ಯಕ್ಷ ಸಾಧಕರು 301

"ಯಕ್ಷ ವಚನ ವಿಶಾರದ"

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಹೊನ್ನವಳ್ಳಿಯ ಮಂಡಗಾರಿನ ಎಂ.ವಿ. ಸುಬ್ರಾಯರು ಹಾಗೂ ಭವಾನಿಯಮ್ಮ ಅವರ ಮಗನಾಗಿ 30.09.1961ರಂದು  ಜನಾರ್ದನ ಮಂಡಗಾರು ಅವರ ಜನನ. ಬಿ.ಎ, ಬಿ ಎಡ್ ಇವರ ವಿದ್ಯಾಭ್ಯಾಸ. ತಂದೆ, ದೊಡ್ಡಪ್ಪ, ಚಿಕ್ಕಪ್ಪ ಯಕ್ಷಗಾನ ಅರ್ಥಧಾರಿಗಳು. ವಿಶೇಷವಾಗಿ ಅಮ್ಮ ಕೂಡ ಯಕ್ಷಗಾನ ಕಲೆಯನ್ನು ತುಂಬಾ ಪ್ರೀತಿಸುತ್ತ ಬೆಂಬಲಿಸುತ್ತಿದ್ದರು. ಇದು ಮಂಡಗಾರು ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.

ಅರ್ಥಗಾರಿಕೆಗೆ ಗುರುಗಳು:- ಕೀರ್ತಿಶೇಷ ಅನಂತಕೃಷ್ಣ ರಾಯರು ಕಿಗ್ಗ.
ಹೆಜ್ಜೆಗಾರಿಕೆಗೆ ಗುರುಗಳು:- ಶ್ರೀ ಶ್ರೀಕಂಠ ಭಟ್ ಎಡ್ಲುಕುಡಿಗೆ.


ಸುಧನ್ವ ಕಾಳಗ, ಭೀಷ್ಮ ವಿಜಯ, ಕೃಷ್ಣಾರ್ಜುನ, ರತ್ನಾವತಿ ಕಲ್ಯಾಣ, ಶಶಿಪ್ರಭಾ ಪರಿಣಯ, ರಾಮಾಂಜನೇಯ, ಪಟ್ಟಾಭಿಷೇಕ, ಶ್ರೀ ರಾಮ ನಿರ್ಯಾಣ, ಶ್ರೀಕೃಷ್ಣ ಪರಂಧಾಮ, ಇತ್ಯಾದಿ. ರಾಮಾಯಣ, ಮಹಾಭಾರತದ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಅಂಬೆ, ರತ್ನಾವತಿ, ಶಶಿಪ್ರಭೆ, ದ್ರೌಪದಿ, ಸೀತೆ, ಪ್ರಭಾವತಿ, ಮೀನಾಕ್ಷಿ, ಮೇನಕೆ ಇತ್ಯಾದಿ ಪೌರಾಣಿಕ ಸ್ತ್ರೀವೇಷಗಳು ಅಲ್ಲದೆ ಸುಧನ್ವ, ಶ್ರೀಕೃಷ್ಣ, ಶ್ರೀ ರಾಮ, ಅರ್ಜುನ, ಈಶ್ವರ, ಹನೂಮಂತ, ವಿಶ್ವಾಮಿತ್ರ, ಭೀಷ್ಮ,  ಪರಶುರಾಮ, ಜಮದಗ್ನಿ, ಶ್ವೇತಕುಮಾರ, ಸತ್ಯವಾನ್, ಸುಧಾಮ, ಇತ್ಯಾದಿ ಅನೇಕ ಪಾತ್ರಗಳು ಇವರ ನೆಚ್ಚಿನ ವೇಷಗಳು.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲು ಪಾತ್ರದ ಬಗ್ಗೆ ಅಧ್ಯಯನ ಮಾಡಿಕೊಂಡು, ಹಿರಿಯ, ಅನುಭವಿ ಕಲಾವಿದರಲ್ಲಿ ಮಾರ್ಗದರ್ಶನ ಪಡೆದು, ಸಾಂದರ್ಭಿಕವಾಗಿ, ಸಕಾಲಿಕವಾಗಿ, ಸ್ವಂತ ನಿಲುವನ್ನು ಸೇರಿಸಿಕೊಂಡು ರಂಗವನ್ನು ಪ್ರವೇಶಿಸುತ್ತೇನೆ. ಜೊತೆಗೆ ಹಿಂದೆ ನೋಡಿದ ಪ್ರದರ್ಶನಗಳನ್ನು ನೆನಪಿಸಿಕೊಳ್ಳುತ್ತೇನೆ.




ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ನಮಗೆ ಬಡಗುತಿಟ್ಟು ಯಕ್ಷಗಾನ ಇಷ್ಟ. ಈಗ ಬಡಗುತಿಟ್ಟಿನಲ್ಲಿ ಕುಣಿತ ಹೆಚ್ಚು, ಮಾತು, ಸ್ವಾರಸ್ಯಕರ ಸಂಭಾಷಣೆ ಕಡಿಮೆ ಎಂದು ಅನಿಸುತ್ತಿದೆ. 10 -12 ನಿಮಿಷ ಕುಣಿದು 4 - 5ನಿಮಿಷ ಅರ್ಥ. ತೆಂಕುತಿಟ್ಟಿನಲ್ಲಿ ಒಳ್ಳೆಯ ಸಂಭಾಷಣೆ, ಒಳ್ಳೆಯ ಅರ್ಥಗಾರಿಕೆಯನ್ನು ಸವಿಯಬಹುದಾಗಿದೆ.
ಇಂದು ಹಾಸ್ಯಪ್ರಧಾನ ಕಾಲ್ಪನಿಕ ಪ್ರಸಂಗಗಳೇ ಹೆಚ್ಚುತ್ತಿವೆ. ಪೌರಾಣಿಕ ಪ್ರಿಯರಿಗೆ ತೃಪ್ತಿ ಸಿಗುತ್ತಿಲ್ಲ ಎಂದು ಕಾಣುತ್ತಿದೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ನಮ್ಮ ಕಲಾಸಂಘದ ಸುವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ನಡೆಸುವುದು, ಆ ಸಂಬಂಧ ವಿಶೇಷ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸಂಯೋಜಿಸುವುದು ಇತ್ಯಾದಿ.
ಒಳ್ಳೆಯ ಸಂಘಟನೆಗಳಿಗೆ, ಆಯೋಜಕರಿಗೆ ಪ್ರೋತ್ಸಾಹಿಸುವುದು, ಸಾಧ್ಯವಾದಷ್ಟು ಕಾಲ ಯಕ್ಷಗಾನದಲ್ಲಿ ಭಾಗವಹಿಸುವುದು.

ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾಸಂಘ 48 ವರ್ಷಗಳಿಂದ ನಡೆಯುತ್ತಿದ್ದು, ವರ್ಷಕ್ಕೆ ಹತ್ತೆಂಟು ಬಯಲಾಟ ಪ್ರದರ್ಶನಗಳನ್ನು ನೀಡುತ್ತಾ, 50 - 60 ತಾಳಮದ್ದಳೆ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುತ್ತೇವೆ. ಅಲ್ಲದೆ ಬೇರೆ ಬೇರೆ ಸಂಘಟನೆಗಳಲ್ಲಿಯೂ ಭಾಗವಹಿಸಿರುತ್ತೇನೆ ಎಂದು ಹೇಳುತ್ತಾರೆ ಜನಾರ್ದನ ಮಂಡಗಾರು.





ಹವ್ಯಾಸಿ ಕಲಾವಿದರ ಯಕ್ಷಗಾನ ಪ್ರದರ್ಶನದಲ್ಲಿ (ಉಡುಪಿಯಲ್ಲಿ ನಡೆದ) ರತ್ನಾವತಿ ಪಾತ್ರಕ್ಕೆ ದ್ವಿತೀಯ ಬಹುಮಾನ ಲಭಿಸಿದೆ. ಅನೇಕ ಸಂಘಟನೆಗಳು ಸನ್ಮಾನಿಸಿ ಗೌರವಿಸಿವೆ.
ನಿರೂಪಣೆ, ಭಾಷಣ, ಪ್ರವಚನ, ಹರಟೆ, ಮಾತಿನ ಮಂಟಪ, ಸನ್ಮಾನಪತ್ರ ಬರೆಯುವುದು, ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಭಾಗವಹಿಸುವುದು, ಸಭೆಗಳಲ್ಲಿ ಅಭ್ಯಾಗತರಾಗಿ ಭಾಗವಹಿಸುವುದು, ಸಾಕಷ್ಟು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಕಲಾವಿದನಾಗಿ, ಪ್ರೇಕ್ಷಕನಾಗಿ ಭಾಗವಹಿಸುವುದು, ಪುಸ್ತಕಗಳನ್ನು ಓದುವುದು, ಒಳ್ಳೆಯ ಉಪನ್ಯಾಸಗಳನ್ನು ಆಲಿಸುವುದು, ಸಾಮಾಜಿಕ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಇತ್ಯಾದಿ ಇವರ ಹವ್ಯಾಸಗಳು.

ಜನಾರ್ದನ ಮಂಡಗಾರು ಅವರು 27.06.1997ರಂದು ಪುಷ್ಪಲತಾ ಅವರನ್ನು ಮದುವೆಯಾಗಿ ಸುತ:-ವಿನೀತ, ಸೊಸೆ:- ಶ್ರೀಮತಿ ವಿಭಾ, ಸುತೆ:- ವಿಜ್ಞಾತಿ ಹಾಗೂ ಮೊಮ್ಮಗ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.


ತಂದೆ, ತಾಯಿ ಹಾಗೂ ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಜನಾರ್ದನ ಮಂಡಗಾರು.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395