ಯಕ್ಷ ಸಾಧಕರು 338
"ಯಕ್ಷ ಶೃತಿ ಕಲಾ ಸಂಪದ"
ಅಕ್ಕ ವೃತ್ತಿಯಲ್ಲಿ ಡಾಕ್ಟರ್, ತಮ್ಮ ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಇಬ್ಬರು ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗಾನ ಸಂಘಟಕರು. ಹೀಗೆ ವೃತ್ತಿಯ ಜೊತೆಗೆ ಯಕ್ಷಗಾನ ರಂಗದಲ್ಲಿ ಹಾಗೂ ಸಂಘಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಡಾ.ಶ್ರುತಿ ಸಂತೋಷ್ ಹಾಗೂ ಅವರ ತಮ್ಮ ಕುಡೇರಿ ಸಂಪತ್ ಕನ್ನಂತ್.
ಉಡುಪಿ ಜಿಲ್ಲೆಯ ಕುಂದಾಪುರದ ಬಸ್ರಿಬೇರು, ಜಡ್ಕಲ್ ಗ್ರಾಮದ ಕುಡೇರಿ ಕೃಷ್ಣ ಕನ್ನಂತ್ ಹಾಗೂ ವಿದ್ಯಾವತಿ ಕನ್ನಂತ್ ಇವರ ಮಗಳಾಗಿ ಡಾ.ಶ್ರುತಿ ಸಂತೋಷ್ ಹಾಗೂ ಮಗನಾಗಿ ಕುಡೇರಿ ಸಂಪತ್ ಕನ್ನಂತ್ ಅವರ ಜನನ.
ಡಾ.ಶ್ರುತಿ ಸಂತೋಷ್:-
08.06.1988ರಂದು ಶ್ರುತಿ ಅವರ ಜನನ. ಆಯುರ್ವೇದ ವೈದ್ಯ (BAMS), ಹಾಗೂ ಕ್ಲಿನಿಕಲ್ ರಿಸರ್ಚ್ ಹಾಗೂ ಪಬ್ಲಿಕ್ ಹೆಲ್ತ್ ನಲ್ಲಿ ಪೋಸ್ಟ್ ಗ್ರಾಜ್ಯುಯೇಷನ್ ಇವರ ವಿದ್ಯಾಭ್ಯಾಸ. ಮಂಜುನಾಥ ಕುಲಾಲ್ ಐರೋಡಿ, ಎ.ಪಿ ಪಾಠಕ್, ಮನೋಜ ಭಟ್, ಶಂಕರ ಬಾಳ್ಕುದ್ರು ಹಾಗೂ ಪ್ರಸನ್ನ ಮಾಗೋಡು ಇವರ ಯಕ್ಷಗಾನ ಗುರುಗಳು.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ:-
ತಂದೆ ಕೃಷ್ಣ ಕನ್ನಂತರು ಹಾಗೂ ದೊಡ್ಡಪ್ಪ ಶ್ರೀಧರ ಕನ್ನಂತರು ಕಮಲಶಿಲೆ ಮೇಳವನ್ನು ಬೆಳೆಸುವಲ್ಲಿ ಅವಿರತವಾಗಿ ಶ್ರಮಿಸಿದವರು ಹಾಗೂ ಯಕ್ಷಗಾನಕ್ಕೆ ಪ್ರೋತ್ಸಾಹ, ಕಲಾವಿದರಿಗೆ ಆಶ್ರಯ ಇತ್ತವರು ಕೂಡ. ಮನೆಯಲ್ಲಿ ಯಕ್ಷಗಾನದ ವಾತಾವರಣ ಇದ್ದ ಕಾರಣ ಹಾಗೂ ತಂದೆ ತಾಯಿಯ ಪ್ರೋತ್ಸಾಹದಿಂದ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು.
ನೆಚ್ಚಿನ ಪ್ರಸಂಗಗಳು:-
ದೇವಿ ಮಹಾತ್ಮೆ, ಕುಶ ಲವ, ಭೀಷ್ಮ ಪರ್ವ, ಸುಧನ್ವಾರ್ಜುನ, ಸುದರ್ಶನ ವಿಜಯ, ಚಂದ್ರಾವಳಿ ವಿಲಾಸ, ಕಂಸ ದಿಗ್ವಿಜಯ, ಕರ್ಣ ಪರ್ವ.
ನೆಚ್ಚಿನ ವೇಷಗಳು:-
ಎಲ್ಲಾ ಪ್ರಸಂಗದ ಕೃಷ್ಣ ಪಾತ್ರ, ದೇವಿ, ಅಭಿಮನ್ಯು, ಸುದರ್ಶನ, ದಾಕ್ಷಾಯಿಣಿ, ಭೀಷ್ಮ, ಕರ್ಣ, ಬಬ್ರುವಾಹನ ಇತ್ಯಾದಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಹವ್ಯಾಸಿ ಕಲಾವಿದೆ ಆಗಿರುವುದರಿಂದ ಯಾವುದೇ ಪಾತ್ರ ಮಾಡುವ ಮೊದಲು ಇಡೀ ಪ್ರಸಂಗದ ಕಥೆ, ಪ್ರತಿಯೊಬ್ಬರ ಪದ್ಯ, ಸಂಭಾಷಣೆಯನ್ನು ಕೇಳಿ, ನನ್ನ ಪಾತ್ರದ ಬಗ್ಗೆಯೂ ಸಂಪೂರ್ಣವಾಗಿ ತಿಳಿದುಕೊಂಡು, ತಾಳಮದ್ದಲೆಗಳನ್ನು ಕೇಳಿ ಹಾಗೂ ತಾಳಮದ್ದಲೆ ಅರ್ಥಧಾರಿಗಳಲ್ಲಿಯೂ ಸಂದೇಹವಿದ್ದಲ್ಲಿ ಸಂಭಾಷಣೆಯ ಭಾಗದ ಬಗ್ಗೆ ಚರ್ಚಿಸಿ, ಗುರುಗಳಿಂದ ನನ್ನ ಭಾಗದ ಪದ್ಯದ ಭಾಗವನ್ನು ಅಭ್ಯಾಸ ಮಾಡಿ, ಭಾಗವತರಲ್ಲಿಯೂ ಒಂದು ಬಾರಿ ಚರ್ಚಿಸಿ ರಂಗಕ್ಕೆ ಹೋಗುತ್ತೇನೆ.
ನಿಮ್ಮ ವೈದ್ಯಕೀಯ ವೃತ್ತಿ ಜೊತೆಗೆ ಯಕ್ಷಗಾನಕ್ಕೆ ಸಮಯ ಹೇಗೆ ಕೊಡುತ್ತೀರಿ:-
ಹವ್ಯಾಸಿ ಕಲಾವಿದೆ ಆಗಿರುವುದರಿಂದ ಕೆಲಸದ ಮಧ್ಯೆ ರಜೆ ಇದ್ದಾಗಲೆ ಕಾರ್ಯಕ್ರಮಗಳು ಇದ್ದಾಗ ಮಾತ್ರ ಪ್ರದರ್ಶನ ನೀಡುತ್ತೇವೆ. ಹಾಗೂ ಬಿಡುವಿನ ಸಮಯದಲ್ಲಿ ಪ್ರಸಂಗ ರಚನೆಯನ್ನು ಕೂಡ ಮಾಡುತ್ತೇನೆ.
ಹೆಚ್ಚಿನ ಮಹಿಳೆಯರು ವಿವಾಹ ನಂತರ ಯಕ್ಷಗಾನದಲ್ಲಿ ಮುಂದುವರೆಯುವುದಿಲ್ಲ ಯಾಕೆ? ನಿಮಗೆ ನಿಮ್ಮ ಮನೆಯವರು ಹೇಗೆ ಪ್ರೋತ್ಸಾಹ ನೀಡುತ್ತಿದ್ದಾರೆ:-
ಹೆಚ್ಚಾಗಿ ಮನೆಯವರ ಪ್ರೋತ್ಸಾಹ ಇಲ್ಲದೆ ಇರುವುದರಿಂದ ಅಥವಾ ಮಕ್ಕಳ ಜವಾಬ್ದಾರಿ ಇರುವುದರಿಂದ ಹೆಚ್ಚಿನ ಮಹಿಳೆಯರಿಗೆ ರಂಗದಲ್ಲಿ ಮುಂದುವರಿಯುವುದು ಕಷ್ಟವಾಗುತ್ತದೆ.
ನನಗೆ ನನ್ನ ತಾಯಿ ಅಣ್ಣ, ತಮ್ಮ, ಮನೆಯವರೆಲ್ಲರೂ ಹಾಗೂ ಯಜಮಾನರಿಗೂ ಕಲೆಯ ಮೇಲೆ ಆಸಕ್ತಿ ಇರುವುದರಿಂದ ಸಂಪೂರ್ಣ ಪ್ರೋತ್ಸಾಹ ಹಾಗೆ ಸಹಕಾರ ನೀಡುತ್ತಿದ್ದಾರೆ. ಕಾರ್ಯಕ್ರಮಗಳು ಇದ್ದಾಗ ಮಗುವನ್ನು ಮನೆಯವರೆಲ್ಲರೂ ನೋಡಿಕೊಳ್ಳುವುದರಿಂದ ನನಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿದೆ.
ಯಕ್ಷಗಾನದಲ್ಲಿ ಮಹಿಳೆಯರು ತೊಡಗಿಸಿಕೊಂಡಾಗ ಸಾಮಾಜಿಕ ಸ್ಪಂದನೆ ಹೇಗೆ:-
ಸಾಮಾಜಿಕವಾಗಿ ಋಣಾತ್ಮಕ ಧನಾತ್ಮಕ ಎರಡು ರೀತಿಯ ಪ್ರತಿಕ್ರಿಯೆ ಇದೆ. ಆದರೆ ನಮ್ಮ ಉದ್ದೇಶ ಸರಿಯಾಗಿದ್ದಲ್ಲಿ ಪ್ರತಿಕ್ರಿಯೆಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು, ತಪ್ಪು ಇದ್ದಾಗ ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು.
ನೀವು ಯಕ್ಷಗಾನ ಕಲಾವಿದೆಯಾಗಿ ಮತ್ತು ಪ್ರಸಂಗಕರ್ಥೆಯಾಗಿ ಗುರುತಿಸಿಕೊಂಡಿದ್ದೀರಿ ಅಲ್ವಾ. ಇದರ ಬಗ್ಗೆ ಆಸಕ್ತಿ ಹೇಗೆ?:-
ಕಲೆಯ ಬಗ್ಗೆ ಆಸಕ್ತಿ ತಂದೆ, ತಾಯಿ ಹಾಗೂ ಮನೆಯ ವಾತಾವರಣ, ಯಕ್ಷಗಾನ ಸಂಘಟನೆ, ಸಾಂಸ್ಕ್ರತಿಕ ಕಾರ್ಯಕ್ರಮ ಇದರ ಮಧ್ಯದಲ್ಲೆ ಬೆಳೆದಿರುವವಳು. ಪ್ರಸಂಗ ರಚನೆ ಹಾಗೆ ನಾನು ಒಂದು ಕಥೆ ಬರೆಯುವ ಎನ್ನುವ ಯೋಚನೆ ಬಂತು. ತಂದೆ ತಾಯಿಯ ಪ್ರೋತ್ಸಾಹ ಹಾಗೂ ಆರ್ಗೋಡು ಮೋಹನದಾಸ ಶೆಣೈ ಅವರ ಸಹಕಾರದಿಂದ ಮೊದಲ ಪ್ರಸಂಗ ರಚನೆಯಾಯಿತು.
ವೃತ್ತಿ ಕಲಾವಿದರ ಜೊತೆಗೆ ವೇಷ ಮಾಡಿದ್ದೀರಾ:-
ಹೌದು.
ಶ್ರೀ ಬಳ್ಕೂರು ಕೃಷ್ಣ ಯಾಜಿ, ಆರ್ಗೋಡು ಮೋಹನದಾಸ ಶೆಣೈ, ಉಪ್ಪುಂದ ನಾಗೇಂದ್ರ ರಾವ್ ಹಾಗೂ ಕಮಲಶಿಲೆ ಮೇಳದಲ್ಲಿ ಕೂಡ ಕೆಲವು ಕಲಾವಿದರ ಜೊತೆ ವೇಷ ಮಾಡಿದ್ದೇನೆ.
ಇತ್ತೀಚೆಗೆ ಕುಂದಾಪುರದಲ್ಲಿ ನಡೆದಂತಹ
ಎಲ್ಲಾ ವೈದ್ಯರ ಯಕ್ಷಗಾನದಲ್ಲಿ ಎಲ್ಲಾ ವೈದ್ಯರ ಜೊತೆಗೆ ನಿಮ್ಮ ಯಕ್ಷಗಾನದ ಪ್ರಸ್ತುತಿ ಹೇಗೆ ಇತ್ತು:-
ವೈದ್ಯರ ಜೊತೆ ಯಕ್ಷಗಾನ ಪ್ರಸ್ತುತಿ ತುಂಬಾ ಅದ್ಭುತ ಅನುಭವ. ಹೆಚ್ಚಿನ ವೈದ್ಯರು ಈಗಾಗಲೆ ಬೇರೆ ಕಡೆ ಪ್ರದರ್ಶನ ನೀಡಿದವರೆ ಆಗಿದ್ದರೂ, ಯಕ್ಷಗಾನ ವೈದ್ಯರೆಲ್ಲ ಸೇರಿ ಮಾಡಿದ ಪ್ರದರ್ಶನ ತುಂಬಾ ಸಂತೋಷ ನೀಡಿದೆ. ಮುಂದೆಯೂ ಎಲ್ಲ ವೈದ್ಯರು ಸೇರಿ ವರ್ಷಕ್ಕೊಮ್ಮೆಯಾದರು ಪ್ರದರ್ಶನ ನೀಡುವ ಯೋಚನೆ ಇದೆ.
ಯಕ್ಷಗಾನ ಕಲಾವಿದರಿಗೆ ಆರೋಗ್ಯ ಸಂಬಂಧಿಸಿದ ಹಾಗೆ ವೈದ್ಯೆಯಾಗಿ ನೀವು ಏನು ಹೇಳ ಬಯಸುತ್ತೀರಿ:-
ಕಲಾವಿದರು ರಾತ್ರಿಯ ಹೊತ್ತಿನಲ್ಲಿ ನಿದ್ದೆ ಬಿಡುವುದರಿಂದ ಬೆಳಿಗ್ಗೆ ನಿದ್ದೆ ಮಾಡಿದರೂ ಕೂಡ ರಾತ್ರಿಯ ನಿದ್ದೆ ಬಹಳ ಮುಖ್ಯವಿರುವುದರಿಂದ ಸಮಯ ಸಿಕ್ಕಾಗ ರಾತ್ರಿ ನಿದ್ದೆ ಮಾಡುವುದು ಆರೋಗ್ಯ ದೃಷ್ಟಿಯಿಂದ ಉತ್ತಮ. ಹಾಗೆಯೇ ಕನಿಷ್ಟ 2 ಲೀಟರ್ ನೀರು ಕುಡಿಯಬೇಕು, ನಿದ್ದೆ ಬಿಟ್ಟು ಚಾ ಕುಡಿಯುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ ಹಾಗಾಗಿ ಗ್ರೀನ್ ಟೀ, ಬಿಸಿನೀರು, ಕಷಾಯ ಅಥವಾ ಹಾಲನ್ನು ಕುಡಿಯುವುದು.
ತಂಬಾಕು ಮದ್ಯಪಾನ ಸೇವನೆಯನ್ನು ಮಾಡದೆ ಇರುವುದು, ಹಾಗೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು.
ಹೆಚ್ಚಿನ ಸಮಯ ಪ್ರಯಾಣದಲ್ಲೆ ಇದ್ದರು ಆದಷ್ಟು ಒಳ್ಳೆಯ ಅಹಾರ ಸೇವನೆ, ತಾಜಾ ಹಣ್ಣು, ಎಳನೀರು, ರಾಗಿ, ಎಳ್ಳು ನೀರು, ನಿಂಬೆ ಈ ರೀತಿಯ ಪಾನಕಗಳನ್ನು ಕುಡಿಯುವುದು ಉತ್ತಮ. ಹಾಗೂ ನಿದ್ದೆ ಬಿಟ್ಟ ಸಮಯದಲ್ಲಿ ಆದಷ್ಟು ಅಗತ್ಯವಿಲ್ಲದೆ ಇದ್ದಲ್ಲಿ ಬೈಕ್ನಲ್ಲಿ ಪ್ರಯಾಣ ಮಾಡುವುದನ್ನ ತಪ್ಪಿಸಿದರೆ ಅಪಘಾತಗಳು ಕಡಿಮೆಯಾಗುತ್ತದೆ.
ಇಂದಿನ ಯಕ್ಷಗಾನದ ಆರೋಗ್ಯಕರ ಮಟ್ಟ ಹೇಗೆ ಇದೆ:-
ನಾವು ನೋಡುವ ದೃಷ್ಟಿಯಲ್ಲಿ ಎಲ್ಲವೂ ಇದೆ..
ಪ್ರತಿಯೊಂದು ರಂಗದಲ್ಲೂ ಆರೋಗ್ಯಕರ ಹಾಗೆಯೇ ಅನಾರೋಗ್ಯಕರ ವಿಷಯಗಳು ಇದೆ. ಯಾವುದು ಅಗತ್ಯವಿದೆ ಅದನ್ನು ಮಾತ್ರ ಸ್ವೀಕರಿಸಿ ಅಗತ್ಯವಿಲ್ಲದೆ ಇರುವುದನ್ನು ಬಿಟ್ಟು ಬಿಡುವುದು ಸೂಕ್ತ .
ಇನ್ನು ಯಕ್ಷಗಾನದ ಬಗ್ಗೆ ವಿಮರ್ಶೆ ಮಾಡುವುದಕ್ಕೆ ಬಹಳ ಜನ ಇದ್ದಾರೆ. ಆರೋಗ್ಯಕರವಾದ ಅಂಶಗಳನ್ನು ನಾವು ತೆಗೆದುಕೊಳ್ಳಬೇಕು ಅಷ್ಟೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದ ಮಾನ್ಯತೆ ಎಂದು ಕಡಿಮೆ ಆಗುವುದಿಲ್ಲ, ಅದೊಂದು ಧೀಮಂತ ಕಲೆ. ಎಷ್ಟೋ ಜನ ಹೊಸ ಹೊಸ ಪ್ರತಿಭೆಗಳು, ಮಕ್ಕಳು ಇದರತ್ತ ಆಕರ್ಷಿತರಾಗಿರುವುದು ಸಂತಸದ ವಿಚಾರ.
ಹೊಸ ಕಲಾವಿದರು ಅಧ್ಯಯನದ ಬಗ್ಗೆ ಹೆಚ್ಚು ಗಮನಕೊಡಬೇಕು, ಕಥೆಯನ್ನು ಸರಿಯಾದ ರೀತಿಯಲ್ಲಿ ಯುವ ಜನಾಂಗಕ್ಕೆ ಮುಟ್ಟಿಸುವ ದೊಡ್ಡ ಜವಾಬ್ದಾರಿ ಇದೆ. ವೈಯಕ್ತಿಕ ವಿಷಯಗಳು ಸಂಭಾಷಣೆಯಲ್ಲಿ ಬರಬಾರದು ಅನ್ನುವುದು ನನ್ನ ಅಭಿಪ್ರಾಯ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರು ಹೊಸದನ್ನ ಬಯಸುತ್ತಾರೆ. ಹಾಗಂತ, ಪ್ರೇಕ್ಷಕರು ಕೇಳಿದ್ದನ್ನೆಲ್ಲ ಕೊಡಲಿಕ್ಕೆ ಯಕ್ಷಗಾನದಿಂದ ಸಾಧ್ಯವಿಲ್ಲ ಅನ್ನುವುದಕ್ಕಿಂತ ಸೂಕ್ತವಲ್ಲ.
ಹೊಸ ಹೊಸ ಪ್ರಸಂಗಗಳ ಮೂಲಕ ಧರ್ಮ ಪ್ರಚಾರ, ಹಾಗೆಯೇ ಉತ್ತಮ ಸಂದೇಶ ನೀಡುವುದರ ಮೂಲಕ ಪ್ರೇಕ್ಷಕರಿಗೂ ಮನೋರಂಜನೆ ಸಿಗುತ್ತದೆ ಹಾಗೂ ಯಕ್ಷಗಾನದ ಉದ್ದೇಶಕ್ಕೂ ಧಕ್ಕೆ ಬರುವುದಿಲ್ಲ ಅನ್ನುವುದು ನನ್ನ ಅಭಿಪ್ರಾಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ :-
ಕಲಾವಿದೆಯಾಗಿ ಪ್ರದರ್ಶನ ನೀಡುವುದರ ಜೊತೆಗೆ, ಯಕ್ಷಗಾನ ಪ್ರಸಂಗಕರ್ತೆಯಾಗಿ ಈ ರಂಗದಲ್ಲಿ ಮುಂದುವರಿಯುವ ಆಸೆ ಇದೆ. ಹಾಗೂ ನಮ್ಮ ಟ್ರಸ್ಟ್ ಮೂಲಕ ಈಗಿನ ಮಕ್ಕಳಿಗೆ ಯಕ್ಷಗಾನ ಕಲಿಕಾ ತರಗತಿ, ಪುರಾಣ ಕಥೆಗಳ ಬಗ್ಗೆ ತರಗತಿ, ಉತ್ತಮ ಅರ್ಥಧಾರಿಗಳಿಂದ ಯಕ್ಷಗಾನ ಪ್ರಸಂಗಗಳ ಬಗ್ಗೆ ತರಬೇತಿ ನೀಡುವ ಉದ್ದೇಶ ಇದೆ.
ಸನ್ಮಾನ ಹಾಗೂ ಪ್ರಶಸ್ತಿ:-
"ಶಿವ ಭೈರವಿ" ಪ್ರಸಂಗ ರಚನೆಗೆ ಹುಟ್ಟೂರು ಸನ್ಮಾನ ಬೀಸಿನಪಾರೆಯಲ್ಲಿ ಕಮಲಶಿಲೆ ಮೇಳದ ವೇದಿಕೆಯಲ್ಲಿ, ಸಾಲಿಗ್ರಾಮ ಮೇಳದ ವೇದಿಕೆಯಲ್ಲಿ , ಹಾಗೂ ಛತ್ರಪತಿ ಯುವಸೇನೆ ಬೊಳಂಬಳ್ಳಿ ಇಲ್ಲಿ ಹಾಗೂ ಇನ್ನು ಕೆಲವು ಸಂಘ ಸಂಸ್ಥೆಗಳಿಂದ ಸನ್ಮಾನಗಳು ದೊರೆತಿವೆ.
ಹವ್ಯಾಸಿ ಯಕ್ಷಗಾನ ಕಲಾವಿದೆಯಾಗಿ ರಾಧಾಕೃಷ್ಣ ಕುಂಜತ್ತಾಯರ ನೇತೃತ್ವದ "ಯಕ್ಷಾ ಕಲಾ ವಲ್ಲರಿ ಹಳ್ಳಿಹೊಳೆ" ಮಹಿಳಾ ತಂಡದ ಮೂಲಕ ಹಲವಾರು ಕಾರ್ಯಕ್ರಮ ನೀಡಿರುತ್ತಾರೆ.
ಓದುವುದು, ಸಂಗೀತ, ಭರತನಾಟ್ಯ, ಯಕ್ಷಗಾನ, ಬಿಡುವಿನ ಸಮಯದಲ್ಲಿ ಪ್ರಸಂಗ ರಚನೆ ಇವರ ಹವ್ಯಾಸಗಳು. ಬಿಡುವಿದ್ದಾಗ ಮನೆಯವರೊಂದಿಗೆ ಹಾಗೂ ಮಗುವಿನೊಂದಿಗೆ ಸಮಯ ಕಳೆಯುವುದು ಅತ್ಯಂತ ಸಂತೋಷ ನೀಡುವ ವಿಚಾರ.
19.02.2018ರಂದು ಡಾ.ಶ್ರುತಿ ಅವರು ಸಂತೋಷ್ ಜೋಯಿಸ್ ಅವರನ್ನು ಮದುವೆಯಾಗಿ ಮಗಳು ವೇದಿನಿ ಜೊತೆಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.
ಕುಡೇರಿ ಸಂಪತ್ ಕನ್ನಂತ್:-
20.08.1992ರಂದು ಸಂಪತ್ ಅವರ ಜನನ. ಇಂಜಿನಿಯರಿಂಗ್ ಇನ್ ಕಂಪ್ಯೂಟರ್ ಸೈನ್ಸ್ ಇವರ ವಿದ್ಯಾಭ್ಯಾಸ. ಜಡ್ಕಲ್ ಗೋಪಾಲ, ವಿಶ್ವೇಶ್ವರ ಸೋಮಯಾಜಿ, ಸಂಜೀವ ಸುವರ್ಣ, ವೇಣುಗೋಪಾಲ ನಗರ ಇವರ ಯಕ್ಷಗಾನ ಗುರುಗಳು.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಯಾರು:-
ತಂದೆಯವರು ಕಮಲಶಿಲೆ ಮೇಳವನ್ನು ಅವರ ಅಣ್ಣ ಶ್ರೀಧರ್ ಕನ್ನಂತ್ ಅವರ ಜೊತೆ ಕೆಲವು ವರ್ಷ ನಡೆಸಿದ್ದರು. ಹಾಗಾಗಿ ಯಕ್ಷಗಾನದ ವಾತಾವರಣ ಜೊತೆಯಲ್ಲಿ ಅಣ್ಣ ಸುನೀಲ್ ಕನ್ನಂತ್ ನನ್ನ ಚಿಕ್ಕ ವಯಸ್ಸಿನಿಂದಲೂ ಯಕ್ಷಗಾನ ನೋಡುವಾಗ ಇವರ ಪದ್ಯ ಕೇಳು ಅವರ ಅಭಿನಯ ನೋಡು ಎಂದು ನನ್ನನ್ನ ಕುಳ್ಳಿರಿಸಿಕೊಂಡು ಯಕ್ಷಗಾನ ತೋರಿಸುತ್ತಿದ್ದ. ಇನ್ನು ಯಕ್ಷಗಾನದ ಹುಚ್ಚು ಹೆಚ್ಚಾಗಲು ಕೊಳಲಿ ಕೃಷ್ಣ , ಕೆ.ಪಿ ಹೆಗಡೆ, ಕಿಗ್ಗ ಹಿರಿಯಣ್ಣ ಆಚಾರ್ ಮೊದಲಾದವರ ಯಕ್ಷಗಾನವನ್ನು ಚಿಕ್ಕ ವಯಸ್ಸಿಂದ ನೋಡಿ ಕುಶಿ ಕೊಟ್ಟಿದ್ದು. ಹಾಗೆಯೇ ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ಪಾಲ್ಗೊಳ್ಳಲು ಅಪ್ಪಯ್ಯ, ಅಮ್ಮ ಪ್ರೇರೇಪಿಸಿದ್ದರು.
ನೆಚ್ಚಿನ ಪ್ರಸಂಗಗಳು:-
ದೇವಿ ಮಹಾತ್ಮೆ, ಸುಧನ್ವ, ಅಭಿಮನ್ಯು.
ನೆಚ್ಚಿನ ವೇಷಗಳು:-
ಅಭಿಮನ್ಯು, ಸುಧನ್ವ ಯಾವುದೇ ಪ್ರಸಂಗದ ಕೃಷ್ಣ, ರಕ್ತಬೀಜ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲು ನೆಚ್ಚಿನ ಅರ್ಥಧಾರಿಗಳು, ವೇಷಧಾರಿಗಳ ವಿಡಿಯೋ ಸಿಕ್ಕರೆ ನೋಡುತ್ತೇನೆ. ಹಾಗೆಯೇ ಪ್ರಸಂಗಕ್ಕೆ, ಪಾತ್ರಕ್ಕೆ ಸಂಬಂಧಪಟ್ಟ ಬನ್ನಂಜೆ, ಶತಾವಧಾನಿ ಉಪನ್ಯಾಸ ಕೇಳುವುದು, ಅವತ್ತಿನ ಕಲಾವಿದರು, ಗುರುಗಳ ಜೊತೆ ಸಮಾಲೋಚನೆ ಮಾಡುವುದು.
ಕೆಲಸದ ನಡುವೆಯೂ ಯಕ್ಷಗಾನಕ್ಕೆ ಸಮಯ ಹೇಗೆ ಕೊಡುತ್ತೀರಿ:-
ಯಕ್ಷಗಾನದ ಮೇಲಿನ ಒಲವಿನಿಂದ ಸಮಯವನ್ನು ಆದಷ್ಟು ಬಿಡುವು ಮಾಡಿಕೊಳ್ಳುತ್ತೇನೆ.
ಯಕ್ಷಗಾನ ಸಂಘಟನೆಯಲ್ಲಿ ನಿಮ್ಮ ಅನುಭವ ತಿಳಿಸಿ:-
ಸುಮಾರು 13 ವರುಷದ ಹಿಂದೆ ಸಾಲಿಗ್ರಾಮ ಮೇಳಕ್ಕೆ ರಾಣಿ ಮೃಣಾಲಿನಿ ಎಂಬ ಪ್ರಸಂಗ ಬರೆದಿದ್ದೆ. ಹಾಗೆಯೇ ಅದರ ಪ್ರಥಮ ಪ್ರಯೋಗ ಅಪ್ಪಯ್ಯನೇ ಸಂಘಟಿಸಿದ್ದರು. ಈ ಪ್ರಯೋಗದ ಅನುಭವ ಜೊತೆಯಲ್ಲಿ ಅಪ್ಪಯ್ಯ ಕಮಲಶಿಲೆ, ಸಾಲಿಗ್ರಾಮ, ಪೆರ್ಡೂರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ದೊಡ್ಡ ಮಟ್ಟದಲ್ಲಿ ಯಕ್ಷಗಾನ ಪ್ರದರ್ಶನವನ್ನು ತನ್ನ ಜೀವಿತಾವಧಿಯಲ್ಲಿ ಆಯೋಜಿಸಿದವರು. ಅದರಿಂದ ನೋಡಿ ಕಲಿತ ಅನುಭವದಿಂದ 2015ಕ್ಕೆ ಪ್ರಥಮವಾಗಿ ಅಪ್ಪಯ್ಯನ ಸಂಪೂರ್ಣ ಮಾರ್ಗದರ್ಶನದಲ್ಲಿ ಪ್ರಥಮವಾಗಿ ಯಕ್ಷಗಾನ ಸಂಘಟಿಸಿ ಸಂಯೋಜಿಸಿದೆ. ನಂತರದಲ್ಲಿ ಈ 10 ವರ್ಷದಲ್ಲಿ ಒಂದು ಸುಮಾರು 20 ಪ್ರದರ್ಶನವನ್ನು ಸಂಘಟಿಸಿ ಸಂಯೋಜಿಸಿದ್ದೇನೆ.
ಬೆಂಗಳೂರಿನಲ್ಲಿ ಯಕ್ಷಗಾನದ ಚಟುವಟಿಕೆ ಹೇಗೆ ಇದೆ:-
ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ನೋಡುವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಒಬ್ಬ ಸಂಘಟಕ ಏನೆಲ್ಲ ಕಸರತ್ತು ಮಾಡಿ ಪ್ರೇಕ್ಷಕರನ್ನು ಸೆಳೆಯಬೇಕಾದ ಪರಿಸ್ಥಿತಿ ಇದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಅನುಭವ ಇರುವ ಪ್ರೇಕ್ಷಕರು ಆಟ ನೋಡುವುದು ಕಡಿಮೆ ಆಗಿದೆ, ನೋಡುವ ಕೆಲವು ಮಂದಿಗೆ ಮಾತ್ರ ಸದಭಿರುಚಿಯ ಯಕ್ಷಗಾನ ಬೇಕು. ಸದಭಿರುಚಿ ಇರುವ ಪ್ರೇಕ್ಷಕರನ್ನ ಪ್ರದರ್ಶನದತ್ತ ಸೆಳೆಯಬೇಕಾದ್ರೆ ಸಂಘಟಕ ಹರಸಾಹಸ ಪಡ್ಬೇಕಾದ ಅನಿವಾರ್ಯತೆ ಇದೆ. ಸಂಘಟಕ ಆಟ ನಿಲ್ಲಿಸಿದರೆ ಯಕ್ಷಗಾನ ಆಟವು ನಿಲುತ್ತೆ. ಸಂಘಟಕರಿಗೆ ಪ್ರೋತ್ಸಾಹ ಬೇಕಾಗಿದೆ. ಸಂಘಟಕನು ಪ್ರಜ್ಞೆಯಿಂದ ನೈಜ ಯಕ್ಷಗಾನವನ್ನು ಆಡಿಸಬೇಕು.
ಒಳ್ಳೆಯ ಯಕ್ಷಗಾನ ಪ್ರದರ್ಶನದಲ್ಲಿ ಭಾಗಿಯಾಗುವುದು - ಒಬ್ಬ ಕಲಾವಿದನಾಗಿ, ಒಬ್ಬ ಪ್ರೇಕ್ಷಕನಾಗಿ, ಒಬ್ಬ ಸಂಘಟಕನಾಗಿ ಯಕ್ಷಗಾನ ರಂಗದಲ್ಲಿ ಇರುವುದೇ ನನ್ನ ಮುಂದಿನ ಯೋಜನೆ ಎಂದು ಹೇಳುತ್ತಾರೆ ಕುಡೇರಿ ಸಂಪತ್ ಕನ್ನಂತ್.
ಕುಡೇರಿ ಸಂಪತ್ ಕನ್ನಂತ್ ಅವರು ನಿರ್ದೇಶನ ಮಾಡಿದ ಕಲೆ, ಸಂಸ್ಕೃತಿ ಸಾರುವ "ನಮ್ಮನೆ" ಕನ್ನಡ ಶಾರ್ಟ್ ಮೂವಿಗೆ ವಿಜಯ ಕರ್ನಾಟಕ ಶಾರ್ಟ್ ಮೂವಿ ಫೆಸ್ಟ್ ನಲ್ಲಿ ಪ್ರಥಮ.
ಬೆಂಗಳೂರು ಇಂಟರ್ನೇಷನಲ್ ಫಿಲಂ ಫೆಸ್ಟಿವಲ್ ನಲ್ಲಿ ರನ್ನರ್ ಅಪ್ ಪ್ರಶಸ್ತಿ ದೊರಕಿದೆ.
2024ರಲ್ಲಿ ವರುಷದ ಶ್ರೇಷ್ಠ ಸಂಘಟಕ ಪ್ರಶಸ್ತಿ ನೀಡಿ ಗಜೇಂದ್ರ ಆಚಾರ್ಯ ಕೋಣಿ ಅವರ ಯಕ್ಷಗಾನ ಪ್ರದರ್ಶನದಲ್ಲಿ ಗೌರವಿಸಿರುತ್ತಾರೆ.
ಯಕ್ಷಗಾನ, ಫೋಟೋಗ್ರಾಫಿ ಬ್ಯಾಡ್ಮಿಂಟನ್ ಇನ್ನಿತರ ಇವರ ಹವ್ಯಾಸಗಳು.
ಕುಡೇರಿ ಸಂಪತ್ ಕನ್ನಂತ್ ಅವರು ಸ್ವಸ್ತಿಕ ಇವರನ್ನು ಮದುವೆಯಾಗಿ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ, ಪತಿ, ಪತ್ನಿಯ ಹಾಗೂ ಮನೆಯವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಡಾ.ಶ್ರುತಿ ಸಂತೋಷ್ ಹಾಗೂ ಕುಡೇರಿ ಸಂಪತ್ ಕನ್ನಂತ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment