ಯಕ್ಷ ಸಾಧಕರು 299

"ರಜತ ಯಕ್ಷಯಾನ ಮಾಧವ ನಾಗೂರ್"

1982 ಜೂನ್ 25 ರಂದು ಬೈಂದೂರು ತಾಲೂಕಿನ ಕಂಬದಕೋಣಿ ಗ್ರಾಮದ ತೆಂಕಬೆಟ್ಟುವಿನಲ್ಲಿ ಪ್ರಸಿದ್ಧ ಪರಂಪರೆಯ ಸ್ತ್ರೀ ವೇಷಧಾರಿ ದಯಾನಂದ ನಾಗೂರ್ ಹಾಗೂ ಲಲಿತ ದಂಪತಿಗಳ ಮೂರನೇ ಮಗನಾಗಿ ಜನನ SSLC ವರೆಗೆ  ವಿದ್ಯಾಭ್ಯಾಸ ಪೂರೈಸಿ ಯಕ್ಷ ಲೋಕಕ್ಕೆ ಪದಾರ್ಪಣೆ.






8ನೇ ವಯಸ್ಸಿನಲ್ಲಿ ಹೇರಂಜಾಲು ವೆಂಕಟರಮಣ ಹಾಗೂ ನನ್ನ ತಂದೆ ದಯಾನಂದ ನಾಗೂರುವರು ಗುರುಗಳಾಗಿ ಪ್ರಾರಂಭಿಸಿದ ಶ್ರೀ ಸಿದ್ಧಿವಿನಾಯಕ ಕಲಾ ಸಂಘ ಹಳಗೇರಿ ತೆಂಕಬೆಟ್ಟು ಇಲ್ಲಿ ಪ್ರಾಥಮಿಕ ಹೆಜ್ಜೆಯನ್ನು ಅಭ್ಯಾಸ ಮಾಡಿ ಬಾಲಕೃಷ್ಣನ ಮೂಲಕ ರಂಗ ಪ್ರವೇಶ ಇಂದಿಗೆ 30 ವರ್ಷಕ್ಕೆ ಅಧಿಕವಾಯಿತು. ಹೀಗೆ ಶಾಲೆಗಳಲ್ಲಿ ವಿವಿಧ ಹವ್ಯಾಸಿ ಸಂಘಗಳ ವೇಷ ಮಾಡುತ 2000/01 ರಲ್ಲಿ ಎಂ.ಎಂ ಹೆಗ್ಡೆಯವರು ಹಾಗೂ ಮಂಜಯ್ಯ ಶೆಟ್ಟಿ ಮಾರಣಕಟ್ಟೆ ಇವರ ಮೂಲಕ ಮಾರಣಕಟ್ಟೆ ಮೇಳಕ್ಕೆ ಪದಾರ್ಪಣೆ ಆ ಸಂದರ್ಭ ಗುರುಗಳಾದ ಹೇರಂಜಾಲು ಸುಬ್ಬಣ್ಣ ಗಾಣಿಗ ರ ಪ್ರೋತ್ಸಾಹ ಸಿಕ್ಕಿತು ಹೀಗೆ ಮಾರಣಕಟ್ಟೆ ಮೇಳ, ಕಮಲಶಿಲೆ ಮೇಳ, ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಅಮೃತೇಶ್ವರಿ ಮೇಳದಲ್ಲಿ ಕಳೆದ 12 ವರ್ಷಗಳಿಂದ ತಿರುಗಾಟ ಮಾಡುತ್ತಿದ್ದೇನೆ.

ಈ ವರ್ಷ ಯಕ್ಷಗಾನ ತಿರುಗಾಟದ 25ನೇ ವರ್ಷದ ಸಂಭ್ರಮ. ಮೇಳದ ತಿರುಗಾಟದ ಸಂದರ್ಭ ಮುಸುಕಾಗಿದ್ದ ನನ್ನ ಜ್ಞಾನಕ್ಕೆ ಜ್ಯೋತಿಯಾಗಿ ಬಂದವರು ಗುರುಗಳಾಗಿ ಅರಗೋಡು ಮೋಹನದಾಸ ಶೆಣೈಯವರು 5 ವರ್ಷ ಅವರ ಜೊತೆಗೆ ತಿರುಗಾಟ ಮಾಡಿ ಪೌರಾಣಿಕ ಜ್ಞಾನವನ್ನು ಪಡೆದೆ ಮುಂದೆ ಯಕ್ಷಗಾನ ತಿರುಗಾಟದಲ್ಲಿ ಹಿರಿಯ ಕಲಾವಿದರಾದ ನೀಲಾವರ ಮಹಾಬಲ ಶೆಟ್ಟಿ, ಸಂಜೀವ ಶೆಟ್ಟಿ ಹೆನ್ನಾಬೈಲು, ಗೋಳಿಕೆರೆ ಚಂದ್ರಗೌಡ, ಕೊಳಲಿ ಕೃಷ್ಣ ಶೆಟ್ಟಿ, ಮಂದಾರ್ತಿ ರಘುರಾಮ ಮಡಿವಾಳ, ಕಣ್ಣಿಮನೆ ಗಣಪತಿ ಭಟ್, ಕಡಬ ಪೂವಪ್ಪ, ಹಾರಾಡಿ ರಮೇಶ ಗಾಣಿಗ, ವಿಷ್ಣುಮೂರ್ತಿ ಬಾಸ್ತಿ, ಉಪ್ಪುಂದ ನಾಗೇಂದ್ರ ರಾವ್ ಮುಂತಾದ ಕಲಾವಿದರ ಜೊತೆಗೆ ತಿರುಗಾಟ ಮಾಡುವ ಭಾಗ್ಯ ಸಿಕ್ಕಿತು. ಹೀಗೆ ಹೇರಂಜಾಲು ಗೋಪಾಲ ಗಾಣಿಗ, ಕೃಷ್ಣ ಮೊಗವೀರ ಮಲಹಳ್ಳಿ, ಕೋಟ ಸುರೇಶ ಬಂಗೇರರವರಿಂದ ರಂಗದ ನಡೆ ಶಿಸ್ತು ಪದ್ಯ ಎತ್ತುಗಡೆ ಇದನ್ನೆಲ್ಲಿ ಅಭ್ಯಾಸ ಮಾಡಿದೆ.
ನನ್ನ ಬದುಕಿನ ಯಕ್ಷಗಾನದ ಮಳೆಗಾಲದ ತಿರುಗಾಟವು ನನಗೆ ವರದಾನವೆ ಆಯಿತು ಮಹಾನ್ ಕಲಾವಿದರ ಒಡನಾಟ ಸಿಕ್ಕಿತು. ಎಲ್ಲಾ ಹಿರಿಯ ಕಲಾವಿದರು ಹಾಗೂ ಕಿರಿಯ ಕಲಾವಿದರೊಂದಿಗೆ ವೇಷ ಮಾಡಿದ ಅನುಭವವಿದೆ ಚಿಟ್ಟಾಣಿಯವರು, ಯಾಜಿಯವರು, ಧಾರೇಶ್ವರ ಭಾಗವತರು, ಸುರೇಶ್ ಶೆಟ್ಟಿ ಶಂಕರನಾರಾಯಣ, ಕೊಳಗಿ ಕೇಶವ ಹೆಗಡೆ, ಶಶಿಕಾಂತ ಶೆಟ್ಟಿ, ಯಲಗುಪ್ಪ, ನಿಲ್ಕೋಡು ಮುಂತಾದ ಕಲಾವಿದರೊಂದಿಗೆ ರಂಗ ಹಂಚಿಕೊಂಡ ಅನುಭವ.






ದಿವಂಗತ ಅರಾಟೆಯವರ ಪ್ರಾರಂಭಿಸಿದ ಮಳೆಗಾಲದ ಪ್ರವಾಸಿ ತಂಡದಲ್ಲಿ 2 ವರ್ಷ ತಿರುಗಾಟ, ಮೊಹಮ್ಮದ್ ಗೌಸರು ಪ್ರಾರಂಭಿಸಿದ ಯಕ್ಷ ಸೌರಭ ಯಕ್ಷಗಾನ ಮಂಡಳಿಯಲ್ಲಿ 7 ವರ್ಷ ತಿರುಗಾಟ ಹಾಗೇ ರಾಘವೇಂದ್ರ ಮಯ್ಯರು ಹಾಗೂ ಕೋಡಿ ವಿಶ್ವನಾಥ ಗಾಣಿಗ ಪ್ರಾರಂಭಿಸಿದ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಲಾಡಿಯಲ್ಲಿ 5 ವರ್ಷದ ತಿರುಗಾಟ ಸಂದರ್ಭ ಮಯ್ಯರು ಹಾಗೂ ಕೋಡಿಯವರಿಂದ ರಂಗದ ಅನುಭವ ಪಡೆದುಕೊಂಡೆ. ಹೀಗೆ ಮಳೆಗಾಲದಲ್ಲಿ ಯಕ್ಷ ತಿರುಗಾಟದಲ್ಲಿ ಇದ್ದಾಗ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಒಡನಾಟವು ಸಿಕ್ಕಿತು. ಅವರ ಜೊತೆಯಲ್ಲಿ ಗರತಿ ವೇಷಗಳಾದ ಚಂದ್ರಮತಿ, ಸಾವಿತ್ರಿ, ದಾಕ್ಷಾಯಣಿ, ರುಚಿಮತಿ ಮುಂತಾದ ವೇಷಗಳ ಅನುಭವ ಪಡೆದುಕೊಂಡೆ. ಹೀಗೆ 25 ವರ್ಷ ತಿರುಗಾಟದಲ್ಲಿ ಭಾರತದ ಎಲ್ಲಾ ರಾಜ್ಯದಲ್ಲಿ ಬಣ್ಣ ಹಚ್ಚಿ ಗೆಜ್ಜೆ ಕಟ್ಟಿ ಕುಣಿಯುವ ಸೌಭಾಗ್ಯ ದೊರಕಿತು. ಪಟ್ಟ ಫೌಂಡೇಶನ್ ಸಂಯೋಜನೆಯಲ್ಲಿ ನಡೆದ ಯಕ್ಷ ಧ್ರುವ ಸಂಭ್ರಮ ಒಮಾನ್ (ಕುವೈಟ್)ಗೆ ಪಟ್ಟರೊಂದಿಗೆ ಹಾಗೂ ಮಯ್ಯರೊಂದಿಗೆ ವಿದೇಶ ಪ್ರಯಾಣವು ಆಯಿತು.

ಮುಂಬೈ ಕಲಾಬಾಂಧವರಿಂದ ಸನ್ಮಾನ, ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ(ರಿ) ಗೋಳಿಕೊಂಬ್ರಿ ಇವರಿಂದ ಸನ್ಮಾನ, ಕರ್ನಾಟಕ ಕರಾವಳಿ ಮೈತ್ರಿ ಸಂಘ(ರಿ) ಹೈದರಬಾದ್, ಜೋಗಿ ಸಮಾಜ (ರಿ) ಸೇವಾ ಸಂಘ ಕುಂದಾಪುರ ಹಾಗೂ ಕಾರ್ಕಳ ಉಡುಪಿ ಘಟಕ ಇವರಿಂದ ಸನ್ಮಾನ ಹಾಗೂ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನದ ಭಾಗ್ಯ ದೊರಕಿತು.

ಯಕ್ಷಗಾನ ಕ್ಷೇತ್ರದಲ್ಲಿ ಬರುವ ಎಲ್ಲಾ ಸ್ತ್ರೀ ಪಾತ್ರಗಳನ್ನು ಮಾಡಿದ ಅನುಭವವಿದೆ. ಇದರಲ್ಲಿ ನನ್ನ ನೆಚ್ಚಿನ ಪಾತ್ರಗಳು ದ್ರೌಪದಿ, ದಾಕ್ಷಾಯಾಣಿ, ಅಂಬೆ, ಮಾದನಾಕ್ಷಿ, ಭ್ರಮರಕುಂತಳೆ, ಶಶಿಪ್ರಭೆ, ಶ್ರೀ ದೇವಿ, ಮೋಹಿನಿ, ಕೈಕೆ, ಸಾವಿತ್ರಿ, ಸುಭದ್ರೆ, ಚಂದ್ರಮತಿ, ಚಂದ್ರವಳಿ ಹಾಗೇ ಪುರುಷ ವೇಷವನ್ನು ಮಾಡಿದ ಅನುಭವವಿದೆ ಕೃಷ್ಣ, ಶಲ್ಯ, ಕೌರವ, ಭಾರತ, ಅಭಿಮನ್ಯು, ವೃಷಸೇನ, ಶುರಸೇನ ಮುಂತಾದ ಪಾತ್ರಗಳನ್ನು ಮಾಡಿದ ಅನುಭವವಿದೆ.








ಯಕ್ಷಗಾನ ತಿರುಗಾಟದಲ್ಲಿ ನನ್ನ ಯಕ್ಷಗಾನ ಕಲೆಗೆ ಪೂರಕವಾಗಿ ಬಂದ ಮಡದಿ ಶಬರಿ ಹಾಗೂ ಮಗ ಅಶ್ವಿನ್ ಜೊತೆಗೆ ಸಂತೃಪ್ತ ಜೀವನವನ್ನು ಸಾಗಿಸುತ್ತಿದ್ದೇನೆ. ಯಕ್ಷಗಾನ ಬದುಕಿನ ಈ 25 ವರ್ಷದ ಸಂಭ್ರಮವನ್ನು ಕಲಾಭಿಮಾನಿ ಬಂಧುಗಳದಂತ ನೀವೆಲ್ಲರು ಪ್ರೀತಿಯ ಪ್ರೋತ್ಸಾಹದಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಚಂದಗಾಣಿಸಿ ಕೊಡಬೇಕಾಗಿ ಈ ಮೂಲಕ ನಿಮ್ಮ ಬಳಿ ಕೇಳಿಕೊಳ್ಳುತ್ತಾ ಇದ್ದೇನೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395