ಯಕ್ಷ ಸಾಧಕರು 334

"ಯಕ್ಷ ಸುದರ್ಶನ"

ಕೋಟದ ಸುದರ್ಶನ ಉರಾಳ ಎಲೆಕ್ಟ್ರಿಕಲ್ ಡಿಪ್ಲೊಮಾ ಪದವೀಧರ. ಯಕ್ಷಗಾನ ಇವರ ಹವ್ಯಾಸ. ಶಿವರಾಮ ಕಾರಂತರು, ಮದ್ದಲೆ ಮಹಾಬಲ ಕಾರಂತರು, ನೀಲಾವರ ಲಕ್ಷ್ಮೀನಾರಾಯಣ ರಾವ್, ಹೆರೆಂಜಾಲು ವೆಂಕಟರಮಣ ಗಾಣಿಗ, ಪೇತ್ರಿ ಮಂಜುನಾಥ ಪ್ರಭು, ಬನ್ನಂಜೆ ಸಂಜೀವ ಸುವರ್ಣ ಹೀಗೆ ಅನೇಕ ಗುರು ಪರಂಪರೆಯಡಿಯಲ್ಲಿ ಉರಾಳರು ಬೆಳೆದು ಬಂದವರು. ಯಕ್ಷ ನಾಟ್ಯದ ಜೊತೆಗೆ ಮದ್ದಲೆ ವಾದನ, ಯಕ್ಷ ಪ್ರಸಾದನ ಕಲೆಗಳುನ್ನು ಮೈಗೂಡಿಸಿಕೊಂಡರು. ಕಳೆದ 34 ವರ್ಷಗಳಿಂದ ಕೆ ಮೋಹನರ ನಿರ್ದೇಶನದ ಬೆಂಗಳೂರು ಯಕ್ಷ ದೇಗುಲ ತಂಡದಲ್ಲಿ ಮದ್ದಲೆ ವಾದಕರಾಗಿ, ನೃತ್ಯ ಗುರುಗಳಾಗಿ, ಪ್ರಸಾಧನ ಕಲಾವಿದರಾಗಿ, ಮೈಕ್ ಲೈಟ್ ಟೆಕ್ನಿಷಿಯನ್ ಆಗಿ, ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಾ ದೇಶದ ಉದ್ದಗಲಕ್ಕೂ ಯಕ್ಷಗಾನ ನೀಡುವಲ್ಲಿ ದುಡಿಯುತ್ತಿದ್ದಾರೆ.


ಸುದರ್ಶನ ಉರಾಳರು 13.04.1967 ರಂದು ಉಡುಪಿ ತಾಲೂಕಿನ ಕೋಟದ ವೆಂಕಟರಮಣ ಉರಾಳ ಹಾಗೂ ಸುನಂದ ಇವರ ಮಗನಾಗಿ ಜನನ. ರಾಧಿಕಾ ಇವರ ಮಡದಿ. ಮಗ ಸುದೀಪ ಉರಾಳ MBA ಪದವೀಧರ ಒಳ್ಳೆಯ ಯಕ್ಷಗಾನ ಚೆಂಡೆ ವಾದಕ.

ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ:-
8ನೇ ವಯಸ್ಸಿನಲ್ಲಿದ್ದಾಗ ನನ್ನ ತಂದೆ ಮತ್ತು ಅವರ ಗೆಳೆಯರ ಬಳಗದವರು ಹಂದೆ ಮಹಾಗಣಪತಿ ದೇವಸ್ಥಾನದ ಜಾತ್ರೆ ನಡೆಸಲು ಶ್ರೀ ಇಡಗುಂಜಿ ಮೇಳದ ಅಟವನ್ನು ದೇವಸ್ಥಾನದ ಸಹಾಯಾರ್ಥವಾಗಿ ನಡೆಸುತ್ತಿದ್ದರು. ಅವಾಗ ಆ ಯಕ್ಷಗಾನವನ್ನು ರಾತ್ರಿಯಿಂದ ಬೆಳಗಿನ ತನಕ ಸ್ವಲ್ಪವೂ ನಿದ್ದೆ ಮಾಡದೇ ನೋಡುತ್ತಿದ್ದೆ. ಆ ಸಂದರ್ಭದಲ್ಲಿ ಈ ಮೇಳದ ಕಲಾವಿದರಾದ ಕೆರೆಮನೆ ಶಂಭು ಹೆಗಡೆ ನನ್ನನ್ನು ತುಂಬಾ ಗಮನ ಸೆಳೆದರು. ಅಂದಿನಿಂದ ಯಕ್ಷಗಾನದ ಬಗ್ಗೆ ಆಸಕ್ತಿ ಹೆಚ್ಚಿತ್ತು. ಚೆಂಡೆಯ ಸ್ವರ ನನ್ನಲ್ಲಿ ಸದಾ ಪ್ರತಿಧ್ವನಿಸಿತು. ನಂತರ ದಿವಂಗತ ಕಾಳಿಂಗ ನಾವುಡರು ತುಂಬಾ ಸೆಳೆದರು. ಮನೆಯ ಸುತ್ತ ಮುತ್ತ ಸದಾ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳಿಂದ ಪ್ರಭಾವಿತರಾದ ಉರಾಳರು ಮೊದಲು ಗೆಜ್ಜೆ ಕಟ್ಟಿದ್ದು ಶಾಂಭವಿ ಗಿಳಿಯಾರು ಶಾಲೆಯ ಯಕ್ಷ ವೇದಿಕೆಯಲ್ಲಿ. 1979ರಲ್ಲಿ ಗುರು ಎಂ.ಎಸ್ ಮಧ್ಯಸ್ಥರಿಂದ ತರಬೇತಿ ಪಡೆದು ಯಕ್ಷತರಂಗ ಬಾಲಕರ ಯಕ್ಷಗಾನ ಮೇಳದಲ್ಲಿ ಒಡ್ಡೋಲಗ ಕೊಟ್ಟವರು. ಮುಂದೆ ನಾಲ್ಕು ವರ್ಷಗಳ ಕಾಲ ಅದೇ ಮೇಳದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ ರಾಜ್ಯದ್ಯಂತ ಯಕ್ಷ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದು.

ಶಶಿಪ್ರಭಾ ಪರಿಣಯದಲ್ಲಿ ಕಮಲನಿಯಾಗಿ, ಕಂಸ ವಿಜಯದ ಆಸ್ತಿಯ ಪಾತ್ರದಲ್ಲಿ, ಕಂಸ ವಧೆಯ ಬಲರಾಮನಾಗಿ, ಅಭಿಮನ್ಯು ಕಾಳಗದಲ್ಲಿ ದ್ರೋಣನಾಗಿ, ಸೈಂಧವ ವಧೆಯಲ್ಲಿ ಸುಭದ್ರೆಯಾಗಿ ಹಾಗೂ ಇನ್ನೂ ಅನೇಕ ಪೌರಾಣಿಕ ಪ್ರಸಂಗದಲ್ಲಿ ವೇಷ ಮಾಡಿದ ಅನುಭವ ಇವರದು.
ಯುವಕರ ಯಕ್ಷಗಾನ ಮೇಳ ಸಾಲಿಗ್ರಾಮ, ಯಕ್ಷದೇಗುಲ ಬೆಂಗಳೂರು, ಯಕ್ಷರಂಜನಿ ಬೆಂಗಳೂರು ಹಾಗೂ ಹಲವು ಸಂಘ ಸಂಸ್ಥೆಯಲ್ಲಿ ಮದ್ದಲೆವಾದಕರಾಗಿ ಹಾಗೂ ಗಜಾನನ ಯಕ್ಷಗಾನ ಪ್ರಸಾದನ ಕೋಟ, ಯಕ್ಷದೇಗುಲ ಬೆಂಗಳೂರು, ಗಜಾನನ ನಾಟಕ ಪ್ರಸಾದನ, ಕೋಟೇಶ್ವರ ತಂಡದಲ್ಲಿ ಪ್ರಸಾದನ ಕಲಾವಿದನಾಗಿ ತಿರುಗಾಟ ಮಾಡಿದ ಅನುಭವ ಉರಾಳರದು.







ಸಂಘಟಕರಾಗಿ ಹಾಗೂ ನೃತ್ಯ ನಿರ್ದೇಶಕರಾಗಿ:-
1988 ರಲ್ಲಿ ಕೋಟದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಕ್ಕಳ ಮೇಳ ಸ್ಥಾಪನೆ ಮಾಡಿ ಹತ್ತು ಹಲವು ಕಾರ್ಯಕ್ರಮ ಮಾಡಿ. 1990 ರಲ್ಲಿ "ಯಕ್ಷದರ್ಶನ" ಎಂಬ ಯುವಕರ ಮೇಳ ಸ್ಥಾಪನೆ. ಎರಡು ಬಾರಿ ಜಿಲ್ಲಾ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ, ರಾಜ್ಯದ ವಿವಿಧೆಡೆ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ, ಅಲ್ಲದೆ ಯಕ್ಷಗಾನ ವಿದ್ವಾಂಸರಿಂದ ಮತ್ತು ಪತ್ರಿಕೆಗಳಲ್ಲಿ ಪ್ರಶಂಸೆಗೆ ಪಾತ್ರರಾಗಿರುವುದು.
ಶ್ರೀ ಸಾಲಿಗ್ರಾಮ ಮಕ್ಕಳ ಮೇಳ, ಕೇಸರಿ ಯುವ ಸಂಘ ಗುಂಡ್ಮಿ, ಯುವಕ ಸಂಘ ಚಿತ್ರಪಾಡಿ, ಮಹಿಳಾ ಯಕ್ಷಗಾನ ಸಂಘ ಕುಂದಾಪುರ, ಯಕ್ಷದೇಗುಲ ಬೆಂಗಳೂರು, ಜಟ್ಟಿದೈವ ಯಕ್ಷಗಾನ ಸಂಘ, ಕುಂದಾಪುರ ಕೊಡಿ, ಬೊಬ್ಬರ್ಯನಕಟ್ಟೆ ಯಕ್ಷಗಾನ ಸಂಘ, ಕುಂದಾಪುರ, ಸಮುದಾಯ ಕುಂದಾಪುರ, ರಂಗಾಯಣ ಮೈಸೂರು, ಸವಿನಯ ಯುವಕ ಮಂಡಲ ಸಾಸ್ತಾನ, ಅಲ್ಲದೇ ಯಕ್ಷದೇಗುಲದ ಮೂಲಕ ಹಲವಾರು ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ.





ರಂಗಭೂಮಿ, ಚಲನಚಿತ್ರ ರಂಗದಲ್ಲಿ ಮಾಡಿದ ಸಾಧನೆ ಹಾಗೂ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು:-
♦️ ದಿ.ಬಿ.ವಿ. ಕಾರಂತರ ರಂಗಾಯಣ ಮೈಸೂರಿನಲ್ಲಿ ಎರಡು ವರ್ಷ ಕೆಲಸ ಮಾಡಿರುವುದು, ಆ ಸಂದರ್ಭದಲ್ಲಿ ದಿ.ಬಿ.ವಿ. ಕಾರಂತರ ನಿರ್ದೇಶನದಲ್ಲಿ ಪುಣ್ಯಕೋಟಿ, ಬೊಮ್ಮನಹಳ್ಳಿಯ ಕಿಂದರಿಜೋತಿ ಹಾಗೂ ರಾಗಸರಾಗ ನಾಟಕದಲ್ಲಿ ಚೆಂಡೆವಾದನ ಮತ್ತು ನೃತ್ಯ ಸಂಯೋಜನೆಯಲ್ಲಿ ಭಾಗವಹಿಸಿದ್ದು.
♦️ ಸಮುದಾಯ ಕುಂದಾಪುರ ಇವರ ಹಲವು ನಾಟಕಗಳಲ್ಲಿ ಚೆಂಡೆವಾದಕರಾಗಿ.
♦️ ಎನ್.ಎಸ್.ಡಿ.ಗೋಪಾಲಕೃಷ್ಣ ನ್ಯಾರಿಯವರ "ದೂತವಾಕ್ಯ" ನಾಟಕದಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ.
♦️ ಎನ್.ಎಸ್.ಡಿ ಸುಬ್ರಹ್ಮಣ್ಯರವರ "ಬಂದ್ಯಾ ಬಾ" ಎಂಬ ಮಕ್ಕಳ ನಾಟಕದಲ್ಲಿ ಕೆಲಸ ಮಾಡಿರುವುದು.
♦️ ಸಿ.ಜಿ.ಕೆಯವರ ವೈಶಂಪಾಯಣ ತೀರ, ಸುರೇಶ್ ಆನಗಳ್ಳಿ ಯವರ ಪೋಸ್ಟರ್ ಮತ್ತು ಧರ್ಮಪುರಿಯ ದೇವದಾಸಿ ನಾಟಕದಲ್ಲಿ ಮೇಕಪ್ ಮ್ಯಾನ್ ಆಗಿ.
♦️ ಹಿಂದಿ ಭಾಷೆಯ ಪೂನಾ ಫಿಲಂ ಅಕಾಡಮಿಯ ಪರಿಭ್ರಮಣ ಚಿತ್ರದಲ್ಲಿ ನಟನೆ.
♦️ ರಂಗ ಎಸ್.ಎಸ್.ಎಲ್.ಸಿ, ಯಶವಂತ್ ಚಿತ್ರದಲ್ಲಿ ಮೇಕಪ್ ಮ್ಯಾನ್ ಆಗಿ.
♦️ ಸ್ಪೈಸ್ ದೂರವಾಣಿ ಮತ್ತು ಹಾರ್ಲಿಕ್ಸ್ ಜಾಹೀರಾತಿನಲ್ಲಿ ಕೆಲಸ ಮಾಡಿದ ಅನುಭವ.
♦️ ಸ್ವತಃ ಯಕ್ಷಗಾನದ ಮುಂಡಾಸು, ಎರಡು ಮುಂಡಾಸು ಕಟ್ಟುವುದು ಹಾಗೂ ವೇಷಭೂಷಣ ರಿಪೇರಿ ತಯಾರಿಸುವುದು.
♦️ ಯಕ್ಷಗಾನ ಪರಿಚಯವಿರುವ ರಾಜ್ಯದ ಮೂಲೆ ಮೂಲೆಗಳಲ್ಲಿ ಯಕ್ಷಗಾನ ಕಾರ್ಯಕ್ರಮ ಭಾಗವಹಿಸಿದ್ದು.
♦️ 1993 ರಲ್ಲಿ ಜಗರಾ ಕಾರ್ಯಕ್ರಮಕ್ಕೆ ರಾಯಪುರ ಹಾಗೂ ಬಿಲಾಸ್ ಪುರ ಹೋಗಿದ್ದು.
♦️ ಡೆಲ್ಲಿ, ಕೋಲ್ಕತಾ, ಮದ್ರಾಸ್, ಪಾಂಡಿಚೆರಿ, ತಿರುವನಂತಪುರ, ಬಾಂಬೆ, ಹೈದರಾಬಾದ್ ರಾಜ್ಯಗಳಲ್ಲಿ ಯಕ್ಷಗಾನ ಹಾಗೂ ನಾಟಕ ಕಾರ್ಯಕ್ರಮ ಭಾಗವಹಿಸಿದ್ದು.
♦️ ಒಂದು ಯಕ್ಷಗಾನ ತಂಡ ತಲುಪಲಾಗದ ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಹಿಮಾಚಲ ಪ್ರದೇಶ, ಹರಿಯಾಣ, ತ್ರಿಪುರಗಳಲ್ಲಿ ಸದ್ಭಾವನ ಸಮಾರೋಪ ಕಾರ್ಯಕ್ರಮದಲ್ಲಿ ಸಂದರ್ಭ ಯಕ್ಷದೇಗುಲ ತಂಡದೊಂದಿಗೆ ತೆರಳಿದ್ದು.
♦️ದೆಹಲಿಯಲ್ಲಿ ಗಣರಾಜ್ಯೋತ್ಸವ, ಐವತ್ತನೇ ಸ್ವಾತಂತ್ರೋತ್ಸವ ಹೀಗೆ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು.
♦️ ಪೂನಾ ಉತ್ಸವ, ಓಣಂ ಉತ್ಸವ, ಕರಗ ಉತ್ಸವ, ಡೆಂಕನಾಲ್ ಉತ್ಸವ ಹೀಗೆ ಹಲವಾರು ಉತ್ಸವಗಳಿಗೆ ತೆರಳಿ ಕಾರ್ಯಕ್ರಮ ನೀಡಿದ್ದು.

ಇಂಗ್ಲೆಂಡ್, ಅಮೇರಿಕಾದಲ್ಲಿ 2000 ರಲ್ಲಿ ನಡೆದ ಸಹಸ್ರಮಾನದ ವಿಶ್ವಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡು ಯಕ್ಷಗಾನ ಪ್ರದರ್ಶನ ನೀಡಿದ್ದು, 75 ದಿನಗಳ ಅಮೇರಿಕಾ ಪ್ರವಾಸ ಮಾಡಿ 15ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನವನ್ನು ಅಲ್ಲಿ ವಿವಿಧೆಡೆ ನೀಡಿದ್ದು.

ಸನ್ಮಾನಗಳು:-
ಸಾಲಿಗ್ರಾಮದ ಚಿತ್ರಪಾಡಿ ಯುವಕ ಸಂಘ, ಗುಂಡ್ಮಿ ಕೇಸರಿ ಯುವಕ ಸಂಘ, ಮುಂಬೈ ಸಂಸ್ಕೃತಿ ಇಲಾಖೆಯಿಂದ, ಬೆಂಗಳೂರಿನಲ್ಲಿ ಸಂಸದ ಅನಂತ್ ಕುಮಾರ್ ರವರಿಂದ, ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದ ಆಡಳಿತ ಮಂಡಳಿ, ಕಲಾ ಕದಂಬ ಆರ್ಟ್ಸ್ ಸೆಂಟರ್ ಬೆಂಗಳೂರು, ಯಶಸ್ವಿ ಕಲಾ ವೃಂದ ತೆಕಟ್ಟೆ ಕೊಮೆ, ಯಕ್ಷಸೌರಭ ಹಿರೇ ಮಹಾಲಿಂಗೇಶ್ವರ ಯಕ್ಷಗಾನ ಕಲಾ ತಂಡ ಕೋಟ, ಯಕ್ಷ ಕಲಾ ಅಕಾಡಮಿ ಬೆಂಗಳೂರು, ಕೂಟ ಮಹಾಜಗತ್ತು ಅಂಗ ಸಂಸ್ಥೆ, ಸಾಲಿಗ್ರಾಮ ಹೀಗೆ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿರುತ್ತಾರೆ.

ಪ್ರಶಸ್ತಿಗಳು:-
♦️ 2019 - 20 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.
♦️ ಸ್ವಂತ ಕಟ್ಟಿ ಬೆಳೆಸಿದ ಯಕ್ಷ ದರ್ಶನ ತಂಡಕ್ಕೆ ಜಿಲ್ಲಾ ಮಟ್ಟದ ಯಕ್ಷಗಾನ ಸ್ಫರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ.
♦️ ಮಂಡ್ಯದಲ್ಲಿ ನಡೆದ ರಾಜ್ಯ ಮಟ್ಟದ ನಾಟಕ ಸ್ಫರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ.
♦️ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ನಾಟಕ ಸ್ಫರ್ಧೆಯಲ್ಲಿ ಉತ್ತಮ ಮೇಕಪ್ ಪ್ರಶಸ್ತಿ.
♦️ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ " ರಂಗ ಸಂಭ್ರಮ" ಕಾರ್ಯಕ್ರಮದಲ್ಲಿ ಪ್ರಶಸ್ತಿ.
♦️ ಹಂದೆ ಯಕ್ಷ ಬಳಗ(ರಿ) ಕೋಟದವರಿಂದ " ಯಕ್ಷ ಜಂಗಮ 2018" ಪ್ರಶಸ್ತಿ ಪ್ರಧಾನ.
♦️ ನ್ಯಾಷನಲ್ ಅವಾರ್ಡ್ ಫೆಲೋಸಿಫ್ 2015 - 16 ಕೇಂದ್ರ ಸಂಸ್ಕೃತಿ ಇಲಾಖೆ.
♦️ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಅಂಗ ಸಂಸ್ಥೆಯಿಂದ " ನಮ್ಮೂರು ಪ್ರತಿಭೆ" ಪ್ರಶಸ್ತಿ ಪುರಸ್ಕಾರ.
♦️ ಪಂಚವರ್ಣ ಯುವಕ ಮಂಡಲ ಕೋಟ ಇವರ 22ನೇ ರಾಜ್ಯೋತ್ಸವ ಸಂದರ್ಭದಲ್ಲಿ " ಸಾಧಕ ಪ್ರಶಸ್ತಿ".












ವಿಜಯವಾಣಿ, ಉದಯವಾಣಿ, ವಿಜಯ ಕರ್ನಾಟಕ, ಕರ್ನಾಟಕ ಮಲ್ಲ, ಪ್ರಜಾವಾಣಿ, ಕನ್ನಡ ಪ್ರಭಾ, ಯಕ್ಷ ಪ್ರಭಾ, ಯಕ್ಷ ರಂಗ, ಈಶುಧಿ, ಬಲ್ಲಿರೇನಯ್ಯ, ಈ ಮಾಸ ನಾಟಕ ಪತ್ರಿಕೆ, ಹೊಸದಿಗಂತ ಪತ್ರಿಕೆಯಲ್ಲಿ ಹಲವಾರು ಕಲಾವಿದರ ಪರಿಚಯ ಲೇಖನ ಹಾಗೂ ಸುದ್ದಿಗಳನ್ನು ಪತ್ರಕರ್ತನಾಗಿ ಪ್ರಕಟಿತವಾಗಿರುತ್ತದೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395