ಯಕ್ಷ ಸಾಧಕರು 361

"ಸುನಾದ ಚತುರ"

ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯಲ್ಲಿ.
ಕೆ. ಸತ್ಯಪ್ರಕಾಶ್ ಸೋಮಯಾಜಿ ಹಾಗೂ ಶ್ರೀಮತಿ ಅನುರಾಧ ಇವರ ಮಗನಾಗಿ 19-03-1994ರಂದು ಶ್ರೀನಿವಾಸ ಸೋಮಯಾಜಿ ಅವರ ಜನನ. ಆಟೋಮೊಬೈಲ್ ಡಿಪ್ಲೊಮಾ ಇವರ ವಿದ್ಯಾಭ್ಯಾಸ.


ಸಣ್ಣ ವಯಸ್ಸಿನಲ್ಲಿ ತಂದೆಯವರು ಮನೆಯ ಹತ್ತಿರದಲ್ಲಿ ಆಗುವ ಯಕ್ಷಗಾನ ಬಯಲಾಟಗಳಿಗೆ ಇವರನ್ನು ಕರೆದುಕೊಂಡು ಹೋಗುತ್ತಿದ್ದರು, ಇದು ಯಕ್ಷಗಾನದ ಮೇಲೆ ಆಸಕ್ತಿ ಬೆಳೆಸಿತು. ಅದರಲ್ಲೂ ಚೆಂಡೆ, ಮದ್ದಳೆ ನುಡಿತ ಕೇಳುವುದೆಂದರೆ ಬಲು ಸಂತೋಷ, ಹಾಗಾಗಿ ಇವರಿಗೆ ಚೆಂಡೆ, ಮದ್ದಳೆ ಕಲಿಯುವ ಆಸಕ್ತಿ ಮೂಡಿತು ಎಂದು ಹೇಳುತ್ತಾರೆ ಶ್ರೀನಿವಾಸ.

ಯಕ್ಷಗಾನ ಗುರುಗಳು:-
ಗುರುರಾಜ್ ಭಟ್ ಇರುವೈಲ್,
ಹರಿನಾರಾಯಣ ಬೈಪಾಡಿತ್ತಾಯ.

ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು:-
ಅಡೂರ್ ಗಣೇಶ್ ರಾವ್, ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ ಪದ್ಯಾಣ.
ನೆಚ್ಚಿನ ಪ್ರಸಂಗಗಳು:-
ಎಲ್ಲಾ ಪ್ರಸಂಗಗಳು ನೆಚ್ಚಿನ ಪ್ರಸಂಗಗಳು ಅದ್ರಲ್ಲೂ ದೇವೀ ಮಹಾತ್ಮೇ, ದುಶ್ಯಾಸನ ವಧೆ, ಶ್ರೀ ಕೃಷ್ಣ ಪಾರಿಜಾತ, ಕರ್ಣ ಪರ್ವ.
ನೆಚ್ಚಿನ ಭಾಗವತರು:-
ದಿನೇಶ್ ಅಮ್ಮಣ್ಣಾಯ, ದಿ ಪ್ರಸಾದ್ ಬಲಿಪ, ಚಿನ್ಮಯ ಭಟ್ ಕಲ್ಲಡ್ಕ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದಿನ ಕಾಲದಲ್ಲಿ ಉತ್ತಮ ಯಕ್ಷಗಾನ ಪ್ರದರ್ಶನಗಳನ್ನು ಕೊಡಲು ಅವಕಾಶವಿದೆ. ಆದ್ದರಿಂದ ಪ್ರದರ್ಶನಗಳನ್ನು ಹಾಳು ಮಾಡದೆ ಮುಂದಿನ ಪೀಳಿಗೆಗೆ ಯಕ್ಷಗಾನದ ನಿಜಸ್ವರೂಪವನ್ನು ತಿಳಿಸುವಲ್ಲಿ ಅಗತ್ಯ ಶ್ರಮ ವಹಿಸುವುದು ಉತ್ತಮ ಎಂದು ನನ್ನ ಭಾವನೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ವೇಗವಾಗಿ ಬೆಳೆಯುತ್ತಿರುವ ಕಾಲಮಾನದಲ್ಲಿ ಪ್ರೇಕ್ಷಕರಿಗೆ ಯಕ್ಷಗಾನ ನೋಡುವ ಆಸಕ್ತಿ ಇದ್ದರೂ ಸಮಯದ ಅಭಾವ ಹೆಚ್ಚಾಗಿ ಕಾಣಿಸುತ್ತಾ ಇದೆ. ಹಾಗಾಗಿ ಪ್ರೇಕ್ಷಕರು ಯಕ್ಷಗಾನ ಪ್ರದರ್ಶನದೆಡೆಗೆ ಹೆಚ್ಚು ಒಲವನ್ನು ತೋರಿದರೆ ನಮ್ಮ ಸಂಸ್ಕೃತಿ, ಜ್ಞಾನ ಹಾಗೂ ಪೌರಾಣಿಕ ವಿಷಯಗಳನ್ನು ಅರಿಯಲು ಸುಲಭ ಸಾಧ್ಯ.



ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲವುಗಳೇನು:-
ಇಂದಿನ ಕಾಲಘಟ್ಟದಲ್ಲಿ ಹೆಚ್ಚಿನ ಪ್ರದರ್ಶನಗಳು ಕಾಲಮಿತಿಗೆ ಸೀಮಿತವಾಗಿದೆ. ಹಾಗಾಗಿ ಈ ಕಾಲಮಾನಕ್ಕೆ ಹೊಂದಿಕೊಂಡು ಕಲಾವಿದರಾದ ನಾವು ಗುಣಮಟ್ಟ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಪ್ರೇಕ್ಷಕರನ್ನು ಆಕರ್ಷಣೀಯವಾಗಿ ಉಳಿಸಿಕೊಳ್ಳಲು ಹಿಮ್ಮೆಳ ಹಾಗೂ ಮುಮ್ಮೆಳ ಕಲಾವಿದರು ಆದಷ್ಟು ಶ್ರಮ ಪಡುವುದು ಉತ್ತಮ.

ನೀವು ತಿರುಗಾಟ ಮಾಡುತ್ತಿರುವ ಕಟೀಲು ಮೇಳದಲ್ಲಿ ಅನೇಕ ಹಿರಿಯ ಹಾಗೂ ಕಿರಿಯ ಕಲಾವಿದರು ಇದ್ದಾರೆ, ಕಟೀಲು ಮೇಳದಲ್ಲಿ ತಿರುಗಾಟದ ಅನುಭವ:-
ನಾನು ತಿರುಗಾಟಕ್ಕೆ ಸೇರುವ ಮುನ್ನ ನನ್ನನ್ನು ರಂಗಕ್ಕೆ ತಯಾರಿಸಿದ್ದು ಮುಖ್ಯವಾಗಿ ಹಿರಣ್ಮಯ ಹಿರಿಯಡ್ಕ, ಒಂದು ರೀತಿಯಲ್ಲಿ ನನ್ನ ಇನ್ನೊಂದು ಗುರುಗಳೇ ಸರಿ. ಅವರನ್ನು ಇಲ್ಲಿ ಸ್ಮರಿಸಲೇಬೇಕು. ಕಟೀಲು ಮೇಳಕ್ಕೆ ಸೇರಿದ ನಂತರ ಮೇಳದ ಶಿಸ್ತು, ಪ್ರಸಂಗ ನಡೆಗಳ ಮಾಹಿತಿ ಹಾಗೂ ಹೆಚ್ಚಿನ ಅವಕಾಶಗಳನ್ನು ಕೊಟ್ಟು ಪ್ರೋತ್ಸಾಹ ಮಾಡಿದಂತಹ ಮೇಳದ ಪ್ರಧಾನ ಭಾಗವತರಾದಂತಹ ಅಂಡಾಲ ದೇವಿಪ್ರಸಾದ್ ಶೆಟ್ಟಿ ಹಾಗೂ ತಿರುಗಾಟದಲ್ಲಿ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹ ನೀಡಿದ ಪ್ರಧಾನ ಮದ್ದಳೆಗಾರರಾದ ಶ್ರೀಧರ ಪಡ್ರೆ ಮತ್ತು ಮೇಳದ ಎಲ್ಲಾ ಹಿರಿಯ, ಕಿರಿಯ ಸಹ ಕಲಾವಿದರಿಗೆ ನನ್ನ ಹೃದಯಾಂತರಾಳದ ಧನ್ಯವಾದಗಳು. ಒಬ್ಬ ಕಲಾವಿದ ಉತ್ತಮ ರೀತಿಯಲ್ಲಿ ಬೆಳೆಯಬೇಕಾದರೆ ಪ್ರೇಕ್ಷಕರು ತುಂಬಾ ಮುಖ್ಯ. ಅಂತಾ ಪ್ರೇಕ್ಷಕರಿಗೂ ಅನಂತ ಧನ್ಯವಾದಗಳು.
ಕಟೀಲು ಮೇಳದಲ್ಲಿ ತಿರುಗಾಟದ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಹೇಳುತ್ತಾರೆ ಶ್ರೀನಿವಾಸ.

ಯಕ್ಷರಂಗದಲ್ಲಿ ಮುಂದಿನ ಯೋಜನೆಗಳು:-
ಎಲ್ಲಾ ರೀತಿಯ ಪೌರಾಣಿಕ ಪ್ರಸಂಗ ನಡೆಗಳನ್ನು ಅಭ್ಯಸಿಸಿ ಉತ್ತಮ ಕಲಾವಿದನಾಗಬೇಕೆಂಬ ಆಕಾಂಕ್ಷೆ. ಕಟೀಲು ಭ್ರಮರಾಂಬೆಯ ಅನುಗ್ರಹ ಸದಾಕಾಲ ಎಲ್ಲರ ಮೇಲಿರಲಿ ಎಂದು ನನ್ನ ಪ್ರಾರ್ಥನೆ.

ಪ್ರವಾಸ, ಯಕ್ಷಗಾನ ವೀಕ್ಷಣೆ ಇವರ ಹವ್ಯಾಸಗಳು. ಭಾಗವತಿಕೆ ಮಾಡುವ ಹಾಗೂ ಕಲಿಯವ ಆಸಕ್ತಿಯು ಇದೆ ಎಂದು ಹೇಳುತ್ತಾರೆ ಶ್ರೀನಿವಾಸ.
ಸುಂಕದಕಟ್ಟೆ, ಮಂಗಳಾದೇವಿ, ಕಟೀಲು ಮೇಳದಲ್ಲಿ ಒಟ್ಟು 8 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.


ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ತಂದೆ, ತಾಯಿ, ಮನೆಯವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಶ್ರೀನಿವಾಸ ಸೋಮಯಾಜಿ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395