ಯಕ್ಷ ಸಾಧಕರು 367
"ಯಕ್ಷ ರಂಗದ ಉತ್ಸಾಹಿ ಕಲಾಸಂಪನ್ನ"
ವೃತ್ತಿಯಲ್ಲಿ ತೆರಿಗೆ ಸಲಹೆಗಾರ. ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದ. ಕುಟುಂಬದ ಹೆಚ್ಚಿನ ಸದಸ್ಯರು ಯಕ್ಷಗಾನ ಕಲಾವಿದರು. ದೊಡ್ಡಪ್ಪ, ತಂದೆಯವರಿಂದ ತೊಡಗಿ ಇವರ ಮಗನವರೆಗೆ ಒಟ್ಟು 3 ತಲೆಮಾರಿನವರು; ಒಟ್ಟು ಹನ್ನೊಂದು ಜನ ಯಕ್ಷಗಾನ ಕಲಾವಿದರು. ಯಕ್ಷಗಾನ ರಂಗಕ್ಕೆ ಬರಲೇಬೇಕು ಅಂತ ಬಂದಿದ್ದಲ್ಲ, ತಂಗಿಯನ್ನು ಬೇರೆ ಬೇರೆ ಕಡೆಗಳಿಗೆ ಕರೆದುಕೊಂಡು ಹೋಗುತ್ತಿದ್ದಾಗ, ಅಲ್ಲಿ ಎಲ್ಲರು ಯಕ್ಷಗಾನ ಕುಟುಂಬ, ನೀನು ವೇಷ ಮಾಡು ಅಂತ ಮಾಡಿಸಿದ್ದರು. ನಂತರ ಬೆಂಗಳೂರಿಗೆ ಬಂದ ಮೇಲೆ ಯಕ್ಷಗಾನ ಕಲಿತು ಕರ್ನಾಟಕ ಕಲಾದರ್ಶಿನಿ ಮೂಲಕ ನಿರಂತರ ವೇಷಗಳು, ಕೇಂದ್ರ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗದ ಕಾರ್ಯಕ್ರಮಗಳನ್ನು ನೀಡಿ ಕಳೆದ 3 ವರ್ಷಗಳಿಂದ ಬೆಂಗಳೂರಿನಲ್ಲಿ ವೇಷಭೂಷಣಗಳೊಂದಿಗೆ ಸ್ವಂತ ತಂಡವನ್ನು ಕಟ್ಟಿ ಯಕ್ಷಗಾನದಲ್ಲಿ ಕಲಾಸೇವೆಯನ್ನು ನೀಡುತ್ತಿರುವ ಕಲಾವಿದ ರವಿ ಐತುಮನೆ.
ಸಾಗರ ತಾಲೂಕು ಐತುಮನೆಯ ಯಕ್ಷಗಾನ ಮತ್ತು ಗುಡಿ ಕೈಗಾರಿಕಾ ಕಲಾವಿದ ಶೇಷಗಿರಿಯಪ್ಪ ಐ ಎಂ ಮತ್ತು ಹವ್ಯಕ ಸಂಪ್ರಾಯದ ಹಾಡುಗಾರ್ತಿ ಮತ್ತು ಹಾಡುಗಳ ಸಂಪಾದಕಿ ಶ್ರೀಮತಿ ಭಾಗೀರತಿ ಎಸ್ ರಾವ್ ಐತುಮನೆ ಇವರ ಮಗನಾಗಿ 25.03.1975ರಂದು ರವಿ ಐತುಮನೆ ಇವರ ಜನನ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಹಾಗೂ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಕಾಂ ಪದವಿ. ತಂದೆಯವರಾದ ಶ್ರೀ ಶೇಷಗಿರಿಯಪ್ಪ ಐ ಎಂ ನಂತರದಲ್ಲಿ ಗುಂಡ್ಮಿ ರಘುರಾಮ್ ಇವರ ಯಕ್ಷಗಾನ ಗುರುಗಳು.
ನೆಚ್ಚಿನ ಪ್ರಸಂಗಗಳು:-
ಸಮರ ಸೌಗಂಧಿಕಾ, ಚೂಡಾಮಣಿ, ಚಂದ್ರಹಾಸ, ಸೀತಾ ವಿಯೋಗ, ಕರ್ಣಪರ್ವ, ಭೀಷ್ಮ ಪರ್ವ, ಗದಾಯುದ್ಧ, ಭೀಷ್ಮೋತ್ಪತ್ತಿ, ಕಾಳಿದಾಸ, ಭೀಮೇಶ್ವರ ಕ್ಷೇತ್ರ ಮಹಾತ್ಮೆ, ವಾಲಿಮೋಕ್ಷ, ಕೃಷ್ಣ ಸಂಧಾನ, ನಳ ಚರಿತ್ರೆ, ಭೀಷ್ಮ ವಿಜಯ ಇತ್ಯಾದಿ.
ನೆಚ್ಚಿನ ವೇಷಗಳು:-
ಯಾವುದೇ ಪ್ರಸಂಗದ ಹನುಮಂತ, ದುಷ್ಟಬುದ್ಧಿ, ಕಾಳಿದಾಸದ ಕಾಳ, ಬ್ರಹ್ಮ ಕಪಾಲದ ಈಶ್ವರ ಮತ್ತು ಮಹೋಗ್ರ, ಭೀಷ್ಮ ವಿಜಯದ ಏಕಲವ್ಯ, ಜಾಂಬವಂತ, ಹಾಸ್ಯ ಪಾತ್ರಗಳು.
ತಾಳಮದ್ದಳೆಗಳಲ್ಲಿ: ನಿರ್ಯಾಣದ ಲಕ್ಷ್ಮಣ, ಪರಿತ್ಯಾಗದ ಸೀತೆ, ಲಕ್ಷ್ಮಣ, ಕಚ ದೇವಯಾನಿಯ ದೇವಯಾನಿ, ವಿಜಯದ ಅಂಬೆ, ಪರಶುರಾಮ, ಸಂಧಾನದ ಕೌರವ, ಭೀಮ, ದ್ರೌಪದಿ, ಪರ್ವಗಳ ಭೀಷ್ಮ, ಕರ್ಣ, ವಾಮನ ಚರಿತ್ರೆಯ ಬಲಿ, ವಾಲಿ ವಧೆಯ ತಾರೆ, ವಾಲಿ, ರಾವಣ ವಧೆಯ ಮಂಡೋದರಿ, ಪಂಚವಟಿಯ ಶೂರ್ಪನಖಿ, ಸೀತೆ, ಸೀತಾ ಕಲ್ಯಾಣದ ಅಹಲ್ಯೆ, ಯಾವುದೇ ಪ್ರಸಂಗದ ಭಾವನಾತ್ಮಕ ಪಾತ್ರಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ತಾಳಮದ್ದಳೆಯಾಗಲಿ, ಯಕ್ಷಗಾನವಾಗಲಿ ಪ್ರಸಂಗದ ಅಷ್ಟೂ ಪದ್ಯಗಳನ್ನು ಓದಿಕೊಳ್ಳುತ್ತೇನೆ ಹಾಗೂ ಆ ಪಾತ್ರಗಳನ್ನು ಬೇರೆ ಬೇರೆ ಗ್ರಂಥಗಳಲ್ಲಿ ಹೇಗೆ ಚಿತ್ರಿಸಿದ್ದಾರೆ ಎಂದು ಹುಡುಕುತ್ತೇನೆ. ಪ್ರಸಂಗದ ಕಥೆಗೆ ಧಕ್ಕೆಯಾಗದಂತೆ, ಜೊತೆ ಕಲಾವಿದರಿಗೆ ತೊಂದರೆಯಾಗದಂತೆ ಅದನ್ನು ಹೇಗೆ ಬಳಸಬಹುದು ಎಂದು ಆಲೋಚಿಸಿ ಅಳವಡಿಸಿಕೊಳ್ಳುತ್ತೇನೆ. ಯಕ್ಷಗಾನದಲ್ಲಿ ಸಿದ್ಧ ನಡೆ ಇರುತ್ತದೆ. ಅದನ್ನು ಕೆಲವು ಪ್ರಸಂಗಗಳಲ್ಲಿ ಬಿಟ್ಟು ಬೇರೆಯದೇ ಮಾಡ ಹೊರಟರೆ ಪ್ರೇಕ್ಷಕರು ಒಪ್ಪುವುದಿಲ್ಲ ಎಂಬುದಕ್ಕಾಗಿ ಹಾಗೆಯೇ ಚಿತ್ರಿಸಬೇಕಾಗುತ್ತದೆ.
ಯಕ್ಷಗಾನದ ಇಂದಿನ ಸ್ಥಿತಿಗತಿ:-
ಬದಲಾವಣೆ ಜಾಗದ ನಿಯಮ ಅಂದುಕೊಂಡು ವೃತ್ತಿ ಮೇಳಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಮೂಲ ಹೇಗಿದೆ? ಹೇಗಿತ್ತು? ಎನ್ನುವುದನ್ನು ಹುಡುಕುವ ಪರಿಸ್ಥಿತಿ ಇದೆ. ಪೂರ್ವಸೂರಿಗಳು ಯಕ್ಷಗಾನಕ್ಕೆ ಮಟ್ಟುಗಳನ್ನು, ಪ್ರಾರಂಭ ಹೀಗೆಯೇ ಇರಬೇಕು, ಮುಕ್ತಾಯ ಹೀಗೆಯೇ ಇರಬೇಕು ಎಂಬುದನ್ನು ಹಾಕಿಕೊಟ್ಟಿದ್ದಾರೆ. ಆದರೆ ನಾವು ಬದಲಾವಣೆಯ ಹೆಸರಿನಲ್ಲಿ ಅದನ್ನು ಮೂಲೆಗುಂಪಾಗಿಸಿ ಬೇರೆ ಬೇರೆ ಕಲಾ ಪ್ರಕಾರಗಳ ಸರಕುಗಳನ್ನು ತಂದು ತುಂಬುತ್ತಿದ್ದೇವೆ. ಪುರಾಣದ ಕಥೆಗಳನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಬೆಳೆದು ಬಂದ ಯಕ್ಷಗಾನ ಈಗ ಚಂದಮಾಮದ ಕಥೆಗಳು, ಸಿನಿಮಾದ ಕಥೆಗಳು ಸರಕಾಗಿದೆ. ಈಗಾಗಲೇ ಪ್ರಸಂಗ ರೂಪದಲ್ಲಿ ಪ್ರದರ್ಶನಗಳೇ ಆಗದ ಹಲವು ಪ್ರಸಂಗಗಳು ಇವೆ. ಅಷ್ಟೇ ಅಲ್ಲದೆ ಪುರಾಣಗಳಲ್ಲಿ ಹಲವು ಸನ್ನಿವೇಶಗಳು ಪ್ರಸಂಗ ಪಠ್ಯಗಳಾಗಿಲ್ಲ. ಅಂತವುಗಳಿಗೆ ಬದಲಾವಣೆಯ ರೂಪ ನೀಡಿ ಪ್ರದರ್ಶನ ಯೋಗ್ಯಗೊಳಿಸುವುದು ಉತ್ತಮ ಎಂಬುದು ಭಾವನೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಮೊದಲು ಸೀಮಿತ ವಲಯದ ಪ್ರೇಕ್ಷಕರು ಇದ್ದರು. ಆದರೆ ಇಂದು ವ್ಯಾಪ್ತಿ ಹೆಚ್ಚಿದೆ. ಅವರು ನೋಡುವ ದೃಷ್ಟಿಕೋನವು ಬದಲಾಗಿದೆ. ಹೊಸತನವನ್ನು ಬಯಸುತ್ತಾರೆ. ಆದರೆ ಸಿನಿಮಾದ ಸಂಗೀತವೋ, ಬೇರೆ ಕಲೆಯ ದೃಶ್ಯಗಳನ್ನು ಅವರು ಇಚ್ಛಿಸುತ್ತಾರೆ ಎಂದು ನಾವು ಭ್ರಮೆಯಲ್ಲಿದ್ದೇವೆ. ಆದರೆ ನಿಜವಾದ ಯಕ್ಷಗಾನ ಪ್ರೇಕ್ಷಕ ಬಯಸುವುದು ಹಳೆಯ ಪೌರಾಣಿಕ ಕಥೆಗಳಿಗೆ ಇಂದು ಯಾವ ರೀತಿ ಹೊಸ ಸ್ಪರ್ಶ ನೀಡುತ್ತಿದ್ದಾರೆ. ಅಂದಿನ ಕಲಾವಿದರು ಮಾಡಿದ ಪಾತ್ರಗಳನ್ನು ಇಂದಿನ ಪೀಳಿಗೆಯವರು ಯಾವ ದೃಷ್ಟಿಕೋನದಲ್ಲಿ ನಿರ್ವಹಿಸುತ್ತಾರೆ ಅದನ್ನು ನೋಡಲು ಬಯಸುತ್ತಾರೆ. ಹಾಗಾಗಿಯೇ ತೆಂಕಿನ ಹನುಮಗಿರಿ ಮೇಳವೋ, ಪಟ್ಲರ ಮೇಳವೋ ಇಂದು ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿವೆ, ಬಡಗಿನ ಮೇಳಗಳು ಈ ದಿಸೆಯಲ್ಲಿ ಸೋಲುತ್ತಿವೆ.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು?:-
ಇಂದು ಕೇವಲ ಯಕ್ಷಗಾನ ಆಹಾರ್ಯವನ್ನು ಉಳಿಸುವುದಲ್ಲ. ಈ ಕಲೆಯ ಮಹತ್ವವನ್ನು ಉಳಿಸಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ವಿಶೇಷ ಕಾರ್ಯಕ್ರಮಗಳಲ್ಲಿ ಅತಿಥಿ ಅಭ್ಯಾಗತರನ್ನು ಕರೆತರಲು, ವಧು ವರರ ಪಕ್ಕದಲ್ಲೋ, ಯಾವುದೋ ಸಿನಿಮಾ ಹಾಡಿಗೆ ಒಂದು ನೃತ್ಯಕ್ಕಾಗಿಯೋ ಯಕ್ಷಗಾನದ ಆಹಾರ್ಯವನ್ನು ಬಳಸುವುದು ಸರಿಯಲ್ಲ. ಮೊದಲು ಎಲ್ಲವೂ ಮರದ ಕೆತ್ತನೆಗಳಿಂದ ತಯಾರಿಸುತ್ತಿದ್ದ ವೇಷಭೂಷಣಗಳು ಇಂದು ಫೈಬರ್ ಗೆ ಸ್ಥಿತ್ಯಂತರವಾಗಿದೆ. ಆದರೂ ಅದೇ ಆಕಾರ, ಅದೇ ರೀತಿಯಲ್ಲಿ ಮುಂದುವರಿದಿದೆ. ಬದಲಾವಣೆ ಎಂದು ಅದಕ್ಕೆ ಇನ್ನಾವುದೋ ಕಲೆಯ ಆಹಾರ್ಯವನ್ನು ಇಲ್ಲಿಗೆ ತಂದು ಮುಂದೆ ಇದು ಯಕ್ಷಗಾನದ್ದು ಅಂತ ಆಗಬಾರದು.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆಗಳು:-
ಬೆಂಗಳೂರು ಹಲವು ಭಾಷಿಕರು, ಹಲವು ದೇಶಿಕರು ನೆಲೆಸಿರುವ ನಗರ. ಇಲ್ಲಿ ಎಲ್ಲಾ ಜನರ ಮನ, ಮನೆಗಳಿಗೆ ಈ ಕಲೆಯ ಸೊಗಡು ತಾಳಮದ್ದಳೆಯನ್ನು ಬೆಂಗಳೂರಿನ ವಿವಿಧೆಡೆಗಳಲ್ಲಿ ನಡೆಸುತ್ತಾ ಬಂದಿದ್ದೇವೆ. ಇದು ನಿರಂತರವಾಗಿ ನಡೆಸಬೇಕು, ತಾಳಮದ್ದಲೆಗೆ ಒಂದಿಷ್ಟು ಬೆಂಗಳೂರಿಗರನ್ನು ಸಿದ್ಧಗೊಳಿಸಬೇಕು.
ಸನ್ಮಾನ ಮತ್ತು ಪ್ರಶಸ್ತಿ:-
♦️ ಡಾ. ಶಿವಕುಮಾರ್ ಬೇಗಾರರ ಗಾನ ಸೌರಭ ಯಕ್ಷಗಾನ ಶಾಲೆಯ 2022ರ ಯಕ್ಷಾಭಿವಂದನಂ.
♦️ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು ಇವರಿಂದ ಯಕ್ಷಗಾನ ಕಲಾರತ್ನ ಪ್ರಶಸ್ತಿ.
♦️ ಮೋಹನ ತರಂಗಿಣಿ ಸಂಗೀತ ಸಭಾ ವತಿಯಿಂದ ಮಂಜುದಾಸ ರಾಜ್ಯ ಪ್ರಶಸ್ತಿ.
♦️ ಶ್ರೀಮತಿ ಪ್ರತಿಭಾ ಪಾಟೀಲ್ ರವರು ರಾಷ್ಟ್ರಪತಿಗಳಾಗಿದ್ದ ಸಂದರ್ಭದಲ್ಲಿ 2007ರ ಗಣರಾಜ್ಯೋತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು ಜೊತೆಗೆ ಅವರ ಮನೆಯಲ್ಲಿ ಪ್ರದರ್ಶನ ನೀಡಿದ್ದು.
ಯಕ್ಷಗಾನ, ತಾಳಮದ್ದಲೆ, ನಾಟಕ ರಚನೆ ಮತ್ತು ನಿರ್ದೇಶನ, ಕಥೆಗಳನ್ನು ಬರೆಯುವುದು ಇವರ ಹವ್ಯಾಸಗಳು.
ಕುಮಟ ಗೋವಿಂದ ನಾಯ್ಕರು ಸಿಗಂದೂರು ಮೇಳದಲ್ಲಿ ಇದ್ದ ಕಾಲದಲ್ಲಿ ಒಮ್ಮೆ ಶರಸೇತು ಬಂಧದಲ್ಲಿ ಅವರ ಜೊತೆ ಅರ್ಜುನನಾಗಿ, ನಂತರ ಐದಾರು ವರ್ಷಗಳಿಂದ ಗುಂಡುಬಾಳ ಮೇಳದಲ್ಲಿ ಒಂದು ಸೇವೆ ಮಾಡಿದ ಅನುಭವ ರವಿ ಐತುಮನೆ ಅವರದು.
ರವಿ ಐತುಮನೆ ಅವರು 19.12.2005ರಂದು ಪುಷ್ಪಲತಾ ಅವರನ್ನು ಮದುವೆಯಾಗಿ ಮಗ ಪಾರ್ಥ ಹೆಗಡೆ (ಪಿಯುಸಿ ಮುಗಿಸಿ ಸಿ.ಎ ಅಭ್ಯಾಸ ಮಾಡುತ್ತಿದ್ದಾನೆ. ಬೇಗಾರ್ ಶಿವಕುಮಾರರ ಶಿಷ್ಯ) ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ರವಿ ಐತುಮನೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment