ಯಕ್ಷ ಸಾಧಕರು 376
"ಯಕ್ಷ ವನಿತೆ"
ಕುಕ್ಕೆ ಸುಬ್ರಹ್ಮಣ್ಯ ಇವರ ಹುಟ್ಟೂರು. ಅಲ್ಲಿನ ರುದ್ರಪಾದ ರಾಮಕೃಷ್ಣ ಭಟ್ ಮತ್ತು ಪರಮೇಶ್ವರಿ ದಂಪತಿಗಳ ಪುತ್ರಿಯಾಗಿ ಆಗಸ್ಟ್ 15 ರಂದು ಜಯಲಕ್ಷ್ಮಿ ಅವರು ಜನಿಸಿದರು. ಬಾಲ್ಯದಲ್ಲಿ ಸುಬ್ರಹಣ್ಯ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ನಡೆಯುತ್ತಿದ್ದ ಸಂಗೀತ, ನಾಟಕಗಳು ಸಾಂಸ್ಕೃತಿಕ ಕಲೆಯಲ್ಲಿ ಆಸಕ್ತಿಯನ್ನು ಮೂಡಿಸಲು ಕಾರಣವಾಯಿತು. ಬಿಎಸ್ಸಿ ಇವರ ವಿದ್ಯಾಭ್ಯಾಸ. ಬಾಲ್ಯದಿಂದ ಯಕ್ಷಗಾನ ನೋಡುವ ಆಸಕ್ತಿ. ಐವತ್ತನೇ ವರ್ಷದಲ್ಲಿ ಪ್ರಥಮವಾಗಿ ಯಕ್ಷಗಾನದಲ್ಲಿ ನರಕಾಸುರ ಪಾತ್ರ ಮಾಡಿದ ಹೆಗ್ಗಳಿಕೆ ಮತ್ತೆ ತಾಳಮದ್ದಳೆಯಲ್ಲಿ ಮುಂದುವರಿಕೆ. ಕಳೆದ ಹತ್ತು ವರ್ಷಗಳಿಂದ ಪದ್ಮಾ ಕೆ ಆರ್ ಆಚಾರ್ಯ ಸಾರಥ್ಯದ
ಧೀಶಕ್ತಿ ಮಹಿಳಾ ಯಕ್ಷ ಬಳಗದ ಸಕ್ರಿಯ ಸದಸ್ಯೆ, ಪದ್ಮಾ ಆಚಾರ್ಯ ದಂಪತಿ ತಾಳಮದ್ದಳೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು ಹಾಗೂ ಮನೆಯವರ ಬೆಂಬಲವೂ ಇದೆ. ವೇಷ ಮಾಡಲು ಸ್ವಲ್ಪ ಮಾರ್ಗದರ್ಶನ ನೀಡಿದರು ಶಶಾಂಕ ನೆಲ್ಲಿತ್ತಾಯ.
ನೆಚ್ಚಿನ ವೇಷಗಳು:-
ಕೌರವ, ದ್ರೌಪದಿ, ವಾಲಿ.
ನೆಚ್ಚಿನ ಪ್ರಸಂಗಗಳು:-
ಕೃಷ್ಣ ಸಂಧಾನ, ವೀರಮಣಿಕಾಳಗ, ಸಮರ ಸೌಗಂಧಿಕಾ, ಶ್ರೀ ರಂಗ ತುಲಾಭಾರ, ವಾಲಿಮೋಕ್ಷ,
ಪಾಂಡವ ಸ್ವರ್ಗಾರೋಹಣ, ಕರ್ಣಾರ್ಜುನ ಕಾಳಗ, ಕರ್ಮಬಂಧ ಇತ್ಯಾದಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಯಾವುದೇ ತಾಳಮದ್ದಳೆಯಾದರೂ ಸರಿಯಾದ ತಯಾರಿ ಮಾಡಿಕೊಂಡು ಹೋಗುತ್ತೇನೆ, ಇಡೀ ಪ್ರಸಂಗದ ನಡೆಯನ್ನು ಅರಿತು, ಪದ್ಯಗಳನ್ನು ನೋಡಿಕೊಂಡು ಪೂರಕ ಮಾಹಿತಿಯನ್ನು ಕಲೆ ಹಾಕಿ, ಟಿಪ್ಪಣಿ ಮಾಡಿ, ವಿಷಯಗಳನ್ನು ಬರೆದು ಸಂಗ್ರಹಿಸಿ, ಪಾತ್ರವನ್ನು ಪ್ರಸ್ತುತ ಪಡಿಸುತ್ತೇನೆ ಎಂದು ಹೇಳುತ್ತಾರೆ ಜಯಲಕ್ಷ್ಮಿ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದಲ್ಲಿ ಎಲ್ಲಾ ತರಹದ ಪ್ರೇಕ್ಷಕರು ಇರುತ್ತಾರೆ, ಅವರವರ ಭಾವಕ್ಕೆ ತಕ್ಕಂತೆ. ನಮ್ಮ ಸರಿ ತಪ್ಪುಗಳನ್ನು ತಿದ್ದಿ ಸಲಹೆ ನೀಡುವ ವಿಮರ್ಶಕರೂ ಇದ್ದಾರೆ, ಉತ್ತಮ. ಮುಖಸ್ತುತಿ ಮಾಡುವ ಅಭಿಮಾನಿಗಳಿಂದ ಬೆಳವಣಿಗೆ ಖಂಡಿತಾ ಸಾಧ್ಯವಿಲ್ಲ, ನಮ್ಮ ಕುಂದು ಕೊರತೆಗಳನ್ನು ನಾವು ಅರ್ಥ ಮಾಡಿಕೊಂಡು, ಉತ್ತಮ ಸಾಧನೆ ಮಾಡಬೇಕು" ಎನ್ನುವುದು ಜಯಲಕ್ಷ್ಮಿಯವರ ಅಭಿಪ್ರಾಯ.
ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ರಂಗಾಭಟ್ಟರೊಂದಿಗೆ ಉತ್ತರೆಯ ಪಾತ್ರ, ಇನ್ನೊಮ್ಮೆ ಅಶೋಕ ಭಟ್ಟರೊಂದಿಗೆ ಪಂಚವಟಿಯ ಸೀತೆ ಪಾತ್ರ ಮಾಡುವ ಅವಕಾಶ ಸಿಕ್ಕಿತ್ತು, ಅದೇ ನನ್ನ ಪಾಲಿಗೆ ಪ್ರಶಸ್ತಿ ಎಂದು ಹೇಳುತ್ತಾರೆ ಜಯಲಕ್ಷ್ಮಿ.
ತಾಳಮದ್ದಳೆ, ಭಜನೆ, ಯೋಗ , ಕಾರ್ಯಕ್ರಮ ನಿರ್ವಹಣೆ, ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಭಾಗವಹಿಸುವಿಕೆ, ಇವರ ಹವ್ಯಾಸಗಳು.
ಜಯಲಕ್ಷ್ಮಿ ವಿ ಭಟ್ ಅವರು 15.05.1984ರಂದು ವೆಂಕಟೇಶ್ವರ ಭಟ್ ಕುಕ್ಕುಪುಣಿ (ನಿವೃತ್ತ ಕ್ಯಾಂಪ್ಕೋ ಮ್ಯಾನೇಜರ್) ಅವರನ್ನು ಮದುವೆಯಾಗಿ ಮಗ ವಿಶ್ವಾಸ ಸುಬ್ರಹ್ಮಣ್ಯ, ಕರ್ನಾಟಕ ಬ್ಯಾಂಕ್ ಮ್ಯಾನೇಜರ್, ಸೊಸೆ ಸುಪ್ರಿಯಾ ಶಿಕ್ಷಕಿ,
ಮೊಮ್ಮಗಳು ಶಿವಾನಿಯವರೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.
ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಜಯಲಕ್ಷ್ಮಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment