ಯಕ್ಷ ಸಾಧಕರು 375

"ಯಕ್ಷಕಲಾ ಪ್ರಿಯೆ"

ಇವರ ತಂದೆ ಶ್ರೀ ದಿವಾಕರ್ ದಾಸ್ ತೆಂಕುತಿಟ್ಟಿನ ನುರಿತ ಯಕ್ಷಗಾನ ಕಲಾವಿದರು. ಬಾಲ್ಯದಲ್ಲಿ ತಂದೆಯಿಂದ ಬಳುವಳಿಯಾಗಿ ಬಂದ ಯಕ್ಷಗಾನ ಕಲೆಯನ್ನು ತಂದೆಯಿಂದಲೇ ಅತ್ಯಂತ ಒಲವಿನಿಂದ ಕಲಿತು ಬಳಿಕ 5 ನೆ ವಯಸ್ಸಿನಲ್ಲಿ “ಶ್ರೀ ದೇವಿ ಮಹಿಳಾ ಯಕ್ಷಗಾನ ತಂಡ ಪುಂಜಾಲಕಟ್ಟೆ” ಇಲ್ಲಿ ಯಕ್ಷಗಾನ ತರಬೇತಿಗೆ ಸೇರಿ 15 ವರ್ಷಗಳ ಕಾಲ ಯಕ್ಷಗಾನ ಕಲಿತು ಮುಂದೆ ಯೋಗೀಶ್ ಆಚಾರ್ಯ, ಪ್ರಸಿದ್ಧ ಯಕ್ಷಗಾನ ಕಲಾವಿದರು ಕೋಳ್ಯೂರು ರಾಮಚಂದ್ರ ರಾವ್ ಇವರಿಂದ ಲಾಸ್ಯದ ಮಟ್ಟುಗಳನ್ನು ಕಲಿತು, ಸತೀಶ್ ಕಾರ್ಕಳ, ಚೈತ್ರಾ ರಾವ್, ಅರುಣ್ ಭಟ್ ಧರ್ಮಸ್ಥಳ ಇವರಿಂದ ಮುಮ್ಮೇಳದ ಸರ್ವ ಮಟ್ಟುಗಳನ್ನು ಕಲಿತು ಯಕ್ಷಗಾನ, ಭರತನಾಟ್ಯ ಹಾಗೂ ಹಲವು ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯ ಮೂಲಕ 2 ಸಾವಿರಕ್ಕೂ ಹೆಚ್ಚಿನ ವೇದಿಕೆಯಲ್ಲಿ ಯಕ್ಷಗಾನ ಕಾರ್ಯಕ್ರಮಗಳನ್ನು ನೀಡಿದ ಕಲಾವಿದೆ ಶ್ರೀಮತಿ ಶ್ರುತಿ ದಾಸ್.



ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಾವಳಮೂಡೂರು ಗ್ರಾಮದ ಕಲಾಶ್ರುತಿ ಮನೆಯಲ್ಲಿ 1997ನೇ ಮಾರ್ಚ್ 6 ರಂದು ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶ್ರೀ ದಿವಾಕರ್ ದಾಸ್ ಕಾವಳಕಟ್ಟೆ ಮತ್ತು ಜಯಂತಿ ದಂಪತಿಗಳ ಮಗಳಾಗಿ ಜನನ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಇಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ನಂತರ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು ಇಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು ನಂತರ ಮಂಗಳೂರಿನ ದೇರಳಕಟ್ಟೆ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ ಇಲ್ಲಿ ಪ್ರತಿಕೋದ್ಯಮ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.

ನೆಚ್ಚಿನ ಪ್ರಸಂಗಗಳು:-
ಸುದರ್ಶನ ವಿಜಯ, ಶ್ರೀ ಕೃಷ್ಣ ಲೀಲೆ ಕಂಸ ವಧೆ, ಗಿರಿಜಾ ಕಲ್ಯಾಣ, ಪಾಂಚಜನ್ಯ, ಶ್ರೀ ದೇವಿ ಮಹಾತ್ಮೆ, ದಕ್ಷಾಧ್ವರ, ಶಶಿಪ್ರಭಾ ಪರಿಣಯ ಇವರ ನೆಚ್ಚಿನ ಯಕ್ಷಗಾನ ಪ್ರಸಂಗಗಳು. ಅಲ್ಲದೇ ಕೃಷ್ಣನ ಕಥೆ ಇರುವ ಎಲ್ಲಾ ಪ್ರಸಂಗಗಳು ಇವರಿಗೆ ಇಷ್ಟ.
ನೆಚ್ಚಿನ ವೇಷಗಳು:-
ಕೃಷ್ಣ ನನ್ನ ನೆಚ್ಚಿನ ಯಕ್ಷಗಾನ ವೇಷ. ಹೆಚ್ಚಾಗಿ ನೀಲಿ ಬಣ್ಣದ ವೇಷಗಳೇ ನನಗೆ ಸಿಗುವುದು ಹೆಚ್ಚು. ಅದಲ್ಲದೆ ಸುದರ್ಶನ, ಮನ್ಮಥ, ಬಬ್ರುವಾಹನ, ವೀರಭದ್ರ, ಕೃಷ್ಣ, ಶಶಿಪ್ರಭೆ, ಸುಭದ್ರೆ, ರುಕ್ಮಿಣಿ, ಪಂಚಜನ, ಗರುಡ, ಯಕ್ಷ ಅಲ್ಲದೇ ಇನ್ನು ತುಂಬಾ ವೇಷಗಳನ್ನು ಮಾಡಿದ್ದೇನೆ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮೊದಲಿಗೆ ನನ್ನ ತಂದೆಯೇ ನನಗೆ ಯಕ್ಷಗಾನದ ಕಥೆಗಳನ್ನು ಹೇಳುತ್ತಿದ್ದರು. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಯಕ್ಷಗಾನವನ್ನು ನೋಡುವ ಮೂಲಕ ನನ್ನ ವೇಷದ ತಯಾರಿಯನ್ನು ಮಾಡುತ್ತೇನೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನವು ಕರಾವಳಿಯ ಅತ್ಯಂತ ಶ್ರೀಮಂತ ಹಾಗೂ ಪಾರಂಪರಿಕ ಕಲೆ. ಯಕ್ಷಗಾನಕ್ಕೆ ಯುವ ಕಲಾವಿದರ ಆಸಕ್ತಿ ಹೆಚ್ಚುತ್ತಿದೆ. ಗುರು–ಶಿಷ್ಯ ಪರಂಪರೆ ಇನ್ನೂ ಜೀವಂತವಾಗಿದೆ. ನಗರ ಪ್ರದೇಶಗಳು, ಕಾಲೇಜುಗಳು, ಸಾಂಸ್ಕೃತಿಕ ವೇದಿಕೆಗಳಲ್ಲಿ ಯಕ್ಷಗಾನಕ್ಕೆ ಹೊಸ ಪ್ರೇಕ್ಷಕರು ದೊರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್ ಮುಂತಾದ ಮಾಧ್ಯಮಗಳಿಂದ ಯಕ್ಷಗಾನ ಜಾಗತಿಕ ಮಟ್ಟದಲ್ಲಿ ಪರಿಚಿತವಾಗುತ್ತಿದೆ. ಮಹಿಳಾ ಕಲಾವಿದರ ಭಾಗವಹಿಸುವಿಕೆ ಹೆಚ್ಚಿರುವುದು ಸಂತಸದ ಬೆಳವಣಿಗೆ. ಆದರೆ ರಾತ್ರಿಯಿಡೀ ನಡೆಯುವ ಪ್ರದರ್ಶನಗಳಿಗೆ ಪ್ರೇಕ್ಷಕರ ಸಂಖ್ಯೆ ಕೆಲವೆಡೆ ಕುಸಿತವಾಗುತ್ತಿದೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇವತ್ತಿನ ಯಕ್ಷಗಾನ ಪ್ರೇಕ್ಷಕರು ಕೇವಲ ಕಾರ್ಯಕ್ರಮವನ್ನು ನೋಡುವವರಲ್ಲ, ಯಕ್ಷಗಾನವನ್ನು ತಮ್ಮ ಹೃದಯದಲ್ಲಿ ಪ್ರತಿಕ್ಷಣ  ಆನಂದಿಸುವರು. ಇವತ್ತಿನ ಪ್ರೇಕ್ಷಕರ ಸ್ಪಂದನೆ ಕಾರ್ಯಕ್ರಮಕ್ಕೆ ಜೀವ ತುಂಬುವಂತಾಗಿದೆ. ಅವರ ಉತ್ಸಾಹವೇ ಕಲಾವಿದರಿಗೆ ದೊಡ್ಡ ಪ್ರೇರಣೆಯಾಗಿದೆ.





ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷರಂಗದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಭಿನ್ನ ಪಾತ್ರಗಳು ಮತ್ತು ಅರ್ಥಪೂರ್ಣ ಪ್ರಸಂಗಗಳನ್ನು ಮಾಡುವ ಯೋಜನೆ ಇದೆ. ಕಲಿಯುತ್ತಾ, ಬೆಳೆದು ಯಕ್ಷಗಾನಕ್ಕೆ ನನ್ನಿಂದಾದಷ್ಟು ಕೊಡುಗೆ ನೀಡಬೇಕೆಂಬ ಆಸೆ ಇದೆ. ಈಗಾಗಲೇ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿದ್ದಾಗ “ಇತ್ತೀಚಿನ ದಿನಗಳಲ್ಲಿ ಆದ ತೆಂಕುತಿಟ್ಟು ಯಕ್ಷಗಾನದ ಬದಲಾವಣೆ”ಯ ಬಗ್ಗೆ ಪ್ರಾಜೆಕ್ಟ್ ಅನ್ನು ಮಾಡಿರುತ್ತೇನೆ. ಮುಂದಿನ ದಿನಗಳಲ್ಲಿ ಯಕ್ಷಗಾನದಲ್ಲೇ ಪಿ.ಹೆಚ್.ಡಿ ಯನ್ನು ಮಾಡುವ ಆಸೆ ಇದೆ.

ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಇಲ್ಲ. ಆದರೇ ಚಿಕ್ಕವಳಿದ್ದಾಗ ಹಲವು ಮೇಳಗಳ ಕಲಾವಿದರ ಜೊತೆ ಚಿಕ್ಕ ಚಿಕ್ಕ ವೇಷಗಳನ್ನು ಮಾಡುತ್ತಾ ಇದ್ದರು. ಬಳಿಕ  ತನ್ನದೇ ಆದ ಸ್ವಂತ ನಾಟ್ಯಲಹರಿ ಮಹಿಳಾ ಯಕ್ಷಗಾನ ತಂಡವನ್ನು ಕಟ್ಟಿಕೊಂಡು ಜಿಲ್ಲೆಯ ಹಲವು ಕಡೆ ಯಕ್ಷಗಾನ ಕಾರ್ಯಕ್ರಮವನ್ನು ನೀಡಿರುತ್ತಾರೆ. ಅಲ್ಲದೇ ಭಾರತೀಯ ಜೈನ್ ಮಿಲನ್ "ಚಿಣ್ಣರ ಮಿಲನ ಯಕ್ಷಚಾವಡಿ ಬಂಟ್ವಾಳ" ಈ ಸಂಸ್ಥೆಯಲ್ಲಿ ಸುಮಾರು 5 ವರ್ಷಗಳಿಂದ ಯಕ್ಷಗಾನ ತರಬೇತಿಯನ್ನು ನೀಡುತ್ತಾ ಬಂದಿರುತ್ತಾರೆ. ಸುಮಾರು 50 ಕ್ಕೂ ಹೆಚ್ಚಿನ ಶಾಲೆಯಲ್ಲಿ ಯಕ್ಷಗಾನ ತರಬೇತಿಯನ್ನು ನೀಡಿ ಹಲವು ಯಕ್ಷಗಾನ ತಂಡದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ನೀಡಿರುತ್ತಾರೆ.

ಹವ್ಯಾಸಗಳು:-
ಸಾಂಸ್ಕೃತಿಕ ಚಟುವಟಿಕೆಗಳಾದ ಯಕ್ಷಗಾನ, ಭರತನಾಟ್ಯ, ಸಮಕಾಲೀನ ನೃತ್ಯ, ಜಾನಪದ ನೃತ್ಯ, ಫಿಲ್ಮಂ ಡ್ಯಾನ್ಸ್, ಛದ್ಮವೇಷ, ಪ್ರಬಂಧ ರಚನೆ, ಭಾಷಣ, ಲೇಖನ ಬರಹ, ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುತ್ತಾರೆ. ತಮ್ಮ 5ನೇ ವಯಸ್ಸಿನಲ್ಲಿಯೇ ಹಲವಾರು ವೇದಿಕೆಯಲ್ಲಿ ನೃತ್ಯ ಹಾಗೂ ಕಾರ್ಯಕ್ರಮ ನೀಡಿ ಬಹುಮಾನ ಪಡೆದಿರುತ್ತಾರೆ.

ಸನ್ಮಾನ ಹಾಗೂ ಪ್ರಶಸ್ತಿ:-
ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿವೆ.
♦️ ದೆಹಲಿಯಲ್ಲಿ ನಡೆದ ಆಫ್ರಿಕಾ ಶೃಂಗಸಭೆಯಲ್ಲಿ "ಶೃಂಗಬಿಂದು ಪ್ರಶಸ್ತಿ".
♦️ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ "ಸಿರಿಗನ್ನಡಂ ರಾಷ್ಟ್ರೀಯ ನೃತ್ಯ ಕಲಾರತ್ನ ಪ್ರಶಸ್ತಿ” ಎಂಬ ರಾಷ್ಟ್ರ ಮಟ್ಟದ ಪ್ರಶಸ್ತಿ.
♦️ ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ "ಚಿಗುರು -2013 ಪ್ರಶಸ್ತಿ".
♦️ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ,
♦️ ಉತ್ತಮ ಯಕ್ಷನಟಿ ಪ್ರಶಸ್ತಿ,
♦️ ರಾರಾಸಂ ಪುರಸ್ಕಾರ,
♦️ಹುಟ್ಟೂರ ಸನ್ಮಾನ, ನಮ್ಮೂರ ಹೆಮ್ಮೆ ಸಾಧಕ ಪುರಸ್ಕಾರ,
♦️ ಮಡಿಲು ಪ್ರಶಸ್ತಿ,
♦️ ಗೈಡ್ಸ್‌ನಲ್ಲಿ ರಾಷ್ಟ್ರಪತಿ ಪುರಸ್ಕಾರ,
♦️ ಸ್ವಸ್ತಿಕ್ ಸಂಭ್ರಮ ಪುರಸ್ಕಾರ,
♦️ ವಿಜ್ಞಾನ ಪ್ರತಿಭಾ ಪುರಸ್ಕಾರ,
♦️ 2025ನೇ ಸಾಲಿನ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ.
ಸುಮಾರು 400 ಕ್ಕೂ ಹೆಚ್ಚು ಶಾಲೆ, ಶುಭ ಸಮಾರಂಭಗಳಲ್ಲಿ ಸನ್ಮಾನ ಹಾಗೂ ಹಳ್ಳಿಯಿಂದ - ದಿಲ್ಲಿಯವರೆಗೆ ಮಾಡಿದ ಸಾಧನೆಗಾಗಿ ಹಲವಾರು ಕಡೆ ಸನ್ಮಾನ-ಪುರಸ್ಕಾರಗಳು ದೊರೆತಿವೆ.








ಬಾಂಗ್ಲಾದೇಶ, ದೆಹಲಿ ರಾಷ್ಟ್ರಪತಿ ಭವನ, ಮುಂಬೈ, ಪುಣೆ, ಬೆಂಗಳೂರು, ಮೈಸೂರು ದಸರಾ, ಮಡಿಕೇರಿ ದಸರಾ, ಮಂಗಳೂರು ದಸರಾ ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚಿನ ವೇದಿಕೆಯಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ನೀಡಿರುತ್ತಾರೆ. ಅಲ್ಲದೇ ಮಕ್ಕಳ ಪ್ರತಿಭೆಯನ್ನು ಸೂಚಿಸುವ ಪ್ರತಿಭಾ ಕಾರಂಜಿಯ ಯಕ್ಷಗಾನ ಸ್ಪರ್ಧೆಯಲ್ಲಿ ಮೊದಲ ಬಾರಿ ಜಿಲ್ಲಾ ಮಟ್ಟದಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಶ್ರುತಿ ದಾಸ್ ಅವರು 7.05.2023ರಂದು ಸಚಿನ್ ಕುಮಾರ್ ಕೆ.ಎಸ್ ಅವರನ್ನು ಮದುವೆಯಾಗಿ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ, ಪತಿ, ಅತ್ತೆ, ಮಾವ, ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಶ್ರುತಿ ದಾಸ್.





ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395