ಯಕ್ಷ ಸಾಧಕರು 306
"ಯಕ್ಷ ಕಲೆಯ ಉಜ್ವಲ ಪ್ರತಿಭೆ"
ಯಕ್ಷಗಾನದಲ್ಲಿ ಇತ್ತೀಚಿನ ದಿನಗಳಲ್ಲಿ ನಮಗೆ ಅನೇಕ ಯುವ ಕಲಾವಿದರು ಕಾಣಲು ಸಿಗುತ್ತಾರೆ. ಇಂತಹ ಯುವ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಯುವ ಕಲಾವಿದ ಅನ್ವೇಷ್ ಆರ್.ಶೆಟ್ಟಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರತ್ನದೇವ್ ಶೆಟ್ಟಿ ಹಾಗೂ ಸುಜಾತಾ ಶೆಟ್ಟಿ ಇವರ ಮಗನಾಗಿ 23.03.2003ರಂದು ಅನ್ವೇಷ್ ಅವರ ಜನನ. BE in Electrical and Electronics Engineering (ಎನ್.ಎಂ.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ) ಇವರ ವಿದ್ಯಾಭ್ಯಾಸ.
ಆರಂಭದಲ್ಲಿ ಯಕ್ಷಗಾನವನ್ನು ಶ್ರೀ ಯೋಗೀಶ್ ಆಚಾರ್ಯ ಅಳದಂಗಡಿ ಬಳಿ ಕಲಿತು ನಂತರ ಶ್ರೀ ಶ್ರೀವತ್ಸ ಕಟೀಲು, ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ, ಶ್ರೀ ಪ್ರೇಮ್‌ರಾಜ್ ಕೊಯಿಲ, ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಇವರಲ್ಲಿ ನಾಟ್ಯಾಭ್ಯಾಸ ಹಾಗೂ ಹಿಮ್ಮೇಳ ಅಭ್ಯಾಸವನ್ನು ಶ್ರೀ ಚಂದ್ರಶೇಖರ ಭಟ್ ಕೊಂಕಣಾಜೆ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ತಂದೆ ಹಾಗೂ ತಾಯಿ ಸಣ್ಣವನಿದ್ದಾಗ ಟಿವಿಯಲ್ಲಿ ಯಕ್ಷಗಾನದ ಕ್ಯಾಸೆಟ್ ಹಾಕಿ ನನಗೆ ಊಟ ಮಾಡಿಸುತಿದ್ದರು ಇದೇ ನನಗೆ ಯಕ್ಷಗಾನದಲ್ಲಿ ಆಸಕ್ತಿ ಬೆಳೆಯಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಅನ್ವೇಷ್ ಆರ್.ಶೆಟ್ಟಿ.
ನೆಚ್ಚಿನ ಪ್ರಸಂಗಗಳು:-
ಪುರಾಣಾಧಾರಿತ ಎಲ್ಲಾ ಪ್ರಸಂಗಗಳು ನೆಚ್ಚಿನವೆ, ಒಂದು ಪ್ರಸಂಗ ನಮಗೆ ಮೆಚ್ಚುಗೆಯಾಗಬೇಕಿದ್ದರೆ ಆ ಪ್ರಸಂಗಗಳ ಸಾಹಿತ್ಯ, ಪ್ರಸಂಗದ ನಡೆ, ಕಲಾವಿದರ ಪಾತ್ರದ ನಿರ್ವಹಣೆ ಪರಿಣಾಮ ಬೀರುತ್ತದೆ.
ಬಣ್ಣದ ವೇಷಗಳು ವಿಜೃಂಭಿಸುವ ದುಶ್ಯಾಸನ ವಧೆ, ಮಹಿರಾವಣ ಕಾಳಗ, ರಾಜವೇಷ ಪುಂಡುವೇಷಗಳು ವಿಜೃಂಭಿಸುವ ಕೃಷ್ಣಾರ್ಜುನ ಕಾಳಗ,ತರಣಿಸೇನ ಕಾಳಗ,ಅತಿಕಾಯ ಮೋಕ್ಷ, ಸುಧನ್ವ ಮೋಕ್ಷ, ಇಂತಹ ಕೆಲ ಪ್ರಸಂಗಗಳು ಮೆಚ್ಚಿಗೆಯಾಗಿವೆ ಅಲ್ಲದೆ ತುಳು ಪ್ರಸಂಗಗಳಲ್ಲಿ ಕೋಟಿ ಚೆನ್ನಯ,ತುಳುನಾಡ ಬಲಿಯೇಂದ್ರ, ದೇವು ಪೂಂಜ ಪ್ರತಾಪ ಇವೆಲ್ಲ ನೆಚ್ಚಿನ ಪ್ರಸಂಗಗಳು
ನೆಚ್ಚಿನ ವೇಷಗಳು:-
ಸಣ್ಣಂದಿನಿಂದಲೂ ಬಣ್ಣದ ವೇಷಗಳಲ್ಲಿ ಆಸಕ್ತಿ ಹೆಚ್ಚು. ಅವಕಾಶ ದೊರಕಿದಲ್ಲಲ್ಲಿ ಬಣ್ಣದ ವೇಷಗಳನ್ನು ನಿರ್ವಹಿಸಲು ಪ್ರಯತ್ನಿಸಿದ್ದೇನೆ, ಕೆಲ ಪಾತ್ರಗಳು ತೃಪ್ತಿನೀಡಿದೆ ಅವುಗಳಲ್ಲಿ ದೇವೀ ಮಾಹಾತ್ಮ್ಯೆಯ ಮಹಿಷಾಸುರ, ಮೋಕ್ಷದ ನರಕಾಸುರ, ಗಿರಿಜಾ ಕಲ್ಯಾಣದ ತಾರಕಾಸುರ, ಶ್ವೇತಕುಮಾರ ಚರಿತ್ರೆಯ ಯಮ ಅಂತೆಯೆ ಹೆಣ್ಣು ಬಣ್ಣಗಳಾದ ಪಂಚವಟಿಯ ಶೂರ್ಪನಖಿ, ಶ್ವೇತಕುಮಾರ ಚರಿತ್ರೆಯ ಕರಾಳನೇತ್ರೆ, ಕೃಷ್ಣ ಲೀಲೆಯ ಪೂತನಿ, ರಾಮಾಯಣದ ಅಯೋಮುಖಿ ಇವೆಲ್ಲ ಹಿತವೆನಿಸಿರುವಂತದ್ದು.
ರಾಜವೇಷಗಳಲ್ಲಿ ನಾಯಕ, ಕಥಾನಾಯಕನಾಗಿ ಕಾಣಿಸುವ ಸಾತ್ವಿಕ ಪೀಠಿಕೆ ವೇಷಗಳು ನೆಚ್ಚಿನವು . ರಾಜಾನಿಭಂದನ, ಶ್ರೀರಾಮ, ಅರ್ಜುನ, ಹನೂಮಂತ ಹಾಗೆಯೇ ಕೃಷ್ಣ,ವಿಷ್ಣು, ಮುಂತಾದ ಮಾತುಗಾರಿಕೆ ಪ್ರಧಾನವೆನಿಸಿದ ಪಾತ್ರಗಳೂ ನೆಚ್ಚಿನದ್ದಾಗಿವೆ. ಹಸಿ ಬಣ್ಣದ ಬಳಿಯುವಲ್ಲಿ ಹೆಚ್ಚಿನ ಆಸಕ್ತಿ ಇರುವ ಕಾರಣ ಹಸಿ ಬಣ್ಣದ ಪಾತ್ರಗಳೆಲ್ಲ ನೆಚ್ಚಿನ ಪಾತ್ರಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗಕ್ಕೆ ಸಂಬಂಧಿಸಿ ಪದ್ಯಗಳನ್ನು, ಸಂಭಾಷಣೆಗಳನ್ನು, ಪ್ರಸಂಗದ ನಡೆಗಳನ್ನು ತಿಳಿದುಕೊಳ್ಳುವುದು. ಈ ಬಗ್ಗೆ ಗುರು ಹಿರಿಯರಿಂದ ಮಾಹಿತಿ ಪಡೆಯುವುದು , ಹಾಗೆಯೇ ನಿರ್ವಹಿಸುವ ಪಾತ್ರದ ಬಗ್ಗೆ ಅಧ್ಯಯನ ಮಾಡುವುದರ ಜೊತೆಗೆ ಸಂಭಾಷಣೆಗೆ ಸಿಗುವ ಪಾತ್ರಗಳ ಬಗ್ಗೆ ಅಧ್ಯಯನ ಮಾಡಿಕೊಳ್ಳುವುದು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನಕ್ಕೆ ಯುವ ಸಮೂಹ ಆಕರ್ಷಿತವಾಗುತ್ತಿರುವುದು ಉತ್ತಮ ಬೆಳವಣಿಗೆ. ಯಕ್ಷಗಾನ ತರಬೇತಿ ಕೇಂದ್ರಗಳು ವಿವಿಧ ಸಂಘ ಸಂಸ್ಥೆಗಳಲ್ಲಿ ಪ್ರಾರಂಭ ಆದುದರಿಂದ ಆಸಕ್ತ ಯುವಜನತೆಗೆ ತೊಡಗಿಸಿಕೊಳ್ಳುವುದಕ್ಕೆ ಅವಕಾಶವಾಗುತ್ತಿದೆ. ಯಕ್ಷಗಾನ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ವೃತ್ತಿಪರರ ಪ್ರದರ್ಶನ ಹೊರತು ಪಡಿಸಿ ಉಳಿದ ಪ್ರದರ್ಶನಗಳಲ್ಲಿ ಗುಣಮಟ್ಟ ಕುಸಿಯುತ್ತಿದೆ ಯಾಕೆಂದರೆ ಯಕ್ಷಗಾನವೆನ್ನುವುದು ಕೇವಲ ಹೆಜ್ಜೆಗಾರಿಕೆ ಕಲಿತ ತಕ್ಷಣ ಮುಗಿಯುವಂತದಲ್ಲ. ಈ ಬಗ್ಗೆ ನನ್ನನ್ನೂ ಸೇರಿಸಿ ಯುವಕಲಾವಿದರು ಅಧ್ಯಯನ ನಡೆಸಿ ಶ್ರಮಪಡಬೇಕಾಗಿದೆ.
ಉತ್ತಮ ಪ್ರದರ್ಶನಕ್ಕೆ ಕಲಾಭಿಮಾನಿಗಳ ಬೆಂಬಲವಿದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಸಧ್ಯ ವೃತ್ತಿಯಲ್ಲಿ ತೊಡಗಿಸಿಕೊಳ್ಳಲಿರುವುದರಿಂದ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು. ಯಕ್ಷಗಾನಕ್ಕೆ ಸಂಬಂಧಿಸಿ ಹಿಮ್ಮೇಳ ಕಲಿಕೆಯನ್ನು ಪೂರ್ಣಗೊಳಿಸುವುದು.
ಮೇಳಗಳಲ್ಲಿ ತಿರುಗಾಟದ ಅನುಭವವಿಲ್ಲ, ಯಕ್ಷರಂಗದಲ್ಲಿ ಹವ್ಯಾಸಿಯಾಗಿ ತೊಡಗಿಸಿಕೊಂಡಿದ್ದು ಅವಕಾಶ ದೊರಕಿದಾದ ಕಟೀಲು, ಸಸಿಹಿತ್ಲು , ಹನುಮಗಿರಿ ಮೇಳಗಳಲ್ಲಿ ಪಾತ್ರ ನಿರ್ವಹಿಸಿದ್ದೇನೆ ಎಂದು ಹೇಳುತ್ತಾರೆ ಅನ್ವೇಷ್ ಆರ್.ಶೆಟ್ಟಿ.
ಸನ್ಮಾನ ಹಾಗೂ ಪ್ರಶಸ್ತಿ:-
♦️ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಕೊಡಮಾಡುವ ಯುವ ಪ್ರಶಸ್ತಿ.
♦️ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕೊಡಮಾಡುವ ರಾಜ್ಯ ಮಟ್ಟದ ಸ್ವಸ್ತಿ ಸಿರಿ ಪ್ರಶಸ್ತಿ.
♦️ ಅಂತರಕಾಲೇಜು ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ಆರು ಬಾರಿ ಕಿರೀಟ ವೇಷ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ.
ಫೊಟೊಗ್ರಫಿ, ಚಿತ್ರಕಲೆ, ದೈವರಾಧನೆ ಬಗ್ಗೆ ಅಧ್ಯಯನ, ಯಕ್ಷಗಾನ ವೀಕ್ಷಣೆ ಇವರ ಹವ್ಯಾಸಗಳು.
ತಂದೆ, ತಾಯಿ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಅನ್ವೇಷ್ ಆರ್.ಶೆಟ್ಟಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705
Comments
Post a Comment