ಯಕ್ಷ ಸಾಧಕರು 359

"ಸುಯೋಗ್ಯ ಯಕ್ಷ ಪ್ರತಿಭೆ"

ವೃತ್ತಿಯಲ್ಲಿ ಇವರು ಗುರುದೇವ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಉಪನ್ಯಾಸಕ. ಪ್ರವೃತ್ತಿಯಲ್ಲಿ ಇವರು ಯಕ್ಷಗಾನ ಕಲಾವಿದರು. ವೃತ್ತಿ ಹಾಗೂ ಯಕ್ಷಗಾನ ರಂಗದಲ್ಲಿ ಪೂರ್ಣಪ್ರಮಾಣದ ಕಲಾವಿದನಾಗಿ ತಿರುಗಾಟ ಮಾಡುತ್ತಾ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವ ಕಲಾವಿದ ಸತೀಶ್ ಸಿ ಸಾಲ್ಯಾನ್.



ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯ ಶ್ರೀಮತಿ ಲತಾ ಹಾಗೂ ದಿ.ಚಂದ್ರಶೇಖರ್ ಪೂಜಾರಿ ಇವರ ಮಗನಾಗಿ 05.11.1996ರಂದು ಜನನ.
ಲಾವಣ್ಯ ಇವರ ಅಕ್ಕ ಹಾಗೂ ತಂಗಿ ಜ್ಯೋತಿ. ಅಜ್ಜ , ಅಜ್ಜಿ, ತಾಯಿ ಸಾಕಿ ಬೆಳೆಸಿದ್ದು. ಅಡಿಕೆ ಸಿಪ್ಪೆ ತೆಗೆಯುವ ಉದ್ಯೋಗ, ಹೋಟೆಲ್, ಬಾರ್, ರೆಸ್ಟೋರೆಂಟ್ ಕೂಲಿ ಕೆಲಸ ಮಾಡಿಕೊಂಡು ಬೆಳೆದರು. ಆರ್ಥಿಕವಾಗಿ ಬಡ ಕುಟುಂಬ ಆದ್ದರಿಂದ 2ವರ್ಷ ಶಾಲೆ ನಿಲ್ಲಿಸಿ ಬಳಿಕ P.U.C ಮಾಡಿದರು. ಬಳಿಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೇಲಂತಬೆಟ್ಟು ಬೆಳ್ತಂಗಡಿಯಲ್ಲಿ ಡಿಗ್ರಿ ಹಾಗೂ ಕನ್ನಡದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದರು.

ಪಂಚಶ್ರೀ ಸಾಂಸ್ಕೃತಿಕ ಸೇವಾ ಕೇಂದ್ರ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿಯಲ್ಲಿ ನಾಟ್ಯಾಭ್ಯಾಸ. ಶ್ರೀಯುತ ರಾಮಣ್ಣ ಭಂಡಾರಿ ಚಾರ್ಮಾಡಿ ಇವರ ಯಕ್ಷಗಾನ ಗುರುಗಳು.

ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ:-
ಬಾಲ್ಯದಿಂದಲೇ ತುಳು ಪ್ರಸಂಗಗಳ ಮಂಗಳಾದೇವಿ ಮೇಳ ಇತ್ಯಾದಿ ಮೇಳಗಳು ನಮ್ಮ ಕಕ್ಕಿಂಜೆ ಪ್ರಾಥಮಿಕ ಶಾಲೆಗೆ ಬರುತ್ತಿದ್ದು ಟೆಂಟ್ ಮೇಳದ ಆಟ ವೀಕ್ಷಣೆ ಹಾಗೂ ಚಾರ್ಮಾಡಿ, ಸೋಮಂತಡ್ಕ ಪರಿಸರದಲ್ಲಿ ಕಟೀಲು ಮೇಳದ ಹರಕೆಯ ಆಟಗಳ ವೀಕ್ಷಣೆ ಯಕ್ಷಗಾನ ಕಲೆಯ ಮೇಲೆ ಆಸಕ್ತಿ ಬೆಳೆಸಿತು.

ನೆಚ್ಚಿನ ಪ್ರಸಂಗಗಳು:-
ಗದಾಯುದ್ದ, ರಕ್ತರಾತ್ರಿ, ಅಭಿಮನ್ಯು, ಕಂಸವಧೆ, ದೇವಿಮಹಾತ್ಮೇ, ಸತ್ಯ ಹರಿಶ್ಚಂದ್ರ ಇತ್ಯಾದಿ.
ತುಳು ಪ್ರಸಂಗಗಳೂ ಇಷ್ಟ ಆದರೆ ಇದೇ ಪ್ರಸಂಗ ಎಂದಿಲ್ಲ ಆಸಕ್ತಿ ಅಷ್ಟೇ.
ನೆಚ್ಚಿನ ವೇಷಗಳು:-
ಅಭಿಮನ್ಯು, ಕಂಸ, ಕೌರವ, ಹರೀಶ್ಚಂದ್ರ, ಋತುಪರ್ಣ, ಶಿಶುಪಾಲ, ಕೌಂಡ್ಲಿಕ, ಲಕ್ಷ್ಮಣ, ಇಂದ್ರಜಿತು, ಕರ್ಣ.
ನಾನು ಮಾಡಿದ ವೇಷಗಳಲ್ಲಿ ಸೀತಾ ಕಲ್ಯಾಣದ ರಾಮ, ಸಾರಥಿ, ಲಕ್ಷ್ಮಣ, ಯಕ್ಷ, ಚಂಡಮುಂಡರು, ಸುಪಾರ್ಶ್ವಕ, ಪ್ರಹ್ಲಾದ, ಅಗ್ರಪೂಜೆಯ ಕೃಷ್ಣ, ಸೋಮದತ್ತ, ಭಗದತ್ತ, ಮವೋಗ್ರ ಮುನಿ(ಕಟೀಲು ಕ್ಷೇತ್ರ ಮಹಾತ್ಮೆ), ರುಕ್ಮಾಂಗ ಶುಭಾಂಗ ಇತ್ಯಾದಿ.




ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ನಾನು ಹೆಚ್ಚಾಗಿ ಎದುರು ವೇಷದವರಲ್ಲಿ, ಭಾಗವತರಲ್ಲಿ ಹಾಗೂ ಹಿರಿಯ ಕಲಾವಿದರಲ್ಲಿ ಕೇಳಿಕೊಂಡು ಹೋಗುವುದಷ್ಟೇ. ಮತ್ತೆ ಪಾತ್ರಕ್ಕೆ ಸಂಬಂಧಪಟ್ಟಂತೆ ಕೆಲವು ಪುಸ್ತಕಗಳಿವೆ.
ಉದಾ:- ಹಾಸ್ಯಗಾರರಾದ ರವಿಶಂಕರ್ ವಳಕುಂಜರವರ ಅನೇಕ ಪುಸ್ತಕಗಳಿವೆ. ನಾನು ಹೆಚ್ಚು ಮಾತಾಡುವ ಕಲಾವಿದನಲ್ಲ. ಪಾತ್ರಕ್ಕೆ ಎಷ್ಟು ಬೇಕೋ ಅಷ್ಟೇ ಆಗಿರುವುದರಿಂದ ಮಿತಿಯೊಳಗೆ ಮಾತಷ್ಟೆ.

ವೃತ್ತಿಯ ಜೊತೆಗೆ ಯಕ್ಷಗಾನಕ್ಕೆ ಹೇಗೆ ಸಮಯ ನೀಡುತ್ತಿರಿ:-
ನಾನು ಆರಂಭದ ದಿನಗಳಲ್ಲಿ ಹಗಲು ಶಾಲೆ, ಕಾಲೇಜು ಮುಗಿಸಿ ರಾತ್ರಿ ಆಟಕ್ಕೆ ಬರುತ್ತಿದ್ದೆ. ನಿತ್ಯ ವೇಷದಿಂದ ತೊಡಗಿ ಮಂಗಳದವರೆಗೂ ದೇವಿಮಹಾತ್ಮೇಯಲ್ಲಿ ವೇಷ ಇರುತ್ತಿತ್ತು. ಕಾಲೇಜಿನ ಸಮವಸ್ತ್ರ ಬ್ಯಾಗಲ್ಲಿ ಇರುತ್ತಿತ್ತು. ಬೆಳಿಗ್ಗಿನ ತನಕ ಯಕ್ಷಗಾನ, ಹಾಗಾಗಿ ಬೆಳಿಗ್ಗೆ ವೇಷ ಆಗಿ ನಮ್ಮ ಮೇಳದ ಕಲಾವಿದರ ಗಾಡಿಯಲ್ಲಿ ಅರ್ಧದಾರಿ ತನಕ ಬಂದು ಬೆಳ್ತಂಗಡಿ ಬಸ್ ಹತ್ತುತ್ತಿದೆ. ನನ್ನ ಶಾಲಾ ಜೀವನದಲ್ಲಿ ಮೇಳ ತಿರುಗಾಟ ಸಂದರ್ಭ ಅನೇಕ ಕಲಾವಿದರು ಸಹಾಯ ಮಾಡಿದ್ದಾರೆ. ನನ್ನಲ್ಲಿ ಬೈಕ್ ಇರಲಿಲ್ಲ. ಹಾಗಾಗಿ ಹೆಸರು ಹೇಳದೇ ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅನೇಕ ಕಲಾವಿದರು ನನ್ನ ಬಗ್ಗೆ ಚುಚ್ಚು ಮಾತುಗಳನ್ನಾಡಿದ್ದಾರೆ. ಕಾಲೇಜು ಹೋಗಿ ಬಂದು ಶೋ ಮಾಡುವುದು ಹಾಗೆ ಹೀಗೆ ಎಂದು ಅದೆಲ್ಲದಕ್ಕೂ ಉಪನ್ಯಾಸಕನಾಗಿ ಬಾಯಿ ಮುಚ್ಚಿಸಿದ್ದೇನೆ. ತಿರುಗಾಟದ ಸಂದರ್ಭದಲ್ಲಿ ಬೆಳ್ತಂಗಡಿ ಸಾರ್ವಜನಿಕ ಶೌಚಾಲಯದಲ್ಲಿ ಸ್ನಾನ ಮಾಡಿ ಕಾಲೇಜಿಗೆ ಹೋಗುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರ ಪ್ರೋತ್ಸಾಹ ಇತ್ತು. ಉದ್ಯೋಗ ಆದ ನಂತರ ಬೈಕ್ ತಗೊಂಡೆ, ಕಾಲೇಜಿನಿಂದಲೆ ಯಕ್ಷಗಾನದಲ್ಲಿಗೆ ಬರುತ್ತಿದ್ದೆ. ಕಾಲಮಿತಿ ಆದ ಕಾರಣ ರಾತ್ರಿ ವೇಷ  ಮುಗಿಸಿ ಮನೆಗೆ ತಲುಪುವಾಗ 2.45 Am ಆಗುವುದು. ಆದರೂ ಸ್ವಲ್ಪ ನಿದ್ರೆಯ ಕೊರತೆ ಭಾದಿಸಿದೆ. ಎರಡು ಮೂರು ಬಾರಿ ಸ್ಟೋನ್  ಸಂಬಂಧಿ ಸರ್ಜರಿ ಆಗಿದೆ. ಶಾಲಾ ಜೀವನದಲ್ಲಿ ಮೇಳದ ಅನುಭವ ಇದ್ದುದರಿಂದ ಬೆಳಿಗ್ಗಿನ ತನಕ ನಿದ್ದೆ ಬಿಟ್ಟು ಅಭ್ಯಾಸ. ಹಾಗಾಗಿ ಕಾಲಮಿತಿ ಉತ್ತಮ ಎನಿಸಿದೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಹೇಳುವಷ್ಟು ದೊಡ್ಡ ಕಲಾವಿದನಲ್ಲ. ನನ್ನನ್ನೂ ಸೇರಿಸಿ ಬಹುತೇಕ ಕಲಾವಿದರೂ ಎಲ್ಲರೂ ಪ್ರಚಾರದ ಹುಚ್ಚಿಗೆ ಬಿದ್ದಿದ್ದಾರೆ ಹಾಗೂ ಪ್ರಚಾರ ತಪ್ಪಲ್ಲ ಅತಿರೇಖದ ಪ್ರಚಾರ ತಪ್ಪು ಅಷ್ಟೆ. ಕಿರಿಯ ಕಲಾವಿದರೂ ಹಿರಿಯ ಕಲಾವಿದರೊಂದಿಗಿನ ಒಡನಾಟ ಹಿತಿಮಿತಿಯೊಳಿದ್ದರೆ ಉತ್ತಮ. ಕೋಡಂಗಿ ವೇಷದಿಂದ ತೊಡಗಿ ಮುಖ್ಯ ಸ್ತ್ರೀ ವೇಷ, ಹೊಗಳಿಕೆ, ಪೀಠಿಕೆ ಸ್ತ್ರೀ ವೇಷ ಎಲ್ಲ ಮಾಡಿ ಬಂದರೂ ಕೂಡ ರಂಗವನ್ನೇರುವಾಗ ಪ್ರತೀ ದಿನ ಹೃದಯ ಬಡಿತ ಹೆಚ್ಚುವುದು. ಇವಾಗಿನ ಪರಿಸ್ಥಿತಿಯಲ್ಲಿ ಡಾಬುವಿನ ಎಡೆಯಲ್ಲಿ ಮೊಬೈಲ್ ಸಿಕ್ಕಿಸಿಕೊಂಡು ರಂಗಸ್ಥಳ ಏರುವ ಮಟ್ಟಿಗೆ ತಲುಪಿದೆ. ಮೊಬೈಲ್ ಯುಗ ಆದುದರಿಂದ ಮೊಬೈಲ್ ಲೋಕದಲ್ಲಿ ಕಲಾವಿದರು ಕಳೆದು ಹೋಗಿದ್ದಾರೆ (ಎಲ್ಲರಲ್ಲ). ಹಾಗಾಗಿ ಯಕ್ಷಗಾನವನ್ನು ಫ್ಯಾಶನ್ ಆಗಿ ಸ್ವೀಕರಿಸದೆ ಶಿಶ್ತು ನಿರಂತರ ಅಭ್ಯಾಸ ಕಲಾವಿದರ ಹಿಮ್ಮೇಳ, ಮುಮ್ಮೇಳದ ಕಲಾವಿದರ ಅನ್ಯೋನ್ಯತೆ ಹೆಚ್ಚಾಗಬೇಕು. ಕಿರಿಯ ಕಲಾವಿದರನ್ನು ಹಿರಿಯ ಕಲಾವಿದರು ಗೌರವದಿಂದ ಕಾಣಬೇಕು. ರಂಗದಲ್ಲಿ ಪ್ರೋತ್ಸಾಹ ನೀಡುವ ಪ್ರಯತ್ನ ಹಿರಿಯ ಕಲಾವಿದರೂ ಹಿಮ್ಮೇಳದವರೂ ಮಾಡಿದರೆ ಪ್ರದರ್ಶನ ಉತ್ತಮಗೊಳ್ಳುವುದು.




ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರು ಕಾಲಮಿತಿಯ ವ್ಯಾಪ್ತಿಯಲ್ಲಿ ಬಂಧಿತರಾಗಿದ್ದಾರೆ. ಪ್ರತೀ ಕಡೆ ಪ್ರದರ್ಶನಕ್ಕೂ ಜನಸಂಖ್ಯೆ ಹೆಚ್ಚಿದೆ. ಯಕ್ಷಗಾನ ವಿಶ್ವಗಾನವಾದದ್ದು ಸತ್ಯ. ಆದರೆ ಪ್ರೇಕ್ಷಕ ಒಬ್ಬ ಕಲಾವಿದನಿಗೆ ಸೀಮಿತವಾಗದೆ ಎಲ್ಲರನ್ನೂ ಸಮಾನ ರೀತಿ ಕಾಣುವಂತಾಗಾಲಿ. ತಾವು ಇಷ್ಟ ಪಟ್ಟವರ ಫೋಟೋ ತೆಗೆದು ವೀಡಿಯೋ ಮಾಡಿ ಮತ್ತೋರ್ವ ಹಿಮ್ಮೇಳ ಮುಮ್ಮೇಳದ ಕಲಾವಿದರು ಬರುವಾಗ ಎದ್ಧು ಹೋಗುವಂತಹ ಸ್ಥಿತಿ ಬಾರದಿರಲಿ. ಅಭಿಮಾನ ಇನ್ನೊಬ್ಬರಿಗೆ ನೋವು ತರಬಾರದೆನ್ನುವುದೇ ಉದ್ದೇಶ, ಎಲ್ಲರೂ ಸಮಾನರೇ.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲವುಗಳೇನು:-
ಪರಂಪರೆ ಮಾಯವಾಗದಿರಲಿ. ಅಭಿಮಾನ ವರ್ಗ ಹುಟ್ಟಿಕೊಂಡು ಅನ್ಯ ಕಲಾವಿದರಿಗೆ ದುಃಖವಾಗದಿರಲಿ. ಕಲೆ, ಕಲಾವಿದರನ್ನು ಕಾಣುವ ದೃಷ್ಟಿ ಬದಲಾಗಲೀ. ಕಾಲಮಿತಿಯ ವ್ಯಾಪ್ತಿಯೊಳಗೆ ಇರುವ ಯಕ್ಷಗಾನಕ್ಕೆ ಲೋಪವಾಗದಂತೆ ಕಲಾವಿದರು, ಪ್ರೇಕ್ಷಕರ ಪ್ರಯತ್ನ ಅಗತ್ಯ. ತಾಳ ಜ್ಞಾನವಿಲ್ಲದ ಗುರುಗಳು ಹುಟ್ಟಿಕೊಳ್ಳುತ್ತಿರುವುದು, ನಾಟ್ಯದರಿವಿಲ್ಲದ ಚಿಕ್ಕಮೇಳದ ಕಲಾವಿದರೂ ನವರಾತ್ರಿಯಲ್ಲಿ  ಮೆರವಣಿಗೆಯಲ್ಲಿ, ನಾಟಕಗಳಲ್ಲಿ , ಟ್ಯಾಬ್ಲೋಗಳಲ್ಲಿ  ಯಕ್ಷಗಾನ ಬತ್ತಲಾಗದಿರಲೀ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ನನ್ನ ಯೋಜನೆ ಏನಿಲ್ಲ. ಕೈ ಕಾಲು ಸರಿ ಇರುವ ತನಕ ಕಟೀಲು ಮೇಳದ ಸೇವೆ ಮಾಡಬೇಕೆನ್ನುವುದಷ್ಟೇ. ಮತ್ತೆ ಸದ್ಯಕ್ಕೆ ನನ್ನ ಯೂಟ್ಯೂಬ್ ವಾಹಿನಿಯ ಮುಖಾಂತರ ಯಕ್ಷಗಾನ ಹಾಗೂ ಇತರ ಕಲಾ ಕ್ಷೇತ್ರಗಳಲ್ಲಿ ತೊಡಗಿಕೊಂಡವರನ್ನು ನನ್ನ ಯೂಟ್ಯಬ್ ವಾಹಿನಿಯ ಮುಖಾಂತರ ಪರಿಚಯಿಸುವ ಆಸೆ ಇದೆ ಸದ್ಯ ಒಳ್ಳೆಯ ಪ್ರತಿಕ್ರಿಯೆ ಇದೆ.
ಕಡೆಯದಾಗಿ ಮಳೆಗಾಲದಲ್ಲಿ ಆಗುವಂತಹ ಅನೇಕ ಯಕ್ಷಗಾನಗಳಿಗೆ ಕರೆದ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಕೊಡಿಸುವ ಬದಲು ನಾವೆಲ್ಲ ಉದ್ಯೋಗದಲ್ಲಿದ್ದೇವೆ ಆದರೆ ಯಕ್ಷಗಾನವನ್ನ ನಂಬಿದ ಅನೇಕ ಬಡ ಕಲಾವಿದರೂ ಉದ್ಯೋಗವಿಲ್ಲದೇ ಮಳೆಗಾಲದಲ್ಲಿ ಮನೆಯಲ್ಲೇ ಇದ್ದಾರೆ. ಅಂತಹ ಕಲಾವಿದರನ್ನೂ ಗುರುತಿಸಿ ಅವರಿಗೂ ಅವಕಾಶ ಕೊಟ್ಟರೆ ಕೊಡುವ 1ಸಾವಿರ, 2ಸಾವಿರ ಅವರ ಒಂದು ವಾರದ ಜೀವನಕ್ಕೆ ಉಪಯೋಗವಾದೀತೆನ್ನುವ ಆಸೆ ಅಷ್ಟೆ. ಈ ಕುರಿತು ಆಯೋಜಕರು ಯೋಚಿಸಿ.

ಶಾಲಾ ದಿನಗಳಲ್ಲಿ ಕೊಲ್ಲಂಗಾನ ಮೇಳ, ತಳಕಳ ಮೇಳದಲ್ಲಿ ಅನುಭವಕ್ಕಾಗಿ ತಿರುಗಾಟ. ನಂತರ 2014ರಿಂದ ಕಟೀಲು ಮೇಳದಲ್ಲಿ ಪೂರ್ಣಪ್ರಮಾಣದ ಕಲಾವಿದನಾಗಿ ತಿರುಗಾಟ.



ಯಕ್ಷಗಾನ ಕೇತ್ರದಲ್ಲಿ ಸಾಧಕನಲ್ಲ ಹಾಗಾಗಿ ಪ್ರಶಸ್ತಿ ಸಿಕ್ಕಿಲ್ಲ.
ಆದರೂ ಯಕ್ಷಗಾನ ಮುಖವರ್ಣಿಕೆಯಲ್ಲಿ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
ಸನ್ಮಾನ:-
ಕಟೀಲು ಮೇಳದ ರಂಗಸ್ಥಳದಲ್ಲಿ ನಮ್ಮ ಊರಿನ ಶ್ರೀ  ಬಂಟಯಾನೆ ಇಷ್ಟ ದೇವತಾ ಕ್ಷೇತ್ರ ಕಲ್ಲಗುಂಡ ಚಿಬಿದ್ರೆಯಲ್ಲಿ ಕಟೀಲು ನಾಲ್ಕನೇ ಮೇಳದಲ್ಲಿ ಇದ್ದ ಸಂದರ್ಭದಲ್ಲಿ ಊರಿನ ಕಲಾವಿದ ಎಂದು ಗೌರವಾರ್ಪಣೆ.

ಹವ್ಯಾಸಗಳು:-
ಬರವಣಿಗೆ, ಕ್ರಿಕೆಟ್ ಇಷ್ಟದ ಕ್ರೀಡೆ. ವಿಶ್ವವಿದ್ಯಾಲಯದ ಕಾಲೇಜು ಮಟ್ಟದ  ಮಿಮಿಕ್ರಿ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ನಿರೂಪಣೆಯಲ್ಲಿ ಆಸಕ್ತಿ ಹಾಗೂ ಮಾಡುತ್ತೇನೆ. ಬೈಕ್ ರೈಡಿಂಗ್ ಇಷ್ಟ. ಮೀಡಿಯಾ ನನ್ನ ಆಸಕ್ತಿಯ ಕ್ಷೇತ್ರ ಹಾಗಾಗಿ "ಯಕ್ಷ ಇನ್ಫೋ ಕನ್ನಡ" ಯೂಟ್ಯಬ್ ಆರಂಭಿಸಿ ಮಾಹಿತಿದಾಯಕ ವೀಡಿಯೋ ಹಾಗೂ ಯಕ್ಷಗಾನ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವ ಸಣ್ಣ ಪ್ರಯತ್ನ.

ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ತಂದೆ, ತಾಯಿ, ಮನೆಯವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಸತೀಶ್ ಸಿ ಸಾಲ್ಯಾನ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395