ಯಕ್ಷ ಸಾಧಕರು 371
"ಪ್ರತಿಭಾವಂತ ಯಕ್ಷ ಪಟು"
ಉಡುಪಿ ಜಿಲ್ಲೆಯ ಬೀಜಾಡಿಯ ನರಸಿಂಹ ದೇವಾಡಿಗ ಮತ್ತು ಸುಶೀಲ ದೇವಾಡಿಗ ದಂಪತಿಯ ಮಗನಾಗಿ 08.09.1993 ರಂದು ಗಣೇಶ್ ದೇವಾಡಿಗ ಬೀಜಾಡಿ ಅವರ ಜನನ. ಬಿ.ಎ, ಗ್ರಾಫಿಕ್ ಡಿಸೈನಿಂಗ್ ಇವರ ವಿದ್ಯಾಭ್ಯಾಸ. ಯಕ್ಷಗಾನ ರಂಗಕ್ಕೆ ಸ್ವಆಸಕ್ತಿಯಿಂದ ಬಂದ ಇವರು ಹಟ್ಟಿಯಂಗಡಿ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಸೌಕೂರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ನೆಚ್ಚಿನ ಪ್ರಸಂಗಗಳು:-
ಅಭಿಮನ್ಯು ಕಾಳಗ, ವಾಲಿ ಮೋಕ್ಷ, ಕೃಷ್ಣಾರ್ಜುನ ಕಾಳಗ , ಸುದರ್ಶನ ವಿಜಯ, ಚಂದ್ರಾವಳಿ ವಿಲಾಸ, ಭೀಷ್ಮವಿಜಯ, ತರಣಿ ಸೇನಾ ಕಾಳಗ, ದಕ್ಷಯಜ್ಞ.
ನೆಚ್ಚಿನ ವೇಷಗಳು:- ಸುಭದ್ರೆ, ತಾರೆ, ಸರಮೆ, ರುಕ್ಮಿಣಿ, ಲಕ್ಷ್ಮಿ, ಚಂದ್ರಾವಳಿ, ವತ್ಸಲೇ, ಚಿತ್ರಾಕ್ಷಿ, ಸತ್ಯಭಾಮೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಅನುಭವಿ ಕಲಾವಿದರಿಂದ ಕೇಳಿಕೊಳ್ಳುವುದು, ಸಹ ಕಲಾವಿದರೊಂದಿಗೆ ಚರ್ಚಿಸುವುದು, ಪ್ರಸಂಗಕ್ಕೆ ಸಂಬಂಧಪಟ್ಟ ಪುಸ್ತಕವನ್ನು ಓದಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಗಣೇಶ್.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಇದೆ. ಪ್ರದರ್ಶನವೆನ್ನುವುದು ಕಾಲಮಿತಿಯಾದರೂ ಪ್ರಸಂಗದ ಸಮಾಪ್ತಿಯಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತದೆ. ಅನಿವಾರ್ಯಕ್ಕಾದಂತಹ ಕಾಲಮಿತಿಯಿಂದಾಗಿ ಪೌರಾಣಿಕ ಪ್ರಸಂಗದ ಕಥೆಗಳನ್ನು ಸಂಕ್ಷಿಪ್ತಗೊಳಿಸಿ ಪ್ರದರ್ಶನ ಮಾಡಲಾಗುತ್ತದೆ. ಆದರೆ ಇದರಿಂದ ಯಕ್ಷಗಾನವನ್ನು ಕಲಿಯುತ್ತಿರುವಂತಹ ತಮ್ಮಂಥ ಕಲಾವಿದರಿಗೆ ಪೂರ್ಣ ಕಥೆ ತಿಳಿದುಕೊಳ್ಳುವುದಕ್ಕೆ ಅಸಾಧ್ಯವಾಗುತ್ತದೆ. ಕಲಿಯುವಿಕೆಗೆ ಇದು ಸ್ವಲ್ಪ ಮಾರಕ ಎನ್ನಬಹುದು. ಕಾಲಮಿತಿಯಲ್ಲಿ ಸಾಧಕ ಎಷ್ಟಿದೆಯೋ ಬಾಧಕವು ಅಷ್ಟೇ ಇದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರದರ್ಶನವನ್ನು ಕಾಣುವುದಕ್ಕೆ ಬಂದಂತ ಕೆಲವು ಪ್ರೇಕ್ಷಕರು ಪ್ರದರ್ಶನದ ಕೊನೆಯವರೆಗೂ ಇದ್ದು ಪ್ರದರ್ಶನವನ್ನು ಆಸ್ವಾದಿಸುತ್ತಾರೆ. ಆದರೆ ಕೆಲವರು ಪ್ರದರ್ಶನ ಪ್ರಾರಂಭವಾಗಿ ಕೆಲ ಸಮಯ ಆಗುವುದರೊಳಗೆ ಪ್ರದರ್ಶನದ ಒಂದೆರಡು ಫೋಟೋವನ್ನು ತೆಗೆದುಕೊಂಡು ನಿರ್ಗಮಿಸುತ್ತಾರೆ.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:- ಇದು ನನ್ನ ಒಬ್ಬನಿಂದಾಗುವುದಲ್ಲ. ಯಕ್ಷಗಾನ ಉಳಿಯಬೇಕು ಬೆಳೆಯಬೇಕು ಅಂತಾದರೆ ಕಲಾವಿದರ, ಪ್ರೇಕ್ಷಕರ ಸಮಷ್ಠಿಯಿಂದ ಮಾತ್ರ ಸಾಧ್ಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷರಂಗದಲ್ಲಿ ನನಗೆ ದೊರೆತ ಎಲ್ಲಾ ಪಾತ್ರಗಳನ್ನು ವಹಿಸಿ, ಇನ್ನಷ್ಟು ವೃದ್ಧಿಗೊಳಿಸಿ, ಸಾಧನೆ ಮಾಡಬೇಕು.
ಬೆನಕ ಹಾಗೂ ನೇಸರ ಸ್ವಸಹಾಯ ಸಂಘ ಕೋಟೇಶ್ವರ ಇವರ ಸಾಧನೆಯನ್ನು ಗುರುತಿಸಿ ಸನ್ಮಾನ ಮಾಡಿ ಗೌರವಿಸಿರುತ್ತಾರೆ.
ಪುಸ್ತಕಗಳನ್ನು ಓದುವುದು, ಯಕ್ಷಗಾನ ನೋಡುವುದು, ತಾಳಮದ್ದಲೆ ನೋಡುವುದು ಇವರ ಹವ್ಯಾಸಗಳು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment