ಯಕ್ಷ ಸಾಧಕರು 351
"ಯಕ್ಷಜ್ಯೋತಿ"
ಇವರು ಪ್ರತಿಭಾವಂತ ಕಲಾವಿದೆ. ನಿರ್ವಹಣಾ ಪಾತ್ರಗಳಿಗೆ ಜೀವ ತುಂಬುವ ಗುಣ ಅವರಲ್ಲಿದೆ. ಅಧ್ಯಯನಶೀಲರಾಗಿ ಕಲೆಯಲ್ಲಿ ತೊಡಗುವವರು. ಸುದೀರ್ಘವಾದ ಕಲಾಪರಂಪರೆಯ ಕಲಾ ಹಿನ್ನೆಲೆಯೂ ಇದೆ. ಕಲಾಸಕ್ತ ಪತಿಯ ಸಹಕಾರ ಗಮನಾರ್ಹ. ಪಾಂಡೇಶ್ವರ ಯಕ್ಷಮಂಜೀರ ಸಂಸ್ಥೆಯಲ್ಲಿ ಇವರ ಉನ್ನತ ಕಲಾಧ್ಯಯನ ನಡೆದಿದೆ. ಪಾರಂಪರಿಕ ರಂಗನಡೆ, ಮೌಖಿಕ ಭಾವಾಭಿವ್ಯಕ್ತಿ, ಯಕ್ಷಗಾನೀಯ ಅರ್ಥ ವಿನ್ಯಾಸ, ಪಾತ್ರೋಚಿತ ನೃತ್ಯ, ಅಭಿನಯದ ಹದವಾದ ಎರಕ ಅವರಲ್ಲಿ ಗುರುತಿಸಬಹುದಾಗಿದೆ.
ವೃತ್ತಿಯಲ್ಲಿ ಇವರು ಪೊಲೀಸ್ ಅಧಿಕಾರಿ, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ. ಇವರ ಚಿಕ್ಕಪ್ಪ, ಮಂದಾರ್ತಿ ಮೇಳದ ಪ್ರಧಾನ ಸ್ತ್ರೀ ವೇಷಧಾರಿಯಾಗಿದ್ದ ಎಂ.ಎ ನಾಯ್ಕ್ (ಪ್ರಸ್ತುತ ನಿವೃತ್ತ) ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.
ಬ್ರಹ್ಮಾವರ ತಾಲೂಕು ನಡೂರು ಗ್ರಾಮದ ದಿ. ಗೋಪಾಲ ಮರಕಾಲ ಹಾಗೂ ಶ್ರೀಮತಿ ಮುತ್ತು ಇವರ ಮಗಳಾಗಿ 01.08.1983ರಂದು ಜ್ಯೋತಿ ಅವರ ಜನನ. BA ಇವರ ವಿದ್ಯಾಭ್ಯಾಸ. ಪ್ರಸ್ತುತ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್‌ಬಿ ವಿಭಾಗದಲ್ಲಿ ಕರ್ತವ್ಯ.
ಯಕ್ಷಗಾನ ಗುರುಗಳು:-
ಪ್ರಾಥಮಿಕ ಹೆಜ್ಜೆಯನ್ನು ಶಾಲಾ ಅವಧಿಯಲ್ಲಿ ಶ್ರೀ ಹಿರಿಯಣ್ಣ ಶೆಟ್ಟಿಗಾರ್ ಮಂದಾರ್ತಿ ಇವರಲ್ಲಿ ಕಲಿತು ತದನಂತರ ಪ್ರಸಂಗಕ್ಕೆ ಸಂಬಂಧಪಟ್ಟಂತೆ ಹೆಜ್ಜೆ ಹಾಗೂ ಅಭಿನಯವನ್ನು ಶ್ರೀ ಮಹೇಶ್ ಕುಮಾರ್ ಮಂದಾರ್ತಿ ಹಾಗೂ ಶ್ರೀ ಉದಯ್ ಕುಮಾರ್ ಹೊಸಾಳ ಇವರಿಂದ ಕಲಿತು ಪ್ರಸ್ತುತ ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.
ನೆಚ್ಚಿನ ಪ್ರಸಂಗಗಳು:-
ಕದಂಬ ಕೌಶಿಕೆ, ಚಕ್ರವ್ಯೂಹ, ರಾಣಿ ಶಶಿಪ್ರಭೆ, ಸುದರ್ಶನ ವಿಜಯ, ಲಂಕಾ ದಹನ, ಶ್ರೀದೇವಿ ಲಲಿತೋಪಖ್ಯಾನ.
ನೆಚ್ಚಿನ ವೇಷಗಳು:-
ಕೌಶಿಕೆ, ಶಶಿಪ್ರಭೆ, ಕರ್ಣ, ಸುಭದ್ರೆ, ದೇವೇಂದ್ರ, ಸುಂದರ ರಾವಣ, ಪಾರ್ವತಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮೊದಲು ಗುರುಗಳು ತರಗತಿಯಲ್ಲಿ ಹೇಳಿಕೊಟ್ಟಂತಹ ಹೆಜ್ಜೆ ಹಾಗೂ ಅಭಿನಯವನ್ನು ಪ್ರತಿದಿನ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಬಂದ ಬಳಿಕ ಅಭ್ಯಾಸ ಮಾಡಿ ಹಾಗೂ ನನ್ನ ಸಹಕಲಾವಿದರಲ್ಲಿ ಪ್ರಸಂಗದ ಕಥೆಯ ಬಗ್ಗೆ ಹಾಗೂ ಅಭಿನಯದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಚರ್ಚಿಸಿ ತಿಳಿದುಕೊಳ್ಳುತ್ತೇನೆ. ಅಲ್ಲದೆ ಯೂಟ್ಯೂಬ್ ನಲ್ಲಿ ಬರುವಂತಹ ಯಕ್ಷಗಾನದ ವಿಡಿಯೋಗಳನ್ನು ವೀಕ್ಷಿಸಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಜ್ಯೋತಿ.
ಪೋಲಿಸ್ ಅಧಿಕಾರಿ ವೃತ್ತಿಯ ಜೊತೆಗೆ ಯಕ್ಷಗಾನಕ್ಕೆ ಯಾವ ರೀತಿಯಲ್ಲಿ ಸಮಯ ನೀಡುತ್ತೀರಿ:-
ಇಲಾಖಾ ಕರ್ತವ್ಯವನ್ನು ಮಾಡಿಕೊಂಡು ಜೊತೆಯಲ್ಲಿ ಯಕ್ಷಗಾನದ ಪ್ರತೀ ತರಗತಿಗಳಿಗೆ ಹೋಗುವುದು ತುಂಬಾ ಕಷ್ಟವಾಗುತ್ತಿತ್ತು. ಆದ್ದರಿಂದ ಬಿಡುವು ಅಥವಾ ರಜೆ ಇರುವಾಗ ಒಮ್ಮೆ ತರಗತಿಗೆ ಹಾಜರಾಗಿ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಬಂದು ಮನೆಯಲ್ಲಿ ಕರ್ತವ್ಯದ ಅವಧಿಯ ನಂತರ ಅಭ್ಯಾಸ ಮಾಡಿಕೊಳ್ಳುತ್ತಿದ್ದೆ ಹಾಗೂ ಯಕ್ಷಗಾನ ಕಾರ್ಯಕ್ರಮ ಇರುವ ದಿನದಂದು ರಜೆ ಹಾಕಿಕೊಳ್ಳುತ್ತಿದ್ದೆ. ನನಗೆ ತುಂಬಾ ಆಸಕ್ತಿ ಇರುವಂತಹ ಯಕ್ಷಗಾನದಲ್ಲಿ ಅಭಿನಯಿಸುವುದಕ್ಕಾಗಿ ಹಾಗೂ ಕಲಿಯುವುದಕ್ಕಾಗಿ ನನ್ನ ಕರ್ತವ್ಯದ ನಡುವೆ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುತ್ತೇನೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದು ಜನರು ಮೊದಲಿನಂತೆ ಬೆಳಗ್ಗಿನವರೆಗೆ ಕಾದು ಕುಳಿತು ಯಕ್ಷಗಾನ ನೋಡುವುದು ವಿರಳವಾಗಿದೆ, ಕಾಲಮಿತಿ ಯಕ್ಷಗಾನವನ್ನೇ ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಡಿ ತೋರಿಸುತ್ತಿರುವ ಯಕ್ಷಗಾನ ಪ್ರಸಂಗಗಳನ್ನು ವಿಮರ್ಶೆ ಮಾಡುವ ಪ್ರೇಕ್ಷಕರು ಕೂಡ ಇದ್ದಾರೆ. ಇಂತಹ ಪ್ರೇಕ್ಷಕರು ಇರುವುದರಿಂದಲೇ ಯಕ್ಷಗಾನದಲ್ಲಿ ಸುಧಾರಣೆಯನ್ನು ತರಲು ಅನುಕೂಲವಾಗುತ್ತಿದೆ.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಿಗೆ ಯಕ್ಷಗಾನದ ಅಭಿರುಚಿ ಮೂಡಿಸಬೇಕು. ಎಲ್ಲಾ ಶಾಲೆಗಳಲ್ಲಿ ಯಕ್ಷಗಾನ ತರಬೇತಿಯನ್ನು ಉಚಿತವಾಗಿ ನಡೆಸಲು ಪ್ರಯತ್ನಿಸಬೇಕು. ಯಕ್ಷಗಾನ ಕಲೆಯನ್ನು ಪಠ್ಯದಲ್ಲಿ ತರಬೇಕು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಾಗಿ ಕಲಿಯಬೇಕು ಹಾಗೂ ಹೆಚ್ಚು ಹೆಚ್ಚು ಪಾತ್ರಗಳನ್ನು ಉತ್ತಮ ರೀತಿಯಲ್ಲಿ ಅಭಿನಯಿಸುವುದನ್ನು ಕರಗತ ಮಾಡಿಕೊಳ್ಳಬೇಕು. ಅಲ್ಲದೇ ಪ್ರಾಥಮಿಕ ಹಂತದಲ್ಲಿ ಯಕ್ಷಗಾನವನ್ನು ಕಲಿಯುತ್ತಾ ಇರುವ ನನ್ನ ಮಗಳನ್ನು ಪ್ರಬುದ್ಧ ಯಕ್ಷಗಾನ ಕಲಾವಿದೆಯನ್ನಾಗಿ ಮಾಡುವುದು ನನ್ನ ಮುಂದಿನ ಯೋಜನೆ.
ಯಕ್ಷಗಾನಗಳನ್ನು ವೀಕ್ಷಿಸುವುದು, ಭಜನೆ ಕುಣಿತ ಮತ್ತು ಹಾಡುವುದು, ಗಾರ್ಡನಿಂಗ್ ಇವರ ಹವ್ಯಾಸಗಳು.
ಜ್ಯೋತಿ ಅವರು 27.04.2009ರಂದು ಉದಯ್ ಕೋಟ ಅವರನ್ನು ಮದುವೆಯಾಗಿ ಮಕ್ಕಳಾದ ನಿಕ್ಷೇಪ್ ಹಾಗೂ ಸಾನ್ವಿ ಜೊತೆಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ. ತಂದೆ, ತಾಯಿ, ಪತಿ, ಹಾಗೂ ಮನೆಯವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಜ್ಯೋತಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment