ಯಕ್ಷ ಸಾಧಕರು 366

"ಯಕ್ಷ ಕಲಾದರ್ಶಿನಿ"

ವೃತ್ತಿಯಲ್ಲಿ ಇನ್ಫೋಸಿಸ್ ಕಂಪನಿಯಲ್ಲಿ ಉದ್ಯೋಗ. ಯಕ್ಷಗಾನ ಕಲೆಯ ಮೇಲೆ ಅಪಾರ ಅಭಿಮಾನ. ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ಸಾಧನೆ ಮಾಡುತ್ತಾ ಯಕ್ಷ ಶಿಕ್ಷಕಿಯಾಗಿ ಗುರುತಿಸಿಕೊಂಡಿರುವ ಕಲಾವಿದೆ ರಶಿತಾ ಪ್ರಸಾದ್ ಶೆಟ್ಟಿ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ರವಿ ಪ್ರಸಾದ್ ಕೆ ಶೆಟ್ಟಿ ಹಾಗೂ ಸುಜಾತಾ ಆರ್ ಶೆಟ್ಟಿ ಇವರ ಮಗಳಾಗಿ 6.01.2001ರಂದು ರಶಿತಾ ಪ್ರಸಾದ್ ಶೆಟ್ಟಿ ಅವರ ಜನನ. ಬಿ.ಇ ಇನ್ ಕಂಪ್ಯೂಟರ್ ಸೈನ್ಸ್ ನಲ್ಲಿ  ವಿದ್ಯಾಭ್ಯಾಸ ಮಾಡಿ ಪ್ರಸ್ತುತ ಇನ್ಫೋಸಿಸ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ.



ಯಕ್ಷಗಾನ ಗುರುಗಳು:-
ಪ್ರಾರಂಭದಲ್ಲಿ ಸಬ್ಬಣಕೋಡಿ ರಾಮ ಭಟ್ ಇವರಲ್ಲಿ ಕಲಿತು ನಂತರದಲ್ಲಿ ದೇವಾನಂದ್ ಭಟ್ ಬೆಳುವಾಯಿ ಇವರಲ್ಲಿ ಕಲಿತು ಪ್ರಸ್ತುತ ರಕ್ಷಿತ್ ಶೆಟ್ಟಿ ಪಡ್ರೆ ಇವರಲ್ಲಿ ಅಭ್ಯಾಸವನ್ನು ಮಾಡುತ್ತಿದ್ದಾರೆ.

ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ:-
ತಂದೆ, ತಾಯಿ, ಅಜ್ಜ ಎಂ.ಕೃಷ್ಣ ಶೆಟ್ಟಿ ಅವರು ಯಕ್ಷಗಾನ ಕಲಾವಿದರಾಗಿದ್ದು ಮನೆಯಲ್ಲಿ ಕಲೆಯ ವಾತಾವರಣವಿತ್ತು. ಅಪ್ಪ ಹಾಗೂ ದೊಡ್ಡಪ್ಪ ಯಕ್ಷಗಾನ ವೇಷಧಾರಿಗಳಾಗಿ ಹಾಗೂ ಹಿಮ್ಮೇಳ ವಾದಕರಾಗಿರುತ್ತಾರೆ ತಂದೆಯಿಂದಲೇ ತರಬೇತಿ ಪಡೆದು ಮೊದಲ ಪಾತ್ರವನ್ನು (ಶಶಿಪ್ರಭೆ) ನಿರ್ವಹಿಸುತ್ತಾರೆ.

ನೆಚ್ಚಿನ ಪ್ರಸಂಗಗಳು:-
ಶ್ರೀ ದೇವಿ ಮಹಾತ್ಮೆ, ಅಭಿಮನ್ಯು ಕಾಳಗ, ಸುಧನ್ವಾರ್ಜುನ ಕಾಳಗ, ಶಶಿಪ್ರಭಾ ಪರಿಣಯ, ಸುದರ್ಶನ ವಿಜಯ, ಶ್ರೀ ಕೃಷ್ಣ ಲೀಲೆ, ಪಂಚವಟಿ.
ನೆಚ್ಚಿನ ವೇಷಗಳು:-
ಶ್ರೀ ದೇವಿ, ಕೃಷ್ಣ, ಶಶಿಪ್ರಭೆ, ಭ್ರಮರಕುಂತಳೆ, ಅಭಿಮನ್ಯು, ಸುದರ್ಶನ, ಸುಧನ್ವ, ಮಾಯಾ ಶೂರ್ಪನಖಿ, ಅಸಿಕೆ, ರಾಮ, ಅರ್ಜುನ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗದ ನಡೆ ಹಾಗೂ ಪದ್ಯಗಳನ್ನು ನೋಡಿಕೊಂಡು, ಪ್ರಸಂಗಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದು, ವಿಡಿಯೋಗಳನ್ನು ನೋಡುವುದು, ಗುರುಗಳಲ್ಲಿ ಅಥವಾ ಪ್ರಸಂಗದ ಬಗ್ಗೆ ತಿಳಿದವರ ಬಳಿ ಕೇಳಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ರಶಿತಾ.




ಯಕ್ಷಗಾನದ ಇಂದಿನ ಸ್ಥಿತಿಗತಿ:-
ಹಲವಾರು ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆ ಯಕ್ಷಗಾನದತ್ತ ಆಕರ್ಷಿತರಾಗಿದ್ದು ಯಕ್ಷಗಾನ ಕಲೆಯನ್ನು ಬೆಳೆಸುತ್ತಿದ್ದಾರೆ. ಪಟ್ಲ ಫೌಂಡೇಶನ್ ನಂತಹ ಸಂಸ್ಥೆಗಳು ಶಾಲೆಗಳಲ್ಲಿ ಯಕ್ಷ ಶಿಕ್ಷಣವನ್ನು ಉಚಿತವಾಗಿ ನೀಡಿ ಮಕ್ಕಳಿಗೆ ಯಕ್ಷಗಾನದತ್ತ ಒಲವು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಮಹಿಳೆಯರೂ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಸುವಿಚಾರ.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲವುಗಳೇನು:-
ಪರಂಪರೆಗೆ ಚ್ಯುತಿ ಬಾರದಂತೆ ಹಿರಿಯರ ಮಾರ್ಗದರ್ಶನದಂತೆ ನಡೆದರೆ ಯಕ್ಷಗಾನದ ಚೌಕಟ್ಟು ಭದ್ರವಾಗಿರುತ್ತದೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪೂರ್ಣ ರಾತ್ರಿಯ ಪ್ರದರ್ಶನಕ್ಕೆ ಆಸಕ್ತಿ ತೋರದೆ ಕಾಲಮಿತಿಯ ಯಕ್ಷಗಾನವನ್ನು ಇಷ್ಟಪಡುತ್ತಾರೆ. ಹೊಸ  ಪ್ರಯೋಗಗಳ ಕಡೆಗೆ ಆಕರ್ಷಿತರಾಗಿರುವುದನ್ನು ಕಾಣಬಹುದು.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನದಲ್ಲಿ ಪರಿಪಕ್ವತೆಯನ್ನು ಪಡೆಯಬೇಕೆಂಬ ಇಚ್ಛೆ. ಅಭ್ಯಾಸಿಸಿದನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವ ನಿಟ್ಟಿನಲ್ಲಿ ಕಡಂದಲೆಯ ಭಾಗವತ ಯಕ್ಷ ನಾಟ್ಯಾಲಯದಲ್ಲಿ ಯಕ್ಷ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಯಕ್ಷ ವಿದ್ಯಾಭ್ಯಾಸ ನೀಡುವ ಆಸೆ ಇದೆ.





ಸನ್ಮಾನ ಹಾಗೂ ಪ್ರಶಸ್ತಿಗಳು:-
♦️ ಶಶಿಪ್ರಭೆ ಪಾತ್ರಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿ.
♦️ ಶ್ರೀಮತಿ ವಿದ್ಯಾ ಕೋಳ್ಯೂರು ಇವರ ಮಾರ್ಗದರ್ಶನದಿಂದ "ಸೆಂಟರ್ ಫಾರ್ ಕಲ್ಚರಲ್ ರೀಸರ್ಚ್ ಅಂಡ್ ಟ್ರೈನಿಂಗ್ ಸೆಂಟರ್ ದೆಹಲಿ" ಇದರ ವತಿಯಿಂದ ಯಕ್ಷಗಾನ ಕಲಿಕಾ ವಿದ್ಯಾರ್ಥಿ ವೇತನ ಪಡೆದಿರುತ್ತಾರೆ.
♦️ ರಕ್ಷಿತ್ ಶೆಟ್ಟಿ ಪಡ್ರೆಯವರು ನಡೆಸಿದ ಯಕ್ಷಗಾನ ಜೂನಿಯರ್ ಹಂತದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು "ಯಕ್ಷ ಸಿದ್ಧಿ ಸಂಭ್ರಮ 2019" ಪ್ರಶಸ್ತಿ.

ಸಂಗೀತ, ನೃತ್ಯ, ನಾಟಕ ನೋಡುವುದು ಹಾಗೂ ಅಭಿನಯ ಮಾಡುವುದು ಇವರ ಹವ್ಯಾಸ.

ರಕ್ಷಿತ್ ಶೆಟ್ಟಿ ಪಡ್ರೆ, ದೇವಾನಂದ್ ಭಟ್ ಬೆಳುವಾಯಿ ಹಾಗೂ ಪೂರ್ಣಿಮಾ ಯತೀಶ್ ರೈ ಇವರ ತಂಡದ ಜೊತೆಗೆ ತಿರುಗಾಟ. ಇನ್ನು ಹಲವಾರು ತಂಡದಲ್ಲಿ ಪಾತ್ರ  ನಿರ್ವಹಿಸಿರುತ್ತಾರೆ. ಮಂಗಳೂರಿನ ಇನ್ಫೋಸಿಸ್ ನ "ಯಕ್ಷ ತರಂಗ" ತಂಡದ ಜೊತೆಗೆ ಬೆಂಗಳೂರು, ಮೈಸೂರು ಕ್ಯಾಂಪಸ್ ನಲ್ಲಿ ಪ್ರದರ್ಶನ ನೀಡಿರುತ್ತಾರೆ ರಶಿತಾ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395