ಯಕ್ಷ ಸಾಧಕರು 298
"ಕಲಾಸಿದ್ಧಿಯ ಯಕ್ಷೋತ್ತಮ"
ವೃತ್ತಿಯಲ್ಲಿ ಪ್ರಾಧ್ಯಾಪಕ, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರಾಗಿ ಮಿಂಚುತ್ತಿರುವವರು ಅನಂತ ಮೂರ್ತಿ.
21.09.1983ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನ ಕಾಟಿಪಳ್ಳದಲ್ಲಿ ಎ.ರಾಮಚಂದ್ರ ಭಟ್ ಹಾಗೂ ಶ್ರೀಮತಿ ಪದ್ಮಾವತಿ ಇವರ ಮಗನಾಗಿ ಜನನ. ಎಂಸಿಎ, PhD (Thesis submitted) (in Design and Development of Novel Methodologies to Identify Character in Yakshagana Images using Machine Learning) ಇವರ ವಿದ್ಯಾಭ್ಯಾಸ. ಪ್ರಸ್ತುತ ಕಾರ್ಕಳದ ನಿಟ್ಟೆ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಸಿಎ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಳೆದ 15 ವರುಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತಂದೆ ತಾಯಿ, ಕುಬಣೂರು ಶ್ರೀಧರ ರಾಯರು , ಪುಂಡಿಕೈ ಗೋಪಾಲಕೃಷ್ಣ ಭಟ್, ಸುತ್ತಮುತ್ತಲಿನ ಯಕ್ಷಗಾನ ಪರಿಸರ ಇವರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು.
ತಂದೆ ರಾಮಚಂದ್ರ ಭಟ್, ಸುಬ್ರಾಯ ಹೊಳ್ಳ ಕಾಸರಗೋಡು, ಎಲ್ಲೂರು ರಾಮಚಂದ್ರ ರಾವ್ ಕದ್ರಿ, ಡಾ.ಜನಾರ್ಧನ್ ನಾಯಕ್ ನಿಟ್ಟೆ ಇವರ ಯಕ್ಷಗಾನ ಗುರುಗಳು.
ಸಣ್ಣಗಿರುವಾಗ ಆಟ ನಡೆಯುತ್ತಿರುವಾಗ ಮೊದಲಿನ ಸಾಲಿನಲ್ಲಿ ಕುಳಿತು ಹೆಜ್ಜೆಗಳನ್ನು ಗಮನಿಸುತ್ತಾ ಇದ್ದೆ. ಮತ್ತೆ ಮನೆಯಲ್ಲಿ CD ಹಾಕಿ, ಹೆಜ್ಜೆ ಕಲಿಯಲು ಪ್ರಾರಂಭಿಸಿದೆ. ನನ್ನ ಮೊದಲ ಗುರುಗಳು CD ಅಂತಲೇ ಹೇಳಬಹುದು ಎಂದು ಇವರು ಹೇಳುತ್ತಾರೆ.
ದೇವಿ ಮಹಾತ್ಮೆ , ಲಲಿತೋಪಖ್ಯಾನ , ಕಟೀಲು ಕ್ಷೇತ್ರ ಮಹಾತ್ಮೆ ಅತೀ ನೆಚ್ಚಿನ ಪ್ರಸಂಗಗಳು. ಮತ್ತೆ ಎಲ್ಲ ಪೌರಾಣಿಕ ಕಥೆಗಳು ಪ್ರಿಯವಾದದ್ದೆ.
ದೇವೇಂದ್ರ, ಜಾಂಬವ, ಶಿಶುಪಾಲ, ಅರ್ಜುನ, ಮಧು-ಕೈಟಭ ಮೊದಲಾದ ಕಿರೀಟ ವೇಷಗಳು; ರುಕ್ಮಾಂಗ ಶುಭಾಂಗ, ಅಭಿಮನ್ಯು, ಶ್ವೇತ ಕುಮಾರ, ನಹುಷ ಮೊದಲಾದ ಪುಂಡು ವೇಷಗಳು ಹಾಗೂ ಹಾಸ್ಯ ಪಾತ್ರಗಳು ಇವರ ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗದ ಪದ್ಯಗಳ ಅಧ್ಯಯನ, ಪ್ರಸಂಗದ ನಡೆ ತಿಳಿದುಕೊಂಡು, ಭಾಗವತರಲ್ಲಿ, ಗುರುಗಳಲ್ಲಿ, ನನ್ನ ತಮ್ಮನಲ್ಲಿ ಪ್ರಸಂಗದ ಅರ್ಥಗಾರಿಕೆಯ ಬಗ್ಗೆ ವಿಮರ್ಷಿಸುತ್ತೇನೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇತ್ತೀಚಿನ ದಿನಗಳಲ್ಲಿ ಯಕ್ಷಗಾನಕ್ಕೆ ಪ್ರೇಕ್ಷಕರು ಜಾಸ್ತಿ ಆದರೂ, ದೇವಿ ಮಹಾತ್ಮೆಯನ್ನು ಹೊರತು ಪಡಿಸಿ, ಬೇರೆ ಪ್ರಸಂಗವನ್ನು ಇಷ್ಟ ಪಡುವ ಜನರು ಬಹಳ ಕಮ್ಮಿ. ಇದುವೇ ಖೇದದ ವಿಚಾರ. ಆಟ ಆಡಿಸುವವವರೂ ಕೂಡ ಬೇರೆ ಪ್ರಸಂಗಗಳ ಮೇಲೆ ಒಲವು ತೋರಿಸಬೇಕು, ಇಲ್ಲದಿದ್ದರೆ ಎಷ್ಟೋ ಪ್ರಸಂಗಗಳು ಮೂಲೆ ಸೇರುತ್ತವೆ. ಸಂತೋಷದ ಸಂಗತಿ ಎಂದರೆ ಇತ್ತೀಚಿನ ದಿನಗಳಲ್ಲಿ ಯುವಕರು ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿರುವಾಗಲೇ ಯಕ್ಷಗಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಯಕ್ಷಗಾನದ ಭವಿಷ್ಯ ಉಜ್ವಲವಾಗಿದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನವನ್ನು ಕಲಿಯುವವರಿಗೆ ಅನುಕೂಲವಾಗುವಂತೆ ಒಂದು ತಂತ್ರಜ್ಞಾನವನ್ನು ಕಂಡುಹಿಡಿಯಬೇಕು. ಅದು ವೇಷಭೂಷಣದ ಬಗ್ಗೆ, ಮೇಕಪ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುವಂತಿರಬೇಕು ಎನ್ನುವ ಆಸೆ. ನನ್ನ PhD ಇದುವೇ ಉದ್ದೇಶವನ್ನು ಇಟ್ಟುಕೊಂಡಿದೆ.
ಶ್ರೀ ದುರ್ಗಾಂಬಾ ಯಕ್ಷಗಾನ ಮಂಡಳಿ ತಡಂಬೈಲು, ಕದ್ರಿ ಯಕ್ಷ ಕೂಟ, ಯಕ್ಷ ಕಲಾಕೇಂದ್ರ ನಿಟ್ಟೆ, ಶ್ರೀಕೃಷ್ಣ ಮುಖ್ಯಪ್ರಾಣ ಹವ್ಯಾಸಿ ಯಕ್ಷಗಾನ ಬಳಗ ಹೊಸಬೆಟ್ಟು, ಇರುವೈಲು ಮೇಳ, ನವರಾತ್ರಿ ಸಂದರ್ಭದಲ್ಲಿ ಸುರತ್ಕಲ್ ಮಾರಿಗುಡಿಯಲ್ಲಿ ಹಾಗೂ ಕಟೀಲು ಮೇಳದಲ್ಲಿ ವೇಷ ಮಾಡಿ ಅನುಭವ.
ಅಡುಗೆ ಮಾಡುವುದು, ಗಾರ್ಡನಿಂಗ್, ನನಗೆ ತಿಳಿದ ಮಟ್ಟಿಗೆ ಯಕ್ಷಗಾನದ ಹೆಜ್ಜೆ ಹಾಗೂ ಅರ್ಥಗಾರಿಕೆಯನ್ನು ಕೇಳಿದವರಿಗೆ ಹೇಳಿಕೊಡವುದು ನನ್ನ ಹವ್ಯಾಸ ಎನ್ನುತ್ತಾರೆ ಅನಂತ ಮೂರ್ತಿ.
ಅನಂತ ಮೂರ್ತಿ ಅವರು 8.05.2009ರಂದು ರಾಜಲಕ್ಮಿ ಅವರನ್ನು ಮದುವೆಯಾಗಿ ಮಕ್ಕಳಾದ ಆರಾಧ್ಯ ಎ ಭಟ್ ಹಾಗೂ ಸಾನಿಧ್ಯ ಎ ಭಟ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ಇಬ್ಬರು ಮಕ್ಕಳಿಗೆ ಯಕ್ಷಗಾನ ರಂಗಪ್ರವೇಶ ಆಗಿ ಹಲವು ಪ್ರದರ್ಶನಗಳನ್ನು ನೀಡಿದ್ದಾರೆ. ಅವರಿಬ್ಬರ ಗುರುಗಳು ಎಲ್ಲೂರು ರಾಮಚಂದ್ರ ರಾವ್ ಕದ್ರಿ ಹಾಗೂ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಹಾಗೂ ಶ್ರೀ ಕೃಷ್ಣರಾಜ ಭಟ್ ನಂದಳಿಕೆ ಇವರ ಬಳಿ ಹಿಮ್ಮೇಳವನ್ನು ಕಲಿಯುತ್ತಿದ್ದಾರೆ.
ತಂದೆ, ತಾಯಿ, ತಮ್ಮ ಹಾಗೂ ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಅನಂತ ಮೂರ್ತಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +918317463705
ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈
Super 👍
ReplyDeleteHuge respect from his Students 🙏🙏
Thank u ♥️🙏
Delete