ಯಕ್ಷ ಸಾಧಕರು 336

"ಯಕ್ಷ‌ಕಲಾ ಚೈತನ್ಯ"

ತಂದೆ ಹವ್ಯಾಸಿ ಕಲಾವಿದರು, ಅಜ್ಜ ಸಹ ಕಲಾವಿದರಾಗಿದ್ದರು, ಈಗ ಇವರ ಅತ್ತೆ ವರದ ಮಧುಸೂಧನ್ ಐತಾಳ್ ಕಲಾವಿದರಾಗಿದ್ದಾರೆ. ಚಿಕ್ಕವನಾಗಿದ್ದಾಗ ನನ್ನ ದೊಡ್ಡಮ್ಮನ ಮಗ ರಾಮಕೃಷ್ಣ ಮೂರ್ತಿ (ಅಣ್ಣ)ಟೇಪ್ ರೆಕಾರ್ಡ್ನಲ್ಲಿ ಡಾ. ಕೆರೆಮನೆ ಮಹಾಬಲಹೆಗಡೆಯವರು, ಯಕ್ಷಗಾನದ ಧ್ರುವತಾರೆ ಕಾಳಿಂಗ ನಾವುಡರ ಪದ್ಯವನ್ನು ಕೇಳಿಸುತ್ತಿದ್ದ. ಅದಲ್ಲದೆ ಬಿ.ಪಿ ಶ್ರೀಧರ್ ಹೆಗಡೆಯವರು ನನ್ನನ್ನು ಯಕ್ಷಗಾನ ಕ್ಲಾಸ್ ಗೆ ಸೇರಿಸಿದರು ಹೀಗೆ ನಾನು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಪ್ರಣವ್ ಶಂಕರ್.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನ ದಿ. ರಾಮಚಂದ್ರ ಭಟ್ ಹಾಗೂ ಮಹಾಲಕ್ಷ್ಮಿ ಆರ್ ಭಟ್ ಇವರ ಮಗನಾಗಿ 18.11.1987 ರಂದು ಪ್ರಣವ್ ಶಂಕರ್ ಜನನ. ಬಿ ಎ ಪದವಿ ಇವರ ವಿದ್ಯಾಭ್ಯಾಸ. ಮಹಾಬಲ ದೇವಾಡಿಗ ಕಮಲಶಿಲೆಯವರು ನನ್ನ ಯಕ್ಷಗಾನದ ನೃತ್ಯ ಗುರುಗಳು, ಕೆ.ಜಿ ರಾಮರಾವ್ ಅವರು ಇವರ ಭಾಗವತಿಕೆ ಗುರುಗಳು.



ನೆಚ್ಚಿನ ಪ್ರಸಂಗಗಳು:-
ಜಾಂಬವತಿ ಕಲ್ಯಾಣ, ರುಕ್ಮಿಣಿ ಸ್ವಯಂವರ, ಲವಕುಶ, ಕಂಸ ದಿಗ್ವಿಜಯ, ಕಂಸವಧೆ, ನರಕಾಸುರವಧೆ, ಗದಾಯುದ್ಧ, ಶ್ರೀದೇವಿ ಬನಶಂಕರಿ, ನಾಗಶ್ರೀ, ಆದಿರಥಿ,ಕರ್ಣಪರ್ವ, ಬಭ್ರುವಾಹನ, ಶಶಿಪ್ರಭೆ, ರತ್ನಾವತಿ ಕಲ್ಯಾಣ ಇತ್ಯಾದಿ.
ಯಕ್ಷಗಾನ ರಂಗಕ್ಕೆ ಹೊಂದುವ ರಾಗಗಳು ಎಲ್ಲ ಇಷ್ಟ, ಅದರಲ್ಲಿ ನಾಟಿ, ಮಧ್ಯಮಾವತಿ, ಮೋಹನ, ಸಾವೇರಿ, ಹಿಂದೋಳ, ಶಂಕರಾಭರಣ, ಅಭೇರಿ, ಶಿವರಂಜಿನಿ, ಕಲ್ಯಾಣಿ,ಪೂರ್ವಿ ಕಲ್ಯಾಣಿ, ಕಾನಡ,ಕೇದಾರ್ ಮುಂತಾದ ರಾಗಗಳು ಇಷ್ಟ.
ನೆಚ್ಚಿನ ಮದ್ದಳೆ ವಾದಕರು:-
ಶ್ರೀ ದುರ್ಗಪ್ಪ ಗುಡಿಗಾರರು, ಶಂಕರ್ ಭಾಗವತರು, ಕರ್ಕಿ ಪರಮೇಶ್ವರ್ ಭಂಡಾರಿಯವರು, ವೆಂಕಟರಮಣ ಹೆಗಡೆ ನಿಟ್ಟೂರ್, ಭರತ್ ಚಂದನ್ ಕೋಟೇಶ್ವರ ಮುಂತಾದವರು.
ನೆಚ್ಚಿನ ಚಂಡೆ ವಾದಕರು:-
ಕೊಲ್ಲೂರು ಕೊಗ್ಗ ಆಚಾರ್ ರವರು, ರಾಮಕೃಷ್ಣ ಮಂದಾರ್ತಿ, ಕೋಟ ಶಿವಾನಂದರವರು, ಭಾಸ್ಕರ್ ಆಚಾರ್, ಗಣೇಶ್ ಗಾಂವ್ಕರ್ ಮುಂತಾದವರು.
ನೆಚ್ಚಿನ ಭಾಗವತರು:-
ಪ್ರಾಚಾರ್ಯ ನಾರಾಯಣಪ್ಪ ಉಪ್ಪುರವರು, ಕಾಳಿಂಗ ನಾವುಡರು, ಕೆ.ಜಿ ರಾಮರಾವ್ ರವರು, ಧಾರೇಶ್ವರ್ ರವರು, ಕಡತೋಕ ಮಂಜುನಾಥ್ ಭಾಗವತರು.
ನೆಚ್ಚಿನ ವೇಷಗಳು:-
ಕೃಷ್ಣ, ಕಾರ್ತವೀರ್ಯ, ಸುಧನ್ವ, ಬರ್ಬರಿಕ, ರುಕ್ಮಾಂಗ,ಮನ್ಮಥ, ಕುಶ ಮುಂತಾದ ವೇಷಗಳು.

ರಂಗಕ್ಕೆ ಹೋಗುವಾಗ ಯಾವ ರೀತಿ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗದ ಪೂರ್ವಾಪರ ತಿಳಿದುಕೊಳ್ಳುತ್ತೇನೆ, ಪಾತ್ರ ಮಾಡಬೇಕಾದರೆ ಆ ಪಾತ್ರದ ಔಚಿತ್ಯವನ್ನು ತಿಳಿದು ರಂಗದಲ್ಲಿ ವ್ಯವಹರಿಸುತ್ತೇನೆ. ಭಾಗವತಿಕೆಗೆ ಕುಳಿತಾಗ ರಂಗದ ಕಾವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಅರಿತು ಪ್ರಸಂಗವನ್ನು ಮುನ್ನಡೆಸುತ್ತೇನೆ.

ಯಕ್ಷಗಾನ ಪ್ರಸಂಗ ಬರೆಯಲು ಪ್ರೇರಣೆ:-
ಫೇಸ್ಬುಕ್ ನಲ್ಲಿ ಒಬ್ಬರು ಪಂಥಾಹ್ವಾನ ನೀಡಿದರು, ಅದರಂತೆ ಪ್ರಸಂಗವನ್ನು ಬರೆದೆ. ಅವರಿಗೆ ಈಗಲೂ ಧನ್ಯವಾದ ಹೇಳುತ್ತೇನೆ. ಅದಲ್ಲದೆ ಡಾ. ವಸಂತ್ ಭಾರದ್ವಾಜ್ ರವರ ಯಕ್ಷಗಾನದ ಛಂದಸ್ಸಿನ ಹೊತ್ತಿಗೆ ನನ್ನನ್ನು ಆಕರ್ಷಿಸಿತು. ಅಷ್ಟೇ ಅಲ್ಲ ಡಾ.ಶತಾವಧಾನಿ ಗಣೇಶ್ ಅವರು ಯುಟ್ಯೂಬ್ನಲ್ಲಿ  ಛಂದಸ್ಸಿನ ಪಾಠ ನನಗೆ ಪ್ರೇರಣೆಯಾಯಿತು. ಐ ಡಿ ಗಣಪತಿಯವರು ಸಹ ನನ್ನ ಕೆಲವು ಪದ್ಯಗಳನ್ನು ತಿದ್ದಿದ್ದರಿಂದ ನನಗೆ ಪ್ರಸಂಗದ ಪದ್ಯಗಳನ್ನು ಬರೆಯಲು ಪ್ರೇರಣೆಯಾಯಿತು.

ಬರೆದಿರುವ ಪ್ರಸಂಗಗಳು:-
ಅಭಿಸಾರಿಕೆ, ವರವಾರಿಧಿ, ಆದಿರಥಿ, ಮನೋಚಿತೆ(ಭಾಗ 1) ಇಷ್ಟು ಪ್ರಸಂಗಗಳು ಪ್ರಯೋಗ ಕಂಡಿದೆ.
ಇನ್ನೂ ಮನೋಚಿತೆ ಭಾಗ 2 ಹಾಗೂ ಇನ್ನಷ್ಟು ಪ್ರಸಂಗಗಳು ಪ್ರಯೋಗ ಕಾಣಬೇಕಾಗಿದೆ.

ಹೊಸ ಪ್ರಸಂಗಗಳ ಬಗ್ಗೆ ಅಭಿಪ್ರಾಯ:-
ಈಗಿನ ಹೊಸಪ್ರಸಂಗಕ್ಕೆ ಯಕ್ಷಗಾನದ ಚೌಕಟ್ಟಿಲ್ಲ. ಮೊದಲೆಲ್ಲ ಹೊಸಪ್ರಸಂಗಗಳಿಗೆಲ್ಲ ಪೌರಾಣಿಕ ಪ್ರಸಂಗದ ರೀತಿ ಒಂದು ಚೌಕಟ್ಟು ಇರುತ್ತಿತ್ತು. ಉದಾಹರಣೆಗೆ ಶ್ರೀದೇವಿಬನಶಂಕರಿ, ರಾಜಾ ರುದ್ರಕೋಪ, ನಾಗಶ್ರೀ ಮುಂತಾದ ಪ್ರಸಂಗಗಳು. ಈಗ ಯಕ್ಷಗಾನ ಅಂತ ಬದಲು ಯಕ್ಷ ನಾಟಕ ಅಂತ ಬದಲಾಯಿಸಿಕೊಂಡರೆ ಒಳಿತು ಅನಿಸುತ್ತದೆ.

ಪದ್ಯ ಬರೆಯುವ ಬಗ್ಗೆ ನಿಮ್ಮ ನಿಲುವು:-
ಕಥೆ ಒಬ್ಬರು ಮಾಡಿ ಮತ್ತೊಬ್ಬರು ಪದ್ಯ ಬರೆದು, ಕಥೆ ಮಾಡಿದವರ ವಿರಚಿತ ಅಂತ ಆಗೋದಿಲ್ಲ, ಪದ್ಯವನ್ನು ಬರೆದವರು ಆ ಕಥೆಯ ನಿಜವಾದ ಕವಿ. ಅದಕ್ಕೆ ಆದಷ್ಟು ಸಾಹಿತ್ಯವನ್ನು ಓದಿ, ಆಸ್ವಾದಿಸಿ. ಈಗ ಕೆಲವು ವೃತ್ತಿಪರ ಮೇಳಗಳಲ್ಲಿ "ಸದಾಕಣ್ಣಲ್ಲಿ" ಮುಂತಾದ ಸಿನಿಮಾ ಪದ್ಯವನ್ನು ಹಾಗೆ ರಂಗಕ್ಕೆ ಭಟ್ಟಿ ಇಳಿಸುತ್ತಾರೆ, ಇದು ದುರಂತ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಇಂದು ಬೆಳೆದಿದ್ದರೂ, ಕೆಲವು ಯಕ್ಷಗಾನ ಕಲಾವಿದರಿಂದ ಹಲವು ಪ್ರಸಂಗದ ಅಂತಃ ಸತ್ವ ಕಳೆದುಕೊಂಡಿರುವುದು ಸತ್ಯ. ಶೃತಿಬದ್ಧವಾದ ಸಂಭಾಷಣೆ ಇಲ್ಲ, ಮನೆಯಲ್ಲಿ ಗೊಣಗಾಟ ಮಾಡಿದಹಾಗೇ ಸಂಭಾಷಣೆ, ಇವೆಲ್ಲ ಮುಂದಿನ ಪೀಳಿಗೆಗೆ ಮಾರಕವಾಗುತ್ತದೆ. ಇಂದಿನ ಹೊಸ ಪ್ರಸಂಗಗಳು ಯಕ್ಷಗಾನ ರಂಗಕ್ಕೆ ಯಾವ ರೀತಿಯ ಸಂದೇಶ ಕೊಡ್ತಿದೆ ಎನ್ನುವುದನ್ನು ಗಮನಿಸಬೇಕು. ಸಮಾಜಕ್ಕೆ ಸಂದೇಶ ಕೊಡ್ತೇವೆ ಅಂತ ಪ್ರಸಂಗವನ್ನು ರಚಿಸಿದರೆ ಅದರಷ್ಟು ಮೂರ್ಖತನ ಮತ್ಯಾವುದು ಇಲ್ಲ. ಯಾಕೆಂದರೆ ಮೊದಲೇ ಸಮಾಜಕ್ಕೆ ಸಂದೇಶ ಕೊಟ್ಟಾಗಿದೆ. ಈಗ ವಿವೇಕಾನಂದರು, ಮುಂತಾದವರು ಹೇಳಿದ ಸಂದೇಶವನ್ನು ಯಕ್ಷಗಾನಕ್ಕೆ ತುರುಕಿಸುವುದು ಎಷ್ಟರ ಮಟ್ಟಿಗೆ ಸರಿ? ಹೆಚ್ಚಿನ ಜನರಿಗೆ ಅವರ ಸಂದೇಶ ಏನು ಎನ್ನುವುದನ್ನು ಅರಿತಿದ್ದಾರೆ. ಕೇವಲ ಪ್ರಚಾರಕ್ಕಾಗಿಯೋ, ಹಣಗಳಿಸುವ ಉದ್ದೇಶವಿದ್ದಾಗ ಮಾತ್ರ ಇಂಥ ಅಪಸವ್ಯಗಳು ನಡೆಯುವುದು ಸಹಜ. ಇಂಥ ಅಪಸವ್ಯಗಳಿಂದಲೇ ಯಕ್ಷಗಾನವನ್ನು ಉಳಿಸಿಕೊಳ್ಳುವ ಪ್ರಯತ್ನ ಅಗತ್ಯತೆ ಇಲ್ಲ. ಅವರವರ ಹೊಟ್ಟೆಪಾಡಿಗೆ ಮಾಡುವುದದಾದರೆ ಕೆಲವು ಉದ್ಯೋಗಗಳಿವೆ ಅದನ್ನು ಮಾಡಲಿ. ಮುಂದಿನ ಪೀಳಿಗೆಗೆ ಇದೆ ಯಕ್ಷಗಾನ ಎನ್ನುವುದನ್ನು ದಯವಿಟ್ಟು ತಿಳಿಸಬೇಡಿ. ಯಕ್ಷಗಾನ ರಂಗದಲ್ಲಿ ಸೂತ್ರಧಾರ ಎಂದರೆ ಭಾಗವತ. ಇಂದು ಆ ಸೂತ್ರವನ್ನು ಹಿಡಿದು, ರಂಗವನ್ನು ಹಿಡಿದಿಟ್ಟುಕೊಳ್ಳುವ ಭಾಗವತ "ಹಾಡುಗಾರ"ನಾಗಿ, ವೇಷಧಾರಿಯ ಅಂಕೆಯಲ್ಲಿರುವುದು ದುರಾದೃಷ್ಟ. ಯಕ್ಷಗಾನ ಎನ್ನುವುದು ಸಮುದ್ರ ಇದ್ದ ಹಾಗೆ, ನೀವು ಎಷ್ಟೇ ಅಸಂಬದ್ಧವನ್ನು (ಹೊಲಸನ್ನು)ಕೊಟ್ಟರೂ, ಹೊರಗೆ ಹಾಕುತ್ತದೆ. ಇದನ್ನು ಅರಿತು ರಂಗದಲ್ಲಿ ಕಲಾವಿದರು ವ್ಯವಹರಿಸಿದರೆ ಉತ್ತಮ.



ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಈಗಿಗ ನಾವು ನೋಡುತ್ತಿರುವ ಕೆಲವು ಪ್ರೇಕ್ಷಕರು ಎನ್ನುವಂಥವರು "ಪ್ರಜ್ಞಾವಂತ" ಎಂದು ಹಣೆಪಟ್ಟಿ ಹಚ್ಚಿಕೊಂಡಿರುವ ಅಪ್ರಬುದ್ಧ ಪ್ರೇಕ್ಷಕರು. ಯಾಕೆಂದರೆ ರಂಗದಲ್ಲಿ ಯಾವುದಕ್ಕೆ ಕರತಾಡನ ಮಾಡ್ಬೇಕು ಅಥವಾ ಮಾಡಬಾರದು ಎನ್ನುವ ಕನಿಷ್ಠ ಜ್ಞಾನ ಇಲ್ಲದವರು. ಪ್ರೇಕ್ಷಕರು ರಂಗದಲ್ಲಿ ಗೊತ್ತಿದ್ದೂ ಅಪಸವ್ಯ ನಡೆದಾಗ ಚೌಕಿಗೆ ಹೋಗಿ ಆ ಕಲಾವಿದರನ್ನು ತರಾಟೆಗೆ ತೆಗೆದುಕೊಳ್ಳದೆ, ಅವರನ್ನು ಉತ್ತೇಜಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಯಕ್ಷಗಾನಕ್ಕೆ ಪ್ರೇಕ್ಷಕರು ಮುಖ್ಯ, ಆದರೆ ಎಲ್ಲಾ ಹೊತ್ತಿಗೂ ಪ್ರೇಕ್ಷಕಕರ ಮೂಗಿನ ನೇರಕ್ಕೆ ರಂಗ ಪ್ರಯೋಗ ಮಾಡುವುದು ಸಭ್ಯತನವಲ್ಲ.

ತಾಳಮದ್ದಳೆ ಕ್ಷೇತ್ರದಲ್ಲಿ ಆಸಕ್ತಿ ಇದೆಯಾ? ಆ ಬಗ್ಗೆ ಮುಂದಿನ ಯೋಜನೆಗಳೇನು:-
ಆಸಕ್ತಿ ಇದೆ. ಕೆಲವೊಂದು ತಾಳಮದ್ದಳೆ ಯಲ್ಲಿ ವಿಷಯಗಳ ಮಂಥನ ಆಗುತ್ತದೆ. ಮೊದಲು ತಾಳಮದ್ದಳೆಯಲ್ಲಿ ಅರ್ಥಧಾರಿಗಳು ಒಂದು ವಿಷಯವನ್ನ ತೆಗೆದುಕೊಂಡು ಹೋಗುವ ರೀತಿ ಬಹಳ ಇಷ್ಟ ಆಗುತ್ತಿತ್ತು. ತಾಳಮದ್ದಳೆಯಲ್ಲಿ ಮುಂದಿನ ಯೋಜನೆಯ ಬಗ್ಗೆ ಅಷ್ಟು ಯೋಚನೆ ಮಾಡಿಲ್ಲ,ಆ ಒಂದು ಸಮಯ ಬಂದಾಗ ಯೋಚಿಸುತ್ತೇನೆ.

ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ :- ಯಕ್ಷಗಾನಕ್ಕೆ ಅದರದ್ದೇ ಆದ ಚೌಕಟ್ಟಿದೆ. ಹಾಗಾಗಿ ಆದಷ್ಟು ಆ ಚೌಕಟ್ಟಿನಲ್ಲಿ ಯಕ್ಷಗಾನ ಪ್ರಯೋಗ ಮಾಡಬೇಕೆಂಬುದು ನನ್ನ ಉದ್ದೇಶ. ಅದಲ್ಲದೆ ಕೆಲವು ಪೌರಾಣಿಕ ಕಥೆಗಳು ಇನ್ನೂ ಕಥೆಗಳಾಗಿ ಉಳಿದಿದೆ. ಅಂಥ ಕಥೆಗಳನ್ನು ಯಕ್ಷಗಾನ ರಂಗಕ್ಕೆ ಹೊಂದಿಕೊಳ್ಳುವ ಹಾಗೆ ಪ್ರಯೋಗಿಸಬೇಕೆಂಬುದು ನನ್ನ ಹೆಬ್ಬಯಕೆ.

ಯಕ್ಷ ರಂಗದಲ್ಲಿ ಮಾರ್ಗದರ್ಶನ ನೀಡಿದವರ ಬಗ್ಗೆ :- ನಾನು ಈ ವಿಷಯದಲ್ಲಿ ಅದೃಷ್ಟವಂತ. ಯಾಕೆಂದರೆ, ನನಗಿಂತ ಹಿರಿಯವರಿಂದ ಅಲ್ಲದೆ ಕಿರಿಯವರಿಂದಲೂ ಮಾರ್ಗದರ್ಶನ ಪಡೆದು ಕೊಂಡಿದ್ದೇನೆ, ಅಲ್ಲದೇ ಕಲಿತು ಕೊಂಡಿದ್ದೇನೆ. ನನ್ನ ಗುರುಗಳಾದ ಕೆ ಜಿ ರಾಮರಾವ್ ರವರು, ಬಳ್ಕೂರ್ ಕೃಷ್ಣಯಾಜಿಯವರು, ಕಮಲಶಿಲೆ ಮಹಾಬಲ ದೇವಾಡಿಗರು, ನಾಗೇಶ್ ಕುಲಾಲ್ ರವರು ಹೀಗೆ ಕೆಲವು ಜನರಿಂದ ಮಾರ್ಗದರ್ಶನ ಪಡೆದುಕೊಂಡಿದ್ದೇನೆ. ನಾನು ಪ್ರಯೋಗ ಪೂರ್ವಕ್ಕಿಂತಲೂ, ರಂಗಪ್ರಯೋಗ ಆದಾಗ ರಂಗದಲ್ಲಿ ಕಲಿತದ್ದೇ ಹೆಚ್ಚು.

ಭಾಗವಹಿಸಿದ ಸಂಘಟನೆಗಳು:-
ಶ್ರೀಮೂಕಾಂಬಿಕಾ ಯಕ್ಷಗಾನ ಕಲಾಸಂಘ, ಕೊಲ್ಲೂರು ಸಾಂಸ್ಕೃತಿಕ ವೇದಿಕೆ, ಸಾಕೇತ ಕಲಾವಿದರು, ಶ್ರೀ ಭಾರತಿ ಕಲಾ ಪ್ರತಿಷ್ಠಾನ, ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ, ಮುಂತಾದ ಸಂಘಗಳು.

ಸನ್ಮಾನ ಹಾಗೂ ಪ್ರಶಸ್ತಿ:-
ಊರಿನಲ್ಲೆ ಹಲವು ಸನ್ಮಾನ ಆಗಿದೆ. ಚಾರ ಪ್ರದೀಪ್ ಹೆಬ್ಬಾರ್, ಪ್ರಕಾಶ್ ಎಚ್ ಕೆ ಇವರ ಸ್ನೇಹಬಳಗ ಕುಂದಾಪುರ ವತಿಯಿಂದ "ಕಲಾಕೇಸರಿ"ಎನ್ನುವ ಬಿರುದು ಬಂದಿದೆ. ಹೀಗೆ ಹತ್ತು ಹಲವು ಸನ್ಮಾನಗಳು ಆಗಿವೆ.




ಪ್ರಣವ್ ಶಂಕರ್ ಅವರು 21-4-2024 ರಂದು ಹರ್ಷಿಣಿ ಪ್ರಣವ್ ಶಂಕರ್ ಅವರನ್ನು ಮದುವೆಯಾಗಿ ಮಗ ಅದ್ವೈ ತ್ ರಾಮ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.

ತಂದೆ, ತಾಯಿ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪ್ರಣವ್ ಶಂಕರ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395