಗೆ ಯಕ್ಷಗಾನದ ಶಿಕ್ಷಣವನ್ನು ನೀಡುವುದರ ಮೂಲಕ ಅವರನ್ನು ಸಜ್ಜುಗೊಳಿಸಿ ನೂರಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಅಧಿಕ ಪ್ರದರ್ಶನಗಳನ್ನು ನೀಡುವ ಯೋಜನೆ ಇದೆ.
♦ ಕಲಿಕಾರ್ಥಿಗಳಿಗೆ ಬರೀ ಹೆಜ್ಜೆಗಾರಿಕೆ ಮಾತ್ರವಲ್ಲದೇ ಅರ್ಥ ಹೇಳುವ ಕ್ರಮ, ದಾಟಿ, ಪದ್ಯಗಳನ್ನು ಹಾಡುವ ಕ್ರಮ, ಬಣ್ಣಗಾರಿಕೆ, ವೇಷಭೂಷಣಗಳನ್ನು ಕಟ್ಟಿಕೊಳ್ಳುವುದು ಈ ಎಲ್ಲವನ್ನು ಸ್ವತಃ ತಾವೇ ಸ್ವತಂತ್ರವಾಗಿ ನಿರ್ವಹಿಸುವಂತೆ ತಯಾರಿ ಮಾಡುವುದು.







ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು ಎಂಬಂತೆ ತಾಯಿ ಶ್ರೀಲತಾ ಹೊಳ್ಳರು ಯಕ್ಷಗಾನ ಕಲಾವಿದೆಯಾಗಿದ್ದ ಕಾರಣ ಸಹಜವಾಗಿ ಯಕ್ಷಗಾನದ ಪರಿಸರದಲ್ಲೇ ಬೆಳೆದವರು ಶ್ರೀನಿಧಿ. ಮೊದಲಿಗೆ ಯಕ್ಷಗಾನದ ಬಗ್ಗೆ ಆಸಕ್ತಿ ಇಲ್ಲದಿದ್ದರೂ ತಾಯಿಯ ಒತ್ತಾಯದಿಂದಲೇ ಕಲಿಕೆ ಪ್ರಾರಂಭಿಸಿದರೂ ನಂತರ ಬಣ್ಣದ ಆಕರ್ಷಣೆ ಹೆಚ್ಚಿತು. ಯಕ್ಷಗಾನದ ಹುಚ್ಚು ಎಷ್ಟು ಶುರುವಾಯಿತು ಎಂದರೆ ಕಾಲೇಜು ಶಿಕ್ಷಣವನ್ನು ಮೀರಿ ಯಕ್ಷಗಾನದ ಮೇಲಿನ ಪ್ರೀತಿ ಮುಂದುವರೆಯಿತು. ತಮ್ಮ 8ನೇ ವಯಸ್ಸಿನಲ್ಲಿ 2 ವರ್ಷ ಭರತನಾಟ್ಯವನ್ನು ಅಭ್ಯಸಿಸಿ ನಂತರ 10 ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಯಕ್ಷಗಾನವನ್ನು ಕಲಿತು 30ಕ್ಕೂ ಹೆಚ್ಚು ಪ್ರಸಂಗ ಪ್ರದರ್ಶನಗಳನ್ನು, 2000ಕ್ಕೂ ಹೆಚ್ಚಿನ ಕಾರ್ಪೊರೇಟ್ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲೂ ನೀಡಿರುವುದು ಹೆಮ್ಮೆಯ ವಿಷಯ. ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ ಸಾಮರ್ಥ್ಯ, ಸ್ಪಷ್ಟ ಉಚ್ಚಾರಣೆ, ಉತ್ತಮ ಹೆಜ್ಜೆಗಾರಿಕೆ ಮತ್ತು ಭಾವಪೂರ್ಣ ಅಭಿನಯದಿಂದಾಗಿ ಯಕ್ಷರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುವುದರ ಮೂಲಕ ಹಿರಿಯ ಕಲಾವಿದರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಯಕ್ಷಗಾನವನ್ನು ಜಗದಗಲ ಪ್ರಚುರಪಡಿಸುವ ಆಶಯದಿಂದ 2018ರಲ್ಲಿ 'ಯಕ್ಷಶ್ರೀ ಕಲಾವೃಂದ' ಎಂಬ ಸ್ವಂತ ಸಂಸ್ಥೆಯನ್ನು ಪ್ರಾರಂಭಿಸಿ ತನ್ಮೂಲಕ ಯುವ ಪೀಳಿಗೆಯನ್ನು ಯಕ್ಷಗಾನದತ್ತ ಸೆಳೆಯುವ ನಿಟ್ಟಿನಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ತರಗತಿಗಳನ್ನು ನಡೆಸುತ್ತಿದ್ದು ಮಕ್ಕಳ ತಂಡವೂ ಕಾಲಮಿತಿ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನ ರಂಜಿಸುವಲ್ಲಿ ಯಶಸ್ವಿಯಾಗಿದೆ.

ಅಷ್ಟೇ ಅಲ್ಲದೆ ಸಂಸ್ಥೆಯು ಉಭಯ ತಿಟ್ಟುಗಳ ವಿಭಿನ್ನ ರೀತಿಯ ವೇಷ ಭೂಷಣಗಳನ್ನು ಹೊಂದಿದ್ದು ಆಸಕ್ತ ಶಾಲಾ ಕಾಲೇಜುಗಳಲ್ಲಿ ಕೂಡ ಯಕ್ಷ ನೃತ್ಯ ಸಂಯೋಜನೆಯನ್ನು ಮಾಡಿ ಕಲೆಯನ್ನು ಪ್ರದರ್ಶಿಸುವಲ್ಲಿ ಸಫಲವಾಗಿದೆ. ಅಲ್ಲದೆ ಅತಿಥಿ ಕಲಾವಿದನಾಗಿ ಪೆರ್ಡೂರು ಮೇಳದಲ್ಲಿ ಪ್ರದರ್ಶನ ನೀಡಿದ ಅನುಭವ.



ಗೌರವ, ಪ್ರಶಸ್ತಿ ಹಾಗೂ ಸನ್ಮಾನಗಳು:-
♦ 2016ರಲ್ಲಿ ಶೃಂಗೇರಿ ಶಂಕರ ಮಠದಲ್ಲಿ ನಡೆದ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವದಲ್ಲಿ ಆಶೀರ್ವಾದಪೂರ್ವಕವಾಗಿ ನೀಡಿದ ಪ್ರಮಾಣ ಪತ್ರ.
♦ 2017ರಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಪ್ರಮಾಣ ಪತ್ರ.
♦ 2017ರಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ನಡೆದ ಜನಪರ ಉತ್ಸವ ಕಾರ್ಯಕ್ರಮದ ಪ್ರಮಾಣ ಪತ್ರ.
♦ 2017ರಲ್ಲಿ ರೇವಾ ವಿಶ್ವ ವಿದ್ಯಾನಿಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನ.
♦ 2018ರಲ್ಲಿ ವಿಜಯ ಕಾಲೇಜ್ ಬೆಂಗಳೂರಿನ ರಾಜ್ಯ ಮಟ್ಟದ ಜನಪದ ನೃತ್ಯ ಸ್ಪರ್ಧೆಯಲ್ಲಿ ಜಯ.
♦ 2020ರಲ್ಲಿ ಮೈಸೂರಿನ ರಂಗಾಯಣದಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದ ಪ್ರಮಾಣ ಪತ್ರ.
♦ 2020ರಲ್ಲಿ ಅಖಿಲ ಭಾರತ ವಲಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶನ.
♦ 2022ರಲ್ಲಿ ಆರ್ಯಭಟ ಕಲ್ಚರಲ್ ಆರ್ಗನೈಸೇಶನ್ ನಿಂದ ಆರ್ಯಭಟ ಇಂಟರ್ ನ್ಯಾಷನಲ್ ಅವಾರ್ಡ್.
♦ 2022ರಲ್ಲಿ ಅಕ್ಕನಮನೆ ಪ್ರತಿಷ್ಠಾನದ ವತಿಯಿಂದ ದೇಸೀ ದಿಬ್ಬಣ ಕಲಾಸಿರಿ ಪ್ರಶಸ್ತಿ.
♦ ಶ್ರೀ ಲಲಿತಾ ಕಲಾ ನಿಕೇತನದ ವಾರ್ಷಿಕೋತ್ಸವ ಪ್ರಶಸ್ತಿ.
ಈಶ ಫೌಂಡೇಶನ್, ಕೊಯಂಬತ್ತೂರಿನಲ್ಲಿ ಪ್ರದರ್ಶನ.
ಸ್ಟಾರ್ ಮಾ ತೆಲುಗು ವಾಹಿನಿಯಲ್ಲಿ ಪ್ರದರ್ಶನ.
ದಿಗ್ವಿಜಯ ವಾರ್ತಾ ವಾಹಿನಿಯಲ್ಲಿ ಪ್ರದರ್ಶನ ನೀಡಿರುತ್ತಾರೆ ಶ್ರೀನಿಧಿ.
ಬ್ಯಾಡ್ ಮಿಂಟನ್, ಚಿತ್ರ ಬಿಡಿಸುವುದು, ಸಾಹಿತ್ಯ ಅಧ್ಯಯನ ಇವರ ಹವ್ಯಾಸಗಳು.










ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

  1. ಚೆನ್ನಾಗಿದೆ.. ಸಾಧಕ ಸರಣಿ ಹೀಗೇ ಮುಂದುವರೆಯಲಿ

    ReplyDelete

Post a Comment

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395