ಯಕ್ಷ ಸಾಧಕರು 315

"ಕಲಾ ಪ್ರತಿಭಾ ಶೃಂಗ"

ತಾನು ಕೈ ಆಡಿಸಿದ ಎಲ್ಲಾ ಕ್ಷೇತ್ರದಲ್ಲೂ ವಿಶಿಷ್ಟ ಸಾಧನೆಯ ಛಾಪು ಮತ್ತು ಮೈಲಿಗಲ್ಲು. ರಂಗಭೂಮಿ ಕ್ಷೇತ್ರದಲ್ಲಿ 50 ಕ್ಕೂ ಹೆಚ್ಚು ನಾಟಕಗಳು, ಕಿರುತೆರೆಯಲ್ಲಿ 680 ಧಾರಾವಾಹಿ ಸಂಚಿಕೆಗಳ ನಿರ್ದೇಶನ ಮಾಡಿದ್ದಾರೆ. ಯಕ್ಷಗಾನದ ಆಡಿಯೋ/ವಿಡಿಯೋ ದಾಖಲೀಕರಣದ ಸಂಖ್ಯೆ 230 ! ಚಲನಚಿತ್ರದಲ್ಲೂ ಸದ್ಯ 2 ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶಿಸಿ 3ನೇ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಯಕ್ಷಗಾನ ಅಕಾಡೆಮಿಗೆ 2 ಅವಧಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿ, ಯಕ್ಷಗಾನ ಮತ್ತು ರಂಗಭೂಮಿಗೆ ಶೃಂಗೇರಿಯನ್ನು ಪ್ರಮುಖ ಕೇಂದ್ರ ಆಗಿಸುವಲ್ಲಿ ಇವರದು ಪ್ರಧಾನ ಪಾತ್ರ. ತಾವೊಬ್ಬರೇ ಬೆಳೆಯದೆ ಮಲೆನಾಡ ಪರಿಸರದ ನೂರಾರು ಕಲಾವಿದರನ್ನು ತನ್ನ ಜೊತೆಗೆ ಕರೆದೊಯ್ದು ಒಂದು ಸಾಂಸ್ಕೃತಿಕ ಪಡೆಯನ್ನೇ ಉತ್ತೇಜಿಸಿ, ಪ್ರೋತ್ಸಾಹಿಸಿ, ಕಟ್ಟಿ ಬೆಳಸಿದ್ದಾರೆ, ಜೊತೆಗೆ ಮಲೆನಾಡ ಹತ್ತಾರು ಪ್ರತಿಭಾವಂತರಿಗೆ ಆಯಕಟ್ಟಿನ ಪ್ರಶಸ್ತಿ ಪುರಸ್ಕಾರ ದೊರೆಯುವಲ್ಲಿ ನೇಪಥ್ಯದ ಪಾತ್ರವಹಿಸಿಸುವಲ್ಲಿ ಪ್ರಮುಖರು ಶ್ರೀಯುತ ಎಸ್ ವಿ ರಮೇಶ ಬೇಗಾರ್.


ಶೃಂಗೇರಿಯ ಬೇಗಾರಿನ ಲಕ್ಷ್ಮೀ ವೆಂಕಟ್ರಮಣ ಭಟ್ ಹಾಗೂ ದಾಕ್ಷಾಯಿಣಿ ಇವರ ಮಗನಾಗಿ 20.12.1968 ರಂದು ಎಸ್ ವಿ ರಮೇಶ ಬೇಗಾರ್ ಜನನ. ಬಿಎ ಮತ್ತು ಪತ್ರಿಕೋದ್ಯಮ ಹಾಗೂ ಮೈಸೂರು ಯೂನಿವರ್ಸಿಟಿಯಿಂದ ಡಿಪ್ಲೊಮೊ ಪದವಿ.
ಚಿಕ್ಕಪ್ಪ ರಾಧಾಕೃಷ್ಣ ಭಟ್ ಅವರು ಯಕ್ಷಗಾನದ ಹವ್ಯಾಸಿ ವೇಷಧಾರಿಯಾಗಿದ್ದರು, ಅಣ್ಣ ಚೆಂಡೆ ಮದ್ದಲೆ ನುಡಿಸುತ್ತಿದ್ದರು. ಅಣ್ಣ ದೇವಿಪ್ರಕಾಶ್ ದೂರ ದೂರದ ಊರುಗಳಿಗೆ ಯಕ್ಷಗಾನಕ್ಕೆ ಹೋಗುತ್ತಿದ್ದರು. ಅಣ್ಣ ನನ್ನನ್ನು ಯಕ್ಷಗಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಣ್ಣನಿಂದಾಗಿ ಯಕ್ಷಗಾನದ ಮೇಲೆ ಆಸಕ್ತಿ ಹುಟ್ಟಿತು. ಕಾಳಿಂಗ ನಾವಡರ ಬಗ್ಗೆಯೂ ಅಣ್ಣನೇ ವರ್ಣನೆ ಮಾಡಿ ಈ ತರಹ ಒಬ್ರು ವಿಶಿಷ್ಟವಾದ ರೀತಿಯ ಕಲಾವಿದರು ಇದ್ದಾರೆ ಅಂತ ಹೇಳಿ ತೋರಿಸಿಕೊಟ್ಟರು. ಹಾಗೆ ಕಾಳಿಂಗ ನಾವಡರಿಂದಾಗಿ ಯಕ್ಷಗಾನದ ಮೇಲೆ ಆಸಕ್ತಿ.

ಯಕ್ಷಗಾನಕ್ಕೆ ಗುರುಗಳು ಅಂತ ಯಾರು ಇಲ್ಲ. ಮಾನಸಿಕವಾಗಿ ನಾನು ಒಪ್ಪಿರುವುದು ಗುಂಡ್ಮಿ ಕಾಳಿಂಗ ನಾವಡರನ್ನು. ಅವರ ಮಾರ್ಗದರ್ಶನದಲ್ಲೇ  ನನ್ನೆಲ್ಲಾ ಯಕ್ಷಗಾನ ಸಂಬಂಧಿಯಾದ ಕೆಲಸಗಳನ್ನು ಶುರು ಮಾಡಿದವನು. ಜೊತೆಗೆ ನಾನು ಪದ್ಯ ಹೇಳುತ್ತಿದ್ದೆ. ಪದ್ಯ ಹೇಳುವಾಗ ಅದಕ್ಕೆ ತಾಳಗತಿಗಳನ್ನು ಕಲಿಸಿಕೊಟ್ಟ ಗುರುಗಳು ಶೃಂಗೇರಿ ಹತ್ರದ ಮಾಕರ್ಸಿ ಊರಿನ ಗೋಪಾಲಕೃಷ್ಣ ಅವರು. ಯಕ್ಷಗಾನ ರಂಗದಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ.

ಚೆಲುವೆ ಚಿತ್ರಾವತಿ, ನಾಗಶ್ರೀ ಇವರ ನೆಚ್ಚಿನ ಪ್ರಸಂಗ.
ರೇವತಿ, ವಾಸಂತಿ, ಶುದ್ಧ ಸಾವೇರಿ ನೆಚ್ಚಿನ ರಾಗಗಳು.
ನೆಚ್ಚಿನ ಭಾಗವತರು ಶ್ರೀಯುತ ಕಾಳಿಂಗ ನಾವಡರು.
ಎಲ್ಲ ಚೆಂಡೆ ಮದ್ದಳೆ ವಾದಕರು ನೆಚ್ಚಿನವರೆ.

ಕಾಳಿಂಗ ನಾವಡ ಹಾಗೂ ನಿಮ್ಮ ಒಡನಾಟದ ಅನುಭವ:-
ಕಾಳಿಂಗ ನಾವಡರ ಮತ್ತು ನನ್ನ ಒಡನಾಟ.
ಎಸ್ಸೆಲ್ಸಿ ಅಲ್ಲಿರುವಾಗ ಕಾಳಿಂಗ ನಾವಡರ ಬಗ್ಗೆ ಕವನ ಬರೆದಿದ್ದೆ. ಅದನ್ನು ಮೇಲಿಂದ ಕೆಳಗೆ ಓದುವಾಗ 'ಕಾಳಿಂಗ ನಾವಡ' ಅಂತ ಬರುವ ಹಾಗೆ ಬರೆದಿದ್ದೆ. ಅದನ್ನು ಅವರ ಮನೆಗೆ ಪೋಸ್ಟ್ ಮಾಡಿ ಕಳಿಸಿದ್ದೆ. ಎಸ್ಎಸ್ಎಲ್ಸಿ ಪರೀಕ್ಷೆ ಎಲ್ಲ ಮುಗಿದ ನಂತರ, ಉಡುಪಿ ರಾಜಾಂಗಣದಲ್ಲಿ ಯಕ್ಷಗಾನ ಇತ್ತು ಮಳೆಗಾಲದಲ್ಲಿ. ಸುಧಾನ್ವಾರ್ಜುನ ಪ್ರಸಂಗ. ಅವರು ಪದ್ಯ ಹೇಳಿ ಮುಗಿಸಿ ಹೊರಗೆ ಹೋಗುವಾಗ ನಾನು ಹೋಗಿ ನಮಸ್ಕಾರ ಮಾಡಿ, ನಾನೇ ಒಂದು ಕವನ ಬರೆದಿದ್ದೆ, ಶೃಂಗೇರಿಯವನು ನಾನು ರಮೇಶ ಅಂತ ಪರಿಚಯ ಮಾಡಿದೆ. ಅಲ್ಲಿಂದ ಶುರುವಾದಂತಹ ಒಂದು ನಂಟು 1990 ನೆ ಇಸವಿ..7-8 ವರ್ಷಗಳ ಸುದೀರ್ಘ ಹಾಗೂ ಆಪ್ತವಾದಂತಹ ಒಡನಾಟ ಅವರೊಂದಿಗೆ ಇತ್ತು.

ಕಾಳಿಂಗ ನಾವಡ ಪ್ರತಿಷ್ಠಾನ ಮತ್ತು ಭಾರತಿತೀರ್ಥ ಟ್ರಸ್ಟ್ ನ ಕಾರ್ಯಗಳು ಹೇಗೆ ಇದೆ:-
ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಠಾನ, 1990 ರಲ್ಲಿ ಶುರು ಮಾಡಿದ್ದು. ಅದು 10 ವರ್ಷ ಆದಾಗ ಮಲೆನಾಡಿಗೆ ಪೂರಕವಾಗಿ ಇರಲಿ ಅಂತ ಭಾರತೀ ತೀರ್ಥ ಕಲ್ಚರಲ್ ಟ್ರಸ್ಟ್ ಅನ್ನು ಪ್ರಾರಂಭ ಮಾಡಿದೆ. ಈ ಎರಡು ಸಂಸ್ಥೆಗಳು ಕೂಡ ಸಾಂಸ್ಕೃತಿಕವಾಗಿ ಮಲೆನಾಡನ್ನು ಹೇಗೆ ಹೇಗೆಲ್ಲಾ ಬಿಂಬಿಸಬಹುದು ಎಂಬುದಾಗಿ ಕೆಲಸ ಮಾಡುತ್ತೆ.




ಯಕ್ಷಗಾನ, ರಂಗಭೂಮಿ ಮತ್ತು ಸಿನಿಮಾ ಎಂಬ 3 ಕ್ಷೇತ್ರದ ನಿಮ್ಮ ಅನುಭವ:-
ಯಕ್ಷಗಾನ, ರಂಗಭೂಮಿ ಮತ್ತು ಸಿನಿಮಾ ಈ ಮೂರು ಕ್ಷೇತ್ರದ ಅನುಭವ ಒಂದೊಂದು ಒಂದೊಂದು ತರಹ. ಯಕ್ಷಗಾನ ಕ್ಷೇತ್ರವೇ ಬೇರೆ ತರಹದ್ದು. ಸಿನೆಮಾ ಮತ್ತು ರಂಗಭೂಮಿ ಒಂದು ತರಹದ್ದು. ಮೂರು ವಿಭಿನ್ನವಾದ ಅನುಭವಗಳು.. ಮೂರು ಕೂಡ ನನಗೆ ಮನಸಿಗೆ ಕುಶಿ ಕೊಡುವಂತಹದ್ದು.

ಯಕ್ಷಗಾನದ ಆಡಿಯೋ ರೆಕಾರ್ಡಿಂಗ್ ಕ್ಷೇತ್ರದಲ್ಲಿ ನೀವು ಹೇಗೆ ಗುರುತಿಸಿಕೊಂಡಿರಿ:-
ಯಕ್ಷಗಾನದ ಆಡಿಯೋ ಕ್ಷೇತ್ರದಲ್ಲಿ ಗುರುತಿಸಿಕೊಂಡದ್ದು ಹೇಗೆ ಅಂತ ಹೇಳಿದ್ರೆ ಮೊದಲಿಗೆ ನಾನು ಅಮೃತ ಮತಿ ಅಂತ ಕ್ಯಾಸೆಟ್ ರೆಕಾರ್ಡ್ ಮಾಡಿದೆ 1989 ರಲ್ಲಿ ಅದು ರಿಲೀಸ್ ಆಯ್ತು. ಭಾಗವತಿಕೆಯೇ ಪ್ರಧಾನವಾಗಿರುವಂತಹ ಕ್ಯಾಸೆಟ್. ಕಾಳಿಂಗ ನಾವಡರ ಭಾಗವತಿಕೆ. ಅದರಲ್ಲಿ ಸಂಭಾಷಣೆಗಳೆಲ್ಲವೂ ನಾಟಕ ರೂಪದಲ್ಲಿ ಇದ್ದದರಿಂದ ಅದಕ್ಕೆ ಅಷ್ಟೊಂದು ಮಾರ್ಕೆಟ್ ಕ್ರಿಯೇಟ್ ಆಗಲಿಲ್ಲ. ಕಾಳಿಂಗ ನಾವಡರೆ ಭಾಗವತಿಕೆ ಮಾಡಿದ್ರು ಅಷ್ಟೊಂದು ಮಾರುಕಟ್ಟೆ ಬರಲಿಲ್ಲಲ್ವ  ಅಂತ ಭಾವಿಸಿದೆವು. ಆದರೆ ಅದು ಮೊದಲನೇ ಸಣ್ಣ ಸೋಲು ಅಷ್ಟೇ. ನಂತರದ ದಿನಗಳಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಯಿತು. ಹಾಗೆ ಕಾಳಿಂಗ ನಾವಡರನ್ನು ಹಾಕಿಕೊಂಡು ಮಾಡಿದಾಗ ಇದೊಂದು ತರಹದ ಪ್ರಯೋಗವಾಗಿತ್ತಲ್ರಿ ಅಂತ ಪ್ರೊಡ್ಯೂಸರ್ ಹೇಳಿದಾಗ ನಾನು ಅಧಿಕ ಪ್ರಸಂಗ ಅಂತ ತಮಾಷೆ ತಮಾಷೆಯಾಗಿ
ಅಚ್ಚುತ ಕಲ್ಲಾಪು ಅವರ ಆಟ ಡೊಂಜಿ ಆಟ ಪ್ರೇರಣೆ ಯಿಂದಾ ಕನ್ನಡದಲ್ಲಿ ಮಾಡಲು ಪ್ರಯತ್ನ ಪಟ್ಟೆ. ಅಲ್ಲಿಂದ ನಂತ್ರ ಕ್ಯಾಸೆಟ್ ರೆಕಾರ್ಡಿಂಗ್ ಕ್ಷೇತ್ರದಿಂದ ಹಿಂದೆ ತಿರುಗಿ ನೋಡಿದ್ದಿಲ್ಲ. ಕ್ಯಾಸೆಟ್, ಸಿಡಿ ಗಳು ವಿಡಿಯೋಗಳು ಬೇಕಾದಷ್ಟು ಮಾಡಿದೆ.

ಯಕ್ಷಗಾನದ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ನಿಮ್ಮ ಅನುಭವ:-
ಯಕ್ಷಗಾನ ಪದ್ಯ ಹೇಳ್ತಾ ಇದ್ದೆ. 1989ನೇ ಇಸವಿಯಿಂದ 2007ನೇ ಇಸವಿ ತನಕ ಬೇಕಾದಷ್ಟು ಯಕ್ಷಗಾನ ಪ್ರಸಂಗಗಳನ್ನು  ಆಡಿಸಿದ್ದೇನೆ. ನನ್ನ ಭಾಗವತಿಕೆಯಲ್ಲಿ ಕೊಂಡದಕುಳಿಯವರು, ಯಾಜಿಯವರು, ಚಿಟ್ಟಾಣಿಯವರು ವೇಷ ಮಾಡಿದ್ದಾರೆ. ಹಾಗೆಯೇ ಕೃಷ್ಣಮೂರ್ತಿ, ಹಳ್ಳಾಡಿ ಜಯರಾಂ ಶೆಟ್ಟಿ ನನ್ನ ಕಾಂಬಿನೇಷನ್ ಅದ್ಭುತವಾಗಿತ್ತು.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ವಿಷೇಶವಾಗಿ ಯುವಜನರನ್ನು ತನ್ನತ್ತ ಸೆಳೆಯುತ್ತಾ ಸಾಗುತ್ತಾ ಇದೆ.  ಹಾಗೆ 2 ರೀತಿಯಲ್ಲಿ ವಿಭಾಗ ಮಾಡಿಕೊಳ್ಳಬಹುದು. ಕಮರ್ಶಿಯಲ್ ಯಕ್ಷಗಾನ ಮತ್ತು ಕಲಾತ್ಮಕ ಯಕ್ಷಗಾನ ಅಂತ. ಪೌರಾಣಿಕ ಯಕ್ಷಗಾನ ಎಲ್ಲವೂ ಕಲಾತ್ಮಕವಾದರೆ ಹೊಸ ಪ್ರಸಂಗಗಳೆಲ್ಲವೂ ಕಮರ್ಶಿಯಲ್.
ಅಂದರೆ ಕಲಾತ್ಮಕ ಯಕ್ಷಗಾನದಲ್ಲಿ ಅರ್ಥಗಾರಿಕೆಯಲ್ಲಿ ವೈಯಕ್ತಿಕ ವಿಚಾರಗಳು ಬರ್ತವೆ. ಅದನ್ನು ನಮ್ಮ ಕಲಾವಿದರು ಗಮನಿಸಬೇಕು. ಯಾಕಂದ್ರೆ  ಅದಕ್ಕೆ ಅದರದ್ದೇ ಆದಂತಹ ವ್ಯಾಲ್ಯೂ ಇದೆ. ಹೊಸ ಪ್ರಸಂಗಗಳಲ್ಲಿ ಮುಕ್ತವಾದಂತಹ ಸ್ವಾತಂತ್ರ ವಿದೆ.




ಯಕ್ಷಗಾನದ ಇಂದಿನ ಪ್ರೇಕ್ಷಕರು ಕೂಡ ಅಷ್ಟೇ. ಹಿಂದೆ ಎಲ್ಲ ಎಷ್ಟು ದೂರ ಆದ್ರೂ ಯಕ್ಷಗಾನಕ್ಕೆ ಹೋಗ್ತಿದ್ರು. ಅಲ್ಲಿ ಕಾಲ ಕಳೆದು ಬರ್ತಿದ್ರು. ಈಗಿನ ಬ್ಯುಸಿ ಶೆಡ್ಯೂಲ್ ಅಲ್ಲಿ ಜನರಿಗೆ ತುಂಬಾ ಸಮಯ ಕೊಡಲು ಆಗ್ತಾ ಇಲ್ಲ. ಅದು ಎಲ್ಲರ ಸಮಸ್ಯೆ. ಆದರೂ ಈಗ ಸಾಮಾಜಿಕ ಪ್ರಸಂಗಗಳು ಅಲ್ಲಲ್ಲಿ ಹೌಸ್ ಫುಲ್ ಪ್ರದರ್ಶನಗಳನ್ನು ಕಾಣುತ್ತಾ ಇವೆ. ಇನ್ನೇನು ಬಿದ್ದೆ ಹೋಯ್ತು ಅನ್ನುವಾಗ ಮತ್ತೆ ಎದ್ದು ನಿಲ್ತಾ ಇವೆ. ಇದೊಂದು ಏರಿಳಿತ ಗಳ ವ್ಯವಸ್ಥೆ. ಅದರಲ್ಲಿ ಪ್ರೇಕ್ಷಕ ಕೂಡ ಸ್ಪಂದಿಸುತ್ತಾ ಇದ್ದಾನೆ.

1) ಕಿರುತೆರೆ ಧಾರಾವಾಹಿ - ಯಕ್ಷ ಪ್ರಪಂಚ (26 ಕಂತುಗಳು-ದೂರದರ್ಶನ)
2) ವಿಡಿಯೋ ದಾಖಲೀಕರಣಗಳು - ನಾಗಶ್ರೀ, ಗದಾಯುದ್ಧ (ಹಾಸ್ಯಗಾರರಿಂದ), ಬೇಡರ ಕಣ್ಣಪ್ಪ, ಭೀಷ್ಮ ಪ್ರತಿಜ್ಞೆ, ಲವ-ಕುಶ, ವಿಶ್ವಾಮಿತ್ರ-ಮೇನಕೆ, ಮಾಯಾ ಶೂರ್ಪನಖಿ, ಕಂಸ ದಿಗ್ವಿಜಯ, ಕೀಚಕ ವಧೆ, ಮಾಗಧ ವಧೆ, ಕೃಷ್ಣ ಗಾರುಡಿ, ಶ್ರೀ ಕೃಷ್ಣ ಲೀಲಾಮೃತಮ್, ಯಕ್ಷಲೋಕ ವಿಜಯ, ಸಿಂಗಾರಿ-ಬಂಗಾರಿ, ಹುಲಿಯಾದ ಕಾಳ, ಚರ್ಮುರಿ ಪ್ರಸಂಗ, ಕುಟ್ಟಿ ಕುಂದಾಪುರ, ಸೌಂದರ್ಯ, ರಕ್ತ ಕಣ್ಣೀರು, ಕರ್ಣ ಪರ್ವ (ಉಡುಪಿ ತಿಟ್ಟಿನ ಸಂಪ್ರದಾಯದಲ್ಲಿ), ವಾಲಿ-ವಧೆ (ದೃಶ್ಯ-ಶ್ರವ್ಯ ಪರಿಕಲ್ಪನೆಯಲ್ಲಿ), ಜಾಂಬವತಿ ಕಲ್ಯಾಣ (ದೃಶ್ಯ-ಶ್ರವ್ಯ ಪರಿಕಲ್ಪನೆಯಲ್ಲಿ)
3) ವಿಡಿಯೋ ಸಂಪುಟಗಳು (Documentary) - ದಿ ll ಕಾಳಿಂಗ ನಾವಡ ಸಾಕ್ಷ್ಯಚಿತ್ರ ಮತ್ತು ಕಾಳಿಂಗ ನಾವಡರಿಗೆ ರಾಘವೇಂದ್ರ ಮಯ್ಯರಿಂದ ಗಾನ ನಮನ, ಲವಕುಶ, ಭೀಷ್ಮ ಪ್ರತಿಜ್ಞೆ, ಪಂಚವಟಿ, ವಿಶ್ವಾಮಿತ್ರ ಮೇನಕೆ, ಬೇಗಾರು ಪದ್ಮನಾಭ ಶೆಟ್ಟಿಗಾರ್ ಸಾಕ್ಷ್ಯಚಿತ್ರ (ಅಕಾಡೆಮಿ ಸಹಯೋಗ)
4) ಯಕ್ಷಗಾನ ಆಡಿಯೋ - ಅಮೃತಮತಿ (ಕಾಳಿಂಗ ನಾವಡ), ಶರ ಸೇತು ಬಂಧನ (ಶೇಣಿ ಅರ್ಥ ಸರಣಿ), ಸೂರ್ಯದೀಪ (ಸುಬ್ರಮಣ್ಯ ಧಾರೇಶ್ವರ), ಮಹಾದಾನ (ಶೇಣಿ-2), ಯಕ್ಷಪ್ರಶ್ನೆ (ಶೇಣಿ-3), ಶೃಂಗೇರಿ ಕ್ಷೇತ್ರ ಮಹಾತ್ಮೆ (ಶೇಣಿ-4), ಮೇದಿನಿ ನಿರ್ಮಾಣ (ಶೇಣಿ-5), ಕಚ ದೇವಯಾನಿ (ಶೇಣಿ-6), ಭೀಷ್ಮ ಪರಶುರಾಮ (ಶೇಣಿ-7), ಮಾರೀಚ ನೀತಿ (ರಾಮದಾಸ ಸಾಮಗ-ವಾಸುದೇವ ಸಾಮಗ-ಇವರ ಪ್ರಥಮ ಧ್ವನಿ ಸುರುಳಿ), ವಸಿಷ್ಠ-ವಿಶ್ವಾಮಿತ್ರ (ರಾಮದಾಸ ಸಾಮಗ-ವಾಸುದೇವ ಸಾಮಗ), ಮೀನಾಕ್ಷಿ ಕಲ್ಯಾಣ (ಸದಾಶಿವ ಅಮೀನ್-ಇವರ ಪ್ರಥಮ ಧ್ವನಿ ಸುರುಳಿ), ಧ್ವಮಿಳ ಗಂಧರ್ವ (ಸದಾಶಿವ ಅಮೀನ್), ಕೃಷ್ಣ ಗಾರುಡಿ (ಸುರೇಶ ಶೆಟ್ಟಿ-ಇವರ ಪ್ರಥಮ ಧ್ವನಿ ಸುರುಳಿ), ಚಂದ್ರಾವಳಿ ವಿಳಾಸ (ಕಿಗ್ಗಾ ಹಿರಿಯಣ್ಣಾಚಾರ್-ಇವರ ಪ್ರಥಮ ಧ್ವನಿ ಸುರುಳಿ), ಬೇಡರ ಕಣ್ಣಪ್ಪ (ನಾರಾಯಣ ಶಬರಾಯ-ಇವರ ಪ್ರಥಮ ಧ್ವನಿ ಸುರುಳಿ), ಚರ್ಮುಡಿ ಪ್ರಸಂಗ (ರಾಘವೇಂದ್ರ ಮಯ್ಯ-ಇವರ ಪ್ರಥಮ ಧ್ವನಿ ಸುರುಳಿ), ಹುಲಿಯಾದ ಕಾಳ, ಕೋಡಂಗಿ (ಪೌರಾಣಿಕ ಹಾಸ್ಯ-ಶಿವಶಂಕರ ಹರಿಹರಪುರ-ಇವರ ಪ್ರಥಮ ಧ್ವನಿ ಸುರುಳಿ), ರಾಘವೇಂದ್ರ ಮಯ್ಯ ಆಡಿಯೋ
5) ರಮೇಶ್ ಬೇಗಾರ್ ಭಾಗವತಿಕೆ ನಿರ್ವಹಿಸಿ ಸಂಯೋಜಿಸಿ ನಿರ್ದೇಶಿಸಿದ ಕ್ಯಾಸೆಟ್ ಗಳು - ಕೃಷ್ಣ ಪಾರಿಜಾತ (ಯಾಜಿ-ಹಳ್ಳಾಡಿ), ದಾಸನ ಮಾಡಿಕೋ ಎನ್ನಾ, ಸಾಲ್ವ ಶೃಂಗಾರ (ಡಿ ಜಿ ಹೆಗಡೆ-ಮಂಟಪ), ಉತ್ತರನ ಪೌರುಷ (ವಾಸುದೇವ ಸಾಮಗ), ಎಲ್ಲೆಲ್ಲೂ ಸೊಬಗಿದೆ (ದಿ ll ಕಾಳಿಂಗ ನಾವಡರಿಗೆ ಧ್ವನಿ ನಮನ), ಅಧಿಕ ಪ್ರಸಂಗ (1-2-3-ಹಾಸ್ಯ ಪ್ರಸಂಗಗಳು), ಸಿಂಗಾರಿ-ಬಂಗಾರಿ, ತ್ಯಾಂಪನ ಹೆಂಡ್ತಿ, ಪೆದ್ದ ಗೆದ್ದ, ಗೂಢಾಚಾರಿ ಸುಬ್ಬ, ರಾಮಾಚಾರಿ, ನಾಗ-ಕಾಳ-ಭೈರವ, ತರಕಾರಿ ರುಕ್ಕಮ್ಮ, ಸನ್ಯಾಸಿ ಸಂಕಣ್ಣೆ (ತುಳು), ನಂದಾರ್ದನಂದರಆಯ (ತುಳು), ಅಬಲ-ತಬಲ (ಭಾಸ್ಕರ ರಾವ್ ವಿರಚಿತ), ಗೋವಿಂದಾ-ಗೋವಿಂದಾ, ಜ್ವಾಲಾಮುಖಿ (ಚಿಟ್ಟಾಣಿಯವರು ಮುಖ್ಯ ಪಾತ್ರದಲ್ಲಿ), ಪ್ರೇಮಶ್ರೀ (ಕೊಂಡದಕುಳಿಯವರು ಮುಖ್ಯ ಪಾತ್ರದಲ್ಲಿ)
6) ಬೆಂಗಳೂರಿನಲ್ಲಿ ಪ್ರತೀ ವರ್ಷ 'ಯಕ್ಷ ಮುಂಗಾರು' ಯಕ್ಷಗಾನೋತ್ಸವ,  ಶೃಂಗೇರಿ ಕ್ಷೇತ್ರ ಮಹಾತ್ಮೆ (ಜಗದ್ಗುರುಗಳ ಸನ್ಯಾಸ ಸ್ವೀಕಾರದ ರಜತೋತ್ಸವ ಸಂದರ್ಭ), ಮಹಿಷ ಮರ್ಧಿನಿ (ಜಗದ್ಗುರುಗಳ 51ನೇ ವರ್ಧಂತಿಯಲ್ಲಿ), ಶಂಕರ ವಿಜಯ (5 ದಿನಗಳ ಸರಣಿ ಯಕ್ಷಗಾನ-ಶಂಕರ ಜಯಂತಿ ಸಂದರ್ಭ), 4 ಮಲೆನಾಡು ಯಕ್ಷಗಾನ ಉತ್ಸವಗಳು, ವಿವಿಧ ಪ್ರದೇಶಗಳಲ್ಲಿ ನೂರಕ್ಕೂ ಹೆಚ್ಚು ಯಕ್ಷಗಾನ/ತಾಳ ಮದ್ದಳೆ ಪ್ರದರ್ಶನಗಳ ಸಂಯೋಜನೆ-ಆಯೋಜನೆ
7) 'ಒಳ ಮಲೆನಾಡು ಪ್ರಾಂತ್ಯದ ಯಕ್ಷಗಾನ ವೀಕ್ಷಣ' ಎಂಬ ಸಮ್ಮೇಳನ ಮಾದರಿಯ ಕಾರ್ಯಕ್ರಮ
8) ಮೇಳ (1994/1995/1996-3 ವರ್ಷಗಳು)
9) 'ಚಿತ್ರಲೇಖ' ಪ್ರಸಂಗ ರಚನೆ.

ರಮೇಶ್ ಬೇಗಾರ್ ರವರು ಇದುವರೆಗೆ 35 ನಾಟಕಗಳನ್ನು, 6 ಧಾರಾವಾಹಿಗಳನ್ನು (680 ಧಾರಾವಾಹಿ ಸಂಚಿಕೆಗಳು) ಹಾಗೂ 9 ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇವರ ನಿರ್ದೇಶನದ ಹಲವಾರು ಸಾಕ್ಷ್ಯ ಚಿತ್ರಗಳು, ಪ್ರಸಿದ್ಧ ಸಾಹಿತಿಗಳ ಸಣ್ಣಕಥೆಗಳ ನಾಟಕ ರೂಪಾಂತರಗಳು, ಪ್ರಸಿದ್ಧ ಸಾಹಿತಿಗಳ ನಾಟಕಗಳು, ಸ್ವತಃ ರಚಿಸಿದ ನಾಟಕಗಳು ಮತ್ತು ಧಾರಾವಾಹಿಗಳು ಜನಪ್ರಿಯ ಪ್ರದರ್ಶನಗಳನ್ನು ಕಂಡಿದ್ದಲ್ಲದೇ ದೂರದರ್ಶನ ಮತ್ತು ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗಿದೆ.
♦️ ಕ್ರಾಂತಿ ಮತ್ತು ರಾಜಕೀಯ(1986),
♦️ ಭೂತಗಳು(1987),
♦️ ಆ ಹುಡುಗ (1988),
♦️ ಪರಿವರ್ತನೆ (1988),
♦️ ನಿರ್ಮಲಾ (1989),
♦️ ಸಿಡಿದವಳು, ಮೀನ ಮತ್ತು ನೋವುಗಳು (1990),
♦️ ಕರ್ಣಭಾರ, ಅರಮನೆ ಕಥಾಪ್ರಸಂಗ (1992),
♦️ ಕರ್ಣ (2009),
♦️ ದಿ ಸ್ಟೋರಿ ಆಫ್ ಚಂದ್ರಮ್ಮ (2022) ಮುಂತಾದವು ಇವರೇ ರಚಿಸಿ ನಿರ್ದೇಶಿಸಿದ ನಾಟಕಗಳು.

♦️ ಏಕೆ ಹೀಗೆ ನಮ್ಮ ನಡುವೆ,
♦️ ಅರಮನೆ ಕಥಾಪ್ರಸಂಗ,
♦️ಮಲೆನಾಡ ಮೇಲೆ ಮುಗಿಲ ಮಾಲೆ,
♦️ ಕರ್ಣಭಾರ,
♦️ ಪರಿಧಿ,
♦️ ಪರಿಭ್ರಮಣ ಯಕ್ಷ ಪ್ರಪಂಚ ಮುಂತಾದ ಧಾರಾವಾಹಿಗಳು ಇವರ ನಿರ್ದೇಶನದ ಟಿವಿ ವಾಹಿನಿಗಳಲ್ಲಿ ಪ್ರಸಾರ ಆಗಿವೆ.
ತೆಮೆಮನೆ ಸುಬ್ರಮಣ್ಯರವರು ನಿರ್ದೇಶಿಸಿದ ನಾ ಡಿಸೋಜಾರವರು ಬರೆದ "ಬೆಟ್ಟದಾಪುರದ ದಿಟ್ಟರು" ಕಥೆ ಆಧಾರಿತ ದೂರದರ್ಶನ ಧಾರಾವಾಹಿಯಲ್ಲಿ ಯಕ್ಷಗಾನ ಭಾಗವತರಾಗಿ ರಮೇಶ್ ಬೇಗಾರ್ ಕಾಣಿಸಿಕೊಂಡಿದ್ದಾರೆ. ಇವರ ಶೃಂಗೇರಿ ನವರಾತ್ರಿ ಚಿನ್ನದ ರಥ ಸಮರ್ಪಣೆ, ಕುದುರೆಮುಖ ಕಂಪೆನಿ ರಜತ ವರ್ಷ ಗಿರಿಜಾ ಕಲ್ಯಾಣ, ಹಾಲಾಡಿ ಮರ್ಲು ಚಿಕ್ಕು ದರ್ಶನ ಸನ್ನಿದಾನ ಶೃಂಗೇರಿ ಜಗದ್ಗುರುಗಳ ಜೀವನ ಚರಿತ್ರೆ, ಯಕ್ಷ ಪ್ರಪಂಚ, ಬಂಗಾರಮಕ್ಕಿ ಶ್ರೀ ಕ್ಷೇತ್ರ ದರ್ಶನ, ಹಾಲಾಡಿ ಮರ್ಲುಚಿಕ್ಕು ದಿವ್ಯದರ್ಶನ, ಗ್ರೇಟ್ನೆಸ್ ಆಫ್ ಶೃಂಗೇರಿ (ಇಂಗ್ಲಿಷ್) ಮುಂತಾದ ಸಾಕ್ಷ್ಯಚಿತ್ರಗಳು ದೂರದರ್ಶನದಲ್ಲಿ ತೆರೆಕಂಡಿದೆ. 1989-90ರಲ್ಲಿ ಇವರ ನಿರ್ದೇಶನದ "ನಿರ್ಮಲಾ", "ಸಿಡಿದವಳು" ಮತ್ತು "ಅರಮನೆಯ ಕಥಾಪ್ರಸಂಗ" ನಾಟಕಗಳು ರಾಜ್ಯಮಟ್ಟದ ಯುವಜನ ಮೇಳದಲ್ಲಿ ಪ್ರಥಮ ಬಹುಮಾನ ಗಳಿಸಿವೆ. "ಅರಮನೆಯ ಕಥಾಪ್ರಸಂಗ" ನಾಟಕದ ನಿರ್ದೇಶನಕ್ಕಾಗಿ ಉತ್ತಮ ನಿರ್ದೇಶಕ ಪ್ರಶಸ್ತಿ ದೊರಕಿದೆ. ಸಾಹಿತಿಗಳ ಸಂದರ್ಶನದ ಕಾರ್ಯಕ್ರಮ ಮಲೆನಾಡ ಮಡಿಲಿಂದ (1999-2000) ದೂರದರ್ಶನದಲ್ಲಿ 40 ಕಂತುಗಳಲ್ಲಿ ಪ್ರಸಾರವಾಗಿದೆ. ಇವರ ನಿರ್ದೇಶನದ ಸಣ್ಣ ಕಥೆಗಾರ ಅಬ್ದುಲ್ ರಶೀದ್ ರವರ ಕಥೆ "ಪಾತು" ಆಧಾರಿತ ಧಾರಾವಾಹಿ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗಿದ್ದು ಇಂಗ್ಲಿಷ್ ಅಡಿಬರಹದೊಂದಿಗೆ ದೂರದರ್ಶನ ರಾಷ್ಟ್ರೀಯ ವಾಹಿನಿಯಲ್ಲಿಯೂ ಪ್ರಸಾರವಾಗಿದೆ.

ದೂರದರ್ಶನದಲ್ಲಿ ಸಿನಿಮಾ ಕಲಾವಿದರೊಂದಿಗೆ 'ತಾರಾ ಲೋಕ' ಎಂಬ ಫೋನ್ ಇನ್ ಕಾರ್ಯಕ್ರಮದ ನಿರೂಪಕರಾಗಿ ರಮೇಶ್ ಬೇಗಾರ್ ಕೆಲಸ ಮಾಡಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಮತ್ತಿತರ ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ವಿವಿಧ ವಾಹಿನಿಗಳ ನಿರೂಪಕರಾಗಿಯೂ ಇವರು ಕೆಲಸ ಮಾಡುತ್ತಿದ್ದಾರೆ. ಇವರ ನಿರೂಪಣಾ ಶೈಲಿ ತುಂಬಾ ವಿಶೇಷವಾಗಿದ್ದು ನೋಡುಗರ ಮನವನ್ನು ತಲುಪುತ್ತದೆ.

ರಮೇಶ್ ಬೇಗಾರ್ ರವರ ನಿರ್ದೇಶದ 'ವೈಶಂಪಾಯನ ತೀರ' ಚಿತ್ರ ಜನವರಿ 2023ರಲ್ಲಿ ಬಿಡುಗಡೆಯಾಯಿತು. ಸುರೇಶ್ ಬಾಬುರವರ ನಿರ್ಮಾಣದ ಮಹಾಬಲಮೂರ್ತಿ ಕೊಡ್ಲೆಕೆರೆಯವರ ಕಥೆ ಆಧಾರಿತ ಈ ಚಿತ್ರದಲ್ಲಿ ಯಕ್ಷಗಾನ ಜೀವನ, ಮಲೆನಾಡು ಹಾಗೂ ಕರಾವಳಿಯ ದಿನನಿತ್ಯ ಬದುಕನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ವೈಜಯಂತಿ ಅಡಿಗ, ಪ್ರಮೋದ್ ಶೆಟ್ಟಿ, ಕುಳ್ಳಪ್ಪು ಸಹೋದರರು, ನಾಗಶ್ರೀ ಬೇಗಾರ್, ರಮೇಶ್ ಭಟ್, ಬಾಬು ಹಿರಿಯಣ್ಣಯ್ಯ, ಪ್ರಸನ್ನ ಶೆಟ್ಟಿಗಾರ್ ಮಂದರ್ತಿ, ರವೀಶ ಹೆಗಡೆ ಐನಬೈಲು, ರಾಘವೇಂದ್ರ ಮಯ್ಯ ಹಾಲಾಡಿ ಮುಂತಾದವರ ತಾರಾಗಣ ಇದೆ. ಚಿತ್ರಕ್ಕೆ ಶಶೀರ ಶೃಂಗೇರಿಯವರ ಛಾಯಾಗ್ರಹಣ, ಶ್ರೀನಿಧಿ ಕೊಪ್ಪರವ ಸಂಗೀತ ಮತ್ತು ಅಭಿಷೇಕ್ ಹೆಬ್ಬಾರ್ ರವರ ಕಲಾ ನಿರ್ದೇಶನ ಇದೆ. ಸಾಧ್ವಿನಿ ಕೊಪ್ಪ ಮತ್ತು ವಿನಯ್ ಶೃಂಗೇರಿ ಹಾಡುಗಳಿಗೆ ದನಿಯಾಗಿದ್ದಾರೆ. ಈ ಚಿತ್ರವು ಚಿಕ್ಕಮಗಳೂರು ಉತ್ಸವ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.

ರಮೇಶ್ ಬೇಗಾರ್ ರವರ ನಿರ್ದೇಶದ ಎರಡನೆಯ ಚಿತ್ರ 'ಜಲಪಾತ' ಅಕ್ಟೋಬರ್ 2023ರಲ್ಲಿ ಬಿಡುಗಡೆಯಾಯಿತು. ರವೀಂದ್ರ ತುಂಬರಮನೆ ಯವರ ನಿರ್ಮಾಣದ ಈ ಚಿತ್ರದಲ್ಲಿ ರಜನೀಶ್, ನಾಗಶ್ರೀ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಶೀರ ಶೃಂಗೇರಿಯವರ ಛಾಯಾಗ್ರಹಣ, ಸಾದ್ವಿನಿ ಕೊಪ್ಪರವ ಸಂಗೀತ ಮತ್ತು ಅಭಿಷೇಕ್ ಹೆಬ್ಬಾರ್ ರವರ ಕಲಾ ನಿರ್ದೇಶನ ಇದೆ. ಈ ಚಿತ್ರವು ಸಿಂಗಾಪುರದಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಂಡಿದೆ. ಈ ಚಿತ್ರ 50 ದಿನಗಳನ್ನು ಪೂರೈಸಿ ಜನಮೆಚ್ಚುಗೆ ಗಳಿಸಿದೆ. ಪರಿಸರ ಮತ್ತು ಆರೋಗ್ಯ ಕಾಳಜಿಯ ಸಂದೇಶ ಹೊಂದಿರುವ ಈ ಚಿತ್ರ ಈಗ ಅಂತರ್ಜಾಲ(ಒಟಿಟಿ)ದಲ್ಲಿ ಲಭ್ಯವಿದೆ.

ಪ್ರಶಸ್ತಿ, ಸನ್ಮಾನ ಪುರಸ್ಕಾರಗಳು:-
♦️ ರಾಜ್ಯ ಯುವಜನ ಮೇಳದ ಶ್ರೇಷ್ಠ ನಿರ್ದೇಶಕ ಪುರಸ್ಕಾರ (ಪುತ್ತೂರು-1992).
♦️ ಜೇಸೀಸ್ (ತೀರ್ಥಹಳ್ಳಿ-ವಲಯ 14) 'ಅಸಾಧಾರಣ ಪ್ರತಿಭಾವಂತ' ಪುರಸ್ಕಾರ (Outstanding Personality) (1993).
♦️ ಚಿಕ್ಕಮಗಳೂರು ಜಿಲ್ಲಾಡಳಿತ 'ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ' (1998).
♦️ ಶೃಂಗೇರಿ ತಾಲೂಕು ಆಡಳಿತ 'ತಾಲೂಕು ರಾಜ್ಯೋತ್ಸವ ಪ್ರಶಸ್ತಿ' (2011).
♦️ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ 'ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ' (2013).
♦️ ಶಿವಕುಮಾರ ಬೇಗಾರ್ ರವರ ಸಾರಥ್ಯದ ಬೆಂಗಳೂರಿನ ಗಾನ ಸೌರಭ ಯಕ್ಷಗಾನ ಶಾಲೆಯ 'ದಂಪತಿ ಅಭಿನಂದನಾ ಪುರಸ್ಕಾರ' (ಚಿನ್ನದ ಪದಕ ಹಾಗೂ ನಗದು ಸಹಿತ) (2013).
♦️ ಅರಬ್ ದೇಶದ ದೋಹಾ-ಕತಾರ್ ನ ಕರ್ನಾಟಕ ಸಂಘದಿಂದ, ಯಕ್ಷಗಾನದ ಸಂಘಟನೆಗೆ, ಕಿರುತೆರೆ ರಂಗಭೂಮಿ ಸಾಧನೆಗಾಗಿ 'ವಸಂತೋತ್ಸವ ಪ್ರಶಸ್ತಿ' (ದೋಹಾ-ಕತಾರ್, 2016).
♦️ ಶಿವಮೊಗ್ಗದ ನಾಟ್ಯಶ್ರೀ ಕಲಾತಂಡದಿಂದ  'ಸಾಂಸ್ಕೃತಿಕ ಗೌರವಂ' ಪುರಸ್ಕಾರ (2016).
♦️ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ 'ಶ್ರೀ ಗುರು ರಾಘವೇಂದ್ರ ಸದ್ಭಾವನಾ ಪ್ರಶಸ್ತಿ' (2017).
♦️ ರಂಗಭೂಮಿಯ ಧೀಮಂತ ಕರ್ಮಿ ಸಿ. ಜಿ. ಕೃಷ್ಣಮೂರ್ತಿ ನೆನಪಿನ ಚಿಕ್ಕಮಗಳೂರು ಜಿಲ್ಲಾ'ಸಿಜಿಕೆ ರಂಗ ಪುರಸ್ಕಾರ' (2018).
♦️ ಸುಜನ ಟ್ರಸ್ಟ್ ನೀಡುವ, ಅಮೆರಿಕಾದಲ್ಲಿ ವಿಜ್ಞಾನಿಯಾಗಿದ್ದ ಶ್ರೀ ಹಿರೇತೋಟ ಪ್ರದೀಪ್ ರ ನೆನಪಿನ 'ಪ್ರದೀಪ ಅಭಿನಂದನೆ' ಪುರಸ್ಕಾರ (2018).
♦️ ಮಂಗಳೂರಿನ 'ಕದ್ರಿ ಲಯನ್ಸ್ ಕನ್ನಡ ರತ್ನ' ಪುರಸ್ಕಾರ (2019).
♦️ ಚಾಮುಂಡೇಶ್ವರಿ ಪ್ರಶಸ್ತಿ (ಮೈಸೂರು).
♦️ ಕಲಾಸಂಪದ ಕಲಾಸುಮ ಪುರಸ್ಕಾರ (ಶಿರಸಿ).
♦️ ಜೇಸೀಸ್ ರಾಜ್ಯ ಸಮ್ಮೇಳನದಲ್ಲಿ 'ಕಲಾಶ್ರೀ' ಪುರಸ್ಕಾರ.
♦️ 'ಏಕೆ ಹೀಗೆ ನಮ್ಮ ನಡುವೆ' ಧಾರಾವಾಹಿಗೆ ಇತರೆ ಪ್ರಶಸ್ತಿಗಳ ಜೊತೆಗೆ 'ಶ್ರೇಷ್ಠ ನಿರ್ದೇಶಕ' ಪುರಸ್ಕಾರ (ಜೀ ಕನ್ನಡ-120 ಕಂತು - ನಾಕೌಟ್ ಸಿನಿ ಅವಾರ್ಡ್ಸ್).
♦️ ಶೃಂಗೇರಿ ಮಠದ ವತಿಯಿಂದ ವಿವಿಧ ಸಂದರ್ಭಗಳಲ್ಲಿ 12 ಬಾರಿ ಸನ್ಮಾನ.
♦️ 70ಕ್ಕೂ ಹೆಚ್ಚು ಸ್ಥಳಗಳಲ್ಲಿ ನಾಗರಿಕ ಸನ್ಮಾನಗಳು ಹಲವಾರು ಸಂಘ-ಸಂಸ್ಥೆಗಳಿಂದ ಅಸಂಖ್ಯ ಗೌರವ-ಸನ್ಮಾನಗಳು.
♦️ ಮಲಬಾರ್ ವಿಶ್ವರಂಗ ಪುರಸ್ಕಾರ (2024).
ಎರಡು ಬಾರಿ ಕರ್ನಾಟಕ ಸರಕಾರದಿಂದ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಸದಸ್ಯರನ್ನಾಗಿ ನೇಮಕ (2012 ಮತ್ತು 2019).
ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ , ಕೇಂದ್ರ ಸರ್ಕಾರದ ಕೇಂದ್ರೀಯ ವಿದ್ಯಾಲಯ, ಚಿಕ್ಕಮಗಳೂರು ಇದರ ಸಮಿತಿಗೆ ಸಾಂಸ್ಕೃತಿಕ ಕ್ಷೇತ್ರದ ಸದಸ್ಯರಾಗಿ ನೇಮಕ. ಇವರು ಕಲಾಸೇವೆಯಲ್ಲಿ ಇಪ್ಪತ್ತೈದು ವರ್ಷ ಪೂರೈಸಿದ ಸಂದರ್ಭದಲ್ಲಿ ಶೃಂಗೇರಿಯಲ್ಲಿ ನಾಗರಿಕ ಸನ್ಮಾನ ಗೌರವ ಇವರಿಗೆ ಸಂದಿದ್ದು, 'ಬೆಳ್ಳಿ ಹಾಡು-ಬಣ್ಣದ ಪಾಡು' ಎಂಬ ಪುಸ್ತಕ ಶ್ರೀ ಪ್ರಭಾಕರ ಕಾರಂತರ ಸಂಪಾದಕತ್ವದಲ್ಲಿ ಬಿಡುಗಡೆಯಾಗಿದೆ.










ಪೆರ್ಡೂರು ಮೇಳಕ್ಕೆ ಮತ್ತು ಸಾಲಿಗ್ರಾಮ ಮೇಳಕ್ಕೆ ಪ್ರಸಂಗ ಕೊಡ್ತಾ ಇದ್ದೆ. ಕಥಾ ಸಂಯೋಜನೆ ಮಾಡ್ತಾ ಇದ್ದೆ. ಆವಾಗ ನಾನು ಅದಷ್ಟು ಹೊಸ ಪ್ರಯೋಗಗಳನ್ನು ಮಾಡಲು ಇಷ್ಟ ಪಡ್ತಾ ಇದ್ದೆ. ಅದನ್ನು ಕಲಾವಿದರು ಮತ್ತು ಮೇಳದ ಯಜಮಾನರು ನನ್ನ ಪರವಾಗಿ ನಿಂತು ಸಪೋರ್ಟ್ ಮಾಡಿದ್ದಾರೆ.

ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ:-
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ.
ನಡುತಿಟ್ಟಿನ ಸಂಪ್ರದಾಯವನ್ನು, ಅದರ ಕುಣಿತ ಮಟ್ಟು ತಿಟ್ಟುಗಳನ್ನು ಯಾವುದಾದ್ರೂ ಹೊಸ ಪ್ರಸಂಗಗಳಿಗೆ ಅಳವಡಿಸಬೇಕು, ಪ್ರಯೋಗ ಮಾಡಬೇಕು,ಪ್ರಸಂಗ ಬರೀಬೇಕು.

ನಾಟಕ ನಿರ್ದೇಶನ, ನಾಟಕ ಬರೆಯುವುದು, ಕಾರ್ಯಕ್ರಮಗಳನ್ನು ಸಂಘಟನೆ ಮತ್ತು ಸಂಯೋಜನೆ ಮಾಡುವುದು, ಜೊತೆಗೆ ಯಕ್ಷಗಾನದ ಪ್ರಸಂಗದ ಕಥಾ ಸಂಯೋಜನೆ ಮಾಡುವುದು, ಸಿನಿಮಾ ನಿರ್ದೇಶನಗಳನ್ನು ಮಾಡುವುದು, ಧಾರಾವಾಹಿ ನಿರ್ದೇಶನ ಮಾಡುವುದು ಹವ್ಯಾಸಗಳು.

14.12.1997ರಂದು ರಮೇಶ ಬೇಗಾರ್ ಅವರು ಭಾಗ್ಯಶ್ರೀ ಅವರನ್ನು ಮದುವೆಯಾಗಿ ಮಕ್ಕಳಾದ ನಾಗಶ್ರೀ ಮತ್ತು ಸ್ಕಂದರ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಮಕ್ಕಳಿಬ್ಬರೂ ಅಪ್ಪನ ಕಲಾಸೇವೆಯ ದಾರಿಯಲ್ಲಿಯೇ ನಡೆಯುತ್ತಿದ್ದಾರೆ.




ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395