ಯಕ್ಷ ಸಾಧಕರು 369
"ಯಕ್ಷಾರವಿಂದ"
10.06.1999ರಂದು ದಿ.ಜಯಪ್ರಕಾಶ್ ಆಚಾರ್ಯ ಹಾಗೂ ಲೀಲಾವತಿ ಅವರ ಮಗನಾಗಿ ಅರವಿಂದ ಆಚಾರ್ಯ ಜೆ.ಪಿ ಅವರ ಜನನ. ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದಿಂದ MCA ಪದವಿಯನ್ನು ಪಡೆದಿರುತ್ತಾರೆ.
ಯಕ್ಷಗಾನಕ್ಕೆ ಚೆಂಡೆ ಹಾಗೂ ಮದ್ದಳೆ ಕಲಿಯಲು ಪ್ರೇರಣೆ ಹಾಗೂ ಯಕ್ಷಗಾನದ ಗುರುಗಳು:-
ಯಕ್ಷಗಾನದ ನಾಟ್ಯ, ಚೆಂಡೆ ಹಾಗೂ ಮದ್ದಳೆ ಕಲಿಯಲು ನನಗೆ ಪ್ರೇರಣೆಯಾದವರು ನನ್ನ ಸೋದರ ಮಾವಂದಿರಾದ ಕೆ.ಜೆ. ಗಣೇಶ್, ಕೆ.ಜೆ. ಕೃಷ್ಣ ಹಾಗೂ ಕೆ.ಜೆ. ಸುಧೀಂದ್ರ. ಅವರ ಕಲಾಸಾಧನೆ, ಆರಾಧನೆ, ಮತ್ತು ಯಕ್ಷಗಾನದ ಮೇಲಿನ ಅಪಾರ ನಿಷ್ಠೆ, ಕಲಾ ವೈಖರಿಯಿಂದ ನನ್ನ ಮನಸ್ಸಿನಲ್ಲಿ ಯಕ್ಷಗಾನದ ಮೇಲಿನ ಆಳವಾದ ಆಸಕ್ತಿ ಬೆಳೆಯಿತು. ಅವರಿಂದಲೇ ನಾನು ನೃತ್ಯ, ಅರ್ಥಗಾರಿಕೆ, ಮದ್ದಳೆ ವಾದನ, ಚೆಂಡೆ ವಾದನ, ಮತ್ತು ವೇಷಭೂಷಣಗಳನ್ನು ಕಲಿತುಕೊಂಡೆ. ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನನಗೆ ಯಕ್ಷಗಾನದಲ್ಲಿ ಮುಂದುವರಿಯಲು ಕಾರಣವಾಯಿತು.
ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು:-
ದುರ್ಗಪ್ಪ ಗುಡಿಗಾರ್, ಶಂಕರ ಭಾಗವತ, ಮಂದಾರ್ತಿ ರಾಮಣ್ಣ, ಪದ್ಮನಾಭ ಉಪಾಧ್ಯಾಯ, ಶಿವಾನಂದ ಕೋಟ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪರಮೇಶ್ವರ ಭಂಡಾರಿ ಕರ್ಕಿ, ಸುನಿಲ್ ಭಂಡಾರಿ ಕಡತೋಕ, ರಾಕೇಶ್ ಮಲ್ಯ, ಜನಾರ್ದನ ಆಚಾರ್ಯ, ಗುರುಪ್ರಸಾದ್ ಬೊಳಿಂಜಡ್ಕ , ಚೈತನ್ಯ ಪದ್ಯಾಣ, ಕಡಬ ವಿನಯ್, ರಾಘವೇಂದ್ರ ಹೆಗಡೆ ಯಲ್ಲಾಪುರ, ಶ್ರೀಧರ ವಿಟ್ಲ, ಕೌಶಿಕ್ ರಾವ್ ಪುತ್ತಿಗೆ, ಅಕ್ಷಯ್ ಆಚಾರ್ಯ ಬಿದ್ಕಲ್ ಕಟ್ಟೆ, ಸುಜನ್ ಹಾಲಾಡಿ, ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ, ಕೌಶಲ್ ರಾವ್ ಪುತ್ತಿಗೆ, ಸುಮಿತ್ ಆಚಾರ್ಯ.
ನೆಚ್ಚಿನ ಪ್ರಸಂಗಗಳು:-
ರತ್ನಾವತಿ ಕಲ್ಯಾಣ, ಅಭಿಮನ್ಯು ಕಾಳಗ, ಶಬರಕುಮಾರ, ಸುಭದ್ರಾ ಕಲ್ಯಾಣ, ಕೀಚಕ ವಧೆ, ಪಂಚವಟಿ, ಧರ್ಮಾಂಗದ ದಿಗ್ವಿಜಯ, ದಕ್ಷಯಜ್ಞ.
ನೆಚ್ಚಿನ ಭಾಗವತರು:-
ಜಿ.ಆರ್. ಕಾಳಿಂಗ ನಾವಡ, ಸುಬ್ರಹ್ಮಣ್ಯ ಧಾರೇಶ್ವರ, ಕೊಳಗಿ ಕೇಶವ ಹೆಗಡೆ, ವಿದ್ವಾನ್ ಗಣಪತಿ ಭಟ್, ಹೆರಂಜಾಲು ಗೋಪಾಲ ಗಾಣಿಗ, ನಗರ ಸುಬ್ರಹ್ಮಣ್ಯ ಆಚಾರ್ಯ, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ, ಪದ್ಯಾಣ ಗಣಪತಿ ಭಟ್, ಜನ್ಸಾಲೆ ರಾಘವೇಂದ್ರ ಆಚಾರ್ಯ, ರಾಘವೇಂದ್ರ ಮಯ್ಯ ಹಾಲಾಡಿ, ಪಟ್ಲ ಸತೀಶ್ ಶೆಟ್ಟಿ, ಹಿಲ್ಲೂರು ರಾಮಕೃಷ್ಣ ಹೆಗಡೆ, ರವಿಚಂದ್ರ ಕನ್ನಡಿಕಟ್ಟೆ, ಮೂಡುಬೆಳ್ಳೆ ಚಂದ್ರಕಾಂತ್ ರಾವ್, ಬಿಲ್ಲಾಡಿ ಗಣೇಶ್ ಆಚಾರ್ಯ, ಚಿನ್ಮಯ್ ಕಲ್ಲಡ್ಕ , ಪ್ರಖ್ಯಾತ್ ಶೆಟ್ಟಿ, ಭರತ ಶೆಟ್ಟಿ ಸಿದ್ಧಕಟ್ಟೆ, ಮಧುಕರ್ ಹೆಗಡೆ ಮಡಾಮಕ್ಕಿ.
ಯಕ್ಷಗಾನದಲ್ಲಿ ವೇಷ ಮಾಡುವ ಅಥವಾ ಭಾಗವತಿಕೆ ಮಾಡುವ ಆಸಕ್ತಿ ಇದೆಯಾ:-
ಯಕ್ಷಗಾನದಲ್ಲಿ ವೇಷ ಮಾಡುವುದು ನನಗೆ ಅಪಾರ ಸಂತೋಷವನ್ನು ನೀಡುತ್ತದೆ. ನನ್ನ ಮಾವನವರು ಬಾಲ್ಯದಲ್ಲೇ ನನ್ನ ಆಸಕ್ತಿಯನ್ನು ಗಮನಿಸಿ ಯಕ್ಷಗಾನವನ್ನು ಕಲಿಸಿಕೊಟ್ಟರು ಹಾಗೂ ಅನೇಕ ಪಾತ್ರಗಳನ್ನು ಮಾಡಿಸಿದರು. ನಾನು ನಿರ್ವಹಿಸಿದ ಪ್ರತಿಯೊಂದು ಪಾತ್ರದ ಔಚಿತ್ಯವನ್ನು ಸ್ಪಷ್ಟವಾಗಿ ವಿವರಿಸಿ ತಿಳಿಸುತ್ತಿದ್ದರು. ಆ ಮಾರ್ಗದರ್ಶನ ಇಂದಿಗೂ ಮುಂದುವರಿಯುತ್ತ ಬಂದಿದೆ.
ಮುಂದಿನ ದಿನಗಳಲ್ಲಿಯೂ ನನ್ನಿಂದ ಸಮರ್ಪಕವಾಗಿ ನಿರ್ವಹಿಸಬಹುದಾದ ಪಾತ್ರಗಳನ್ನು ಹಿರಿಯರ ಮಾರ್ಗದರ್ಶನದಂತೆ ನಿರ್ವಹಿಸಿಕೊಂಡು, ವೇಷವನ್ನು ಮುಂದುವರಿಸಿಕೊಂಡು ಹೋಗುವ ಆಸಕ್ತಿ ನನಗಿದೆ. ಭಾಗವತಿಕೆ ಮಾಡುವ ಬಗ್ಗೆ ಪ್ರಸ್ತುತ ಯಾವುದೇ ನಿರ್ಧಾರವಿಲ್ಲ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಮೇರು ಕಲಾವಿದರಿಂದ ಪ್ರೇರೇಪಿತರಾಗಿ ಯುವ ಜನತೆಯಲ್ಲಿ ಯಕ್ಷಗಾನದ ಮೇಲಿನ ಆಸಕ್ತಿ ಹೆಚ್ಚುತ್ತಿರುವುದು ಸಂತೋಷದ ವಿಷಯ. ಇಂದಿನ ತಂತ್ರಜ್ಞಾನ ಹಾಗೂ ವಿವಿಧ ಮಾಧ್ಯಮಗಳು ಈ ಕಲೆಯನ್ನು ಇನ್ನಷ್ಟು ಜನರಿಗೆ ತಲುಪಿಸಲು ಮಹತ್ವದ ಸಹಕಾರ ನೀಡುತ್ತಿವೆ. ಯುವಜನತೆಯಲ್ಲಿ ಹೆಚ್ಚುತ್ತಿರುವ ಆಸಕ್ತಿಯಿಂದ ಯಕ್ಷಗಾನಕ್ಕೆ ಹೊಸ ಚೈತನ್ಯ ದೊರೆತಂತಾಗಿದೆ. ಅನೇಕ ಯುವ ಕಲಾವಿದರು ಹಿರಿಯರು ರೂಪಿಸಿದ ಚೌಕಟ್ಟನ್ನು ಮೀರದೆ, ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವುದು ಯಕ್ಷಗಾನದ ಭವಿಷ್ಯಕ್ಕೆ ಹಿತಕರ ಸೂಚನೆಯಾಗಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ಪ್ರೇಕ್ಷಕರು ಯಕ್ಷಗಾನವನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಸ್ವೀಕರಿಸುತ್ತಿದ್ದಾರೆ. ಎಲ್ಲ ವಯೋಮಾನದವರೂ ಆಸಕ್ತಿಯಿಂದ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದು, ಕಲಾವಿದರಿಗೆ ನಿರಂತರವಾಗಿ ಉತ್ತೇಜನ ನೀಡುತ್ತಿರುವುದು ಯಕ್ಷಗಾನದ ಬೆಳವಣಿಗೆಗೆ ಮಹತ್ವದ ಸಂಗತಿಯಾಗಿದೆ. ಯಕ್ಷಗಾನವನ್ನು ಕೇವಲ ಮನರಂಜನೆಯ ರೂಪದಲ್ಲಿ ಮಾತ್ರವಲ್ಲದೆ ಯಕ್ಷಗಾನವನ್ನು ಆರಾಧಿಸುತ್ತಿದ್ದಾರೆ.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಯಕ್ಷಗಾನವು ಮೂಲತಃ ಅತ್ಯಂತ ಸುಂದರವಾದ ಆಹಾರ್ಯವನ್ನು ಹೊಂದಿದೆ. ಆ ಚೌಕಟ್ಟಿಗೆ ಯಾವುದೇ ಕೊರತೆ ಉಂಟಾಗದಂತೆ ಹಲವಾರು ಅನ್ವೇಷಣೆಗಳು ನಡೆಯುತ್ತಿವೆ. ಹೊಸತನವನ್ನು ಅಳವಡಿಸಿಕೊಂಡು ಹಿಂದಿನ ಪರಂಪರೆಯನ್ನು ಕಾಪಾಡಿಕೊಂಡು ಮಿತಿಯೊಳಗೆ ಮುಂದುವರಿದರೆ ಅದೇ ಅತ್ಯುತ್ತಮ ಎಂಬುದು ನನ್ನ ಅಭಿಪ್ರಾಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು:-
ಕಲಾಸೇವೆಯನ್ನು ಇನ್ನಷ್ಟು ವಿಸ್ತರಿಸುವುದೇ ನನ್ನ ಮುಂದಿನ ಪ್ರಮುಖ ಗುರಿಯಾಗಿದೆ. ಇನ್ನಷ್ಟು ಪರಿಣತಿ ಸಾಧಿಸಿ, ಹಿರಿಯರಿಂದ ವಿಶೇಷವಾದ ವಿಚಾರಗಳನ್ನು ಕಲಿತುಕೊಳ್ಳಲು ಬಯಸುತ್ತೇನೆ. ಕಲಾಮಾತೆಯ ಅನುಗ್ರಹ ಮತ್ತು ಗುರು–ಹಿರಿಯರ ಆಶೀರ್ವಾದದಿಂದ ಹಲವಾರು ಪ್ರದರ್ಶನಗಳಲ್ಲಿ ಕಲಾಸೇವೆ ಮಾಡುವ ಅವಕಾಶ ದೊರೆತಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಕಲಾಸೇವೆಯನ್ನು ನಿರಂತರವಾಗಿ ಮುಂದುವರಿಸುವುದು ನನ್ನ ಆಶಯವಾಗಿದೆ.
ಯಾವ ಎಲ್ಲಾ ಮೇಳದಲ್ಲಿ ತಿರುಗಾಟ:-
ಸಾಲಿಗ್ರಾಮ, ಸೌಕೂರು, ಹಟ್ಟಿಯಂಗಡಿ, ಬೊಳಂಬಳ್ಳಿ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಹಾಗೂ
ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ (ರಿ.), ಅಂಬಲಪಾಡಿಯಲ್ಲಿ ಮಾವನವರೊಂದಿಗೆ ಬಾಲ್ಯದಿಂದಲೂ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು, ಸದ್ಯ ಸಂಘದ ಸಕ್ರಿಯ ಸದಸ್ಯರಾಗಿರುತ್ತಾರೆ. ಇವರ ಮನೆಯ ತಂಡ ಯಕ್ಷ ಆರಾಧನ ಕಿದಿಯೂರು ಟ್ರಸ್ಟ್, ಕಿದಿಯೂರು(ರಿ.) ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನನಗೆ ಬಹಳ ಸಂತೋಷ ಸಂಗತಿ ಎಂದು ಅರವಿಂದ ಆಚಾರ್ಯ ಹೇಳುತ್ತಾರೆ.
ಅಲ್ಲದೆ, ದಿವಂಗತ ನಗರ ಸುಬ್ರಹ್ಮಣ್ಯ ಆಚಾರ್ಯ ಅವರ ನಡುಮನೆ ಯಕ್ಷ ಬಳಗದೊಂದಿಗೆ ಹಲವಾರು ಪ್ರದರ್ಶನಗಳಲ್ಲಿ ಭಾಗವಹಿಸಿರುವ ಅನುಭವ. ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಫೋಟೋಗ್ರಾಫಿ ಹಾಗೂ ಎಡಿಟಿಂಗ್, ಡ್ರಾಯಿಂಗ್ ಇವರ ಹವ್ಯಾಸಗಳು.
ಸನ್ಮಾನ ಹಾಗೂ ಪ್ರಶಸ್ತಿ:-
♦️ "ಯಾಜಿ ಬಣ್ಣದ ಬದುಕು" ಸುವರ್ಣ ಸಂಭ್ರಮದಲ್ಲಿ ಪ್ರತಿಭಾ ಪುರಸ್ಕಾರ.
♦️ ರಾಷ್ಟ್ರೀಯ ಪ್ರತಿಭೋತ್ಸವ ಗೌರವ – 2017
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment