ಯಕ್ಷ ಸಾಧಕರು:- 364
"ಯಕ್ಷ ಕಲಾಪ್ರಿಯೆ"
ವೃತ್ತಿಯಲ್ಲಿ ಮುಂಬೈನ ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ಯಕ್ಷಗಾನ ಕಲೆಯ ಮೇಲೆ ಅಪಾರ ಅಭಿಮಾನ. ಕಲೆಯಲ್ಲಿ ನಾನು ಏನಾದ್ರೂ ಸಾಧನೆ ಮಾಡಬೇಕು ಎಂಬ ಹಂಬಲ. ದೂರದ ಮುಂಬೈನಲ್ಲಿ ಇದು ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ಇಂದು ತಮ್ಮ ಪ್ರತಿಭೆಯ ಮೂಲಕ ಗುರುತಿಸಿಕೊಂಡು ಕಲಾವಿದೆ ಸುಪ್ರಿಯಾ ಸುಬ್ರಮಣ್ಯ ಉಡುಪ.
ದಕ್ಷಿಣ ಕನ್ನಡ ಜಿಲ್ಲೆ ಬಜ್ಪೆಯ ಸುಬ್ರಹ್ಮಣ್ಯ ಉಡುಪ ಹಾಗೂ ದಿ. ಶಾಂತಿ ಲಕ್ಷ್ಮಿ ಉಡುಪ ಇವರ ಮಗಳಾಗಿ 18 ನವೆಂಬರ್ ರಂದು ಸುಪ್ರಿಯಾ ಇವರ ಜನನ. ಬ್ಯಾಚುಲರ್ ಇನ್ ಫೈನಾನ್ಸಿಯಲ್ ಮಾರ್ಕೆಟ್ (BFM), MCOM in Business management, ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಡಿಪ್ಲೊಮಾ ಪದವಿ ಇವರ ವಿದ್ಯಾಭ್ಯಾಸ. ಪ್ರಸ್ತುತ ಮುಂಬೈನಲ್ಲಿ Freight Consol International ಕಂಪನಿಯಲ್ಲಿ ಉದ್ಯೋಗ.
ಯಕ್ಷಗಾನ ಗುರುಗಳು:-
ನನ್ನ ಕಲಾ ಪಥವನ್ನು ದಾರಿದೀಪದಂತೆ ಬೆಳಗಿಸಿದ ಅನೇಕ ಗುರುಗಳ ಅನುಗ್ರಹ ಸಿಕ್ಕಿದೆ.
ನನ್ನಮ್ಮ ಶಾಂತಿ ಲಕ್ಷ್ಮಿ ಉಡುಪ, ಗೀತಾ ಎಲ್ ಭಟ್, ಸದಾನಂದ ಶೆಟ್ಟಿ ಕಟೀಲು, ರಾಕೇಶ್ ರೈ ಅಡ್ಕ.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ:-
ಅಮ್ಮನ ಗರ್ಭಾಂಭುದಿಯಲ್ಲಿ ಚಿಗುರೊಡೆಯುವ ಹೊತ್ತಿನಲ್ಲೇ ಗೆಜ್ಜೆಯ ಸದ್ದು ನನ್ನ ಮನಸ್ಸನ್ನು ಸ್ಪರ್ಶಿಸಿತ್ತು ಅನಿಸುತ್ತದೆ. ನನ್ನ ಅಮ್ಮ 3 ತಿಂಗಳ ಬಸುರಿ ಇರುವಾಗ ರಂಗಸ್ಥಳದಲ್ಲಿ ಗೆಜ್ಜೆ ಕಟ್ಟಿ ಯಕ್ಷಗಾನ ಮಾಡಿದರಂತೆ ಬಹುಶಃ ಅದೇ ನನ್ನೊಳಗಿನ ಕಲಾಸೂತ್ರಗಳನ್ನು ಮೊದಲ ಬಾರಿ ಜಾಗೃತಗೊಳಿಸಿದ ಕ್ಷಣ. ನನ್ನ ಕನಸುಗಳ ಶುಭಾರಂಭಕ್ಕೆ ಯಕ್ಷಗಾನವೇ ಸುಪ್ರಭಾತ. ನನ್ನ ಅಮ್ಮ ದಿ.ಶಾಂತಿಲಕ್ಷ್ಮಿ ಉಡುಪ ಯಕ್ಷಗಾನ ಕಲಾವಿದೆ. ನನ್ನ ಮಾವ ವಾಸುದೇವ ಭಟ್ ಎರ್ಮಾಳು ಯಕ್ಷಗಾನ ಭಾಗವತರು. ತಾಯಿಯ ಸೆರಗು ಹಿಡಿದು ಯಕ್ಷಗಾನಕ್ಕೆ ಹೋಗುತ್ತಾ ಇದ್ದ ಕ್ಷಣಗಳಲ್ಲಿ, ನನ್ನ ಒಳಗಿನ ಅಂತರಂಗದ ಕಲಾಪ್ರಜ್ಞೆ ದಿನೇದಿನೇ ಜಾಗೃತಿಯಾಗುತ್ತಿತ್ತು. ರಂಗದಲ್ಲಿ ನಡೆಯುತ್ತಿದ್ದ ಭಾವ, ರಾಗ, ತಾಳ ಎಲ್ಲಕ್ಕೂ ನನ್ನ ಕಾಲುಗಳು ಅರಿವಿಲ್ಲದೆ ಅಲ್ಲಾಡುತ್ತಿರುತ್ತವೆ. ಕಡಲ ತೀರದ ಭಾರ್ಗವರ ಮಾತಿನಂತೆ “ಕಲಾದೀಪ್ತಿ ಅಂತರಂಗದಲ್ಲಿ ತಪಸ್ವಿನಿ, ಬಹಿರಂಗದಲ್ಲಿ ತೇಜಸ್ವಿನಿ” ಎಂಬ ಪದಗಳು ನನ್ನೊಳಗಿಂದಲೇ ಹೌದು ಹೌದು ಎಂದು ಪ್ರತಿಧ್ವನಿಸುತ್ತಿದ್ದವು.
ಮುಂಬೈಯಲ್ಲಿ ಬೆಳೆದ ಕಾರಣ ನನಗೆ ಕನ್ನಡ ಚಿಕ್ಕ ವಯಸ್ಸಿನಲ್ಲಿ ಅರ್ಥವಾಗುತ್ತಾ ಇರಲಿಲ್ಲ. ಆದರೆ ಅಮ್ಮ ಯಕ್ಷಗಾನಕ್ಕೆ ಸಜ್ಜಾಗುವಾಗ, ಅಥವಾ ರಂಗದಿಂದ ಹಿಂದಿರುಗುವಾಗ, ನಾನು ಅಮ್ಮನ ಹತ್ತಿರ ಕುಳಿತು ಪ್ರಸಂಗಗಳ ಕಥೆಗಳನ್ನು ಕೇಳುವುದು ನನ್ನ ದಿನದ ದೊಡ್ಡ ಸಂತೋಷ.
ಪ್ರತಿ ಬೇಸಿಗೆಯೂ ಊರಿಗೆ ಹೋದಾಗ ನನ್ನ ಮೊದಲ ಬೇಡಿಕೆ — “ಮಾವ, ನನ್ನನ್ನು ಯಕ್ಷಗಾನಕ್ಕೆ ಕರೆದುಕೊಂಡು ಹೋಗಿ!” ಯಕ್ಷಗಾನ ನೋಡದೆ ಊರಿನಿಂದ ಹಿಂತಿರುಗುವುದೇ ಇರಲಿಲ್ಲ. ಬೆಳಗ್ಗೆ ತನಕ ಕುಳಿತೇ ನೋಡುತ್ತಿದ್ದ ಆ ರಂಗಪರ್ವಗಳು ನನ್ನ ಬಾಲ್ಯದ ಅತಿ ಸುಂದರ ನೆನಪುಗಳು. ಇಲ್ಲಿ ಮುಂಬೈಯಲ್ಲಿ ದೇವಸ್ಥಾನದ ಜಾತ್ರೆ ಇರುವಾಗ ಯಕ್ಷಗಾನದ ಸಿಡಿಗಳ ಅಂಗಡಿ ಬರುತ್ತಿತ್ತು. ಅಮ್ಮನಲ್ಲಿ ಹಠ ಮಾಡುತ್ತಾ ಇದ್ದೆ ಒಂದು ಎರಡು ಅಲ್ಲ, ಮೂರು–ನಾಲ್ಕು ಸಿಡಿಗಳು ನನಗೆ ಬೇಕು ಅಂತ! ಮನೆಗೆ ತಂದು ದಿನಂಪ್ರತಿ ನೋಡುತ್ತಿದ್ದೆ. ತಾಯಿಯ ರಕ್ತದಲ್ಲಿ ಹರಿದ ಯಕ್ಷಗಾನದ ಜತೆ, ಮಾವನ ಭಾಗವತೆಯ ಸೌಂದರ್ಯ ಜತೆ, ಸಿಡಿಗಳು, ರಾತ್ರಿಯ ಪ್ರದರ್ಶನಗಳು ಇವರೆಲ್ಲರೂ ಸೇರಿ ಕಲೆಯ ಮೇಲೆ ಆಸಕ್ತಿ ಬಂತು.
ನೆಚ್ಚಿನ ಪ್ರಸಂಗಗಳು:-
ಪೌರಾಣಿಕ ಪ್ರಸಂಗ ನನಗೆ ಇಷ್ಟ.
ಕೃಷ್ಣ ಪಾರಿಜಾತ, ದೇವಿ ಮಹಾತ್ಮೆ, ಮಾನಿಷಾದ, ರಕ್ತರಾತ್ರಿ.
ನೆಚ್ಚಿನ ವೇಷಗಳು:-
ಕಂಸ, ಶೂರ್ಪನಕಿ, ಭಸ್ಮಾಸುರ, ಮಹಿಷಾಸುರ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿ ತಯಾರಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲೇ ನಾನು ಪ್ರಸಂಗದ ಸಂಪೂರ್ಣ ಹಾದಿ ಹೇಗೆ ಸಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳುತ್ತೇನೆ. ಯಾವುದೇ ಪಾತ್ರವನ್ನು ಮೊದಲ ಬಾರಿ ನಿರ್ವಹಿಸುವಾಗ, ಅದರ ಕುರಿತು ಸಂಪೂರ್ಣ ಒಳನೋಟ ಪಡೆಯಲು ವಿಶೇಷವಾಗಿ ಸಮಯ ಕಳೆಯುತ್ತೇನೆ. ಪಾತ್ರದ ಸಂದರ್ಭ, ಸ್ವಭಾವ, ಇತರ ಪಾತ್ರಗಳೊಂದಿಗೆ ಅದರ ಸಂಭಾಷಣೆ, ಇವೆಲ್ಲವನ್ನು ಆಳವಾಗಿ ತಿಳಿಯುವ ಪ್ರಯತ್ನ ಮಾಡುತ್ತೇನೆ. ಪದ್ಯಗಳನ್ನು ಬಾಯಿಪಾಠ ಮಾಡುವುದು, ಪಾತ್ರಕ್ಕೆ ತಕ್ಕ ನಾಟ್ಯಚಲನೆಗಳನ್ನು ಕಲಿಯುವುದು, ಹಿರಿಯ ಕಲಾವಿದರು ಮತ್ತು ಗುರುಗಳಿಂದ ಮಾರ್ಗದರ್ಶನ ಕೇಳಿ ಅಭ್ಯಾಸವನ್ನು ಮಾಡುತ್ತೇನೆ ಪ್ರಸಂಗದ ಪಾತ್ರವನ್ನು ಯಾರ್ಯಾರು ಹೇಗೆ ನಿರ್ವಹಿಸಿದ್ದಾರೆ ಎಂದು ೨_೩ ಕಲಾವಿದರ ಪ್ರಸ್ತುತಿಯನ್ನು ಯೂ ಟ್ಯೂಬ್/ವೀಡಿಯೋ ಮೂಲಕ ನೋಡುತ್ತೇನೆ ಸಹ ಕಲಾವಿದರಲ್ಲಿ ಆಟ ಚಂದ ಮಾಡಲು ಹೇಗೆ ಸಾಗುವ ಎಂಬುದಾಗಿ ಚರ್ಚೆ ಮಾಡುತ್ತೇನೆ. ಸಹ ಕಲಾವಿದರೊಂದಿಗೆ ಚರ್ಚಿಸಿ, ಪರಸ್ಪರ ಪಾತ್ರಗಳಿಗೆ ಹೊಂದಿಕೊಳ್ಳುವ ರೀತಿ, ವೇದಿಕೆಯ ಮೇಲೆ ಆಟವನ್ನು ಸುಗಮವಾಗಿ ಸಾಗಿಸುವ ಬಗ್ಗೆ ಚರ್ಚೆ ಮಾಡುತ್ತೇನೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇತ್ತೀಚಿನ ದಿನಗಳಲ್ಲಿ ಯಕ್ಷಗಾನಕ್ಕೆ ಅಪಾರ ಪ್ರಸಿದ್ಧಿ ಸಿಕ್ಕಿದೆ. ನಾನು ಅಭಿಪ್ರಾಯ ಹೇಳುವಷ್ಟು ದೊಡ್ಡವಳಲ್ಲ, ಆದರೆ ಕಲೆಯನ್ನು ಅದರ ಮೂಲ ರೂಪದಲ್ಲೇ ಕಲಿತು, ಅದರ ಶಿಸ್ತಿನೊಂದಿಗೆ ಮುಂದುವರಿಸ್ತಾ ಹೋಗಬೇಕು ಎನ್ನುವುದು ನನ್ನ ದೃಢ ನಂಬಿಕೆ.
ಯಾವ ಕಾಲದಲ್ಲಾದರೂ “ಇಂದಿಗಿಂತ ಮುಂಚೆ ಚಂದ, ಈಗ ಎಲ್ಲ ಹಾಳಾಗಿದೆ” ಎನ್ನುವ ಮಾತು ಕೇಳಿಬರುತ್ತಲೇ ಇರುತ್ತದೆ. ಒಳ್ಳೆಯದೂ, ಕೆಟ್ಟದೂ ಹಿಂದೆ ಇದ್ದಂತೆ ಈಗಲೂ ಇದೆ. ಅದರಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ.
ಆದರೆ ನನ್ನ ಗಮನಕ್ಕೆ ಬಿದ್ದ ಒಂದು ಮಹತ್ತರ ಬೆಳವಣಿಗೆ ಏನೆಂದರೆ — ಹಿಂದೆ ಯಕ್ಷಗಾನ ಕಲಾವಿದನನ್ನು “ಆಟದವನು” ಎಂಬ ತಾತ್ಸಾರ ಭಾವದಿಂದ ನೋಡುತ್ತಿದ್ದರೆ, ಇಂದಿನ ಸಮಾಜದಲ್ಲಿ “ಯಕ್ಷಗಾನ ಕಲಾವಿದ” ಎಂಬ ಗೌರವದ ಸ್ಥಾನ ದೊರೆತಿದೆ. ಇದು ಯಕ್ಷಗಾನದ ನಿಜವಾದ ಸುವರ್ಣಯುಗ ಎಂದು ಹೇಳಬಹುದು. ಉನ್ನತ ವಿದ್ಯಾಭ್ಯಾಸ ಪಡೆದವರು, ಉದ್ಯೋಗದಲ್ಲಿ ದೊಡ್ಡ ಸ್ಥಾನದಲ್ಲಿರುವವರು, ಮಹಿಳೆಯರು, ಮಕ್ಕಳು ಎಲ್ಲರೂ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದಾರೆ. ಯಕ್ಷಗಾನ ಕಲಿಯುವವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಿದೆ. ಪ್ರೇಕ್ಷಕರ ಸಂಖ್ಯೆಯೂ ದಿನೇ ದಿನೇ ಏರುತ್ತಿದೆ. ಯಕ್ಷಗಾನ ಕುರಿತು ಅನೇಕ ಸಂಶೋಧನೆಗಳು, ವಿಚಾರಪೂರ್ಣ ಪುಸ್ತಕಗಳು ಲಭ್ಯವಾಗುತ್ತಿವೆ. ಇವೆಲ್ಲವೂ ಕಲೆಯ ಬೆಳವಣಿಗೆಗೆ ತುಂಬಾ ಧನಾತ್ಮಕ ಸೂಚನೆಗಳು. ಆದರೆ ಕೆಲವು ವಿಷಯಗಳಲ್ಲಿ ಯಕ್ಷಗಾನ ದಾರಿ ತಪ್ಪುತ್ತಿರುವಂತೆಯೂ ಕಾಣುತ್ತದೆ. ವೇಷ ಹಾಕಿ ಸಿನೆಮಾ ಹಾಡಿಗೆ ನಾಟ್ಯ ಮಾಡುವುದು ಇದು ಕಲೆಗೆ ದೊಡ್ಡ ಹಾನಿ. ಯಕ್ಷಗಾನದ ಮೂಲರೂಪ, ಅದರ ಮೌಲ್ಯ, ಅದರ ಸಾಂಪ್ರದಾಯಿಕತೆ ಇವು ಉಳಿಯಬೇಕಾದವಷ್ಟೇ ಉಳಿಯಬೇಕು.
ಒಟ್ಟಿನಲ್ಲಿ, ಯಕ್ಷಗಾನದ ಬೆಳಕು ಇಂದು ಪ್ರಬಲವಾಗಿ ಹೊಳೆಯುತ್ತಿದ್ದರೂ, ಅದರ ಮೂಲ ಪರಂಪರೆಯ ದೀಪ ನಾವೇ ಕೈಯಲ್ಲಿ ಹಿಡಿದು ಕಾಪಾಡಬೇಕು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ಯಕ್ಷಗಾನ ಪ್ರೇಕ್ಷಕರು ಕಲೆಯನ್ನು ಅರ್ಥಮಾಡಿಕೊಂಡು, ಗೌರವದಿಂದ ನೋಡುವವರು. ಡಿಜಿಟಲ್ ಯುಗದಲ್ಲೂ ರಂಗವನ್ನು ಬಿಟ್ಟು ಹೋಗದೇ ಕಲೆಗೆ ಬೆಂಬಲ ನೀಡುತ್ತಿರುವ ಈ ಪ್ರೇಕ್ಷಕರೇ ಯಕ್ಷಗಾನದ ನಿಜವಾದ ಬಲಸ್ತಂಭ.
ಇಂದು ಯಕ್ಷಗಾನ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಈ ಪ್ರೇಕ್ಷಕರನ್ನು ಸರಳವಾಗಿ ಮೂರು ವರ್ಗಗಳಿಗೆ ವಿಭಾಗಿಸಬಹುದು:
1. ಯಕ್ಷಗಾನದ ಆಳವಾದ ಜ್ಞಾನ ಹೊಂದಿರುವ ಪ್ರಜ್ಞಾವಂತ ಪ್ರೇಕ್ಷಕರು
2. ಕಲೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದರೂ ಕುತೂಹಲದಿಂದ ಬರುವವರು
3. ನಿರ್ದಿಷ್ಟ ಕಲಾವಿದ ಅಥವಾ ಮೇಳದ ಅಭಿಮಾನಿಗಳಾಗಿರುವ ಪ್ರೇಕ್ಷಕರು
ಯಾರು ಬಂದರೂ ಯಕ್ಷಗಾನದ ಬೆಳವಣಿಗೆಗೆ ಪ್ರತಿಯೊಬ್ಬರ ಅನುಗ್ರಹವೂ ಅಗತ್ಯ.
ಸಣ್ಣ ಪಾತ್ರವಾಗಿದ್ದರೂ ಅಚ್ಚುಕಟ್ಟಾಗಿ, ಸಮರ್ಪಕವಾಗಿ ನಿರ್ವಹಿಸುವ ಕಲಾವಿದರಿಗೆ ಕೂಡ ಪ್ರೇಕ್ಷಕರು ಗೌರವ ನೀಡುವುದು ಬಹಳ ಮುಖ್ಯ. ಪ್ರತಿಪಾತ್ರವೂ ಯಕ್ಷಗಾನದ ಅಂಗ ಅದರ ಸಂಪೂರ್ಣತೆಗೆ ಅವುಗಳ ಪಾತ್ರ ಅನಿವಾರ್ಯ.
ಒಟ್ಟಿನಲ್ಲಿ, ರಂಗದ ಮುಂದೆ ಕುಳಿತ ಪ್ರೇಕ್ಷಕರೇ ಈ ಕಲೆಯ ನಿಜವಾದ ಜೀವಸ್ವರೂಪ.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ನೀಲವು:-
ಯಕ್ಷಗಾನದ ಮೂಲ ಪಾರಂಪರ್ಯ ಮತ್ತು ಅದರ ಸಂಪ್ರದಾಯಶೈಲಿಯನ್ನು ಉಳಿಸಿ ಬೆಳೆಸುವುದು ನನ್ನ ಮೊದಲ ಆದ್ಯತೆ.
ಮಹಿಳಾ ಕಲಾವಿದರಿಗೆ ಹೆಚ್ಚಿನ ವೇದಿಕೆ ಮತ್ತು ಅವಕಾಶ ಒದಗಿಸುವುದು, ಮಹಿಳೆಯರು ರಂಗಕ್ಕೆ ಬಂದಾಗ ಯಕ್ಷಗಾನದ ವ್ಯಾಪ್ತಿಯೂ, ವೈವಿಧ್ಯವೂ ಹೆಚ್ಚುತ್ತದೆ ಎಂದು ನಾನು ನಂಬುತ್ತೇನೆ. ಕಲೆಯ ಶಿಸ್ತು, ತತ್ವ, ಗೌರವ ಇವು ಉಳಿಯಬೇಕು ಎಂಬುದು ನನ್ನ ಇನ್ನೊಂದು ದೃಢ ನಿಲುವು. ಯಕ್ಷಗಾನದ ವೇಷ, ಸಂಗೀತ, ನಾಟ್ಯ ಎಲ್ಲವೂ ತಮ್ಮತನದಲ್ಲಿ ಉಳಿಯಬೇಕೆಂದು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ.
ಒಟ್ಟಿನಲ್ಲಿ, ಯಕ್ಷಗಾನವನ್ನು ಕೇವಲ ಪ್ರದರ್ಶನವಷ್ಟೆಂದು ನೋಡುವುದಲ್ಲ; ಅದರ ಮೂಲ ಮೌಲ್ಯಗಳನ್ನು ಕಾಪಾಡಿ, ಹೊಸ ಪೀಳಿಗೆಗೆ ಪರಿಚಯಿಸಿ, ಎಲ್ಲರಿಗೂ ಆಕರ್ಷಕವಾಗುವಂತೆ ಬೆಳಸುವುದು ನನ್ನ ಕನಸು.
ಮುಂಬೈನಲ್ಲಿ ಯಕ್ಷಗಾನ ಕಲೆಗೆ ಯಾವ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಾರೆ ಪ್ರೇಕ್ಷಕರು:-
ಮುಂಬೈಯಲ್ಲಿ, ಯಕ್ಷಗಾನವನ್ನು ನೋಡುವ ಪ್ರೇಕ್ಷಕರು ಹೆಚ್ಚಿನವರು ತಮ್ಮ ಊರು, ತಮ್ಮ ಸಂಸ್ಕೃತಿ, ತಮ್ಮ ನೆಲವನ್ನು ನೆನಪಿಸಿಕೊಳ್ಳುವ ಆಸೆಯಿಂದ ನೋಡಲು ಬರುತ್ತಾರೆ. ದೂರದ ನಗರದಲ್ಲಿ ಕೆಲಸ-ಬಾಳಿನ ಒತ್ತಡಗಳ ನಡುವೆ, ಯಕ್ಷಗಾನವೇ ಅವರಿಗೆ ತಾಯಿ ನೆಲದ ಸುಗಂಧ. ಆದ್ದರಿಂದ ಇಲ್ಲಿ ಕಲಾವಿದನಿಗೆ ಸಿಗುವ ಪ್ರೋತ್ಸಾಹ ಭಾವನಾತ್ಮಕ ಮತ್ತು ಅಭಿಮಾನಪೂರ್ಣ.
ಪ್ರದರ್ಶನಕ್ಕೆ ಬರುವ ಜನರು ಕೇವಲ ಕಲೆಯನ್ನು ನೋಡುವುದಲ್ಲ; ತಮ್ಮ ನೆಲ, ತಮ್ಮ ಜನ, ತಮ್ಮ ಪರಂಪರೆಯನ್ನು ಮತ್ತೆ ಕಾಣುವ ಹಂಬಲದಿಂದ ಬರುತ್ತಾರೆ.
ಇಲ್ಲಿ ಕಲಾವಿದನಿಗೆ 'ನಮ್ಮ ಊರಿನ ಪ್ರತಿಭೆ' ಎಂದು ಹೆಮ್ಮೆಯಿಂದ ವಿಶೇಷ ಗೌರವ ಕೊಡುತ್ತಾರೆ. ಇಲ್ಲಿಯ ಹಲವು ಯಕ್ಷಗಾನ ಸಂಸ್ಕೃತಿ ಸಂಘಟನೆಗಳು, ಭಕ್ತ ಸಮಿತಿಗಳು, ದೇವಸ್ಥಾನಗಳು ವರ್ಷಪೂರ್ತಿ ಯಕ್ಷಗಾನಗಳನ್ನು ಆಯೋಜಿಸುತ್ತವೆ. ಇದರಿಂದ ಕಲಾವಿದರಿಗೆ ವೇದಿಕೆ ನಿರಂತರವಾಗಿ ಸಿಗುತ್ತದೆ.
ಊರಿನಿಂದ ಯಾವ ಮೇಳ ಬಂದರೂ, ಯಾವ ಕಲಾವಿದರಾದರೂ ಮುಂಬೈಯಲ್ಲಿ ಪ್ರೇಕ್ಷಕರು ತುಂಬಾ ಉತ್ಸಾಹದಿಂದ ಸ್ವಾಗತಿಸುತ್ತಾರೆ. ನಾನು ಕೂಡ ಹಲವಾರು ಬಾರಿ ಆಫೀಸಿನಲ್ಲಿ ಅರ್ಧ ದಿವಸ ಕೆಲಸ ಮುಗಿಸಿ, ಯಕ್ಷಗಾನ ನೋಡಲು ಧಾವಿಸಿದ್ದು ಇದೆ.
ಇಂತಹ ಒಗ್ಗಟ್ಟು ಮತ್ತು ಉತ್ಸಾಹವೇ ಇಲ್ಲಿ ಇರುವ ಪ್ರೇಕ್ಷಕರ ದೊಡ್ಡ ವೈಶಿಷ್ಟ್ಯ.
ಒಟ್ಟಿನಲ್ಲಿ "ಮುಂಬೈ ಪ್ರೇಕ್ಷಕರು ಕಲೆಯನ್ನು ನೋಡುವುದಕ್ಕೆ ಮಾತ್ರ ಬರುವವರಲ್ಲ ಅವರು ಯಕ್ಷಗಾನವನ್ನು ಜೀವಂತವಾಗಿಡಲು, ಬೆಳೆಸಲು, ಕಾಪಾಡಲು ಬರುತ್ತಾರೆ.
ಸನ್ಮಾನ ಹಾಗೂ ಪ್ರಶಸ್ತಿ:-
♦️ ಕಲಾ ಸಿರಿಮಣಿ ಪ್ರಶಸ್ತಿ
♦️ ತೌಳವ ಸೀರಿ ಪ್ರಶಸ್ತಿ
♦️ ಭ್ರಮರ ಚೇತನ ಪ್ರಶಸ್ತಿ
♦️ ಕಲಾ ರತ್ನ ರಾಜ್ಯ ಪ್ರಶಸ್ತಿ
♦️ ಕರ್ನಾಟಕ ಕಲಾಶ್ರೀ ಪ್ರಶಸ್ತಿ
♦️ ಕರ್ನಾಟಕ ಚೇತನ ಪ್ರಶಸ್ತಿ
ಯಕ್ಷಗಾನ ಹೊರತಾಗಿ ಇವರಿಗೆ ಬರವಣಿಗೆ ಮತ್ತು ನಾಟಕದಲ್ಲಿ ಅಪಾರ ಆಸಕ್ತಿ ಇದೆ.
ಗುರುಗಳಾದ ವಿಜಯ್ ಕುಮಾರ್ ಶೆಟ್ಟಿ (ಕಲಾ ಜಗತ್ತು, ಮುಂಬೈ), ಅಶೋಕ್ ಕುಮಾರ್ ಕೊಡ್ಯಡ್ಕ (ಕೊಡ್ಯಡ್ಕ ಕ್ರಿಯೇಷನ್ಸ್) ಹಾಗೂ ಕರುಣಾಕರ್ ಕೋಟ್ಯಾನ್ ಕಾಪು (ಅಭಿನಯ ಮಂಟಪ, ಮುಂಬೈ), ಸಾದಯಾ ಇವರ ನಿರ್ದೇಶನ ಮತ್ತು ಪ್ರೋತ್ಸಾಹದಿಂದ ಹಲವು ನಾಟಕಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಇವರ ಮಾರ್ಗದರ್ಶನದಲ್ಲಿ ನಾಟಕ ರಂಗದ ನವೀನ ಅನುಭವಗಳನ್ನು ಅರಿತುಕೊಂಡಿದ್ದೇನೆ.
ಮುಂಬೈಯಲ್ಲಿ "ಚಿಣ್ಣರ ಬಿಂಬ" ಸಂಸ್ಥೆಯಲ್ಲಿ ಕನ್ನಡವನ್ನು ಕಲಿತು ಈಗ ಕನ್ನಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುವುದು ನನಗೆ ವಿಶೇಷ ಹರ್ಷ.
ರೂವಾರಿ ಪ್ರಕಾಶ್ ಭಂಡಾರಿ ಅವರ ನೆರವಿನಿಂದ ಮರಾಠಿ ಮಣ್ಣಿನಲ್ಲೇ ಕನ್ನಡವನ್ನು ಕಲಿತೆ.
ಡಾ.ಪೂರ್ಣಿಮಾ ಶೆಟ್ಟಿ ಹಾಗೂ ಅನಿತಾ ಶೆಟ್ಟಿ ಅವರ ಪ್ರೇರಣೆಯಿಂದ ಕನ್ನಡ ಭಾಷೆಯ ಮೇಲೆ ಹೆಚ್ಚಿದ ಪ್ರೀತಿ ಹಾಗೂ ಗೌರವ, ಕ್ರಮೇಣ ನನ್ನಲ್ಲಿ ಬರವಣಿಗೆ ಮೇಲೆಯೂ ವಿಶೇಷ ಆಸಕ್ತಿಯನ್ನು ಬೆಳೆಸಿತು.
ಸಾಂಸ್ಕೃತಿಕ ಕ್ರಿಯಾಶೀಲತೆಯಲ್ಲಿ ತೊಡಗುವುದು, ಮಕ್ಕಳಿಗೆ ಕನ್ನಡ ಮತ್ತು ಕಲೆ ಪರಿಚಯಿಸುವುದು, ನಾಟಕ, ಯಕ್ಷಗಾನ, ಬರವಣಿಗೆ ನನ್ನ ಹವ್ಯಾಸಗಳೇ ಅಲ್ಲ ಅವು ನನ್ನ ವ್ಯಕ್ತಿತ್ವದ ನೆಲೆಯೂ ಆಗಿವೆ ಎಂದು ಹೇಳುತ್ತಾರೆ ಸುಪ್ರಿಯಾ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಮಕ್ಕಳಿಗಾಗಿ ಇಂಗ್ಲಿಷ್/ ಕನ್ನಡದಲ್ಲಿ ಯಕ್ಷಗಾನದ ಕುರಿತು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿರುವ ಪುಸ್ತಕವನ್ನು ಬರೆಯುವ ಆಸೆ ಇದೆ. ಇದರ ಜೊತೆಗೆ, ರಂಗದಲ್ಲಿ ಹೊಸ ಪಾತ್ರಗಳನ್ನು ಕಲಿತು, ಇನ್ನಷ್ಟು ವಿಭಿನ್ನ ಪ್ರಸಂಗಗಳಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ.
ಹಾಗೆಯೇ ದೇವರ ಕೃಪೆಯಿಂದ ಮುಂದೆ ಯಾವುದಾದರೂ ಯಕ್ಷಗಾನವನ್ನು ನಾನು ಸ್ವತಃ ಆಯೋಜಿಸಿ, ಕಲಾವಿದರಿಗೆ ವೇದಿಕೆ ಕಲ್ಪಿಸುವ ಆಸೆ ಇದೆ ಎಂದು ಹೇಳುತ್ತಾರೆ ಸುಪ್ರಿಯಾ.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಸುಪ್ರಿಯಾ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment