ಯಕ್ಷ ಸಾಧಕರು 350
"ಪ್ರತಿಭಾ ಸಿರಿ"
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಬೇಳಂಜೆ ಕುಚ್ಚೂರು ಗ್ರಾಮ ಇವರ ಹುಟ್ಟೂರು. ಇವರ ಅಜ್ಜಂದಿರಾದ ಬೇಳಂಜೆ ತಿಮ್ಮಪ್ಪ ನಾಯ್ಕ್ ಮತ್ತು ಬೇಳಂಜೆ ಕಾಮಿ ನಾಯ್ಕ್ ರವರು ಯಕ್ಷಗಾನ ರಂಗಕ್ಕೆ ದೊಡ್ಡ ಕೊಡುಗೆ ನೀಡಿದವರು. ಮೊಮ್ಮಗನಾಗಿ ಯಕ್ಷಗಾನವನ್ನು ಹವ್ಯಾಸಿಯಾಗಿ ಆದರೂ ಮುಂದುವರಿಸಬೇಕು ಎನ್ನುವ ಮಹದಾಸೆಯೊಂದಿಗೆ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದ ಕಲಾವಿದ ಸತೀಶ್ ಬೇಳಂಜೆ.
ಯಕ್ಷಗಾನ ಕಲಾವಿದ ಶ್ರೀ ಬೇಳಂಜೆ ಸುಂದರ ನಾಯ್ಕ್ ಹಾಗೂ ಆಶಾಲತ ಇವರ ಮಗನಾಗಿ 07/06/1985 ರಂದು ಸತೀಶ್ ಬೇಳಂಜೆ ಅವರ ಜನನ. M.A, B.Ed, ಹಿಂದಿ ವಿದ್ವಾನ್ ಇವರ ವಿದ್ಯಾಭ್ಯಾಸ. ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿಯಲ್ಲಿ ಅಧ್ಯಾಪಕ.
ಯಕ್ಷಗಾನ ರಂಗ ಬೇಡ ಮಗ, ಬದುಕು ಕಟ್ಟಿಕೊಳ್ಳುವುದು ಕಷ್ಟ ಎಂದು ಅಪ್ಪ ಹೇಳುತ್ತಿದ್ದರೂ, ಅಪ್ಪನ ವೇಷಗಳನ್ನು ನೋಡಿ ನೋಡಿ ಯಕ್ಷಗಾನ ಕಲಿಯಬೇಕು ಎಂಬ ಆಸೆ ಬಾಲ್ಯದಲ್ಲೇ ಹುಟ್ಟಿ ಮತ್ತು ಹೆಂಡತಿ ಸುಮಾಶ್ರೀ ನೀಡುತ್ತಿದ್ದ ಪ್ರೋತ್ಸಾಹವು ನನ್ನನ್ನು ಒಬ್ಬ ಹವ್ಯಾಸಿ ಯಕ್ಷಗಾನ ಕಲಾವಿದನನ್ನಾಗಿಸಿತು ಎಂದು ಹೇಳುತ್ತಾರೆ ಸತೀಶ್ ಬೇಳಂಜೆ.
ಯಕ್ಷಗಾನ ಗುರುಗಳು:-
ತೆಂಕುತಿಟ್ಟು ಹೆಜ್ಜೆ ಗುರುಗಳು ಶ್ರೀ ಸುಭಾಷ್ ಪಂಜ,
ಬಡಗುತಿಟ್ಟಿನ ಹೆಜ್ಜೆ ಗುರುಗಳು ದೊಡ್ಡಪ್ಪ ಬೇಳಂಜೆ ಮಹಾಬಲ ನಾಯ್ಕ್.
ಭಾಗವತಿಕೆ ಗುರುಗಳು ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ.
ಜಾಂಬವತಿ ಕಲ್ಯಾಣ, ಭೀಷ್ಮ ಪ್ರತಿಜ್ಞೆ, ಸುದರ್ಶನ ವಿಜಯ, ಕುಶ ಲವ ಕಾಳಗ, ಧರ್ಮಾಂಗಧ ದಿಗ್ವಿಜಯ, ಕರ್ಣಾರ್ಜುನ ಕಾಳಗ, ಕಂಸವಧೆ ಇವರ ನೆಚ್ಚಿನ ಪ್ರಸಂಗಗಳು.
ಕೃಷ್ಣ, ದೇವವ್ರತ, ಬಾಲ ಕಂಸ, ವಿಷ್ಣು, ಸಾಲ್ವ, ವಿದ್ಯುನ್ಮಾಲಿ, ಧರ್ಮಾಂಗದ, ಮೀನಾಕ್ಷಿ, ಸುಭದ್ರೆ ಇವರ ನೆಚ್ಚಿನ ವೇಷಗಳು.
ಅತಿಥಿ ಕಲಾವಿದರಾಗಿ ಕೆಲವು ಮೇಳದಲ್ಲಿ ವೇಷ ಮಾಡಿರುತ್ತಾರೆ ಬೇಳಂಜೆಯವರು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಅಪ್ಪಯ್ಯನಲ್ಲಿ ಪ್ರಸಂಗದ ನಡೆ ಮತ್ತು ಪಾತ್ರದ ಕುರಿತು ತಿಳಿದುಕೊಳ್ಳುತ್ತೇನೆ ಹಾಗೂ ಸ್ನೇಹಿತರಾದ ಬೇಳಂಜೆ ಪ್ರಭಾಕರ ಶೆಟ್ಟಿಯವರಲ್ಲಿ ನಾಟ್ಯದ ಕುರಿತು ಒಂದಷ್ಟು ಮಾಹಿತಿ ಸಂಗ್ರಹಣೆ ಮಾಡಿಕೊಂಡು, ಪ್ರತಿ ಪಾತ್ರಗಳ ಕುರಿತು ಪುರಾಣ ಪುಸ್ತಕಗಳನ್ನು ಓದಿಕೊಳ್ಳುತ್ತೇನೆ. ಹವ್ಯಾಸಿ ಯಕ್ಷಗಾನ ಕಲಾವಿದ ಆದರೂ ಕೂಡ ಸ್ವಂತ ವೇಷ ಸಾಮಗ್ರಿಗಳನ್ನು ಮಾಡಿಕೊಂಡು ಅದನ್ನೇ ಬಳಸಿಕೊಂಡು ವೇಷ ಮಾಡುತ್ತೇನೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಬದಲಾವಣೆ ಜಗದ ನಿಯಮ. ಯಕ್ಷಗಾನ ರಂಗದಲ್ಲೂ ಒಂದಷ್ಟು ಬದಲಾವಣೆ ಆಗಿವೆ. ಆಗುತ್ತಲೇ ಇವೆ. ಪ್ರಜ್ಞಾವಂತ ಪ್ರೇಕ್ಷಕರು ಇದ್ದಾರೆ, ಪ್ರತಿಭಾವಂತ ಕಲಾವಿದರು ತಯಾರಾಗುತ್ತ ಇದ್ದಾರೆ. ಆದರೆ ಹಿರಿಯ ಕಲಾವಿದರಲ್ಲಿ ಒಂದಷ್ಟು ಮಾಹಿತಿ ಮಾರ್ಗದರ್ಶನ ಪಡೆದುಕೊಳ್ಳುವ ಮನಸ್ಸು ಮಾಡಬೇಕು. ಬಹಳಷ್ಟು ವಿದ್ಯಾರ್ಥಿಗಳು ಯಕ್ಷಗಾನ ಕಲಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕಾರ್ಯಕ್ರಮ ಮುಗಿದ ಬಳಿಕ ಪ್ರತಿ ಪಾತ್ರದ ಕುರಿತು ವಿಶ್ಲೇಷಣಾತ್ಮಕವಾಗಿ, ವಿಮರ್ಶಾತ್ಮಕವಾಗಿ ಅಭಿಪ್ರಾಯಿಸುವ ಪ್ರೇಕ್ಷಕ ವರ್ಗ ಇದೆ, ಕಾರ್ಯಕ್ರಮ ಆಗುವಾಗ ಶಿಳ್ಳೆ ಚಪ್ಪಾಳೆ ಹೊಡೆಯುವ ಪ್ರೇಕ್ಷಕರೂ ಇದ್ದಾರೆ, ಸಾಮಾಜಿಕ ಜಾಲತಾಣಗಳಲ್ಲಿ ಯಕ್ಷಗಾನದ ಕೆಲವು ತುಣುಕುಗಳನ್ನಷ್ಟೇ ನೋಡಿ ಕಲಾವಿದರನ್ನು ಅಳೆಯುವವರೂ ಇದ್ದಾರೆ. ಕಲೆ ಮತ್ತು ಕಲಾವಿದರನ್ನು ಬೆಳೆಸುವ ಸದಭಿರುಚಿಯ ಪ್ರೇಕ್ಷಕ ವರ್ಗ ಬೇಕು.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:- ಹಿರಿಯ ಕಲಾವಿದರು ಯಕ್ಷಗಾನವನ್ನು ಬಹಳಷ್ಟು ಕಷ್ಟ ಪಟ್ಟು ಉಳಿಸಿದ್ದಾರೆ ಬೆಳೆಸಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ.
ಯಕ್ಷಗಾನ ಹವ್ಯಾಸಿ ಅರ್ಥಧಾರಿ ಆಗಿ ನಿಮ್ಮ ಅನುಭವ:-
ಹಿರಿಯ ಕಲಾವಿದರಲ್ಲಿ ಪ್ರತಿ ಪಾತ್ರದ ಕುರಿತು ಮಾಹಿತಿ ಸಂಗ್ರಹಿಸುತ್ತೇನೆ, ಪುರಾಣ ಪುಸ್ತಕಗಳ ಸಂಗ್ರಹ ಮತ್ತು ಅಧ್ಯಯನ ಮಾಡಿ ಅರ್ಥಗಾರಿಕೆಗೆ ತಯಾರಿ ಮಾಡುತ್ತೇನೆ, ಒಂದಷ್ಟು ಯಕ್ಷಗಾನ ಕಾರ್ಯಕ್ರಮಗಳನ್ನು ನೋಡಿ ನನ್ನದೇ ಆದ ಪಾತ್ರ ಪ್ರಸ್ತುತಿಯನ್ನು ಅಳವಡಿಸಿಕೊಳ್ಳುತ್ತೇನೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಅಧ್ಯಾಪಕನಾಗಿ ಈಗಾಗಲೇ ನಮ್ಮ ಮುದ್ರಾಡಿ ಸರಕಾರಿ ಶಾಲೆಯಲ್ಲಿನ ಬಹಳಷ್ಟು ವಿದ್ಯಾರ್ಥಿಗಳಿಗೆ ಯಕ್ಷಗಾನದ ಹೆಜ್ಜೆ ಕಲಿಸಿದ್ದು ಮತ್ತು ತಾಳಮದ್ದಳೆಯ ಒಂದು ತಂಡ ಕೂಡ ರಚಿಸಿದ್ದೇನೆ. ಯಕ್ಷಗಾನದ ಕುರಿತು ಆಸಕ್ತಿ ಮೂಡಿಸುವ ಇನ್ನಷ್ಟು ಕಾರ್ಯಕ್ರಮ ಶಾಲೆಯಲ್ಲಿ ಮಾಡಿಸುವ ಇಚ್ಚೆ ಇದೆ.
ಹವ್ಯಾಸಿ ಯಕ್ಷಗಾನ ಕಲಾವಿದ ಆಗುವುದರ ಜೊತೆಯಲ್ಲಿ ತಾಳಮದ್ದಳೆ ಅರ್ಥಗಾರಿಕೆಯಲ್ಲೂ ತೊಡಗಿಸಿಕೊಂಡು, ನಾಟಕ ರಂಗದ ಗುರುಗಳಾದ ಶ್ರೀ ರಾಮ್ ಶೆಟ್ಟಿ ಹಾರಾಡಿಯವರ ಶಿಕ್ಷಕರ ನಾಟಕ ತಂಡದಲ್ಲಿ ಸಕ್ರಿಯನಾಗಿ ತೊಡಗಿಸಿಕೊಂಡು, ಸುಮಾರು 30 ವರ್ಷದಿಂದ ಬಾಲಕೃಷ್ಣ ಭಜನಾ ಮಂಡಳಿ ಸಳ್ಳೆಕಟ್ಟೆ ಕುಚ್ಚೂರು ಇಲ್ಲಿ ಭಜನಾ ಪಟುವಾಗಿ ತೊಡಗಿಸಿಕೊಂಡು, ಬಹಳಷ್ಟು ಕಾರ್ಯಕ್ರಮಗಳಿಗೆ ಕಾರ್ಯಕ್ರಮ ನಿರೂಪಕನಾಗಿ, ಕ್ರಿಕೆಟ್ ಆಟಗಾರನಾಗಿ ಕೆಲವು ಟೂರ್ನಮೆಂಟ್ ಗಳಲ್ಲಿ ಭಾಗವಸಿರುತ್ತಾರೆ. ಕೃಷಿಕನಾಗಿ ಒಂದಷ್ಟು ತೋಟ ಮಾಡಿ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ, ಅನೇಕ ಕವನಗಳು ಮತ್ತು ಲೇಖನಗಳನ್ನು ಬರೆದಿರುತ್ತಾರೆ.
ಸನ್ಮಾನ ಹಾಗೂ ಪ್ರಶಸ್ತಿ:-
♦️ 2022ನೇ ಸಾಲಿನ ಸರಕಾರಿ ನೌಕರರ ರಾಷ್ಟ್ರ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ಸಹನಟ.
♦️ ಹೆಬ್ರಿ ತಾಲೂಕಿನ ಯುವ ಉದಯೋನ್ಮುಖ ಕವಿಯೆಂದು ಸನ್ಮಾನ.
♦️ ಸರಕಾರಿ ನೌಕರರ ಆಶು ಭಾಷಣ ಸ್ಪರ್ಧೆಯಲ್ಲಿ ಕಾರ್ಕಳ ತಾಲೂಕು ಮಟ್ಟ ಮತ್ತು ಉಡುಪಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ.
♦️ ಹವ್ಯಾಸಿ ಯಕ್ಷಗಾನ ಕಲಾವಿದನಾಗಿ, ತಾಳಮದ್ದಳೆ ಅರ್ಥಗಾರಿಕೆ ಹಾಗೂ ನಾಟಕ ರಂಗದಲ್ಲಿ ತೊಡಗಿಕೊಂಡಿರುವುದಕ್ಕೆ ಅನೇಕ ಸಂಘ ಸಂಸ್ಥೆಗಳಲ್ಲಿ ಸನ್ಮಾನ.
ಸತೀಶ್ ಬೇಳಂಜೆ ಅವರು 2.06.2013ರಂದು ಸುಮಾಶ್ರೀ ಅವರನ್ನು ಮದುವೆಯಾಗಿ ಮಕ್ಕಳಾದ ಸಮನ್ವಿ ಹಾಗೂ ಸನ್ಮಯಿ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಸತೀಶ್ ಬೇಳಂಜೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
💐👏💐💐
ReplyDeleteಧನ್ಯವಾದಗಳು ❤️🙏
Delete