ಯಕ್ಷ ಸಾಧಕರು 300

ಒಂದೇ ಪದ್ಯದಲ್ಲಿ 30 ರಾಗಗಳು ಶ್ರೀ ವಿದ್ವಾನ್ ಗಣಪತಿ ಭಟ್ ಯಲ್ಲಾಪುರ

"ಭಾಗವತ ಶ್ರೇಷ್ಠ – ಶ್ರೀ ವಿದ್ವಾನ್ ಗಣಪತಿ ಭಟ್ ಯಲ್ಲಾಪುರ"

ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಇವರನ್ನು ಯಕ್ಷಗಾನ ಕಲಾಭಿಮಾನಿಗಳೆಲ್ಲರೂ ಬಲ್ಲರು. ಇವರು ಬಡಗುತಿಟ್ಟಿನ ಶ್ರೇಷ್ಠ ಭಾಗವತರುಗಳಲ್ಲಿ ಒಬ್ಬರು. ಸಂಸ್ಕೃತ ಭಾಷೆಯ ಸಾಹಿತ್ಯ ಮತ್ತು ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿಯನ್ನು ಪಡೆದುದು ಮಾತ್ರವಲ್ಲ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ವರೆಗೂ ಅಭ್ಯಸಿಸಿದವರು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತುದು ಶ್ರೀ ಗಂಗಾರಾಂ ಭಟ್, ಶ್ರೀ ಪರಮೇಶ್ವರ ಭಟ್ ಮತ್ತು ಪ್ರೊ| ರಾಜಗೋಪಾಲಾಚಾರ್ಯ ಅವರುಗಳಿಂದ.

ಸುಮಾರು ನೂರಕ್ಕೂ ಮಿಕ್ಕಿ ರಾಗಗಳನ್ನು ತಮ್ಮ ಯಕ್ಷಗಾನ ಹಾಡುಗಾರಿಕೆಗೆ ಬಳಸಿಕೊಂಡ ಸಾಧಕರಿವರು. ಬಡಗುತಿಟ್ಟಿನ ಹಾಡುಗಾರಿಕೆಗೆ ಪ್ರಪ್ರಥಮವಾಗಿ ದರ್ಬಾರ್ ಕಾನಡ, ಬಹುಧಾರೀ, ಕಲ್ಯಾಣ ವಸಂತ, ಬಿಲಹರಿ, ಷಹನಾ, ರೀತಿಗೌಳ, ಕದನ ಕುತೂಹಲ, ಕೇದಾರ, ಭಾಗ್ಯಶ್ರೀ, ನಾಟಿಕುರುಂಜಿ, ಸಿಂಹೇಂದ್ರ ಮಧ್ಯಮ, ಸಾರಂಗ, ಧರ್ಮಾವತಿ, ನೀಲಾಂಬರಿ ಮೊದಲಾದ ರಾಗಗಳನ್ನು ಬಳಸಿಕೊಂಡ ಗಾಯಕರಿವರು. ಯಕ್ಷಗಾನ ಭಾಗವತಿಕೆಯನ್ನು ಕಲಿತು ತಮ್ಮ ಹಾಡುಗಾರಿಕೆಯಿಂದ ಕಲಾಭಿಮಾನಿಗಳನ್ನು ರಂಜಿಸುವ ಇವರು ಕಲಿಕಾಸಕ್ತರಿಗೆ ಗುರುವಾಗಿ ತರಬೇತಿಯನ್ನು ನೀಡಿದ್ದಾರೆ, ನೀಡುತ್ತಿದ್ದಾರೆ.


ಬಡಗುತಿಟ್ಟಿನ ಖ್ಯಾತ ಭಾಗವತ  ಶ್ರೀ ವಿದ್ವಾನ್ ಗಣಪತಿ ಭಟ್ಟರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಗ್ರಾಮದ ಮೊಟ್ಟೆಗದ್ದೆ. 1961ನೇ ಇಸವಿ ಏಪ್ರಿಲ್ 20ರಂದು ಶ್ರೀ ವೆಂಕಟ್ರಮಣ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಭಟ್ ದಂಪತಿಗಳ ಪುತ್ರನಾಗಿ ಜನನ. ಇವರದ್ದು ಪೌರೋಹಿತ್ಯ ಮನೆತನ. ತಂದೆ ವೆಂಕಟ್ರಮಣ ಭಟ್ಟರು ಕೃಷಿ ಮತ್ತು ಪುರೋಹಿತ ವೃತ್ತಿಯ ಜತೆ ತಾಳಮದ್ದಳೆಯ ಹವ್ಯಾಸೀ ಅರ್ಥಧಾರಿಯೂ ಆಗಿದ್ದರು. ತಾಯಿಯ ತಂದೆ ಶ್ರೀ ರಾಮಚಂದ್ರ ಭಟ್ಟರು (ಅಜ್ಜ) ಹವ್ಯಾಸಿ ಭಾಗವತರು. ವಿದ್ವಾನ್ ಗಣಪತಿ ಭಟ್ಟರ ಹಿರಿಯ ಅಣ್ಣ ನಾರಾಯಣ ಭಟ್ ತಾಳಮದ್ದಳೆ ಹವ್ಯಾಸಿ ಅರ್ಥಧಾರಿ. ಮನೆಯ ಸದಸ್ಯರೆಲ್ಲರೂ ಯಕ್ಷಗಾನಾಸಕ್ತರು. ಇದು ಗಣಪತಿ ಭಟ್ಟರಿಗಿದ್ದ ಯಕ್ಷಗಾನ ಹಿನ್ನೆಲೆ.

ಶ್ರೀ ಗಣಪತಿ ಭಟ್ಟರು ಓದಿದ್ದು ಎಸ್ಸೆಸ್ಸೆಲ್ಸಿ ವರೆಗೆ. ಬಳಿಕ 5 ವರ್ಷ ಸಂಸ್ಕೃತ ವೇದ ಮಂತ್ರಗಳ ಅಭ್ಯಾಸ. ಬಳಿಕ ಸಂಸ್ಕೃತ ಸಾಹಿತ್ಯ ಮತ್ತು ಅಲಂಕಾರ  ಶಾಸ್ತ್ರದಲ್ಲಿ ವಿದ್ವತ್ ಪದವಿ. ಒಂದನೇ ತರಗತಿಯಿಂದ ಏಳನೇ ತರಗತಿ ವರೆಗೆ ಓದಿದ್ದು ಮಾಗೋಡು, ನಂದೊಳ್ಳಿ ಮತ್ತು ನಾಯ್ಕನಕೆರೆ ಶಾಲೆಗಳಲ್ಲಿ. ಎಸ್ಸೆಸ್ಸೆಲ್ಸಿ ಖಾಸಗಿಯಾಗಿ ಉತ್ತೀರ್ಣರಾಗಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತಿ. ಮನೆಯವರ ಜತೆ ಆಟ, ತಾಳಮದ್ದಳೆಗಳಿಗೆ ಹೋಗುತ್ತಿದ್ದರು. ಹಿರಿಯ ಭಾಗವತರುಗಳ ಹಾಡುಗಾರಿಕೆಯನ್ನು ಕೇಳುತ್ತಾ ತಾನೂ ಭಾಗವತನಾಗಬೇಕೆಂಬ ಆಸೆ ಉಂಟಾಗಿತ್ತು.

ಕವ್ವಾಳೆ ರಾಮಚಂದ್ರ ಭಾಗವತ, ಕಡತೋಕಾ ಮಂಜುನಾಥ ಭಾಗವತ, ನಾರ್ಣಪ್ಪ ಉಪ್ಪೂರ, ನೆಬ್ಬೂರು ನಾರಾಯಣ ಭಾಗವತ, ಜಿ.ಆರ್ ಕಾಳಿಂಗ ನಾವಡರ ಹಾಡುಗಾರಿಕೆಗೆ ಇವರು ಆಕರ್ಷಿತರಾಗಿದ್ದರು. 7ನೇ ತರಗತಿ ವರೆಗೆ ಓದಿದ ಬಳಿಕ ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಪಾಠಶಾಲೆಯಲ್ಲಿ 5 ವರ್ಷಗಳ ಕಾಲ ಸಂಸ್ಕೃತ ಭಾಷೆ ಮತ್ತು ವೇದ ಮಂತ್ರ ಅಭ್ಯಾಸ ಮಾಡಿದ್ದರು. ಹೆಚ್ಚಿನ ವ್ಯಾಸಂಗಕ್ಕಾಗಿ 1979ರಲ್ಲಿ ಉಡುಪಿ ಸಂಸ್ಕೃತ ಕಾಲೇಜಿಗೆ. ಉಡುಪಿಗೆ ತೆರಳಿದರೆ ಯಕ್ಷಗಾನ ಭಾಗವತಿಕೆ ಕಲಿಯಬಹುದೆಂಬ ನಿರ್ಣಯವೂ ಇತ್ತು. ಉಡುಪಿ ಸಂಸ್ಕೃತ ಕಾಲೇಜಿನಲ್ಲಿ 1979ರಿಂದ 1986ರ ವರೆಗೆ ಕಲಿತು ಸಂಸ್ಕೃತ ಸಾಹಿತ್ಯ ಮತ್ತು ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿಯನ್ನು ಪಡೆದರು.

ಉಡುಪಿ ಸಂಸ್ಕೃತ ಕಾಲೇಜಿಗೆ ಸೇರಿದ ಪ್ರಥಮ ವರ್ಷ ಕಾಲೇಜು ವಾರ್ಷಿಕೋತ್ಸವಕ್ಕೆ ಯಕ್ಷಗಾನ ಪ್ರದರ್ಶನ ನಡೆಸುವ ನಿರ್ಣಯವಾಗಿತ್ತು. ಗಣಪತಿ ಭಟ್ಟರ ಹಾಡುವ ಹವ್ಯಾಸವನ್ನು ತಿಳಿದಿದ್ದ ಎಲ್ಲರೂ ತಂಡದ ಭಾಗವತನಾಗಲು ಒತ್ತಾಯಿಸಿದರು. ನಾಟ್ಯ ತರಬೇತಿಗಾಗಿ ಬಂದಿದ್ದ ಬನ್ನಂಜೆ ಶ್ರೀ ಸಂಜೀವ ಸುವರ್ಣರು ತಾಳವನ್ನು ಕಲಿಸಿ ತರಬೇತಿ ನೀಡಿದ್ದರು. ಕ್ಷಿಪ್ರ ಕಲಿಕೆಯ ಗುಣವನ್ನೂ ವಿದ್ವಾನ್ ಗಣಪತಿ ಭಟ್ಟರೊಳಗೆ ಅವ್ಯಕ್ತವಾಗಿ ನೆಲೆಸಿದ್ದ ಶ್ರೇಷ್ಠ ಭಾಗವತನನ್ನು ಶ್ರೀ ಸಂಜೀವ ಸುವರ್ಣರು ಅಂದೇ ಗುರುತಿಸಿದ್ದರು. ಪ್ರದರ್ಶನಕ್ಕೆ ‘ಗದಾಯುದ್ಧ’ ಪ್ರಸಂಗ. ಶ್ರೀ ಬನ್ನಂಜೆ ಸಂಜೀವ ಸುವರ್ಣರು ಗದಾಯುದ್ಧ ಪ್ರಸಂಗದ ಹಾಡುಗಳನ್ನು ಶ್ರೀ ಕಾಳಿಂಗ ನಾವಡರು ಹಾಡುತ್ತಿದ್ದ ರೀತಿಯನ್ನೂ ಆಡಿಯೋ ಕ್ಯಾಸೆಟ್ ಮೂಲಕ ಗಣಪತಿ ಭಟ್ಟರಿಗೆ ಕೇಳುವ ವ್ಯವಸ್ಥೆ ಮಾಡಿದ್ದರು. ಜತೆಗೆ ಅವರಿಂದ ತರಬೇತಿಯೂ ಸಿಕ್ಕಿತ್ತು.

ಪ್ರದರ್ಶನದಲ್ಲಿ ಭಾಗವತನಾಗಿ ರಂಗವೇರಿದ ಗಣಪತಿ ಭಟ್ಟರು ಯಶಸ್ವಿಯಾಗಿದ್ದರು. ಹಾಗಾಗಿ ಬನ್ನಂಜೆ ಶ್ರೀ ಸಂಜೀವ ಸುವರ್ಣರೇ ನನ್ನ ಮೊದಲ ಗುರುಗಳು ಎಂದು ಗಣಪತಿ ಭಟ್ಟರು ಕೃತಜ್ಞತೆಯಿಂದ ಹೇಳುತ್ತಾರೆ. ಶ್ರೀ ಸಂಜೀವ ಸುವರ್ಣರು ಶಾಸ್ತ್ರೀಯವಾಗಿ ಭಾಗವತಿಕೆ ಕಲಿಯಲು ಸಲಹೆ ನೀಡಿದ್ದರು. ಗಣಪತಿ ಭಟ್ಟರ ಕಲಿಯುವ ಆಸೆಗೆ ಇದು ಪೂರಕವಾಗಿತ್ತು. ಶ್ರೀ ಬನ್ನಂಜೆ ಸಂಜೀವ ಸುವರ್ಣರೇ ಗಣಪತಿ ಭಟ್ಟರನ್ನು ಉಡುಪಿ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. ನೀಲಾವರ ಶ್ರೀ ರಾಮಕೃಷ್ಣಯ್ಯ ಅವರಿಂದ ಭಾಗವತಿಕೆಯ ಪರಿಪೂರ್ಣ ಪಾಠ. ಆಗ ಶ್ರೀ ಮಹಾಬಲ ಕಾರಂತ ಅವರು ಮೃದಂಗ ಗುರುಗಳಾಗಿದ್ದರು.
ಸಾಲಿಗ್ರಾಮ, ಪಂಚಲಿಂಗೇಶ್ವರ ಮೇಳ ಇಡುಗುಂಜಿ ಮೇಳದಲ್ಲಿ ಅನೇಕ ವರ್ಷಗಳ ತಿರುಗಾಟ ಮಾಡಿ ಒಟ್ಟು 43 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಯಕ್ಷಗಾನದ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ವಿಶೇಷವಾಗಿ ರಾಮಾಂಜನೇಯ,  ಲಂಕಾದಹನ, ಜಂಬವತಿ, ಅತಿಕಾಯ, ಸತ್ಯ ಹರಿಶ್ಚಂದ್ರ, ಸತ್ಯವಾನ ಸಾವಿತ್ರಿ, ಕಚ ದೇವಯಾನಿ, ಭರತಾಗಮನ ಮುಂತಾದವು.
ದಿ.ಕಾಳಿಂಗ ನಾವಡರು, ನೆಬ್ಬೂರು ನಾರಾಯಣ ಭಾಗವತರು ಹಾಗೂ ಅನೇಕ ಹಿರಿಯ ಹಾಗೂ ಕಿರಿಯ ಭಾಗವತರು ಇವರ ನೆಚ್ಚಿನ ಭಾಗವತರು.
ಶಂಕರ್ ಭಾಗವತರು, ಎ.ಪಿ.ಪಾಠಕ್, ಕವಾಳೆ ಗಣಪತಿ ಭಾಗವತರು, ಮಂದಾರ್ತಿ ರಾಮಕೃಷ್ಣ, ಗಣೇಶ್ ಗಾಂವ್ಕರ್, ಪ್ರಸನ್ನ ಹೆಗ್ಗಾರ, ಸೃಜನ ಹಾಲಾಡಿ ಇವರ ನೆಚ್ಚಿನ ಚೆಂಡೆ ಮದ್ದಲೆ ವಾದಕರು.


ಮಂಟಪ ಪ್ರಭಾಕರ ಉಪಾಧ್ಯಾಯರ ಏಕ ವ್ಯಕ್ತಿ ಯಕ್ಷಗಾನದಲ್ಲಿ ನಿಮ್ಮ ಯಕ್ಷಗಾನದ ಅನುಭವ ಏನು:-
ಶತಾವಧಾನಿ ಗಣೇಶರ ಉತ್ತಮ ಸಾಹಿತ್ಯ, ಮಂಟಪ ಉಪಾಧ್ಯಯರ ನಾಟ್ಯಭಿನಯ ಪಾಠಕ್ ಹಾಗೂ ಯಾಜಿಯವರ ಚೆಂಡೆ ಮದ್ದಲೆಯೊಂದಿಗೆ ಅನೇಕ ರಾಗಗಳನ್ನು ಹಾಡಿ ರಂಜಿಸಿದ ಅನುಭವ.

ಡಾ.ಶಿವರಾಮ ಕಾರಂತರ ಯಕ್ಷ ರಂಗ ಎನ್ನುವು ಯಕ್ಷಗಾನ ಬ್ಯಾಲೆಯಲ್ಲಿ ನಿಮ್ಮ ಅನುಭವ ಹೇಗೆ:-
ಕಾರಂತರ ಯಕ್ಷರಂಗದ ಯಕ್ಷಗಾನ ಬ್ಯಾಲೆಯಲ್ಲಿ ಭಾಗವತನಾಗಿದೆ. ರಸ ಹಾಗೂ ಭಾವಪ್ರದಾನವಾದ ಸಾಹಿತ್ಯ ಶುದ್ಧಿಯಿಂದ ಹಾಡಬೇಕಾಗಿತು. ಸ್ವತಃ ಕಾರಂತರೇ ಪದ್ಯಗಳನ್ನು ಹೇಗೆ ಭಾವ ಪೂರ್ಣವಾಗಿ ಹಾಡಬೇಕೆಂಬುದನ್ನು ಪಾಠ ಮಾಡಿದರು. ಕೃಷ್ಣಮಾಚಾರ್ಯರಂತಹ ಶ್ರೇಷ್ಠ ವಯೋಲಿನ್ ವಾದನದೊಂದಿಗೆ ಹಾಡಿದ ಸಂತೋಷ ಸ್ಯಾಕ್ಸೋಫೋನ್ ಕೂಡ ಇತ್ತು. ಕಾರಂತರೊಂದಿಗೆ ಓಡನಾಟ ಸದಾ ನೆನಪಿರುವ ಸಂಗತಿ.

ಯಕ್ಷಗಾನದ ಭಾಗವತಿಕೆಯಲ್ಲಿ ಸಂಗೀತ ಪದತಿಯನ್ನು ಅಳವಡಿಸಿಕೊಂಡ ಇದರಿಂದ ನಿಮಗೆ ಸಿಕ್ಕಿದ ಜನ ಸ್ಪಂದನೆ ಹೇಗೆ:-
ಯಕ್ಷಗಾನ ಶೈಲಿಯಲ್ಲಿ ಅನೇಕ ರಾಗಗಳನ್ನು ಬಳಸಿದ್ದು ಯಕ್ಷಗಾನ ಪ್ರೇಕ್ಷಕರಿಗಿಂತಲೂ ಕಲಾವಿದರೆ ಹೆಚ್ಚು ಸ್ಪಂದಿಸಿದ್ದರು ಎಲ್ಲಕಿಂತಲೂ ನಾನು ಚೆನ್ನಾಗಿ ರಾಗಗಳನ್ನು ಹಾಡಿದಾಗ ಸಂತೋಷ ಪಟ್ಟ ದಿನಗಳೇ ಹೆಚ್ಚು.

ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ ನಿಮ್ಮ ಅಭಿಪ್ರಾಯ:-
ಯಕ್ಷಗಾನ ಪ್ರೇಕ್ಷಕರು ತುಂಬಾ ಎತ್ತರಕ್ಕೆ ಏರಬೇಕಾದ ಅನಿವಾರ್ಯತೆ ಇದೆ. ಪ್ರೇಕ್ಷಕರಲ್ಲಿ ಒಳ್ಳೆಯ ಅಭಿರುಚಿಯ ಪ್ರೇಕ್ಷಕರು ಬಹಳ ವಿರಳ. ವ್ಯಕ್ತಿ ನಿಷ್ಠೆ ಪ್ರೇಕ್ಷಕರ ಸಂಖ್ಯೆ ಹೆಚ್ಚು ತಾನು ನೆಚ್ಚಿಕೊಂಡ ಕಲಾವಿದನ ವೇಷವನ್ನು ಗುಣವೆಂದು ಪ್ರಚಾರ ಮಾಡುವ ಪ್ರೇಕ್ಷಕರೇ ಕಾಣಸಿಗುವುದು. ಪಾತ್ರದಲ್ಲಿ ತಮ್ಮ ನೆಚ್ಚಿನವರನ್ನು ಕಾಣುತ್ತಾರೆ. ಇಡೀ ಪ್ರಸಂಗವನ್ನು ವಿಮರ್ಶಿಸುವ ಪ್ರಜ್ಞೆ ಇಲ್ಲದಂತಾಗಿದೆ. ತಮ್ಮ ನೆಚ್ಚಿನ ಕಲಾವಿದಯ, ಕಲಾವಿದರಿಗೆ ಯಾರಾದರೂ ತಪ್ಪನ್ನು ಹೇಳಿದರೆ ಅವರದ್ದು ತಪ್ಪೇ ಇಲ್ಲ ಎಂದು ಹೇಳಿದವರ ಮೇಲೆ ಮುರಿ ಬೀಳುವ ಜಾಯಮಾನ ಅನೇಕ ಪ್ರೇಕ್ಷಕರಲ್ಲಿ ಇದೆ. ಪ್ರೇಕ್ಷಕರು ಯಾವ ಕಲಾವಿದರಲ್ಲಿಯೂ ಇರುವ ಗುಣ ದೋಷಗಳನ್ನು ಚೆನ್ನಾಗಿ ತಿಳಿದು ಹೇಳುವಂತಹ ಪ್ರೇಕ್ಷಕರು ಸಿದ್ದರಾದಾಗ ಮಾತ್ರ ಯಕ್ಷಗಾನ ಕಲಾವಿದರಿಗೆ ಇನ್ನು ಹೆಚ್ಚು ಹೊಣೆಗಾರಿಕೆ ಬರುವುದಕ್ಕೆ ಸಾಧ್ಯ.



ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಅವರಿಗೆ ಸಿಕ್ಕಿರುವ ಪ್ರಶಸ್ತಿ ಹಾಗೂ ಸನ್ಮಾನ:-
♦️ ಮುದ್ದಣ್ಣ ಪ್ರಶಸ್ತಿ
♦️ ರಾಮ ವಿಠಲ ಪ್ರಶಸ್ತಿ
♦️ ಯಕ್ಷ ಗಂಧರ್ವ ಕಲಾಸಿರಿ ಪ್ರಶಸ್ತಿ
♦️ ಗಾಯಕ ವಂದನಾ ಪುರಸ್ಕಾರ
♦️ ಯಕ್ಷ ಕಲಾ ಬಿಂದು ಪ್ರಶಸ್ತಿ
♦️ ಕಲಾ ಗೌರವ ಪ್ರಶಸ್ತಿ
♦️ ಯಕ್ಷಗಾನ ಶಿರೋಮಣಿ ಪ್ರಶಸ್ತಿ
♦️ ಯಕ್ಷ ರಾಜ ಪ್ರಶಸ್ತಿ
♦️ ಯಕ್ಷಲೋಕದ ದಕ್ಷನಿಧಿ ಪ್ರಶಸ್ತಿ
♦️ ಯಕ್ಷ ರಸರಾಗ ಪ್ರವೀಣ ಪ್ರಶಸ್ತಿ
♦️ ಜನ್ಸಾಲೆ ಯಕ್ಷ ರಾಘವ ಪ್ರಶಸ್ತಿ
♦️ ಜನಾರ್ದನಾಚಾರ್ಯ ಪ್ರಶಸ್ತಿ
♦️ ಹಿಲ್ಲೂರು ಯಕ್ಷ ಪ್ರಶಸ್ತಿ
♦️ "ಯಕ್ಷಗಾನ ಗಾನ ಸಂಹಿತ" ಪುಸ್ತಕಕ್ಕೆ ಯಕ್ಷಗಾನ ಅಕಾಡಮಿ ಪ್ರಶಸ್ತಿ


ಹಾಗೂ ಇನ್ನೂ ಅನೇಕ ಪ್ರಶಸ್ತಿ, ಸನ್ಮಾನಗಳು ಸಂದಿವೆ.

ಸಂಗೀತ ಅಭ್ಯಾಸ ಮಾಡುವುದು, ಸಂಸ್ಕೃತ ಗ್ರಂಥಗಳು, ಭಾಗವತ ರಾಮಾಯಣ ಮುಂತಾದವುಗಳ ಅಧ್ಯಯನ, ವೇದ ಮಂತ್ರಗಳ ಪಠಣ, ಹಳೆಯ ರಾಗಬದ್ಧವಾದ ಚಲನಚಿತ್ರ ಗೀತೆಗಳನ್ನು ಕೇಳುವುದು, ಶಾಸ್ತ್ರೀಯ ಸಂಗೀತವನ್ನು ಕೇಳುವುದು ಇವರ ಹವ್ಯಾಸಗಳು.

ವೃತ್ತಿ ಕಲಾವಿದನಾಗಿಯೂ ಸಂಸಾರಿಕವಾಗಿಯೂ ಇವರು ತೃಪ್ತರು. ಇವರ ಪತ್ನಿ ಶ್ರೀಮತಿ ಇಂದಿರಾ ಭಟ್ (1990ರಲ್ಲಿ ವಿವಾಹ)  ವಿದ್ವಾನ್ ಶ್ರೀ ಗಣಪತಿ ಭಟ್ಟ ಯಲ್ಲಾಪುರ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ರಾಘವೇಂದ್ರ ಸಂಸ್ಕೃತ ಭಾಷೆ ಮತ್ತು ವೇದ ಅಭ್ಯಸಿಸಿದ್ದಾರೆ ಪುರೋಹಿತರಾಗಿ ಎಲ್ಲರಿಗೂ ಪರಿಚಿತರು ಅವರ ಪತ್ನಿ ವೈಶಾಲಿ ಭಟ್. ಕಿರಿಯ ಪುತ್ರ ಶ್ರೀಪ್ರದ ಬಿ.ಕಾಮ್ ಪದವಿ ಪೂರ್ಣಗೊಳಿಸಿ ಪ್ರಸ್ತುತ CMA ವ್ಯಾಸಂಗ ಮಾಡುತ್ತಿದ್ದಾರೆ. ವಿದ್ವಾನ್ ಶ್ರೀ ಗಣಪತಿ ಭಟ್ಟ ಯಲ್ಲಾಪುರ ಅವರಿಗೆ ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395