ಯಕ್ಷ ಸಾಧಕರು 296
"ಯಕ್ಷಸಿದ್ಧಿಯ ಕಲಾ ಕನ್ಯೆ"
ಗಂಡು ಕಲೆ ಎಂದು ಕರೆಸಿಕೊಳ್ಳುವ ಯಕ್ಷಗಾನದಲ್ಲಿ ಇತ್ತೀಚಿನ ದಿನಗಳಲ್ಲಿ ನಮಗೆ ಅನೇಕ ಮಹಿಳಾ ಕಲಾವಿದೆಯರು ಕಾಣಲು ಸಿಗುತ್ತಾರೆ. ಇಂತಹ ಮಹಿಳಾ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಯುವ ಮಹಿಳಾ ಕಲಾವಿದೆ ಕಾಂಚಿಕಾ ಭಟ್.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಡತೋಕ ಗ್ರಾಮದಲ್ಲಿ 30.04.1991 ರಂದು ಪ್ರಸಿದ್ಧ ಭಾಗವತರು ಉಮೇಶ್ ಭಟ್ ಬಾಡ ಹಾಗೂ ಮಹಾಲಕ್ಷ್ಮಿ ಇವರ ಮಗಳಾಗಿ ಜನನ. ಬಿಕಾಂ ಇವರ ವಿದ್ಯಾಭ್ಯಾಸ. ತಂದೆ ಉಮೇಶ್ ಭಟ್ ಬಾಡ ಇವರ ಯಕ್ಷಗಾನ ಗುರುಗಳು.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ:-
ಪ್ರೇರಣೆ ನನ್ನ ತಂದೆ ಮತ್ತು ಕುಟುಂಬ. ನನ್ನ ಚಿಕ್ಕ ವಯಸ್ಸು 4ನೇ ವರ್ಷದಲ್ಲಿ ಬಣ್ಣ ಹಚ್ಚಲಿಕ್ಕೆ ಶುರು ಮಾಡಿದ್ದು. ನಮ್ಮದೇ ಚಿಣ್ಣರ ಮೇಳ ಇತ್ತು "ಸಿದ್ಧಿ ವಿನಾಯಕ ಯಕ್ಷಗಾನ ಕಲಾ ಸಂಘ ". ನನ್ನ ಹೆಚ್ಚಿನ ವೇಷ ಅಲ್ಲೇ ಮಾಡಿದ್ದು.
ಲವ ಕುಶ, ಗದಾಯುದ್ಧ, ಸುಧಾನ್ವಾರ್ಜುನ, ಧರ್ಮಾಂಗಧ ದಿಗ್ವಿಜಯ ಎಲ್ಲಾ ಹಳೆಯ ಪ್ರಸಂಗ ಇವರ ನೆಚ್ಚಿನ ಪ್ರಸಂಗಗಳು.
ಕುಶ, ಕೃಷ್ಣ, ಸುಧನ್ವ, ರಾಮ, ಹನುಮಂತ ಇತ್ಯಾದಿ ನೆಚ್ಚಿನ ವೇಷಗಳು.
ಪ್ರಸಂಗದ ನನ್ನ ಪಾತ್ರದ ಪದ್ಯಗಳು ನನ್ನ ಎದುರಿನ ಪಾತ್ರ ಪರಿಚಯ ಹಾಗೂ ನನ್ನ ಪಾತ್ರದ ಅರ್ಥಗಾರಿಕೆ ಕುರಿತು ಚಿಂತನೆ ಮಾಡಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಕಾಂಚಿಕಾ ಭಟ್.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಹಳ ಚೆನ್ನಾಗಿದೆ. ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತಿದೆ. ಆದರೆ ಸಾಮಾಜಿಕ ಪ್ರಸಂಗಗಳು ಜಾಸ್ತಿ ಆಗಿದೆ. ಪೌರಾಣಿಕ ಪ್ರಸಂಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕು ಮತ್ತು ಬಹಳ ಮುಖ್ಯ ವಿಷಯ ಟಿವಿ ಶೋಗಳಲ್ಲಿ ಸಿನಿಮಾಗಳ ಹಾಡಿಗೆ ಯಕ್ಷಗಾನ ವೇಷ ಹಾಕಿ ಕುಣಿಯಬೇಡಿ ಅಂತ ಮನವಿ.
ಯಕ್ಷಗಾನದ್ದೆ ಬೇಕಷ್ಟು ಪದ್ಯಗಳಿವೆ, ಅವುಗಳಿಗೆ ಮಾಡಿದರೆ ಬಹಳ ಚಂದ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕುಣಿತಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿದೆ. ಮಾತುಗಾರಿಕೆಗು ಹೆಚ್ಚಿನ ಪ್ರಾಧಾನ್ಯತೆ ಸಿಗಲಿ ಎಂಬುದು ಆಶಯ. ಇವಾಗ ಹೆಚ್ಚಿನ ಹಳೆಯ ಮಾತುಗಾರಿಕೆ ಕಡಿಮೆ ಆಗಿದೆ.
"ಯಕ್ಷ ಕಾರ್ಣಿಕ" ಎಂಬ ಒಂದು ಯಕ್ಷಗಾನ ಟೀಮ್ ಮಾಡಿ ಸಾಂಪ್ರದಾಯಿಕ ಕುಣಿತ ಮತ್ತು ಮಾತಿಗೆ ಪ್ರಾಧಾನ್ಯತೆ ಕೊಡಬೇಕು ಎಂಬುದು ನನ್ನ ಮುಂದಿನ ಯೋಜನೆ ಎಂದು ಹೇಳುತ್ತಾರೆ ಕಾಂಚಿಕಾ ಭಟ್.
ಇವರದೇ ಮೇಳ ಆಗಿರುವ ಶ್ರೀ ಸಿದ್ಧಿ ವಿನಾಯಕ ಕಲಾ ಸಂಘ, ಮತ್ತು ಬೆಂಗಳೂರಿನಲ್ಲಿ ಕೆಲವು ಮಹಿಳಾ ಮೇಳಗಳ ಜೊತೆಗೆ ತಿರುಗಾಟ ಮಾಡಿದ ಅನುಭವ ಇವರದು.
ಓದುವುದು, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು, ಏಕವ್ಯಕ್ತಿ ಯಕ್ಷ ನೃತ್ಯ ಇವರ ಹವ್ಯಾಸಗಳು.
ಪ್ರಶಸ್ತಿ ಯಾವುದು ದೊರೆತಿಲ್ಲ. ಅಯೋಧ್ಯೆ ಶ್ರೀ ರಾಮನ ಮುಂದೆ ಯಕ್ಷಗಾನ ಪ್ರದರ್ಶನ ನೀಡಿದ್ದು ನನ್ನ ದೊಡ್ಡ ಸಾಧನೆ ಅಂತ ಭಾವಿಸುತ್ತೇನೆ. ಯಾಕೆಂದರೆ ದೊಡ್ಡ ದೊಡ್ಡ ಸಾಧನೆ ಮಾಡಿದವರಿಗೂ ಆ ಅವಕಾಶ ದೊರೆಯುವುದು ಕಷ್ಟ. ಕೆಲವು ಕಡೆ ಸನ್ಮಾನ ದೊರೆತಿದೆ.
ಕಾಂಚಿಕಾ ಭಟ್ ಅವರು 18-5-2011ರಂದು ಖ್ಯಾತ ಜೋತಿಷ್ಯರಾದ ಆಚಾರ್ಯ ಶ್ರೀ ವಿಠ್ಠಲ್ ಭಟ್ ಇವರನ್ನು ಮದುವೆಯಾಗಿ ಮಕ್ಕಳಾದ ಶ್ರೀವರ್ಣ ರಾಜರಾಜೇಶ್ವರಿ, ಪಂಚಮಿ, ವಿಧಾತ್ರಿ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ ತಾಯಿ ಪತಿಯ ಪ್ರೋತ್ಸಾಹ ಹಾಗೂ ಗುರು-ಹಿರಿಯ ಕಲಾವಿದರ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಮುನ್ನಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳುತ್ತಾರೆ ಕಾಂಚಿಕಾ ಭಟ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 831746370
Comments
Post a Comment