ಯಕ್ಷ ಸಾಧಕರು 365

"ಯಕ್ಷ ಕಲಾಶ್ರಿತ"

ಇವರು ಹುಟ್ಟಿದ್ದು ಮುಂಬೈನಲ್ಲಿ. ಬ್ಯಾಚುಲರ್ ಇನ್ ಮ್ಯಾನೇಜ್ಮೆಂಟ್ ಸ್ಟಡೀಸ್ ಇವರ ವಿದ್ಯಾಭ್ಯಾಸ. ಯಕ್ಷಗಾನ ಕಲೆಗೆ ಆಕರ್ಷಿತರಾಗಿ ಕಳೆದ 9 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿರುವ ಕಲಾವಿದ ರಕ್ಷಿತ್ ಕೃಷ್ಣಪ್ಪ ಪೂಜಾರಿ.

23.09.1996ರಂದು ಕೃಷ್ಣಪ್ಪ ಪೂಜಾರಿ ಮತ್ತು ವಿನೋದ ಇವರ ಮಗನಾಗಿ ರಕ್ಷಿತ್ ಕೃಷ್ಣಪ್ಪ ಪೂಜಾರಿ ಅವರ ಜನನ. ಗೋವಿಂದ ಸಪಲಿಗ, ಪ್ರಭಾಕರ ಕುಂದರ್ ಇವರ ಯಕ್ಷಗಾನ ಗುರುಗಳು.




ನೆಚ್ಚಿನ ಪ್ರಸಂಗಗಳು:-
ಪೌರಾಣಿಕ ಹಿನ್ನೆಲೆಯ ಎಲ್ಲಾ ಪ್ರಸಂಗಗಳು ನನಗೆ ಇಷ್ಟ. ಈ ಪ್ರಸಂಗಗಳಿಂದ ನಮಗೆ ಪುರಾಣ ಜ್ಞಾನ ವೃದ್ಧಿಯಾಗಲು ಸಹಕಾರಿಯಾಗುತ್ತದೆ.
ನೆಚ್ಚಿನ ವೇಷಗಳು:-
ನಾನು ಮಾಡಿದ ಹಾಗೂ ಇನ್ನು ನನಗೆ ದೊರಕುವ ಎಲ್ಲಾ ವೇಷಗಳು ನನಗೆ ನೆಚ್ಚಿನ ವೇಷಗಳು. ಭಾವನಾತ್ಮಕ ಪಾತ್ರಗಳನ್ನು ವಹಿಸಲು ನನಗೆ ಆಹ್ಲಾದಕರ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಯಕ್ಷಗಾನ ರಂಗದಲ್ಲಿ ಯಾವುದೇ ಪಾತ್ರ ವಹಿಸಲು ಪೂರ್ವ ಸಿದ್ಧತೆ ಅಗತ್ಯ. ಹುಟ್ಟಿ ಬೆಳೆದದ್ದು ಮುಂಬೈಯಾದ್ದರಿಂದ  ಮೊದಲಿಗೆ ಕನ್ನಡ ಓದಲು ಮತ್ತು ಬರೆಯಲು ಬಾರದ ಕಾರಣ ಇಂಗ್ಲಿಷ್ ನಲ್ಲಿ ಅರ್ಥವನ್ನು ಅನುವಾದಿಸಿ ಕಲಿಯುತ್ತಾ, ಕನ್ನಡ ಭಾಷೆಯನ್ನು ಕಲಿತೆ. ಪ್ರಸಂಗ ಪುಸ್ತಕವನ್ನು ನೋಡಿ ಪ್ರಸಂಗ ನಡೆಗಳನ್ನರಿತು ಸಿದ್ಧವಾಗುತ್ತೇನೆ. ಹಿರಿಯ ಕಲಾವಿದರಲ್ಲಿ ನನಗೆ ಲಭಿಸಿದ ಪಾತ್ರದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತೇನೆ. ಅದಲ್ಲದೆ ತೆಂಕುತಿಟ್ಟಿನ ಹಿರಿಯ ಹಾಸ್ಯಗಾರರಾದ ಶ್ರೀ ರವಿಶಂಕರ ವಳಕ್ಕುಂಜರವರು ಬರೆದ ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು ಸಿದ್ಧತೆ ಮಾಡುತ್ತೇನೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಇಂದು ಜಾಗತಿಕ ಮಟ್ಟಕ್ಕೆ ಹಬ್ಬಿ ಎಲ್ಲಾ ವರ್ಗದ ಜನರಿಂದ ಪ್ರಶಂಸೆಗೊಳಗಾಗಿದೆ. ಆರ್ಥಿಕ ಪರಿಸ್ಥಿತಿಯಲ್ಲಿಯೂ ಸಹ ಉನ್ನತಮಟ್ಟವನ್ನು ಏರಿ ಬಹಳಷ್ಟು ಹಿರಿಯ - ಕಿರಿಯ ಕಲಾವಿದರಿಗೆ ಜೀವನಕ್ಕೆ ಆಧಾರವಾಗಿದೆ.





ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನ ಕ್ಷೇತ್ರದಲ್ಲಿ ಪ್ರೇಕ್ಷಕರ ಸಂಖ್ಯೆ ಅಧಿಕವಾದದ್ದು ಬಹಳ ಸಂತೋಷ. ಪ್ರೇಕ್ಷಕರು ಎಲ್ಲಾ ಕಲಾವಿದರನ್ನು ಒಂದೇ ಸಮಾನವಾಗಿ ಮುನ್ನಡೆಸುತ್ತ ಬರಬೇಕು. ಕಿರಿಯ ಕಲಾವಿದರನ್ನು ಪ್ರೋತ್ಸಾಹಿಸಿ, ಅವರ ಸಾಧನೆಗೆ ಪೂರಕವಾಗಬೇಕು.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:- ಯಕ್ಷಗಾನ ಪರಂಪರೆಯನ್ನು ಆಧಾರವಾಗಿಟ್ಟುಕೊಂಡು ಸಮಯೋಚಿತವಾದ ಬದಲಾವಣೆಗಳನ್ನು ಅಳವಡಿಸಿಕೊಂಡು ಪಾತ್ರದ ಘನತೆಯನ್ನು ಉಳಿಸಿ ಪ್ರದರ್ಶನ ನೀಡುವುದು ನನ್ನ ನಿಲುವು.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:- ಯಕ್ಷರಂಗದಲ್ಲಿ ನನಗೆ ದೊರೆತ ಎಲ್ಲಾ ಪಾತ್ರಗಳನ್ನು ವಹಿಸಿ, ಇನ್ನಷ್ಟು ವೃದ್ಧಿಗೊಳಿಸಿ, ಸಾಧನೆ ಮಾಡಬೇಕು.

ಮೊದಲಾಗಿ ಹುಟ್ಟೂರಾದ ಮುಂಬೈಯಲ್ಲಿ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ, ಘಾಟ್ಕೋಪರ್, ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ, ಸಾಂತಕ್ರೂಸ್ ಮತ್ತು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ, ಸಾಕಿನಾಕಯಲ್ಲಿ ಹವ್ಯಾಸಿ ಕಲಾವಿದನಾಗಿ ಪ್ರಾರಂಭಿಸಿದೆ. ಮುಂದೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಮೇಳದಲ್ಲಿ ತಿರುಗಾಟ ಮಾಡಿದ ಅನುಭವ.

ಸನ್ಮಾನ ಹಾಗೂ ಪ್ರಶಸ್ತಿ:-
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರ, ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್, ಕಣಜಾರು ಇದರ ವತಿಯಿಂದ ದೊರೆತ ನಮ್ಮೂರ ಸಾಧಕ ಪ್ರಶಸ್ತಿ.‌ ಅದಲ್ಲದೆ ಯಕ್ಷಗಾನ ರಂಗದಲ್ಲಿ ನಾನು ವಹಿಸಿದ ಪಾತ್ರವನ್ನು ಗುರುತಿಸಿ ನನ್ನನ್ನು ಪ್ರಶಂಸಿವುದೂ ಕೂಡ ಒಂದು ಪ್ರಶಸ್ತಿಯೆಂದು ಭಾವಿಸುತ್ತೇನೆ.

ಹವ್ಯಾಸಗಳು:-
ಭರತನಾಟ್ಯ, ನಾಟಕ, ಡ್ರಾಯಿಂಗ್, ಯುಟ್ಯೂಬ್.


ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ತಂದೆ, ತಾಯಿ, ಮನೆಯವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ರಕ್ಷಿತ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395