ಯಕ್ಷ ಸಾಧಕರು 377
"ಯಕ್ಷ ಕನ್ಯೆ"
ಇವರ ತಂದೆಗೆ ಪುರಾಣ, ಯಕ್ಷಗಾನಗಳ ಕುರಿತು ವಿಶೇಷವಾದ ಆಸಕ್ತಿಯಿತ್ತು. ಇವರ ಕುಟುಂಬದ ಅನೇಕ ಹಿರಿಯರು ಹಿಮ್ಮೇಳ ಮುಮ್ಮೇಳ ಕಲಾವಿದರಾಗಿದ್ದರು. ಆಗಿನ ಕಾಲದ ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳಾಗಿದ್ದರು. ಅಜ್ಜ (ತಂದೆಯ ತಂದೆ) ಯಕ್ಷಗಾನ ಪ್ರಿಯರು, ಮಾತ್ರವಲ್ಲದೆ, ಪ್ರಸಂಗ ವಾಚನ, ಕಿರಿಯರಿಗೆ ಯಕ್ಷಗಾನ ಅರ್ಥಗಾರಿಕೆಗೆ ಮಾರ್ಗದರ್ಶನ ನೀಡುವಷ್ಟು ಸಮರ್ಥರಿದ್ದರು. ಹಾಗಾಗಿ ಇವರಿಗೆ ಯಕ್ಷಗಾನ ರಕ್ತಗತವಾಗಿ ಬಂದ ಕಲೆ.
ವೃತ್ತಿಯಲ್ಲಿ ಇವರು ಶಿಕ್ಷಕಿ, ಪ್ರವೃತ್ತಿಯಲ್ಲಿ ಯಕ್ಷಗಾನ, ಭರತನಾಟ್ಯ ಕಲಾವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನುಳಿಯಾಲಿನ ಎನ್. ರಾಧಾಕೃಷ್ಣ ರೈ ಹಾಗೂ ಲತಾ ಆರ್. ಕೆ. ದಂಪತಿಯರ ಸುಪುತ್ರಿಯಾಗಿ 11.12.2001ರಂದು ಅನನ್ಯ ರೈ ಎನ್.ಆರ್ ಅವರ ಜನನ. ಪ್ರಾಣಿಶಾಸ್ತ್ರದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ:-
ಸಣ್ಣ ವಯಸ್ಸಿನಿಂದಲೇ ನನ್ನ ತಂದೆ ನನಗೆ ಪುರಾಣ ಕಥೆಗಳನ್ನೂ, ಅದರ ಪಾತ್ರಗಳನ್ನೂ ರಸವತ್ತಾಗಿ ಕಥಾ ರೂಪದಲ್ಲಿ ಹೇಳುತ್ತಿದ್ದರು. ಅಲ್ಲಿಂದ ನನಗೆ ಪುರಾಣದಲ್ಲಿ ಆಸಕ್ತಿ ಉಂಟಾಯಿತು. ಪೋಷಕರು ಅವಕಾಶವಿದ್ದಾಗ ಯಕ್ಷಗಾನ ಪ್ರದರ್ಶನಗಳಿಗೆ ಕರೆದುಕೊಂಡು ಹೋಗಿ ಸ್ವಲ್ಪ ಹೊತ್ತು ಯಕ್ಷಗಾನ ತೋರಿಸುತ್ತಿದ್ದರು. ಹಾಗಾಗಿ ಯಕ್ಷಗಾನ, ಆ ಕಲೆಯ ವೇಷಭೂಷಣ, ನಾಟ್ಯ, ಹಿಮ್ಮೇಳ, ಮಾತುಗಾರಿಕೆಯ ಮೂಲಕ ಕಥಾ ನಿರೂಪಣೆ, ಇತ್ಯಾದಿಗಳ ಕಾರಣ ಯಕ್ಷಗಾನ ವಿಶೇಷ ರೀತಿಯಲ್ಲಿ ನನ್ನನ್ನು ಆಕರ್ಷಿಸಿತು. ಅದೇ ಸಮಯಕ್ಕೆ ಉರ್ವಸ್ಟೋರಿನ ಶಾರದಾ ಯಕ್ಷ ಕಲಾ ಕೇಂದ್ರದಲ್ಲಿ ಗುರು ರಾಕೇಶ್ ರೈ ಅಡ್ಕರವರ ಬಳಿ ಯಕ್ಷಗಾನ ತರಬೇತಿಗೆ ಸೇರ್ಪಡೆಗೊಂಡೆ. ಅಲ್ಲಿಂದ ಯಕ್ಷಗಾನ ಕ್ಷೇತ್ರದಲ್ಲಿ ಪಯಣ ಆರಂಭ.
ನೆಚ್ಚಿನ ಪ್ರಸಂಗಗಳು:-
ದಕ್ಷಯಜ್ಞ, ದೇವಿ ಮಹಾತ್ಮೆ, ಕೃಷ್ಣಲೀಲೆ, ಪಾರಿಜಾತ ಪ್ರಸೂನ, ಮಾನಿಷಾದ, ಸುಧನ್ವ ಮೋಕ್ಷ, ಸುದರ್ಶನ ವಿಜಯ ಇತ್ಯಾದಿ.
ನೆಚ್ಚಿನ ವೇಷಗಳು:-
ಮಾನಿಷಾದದ ಸೈರಿಣಿ, ಶ್ರೀರಾಮ ಪಟ್ಟಾಭಿಷೇಕದ ಕೈಕೇಯಿ, ಪಾರಿಜಾತ ಪ್ರಸೂನದ ಸತ್ಯಭಾಮೆ, ಕುಮಾರ ವಿಜಯದ ಮಾಯಾ ಅಜಮುಖಿ, ಶ್ರೀ ಕೃಷ್ಣ ಲೀಲೆಯ ಕೃಷ್ಣ/ ಮಾಯಾ ಪೂತನಿ, ದಕ್ಷಾಧ್ವರದ ದಾಕ್ಷಾಯಿಣಿ, ಸುಧನ್ವ ಮೋಕ್ಷದ ಪ್ರಭಾವತಿ, ದೇವಿ ಮಹಾತ್ಮೆಯ ಮಾಲಿನಿ ಮುಂತಾದವುಗಳು.
ಹೆಚ್ಚಾಗಿ ಮಾಡುವುದು ಸೌಮ್ಯ ಪಾತ್ರಗಳಾದ ಕೃಷ್ಣ, ವಿಷ್ಣು, ಮುಂತಾದವುಗಳು. ಆದರೆ ಒಮ್ಮೆ ಗುರುಗಳು ಶಿಷ್ಯವೃಂದಕ್ಕೆ ಆಯೋಜಿಸಿದ ಕದಂಬ ಕೌಶಿಕೆ ಜೋಡಾಟದಲ್ಲಿ ಚಂಡ ಮುಂಡರ ಪಾತ್ರ ನೀಡಿ ಪ್ರೋತ್ಸಾಹಿಸಿದ್ದು ಇಂದಿಗೂ ವಿಶೇಷ ಅನುಭವಗಳಲ್ಲಿ ಒಂದಾಗಿದೆ. ಆದರೂ ಅಭಿನಯ ಹಾಗೂ ಭಾವಾಭಿವ್ಯಕ್ತಿಗೆ ಪ್ರಾಮುಖ್ಯತೆ ಇರುವ ಸ್ತ್ರೀ ಪಾತ್ರಗಳು ಬಹಳ ಇಷ್ಟ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಯಾವುದೇ ಪಾತ್ರವನ್ನು ಪ್ರಥಮ ಬಾರಿಗೆ ನಿರ್ವಹಿಸುವುದಾದರೆ ಗುರುಗಳು ಮಾರ್ಗದರ್ಶನ ನೀಡುತ್ತಾರೆ. ಆನಂತರ ಅದೇ ಪಾತ್ರ ನಿರ್ವಹಿಸುವುದಿದ್ದರು ಕೂಡಾ, ಕಳೆದ ಪ್ರದರ್ಶನಕ್ಕಿಂತ ಉತ್ತಮ ರೀತಿಯಲ್ಲಿ ಹೇಗೆ ಮಾಡಬಹುದೆಂದು ಅನೇಕ ಕಡೆಗಳಿಂದ ಹಿರಿಯ ಕಲಾವಿದರ ಪಾತ್ರಗಳನ್ನು ನೋಡಿ ಅರ್ಥೈಸಿಕೊಳ್ಳುತ್ತೇನೆ. ಉತ್ತಮ ರೀತಿಯ, ಶುದ್ಧ ಕನ್ನಡದ ಸಂಭಾಷಣೆಗೆ ಬೇಕಾಗಿ ತಂದೆಯ ಮಾರ್ಗದರ್ಶನ ಪಡೆದುಕೊಳ್ಳುತ್ತೇನೆ ಎಂದು ಹೇಳುತ್ತಾರೆ ಅನನ್ಯ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯುವಜನತೆ ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನದೆಡೆಗೆ ಆಕರ್ಷಿತರಾಗಿ, ಕಲಿಯಲು ಮುಂದು ಬರುವುದರಿಂದ ಯಕ್ಷಗಾನ ಕಲೆಗೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಭವಿಷ್ಯವಿದೆ ಎಂದೆನಿಸುತ್ತದೆ.
ಯಕ್ಷಗಾನಕ್ಕೆಂದು ಹೆಚ್ಚಿನ ಪ್ರಶಸ್ತಿಗಳು ಬಂದಿರುವುದಿಲ್ಲ. ಆದರೆ ಕೆಲವೊಂದು ಪ್ರಶಂಸೆಗಳು ನೋಡುಗರಿಂದ ದೊರಕಿದ್ದು ಪ್ರಶಸ್ತಿ ಸನ್ಮಾನಗಳಿಗಿಂತಲೂ ಹೆಚ್ಚಿನ ಖುಷಿಯನ್ನು ನೀಡಿದೆ.
ಒಮ್ಮೆ ಮೂಡಬಿದ್ರೆಯಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ನಮ್ಮ ತಂಡದ ಸುಧನ್ವಾರ್ಜುನ ಪ್ರಸಂಗಕ್ಕೆ ಪ್ರಥಮ ಸ್ಥಾನ ಬಂದಿತ್ತು. ಅದರಲ್ಲಿ ನಾನು ಪ್ರಭಾವತಿಯ ಪಾತ್ರ ನಿರ್ವಹಿಸಿದ್ದೆ. ನಮ್ಮ ಪ್ರದರ್ಶನ ಮುಗಿದ ನಂತರ, ಬಣ್ಣ ತೆಗೆಯುತ್ತಿರುವ ಹೊತ್ತಿನಲ್ಲಿ ವಯೋವೃದ್ಧ ಹಿರಿಯರೊಬ್ಬರು ಪ್ರಭಾವತಿ ಪಾತ್ರ ಮಾಡಿದ್ದು ಯಾರು ಎಂದು ವಿಚಾರಿಸಿಕೊಂಡು ಬಂದು, ನನ್ನಲ್ಲಿ "ತುಂಬಾ ಮನೋಜ್ಞವಾಗಿ ಅಭಿನಯಿಸಿದ್ದಿ, ನನ್ನಲ್ಲಿ ನಿನಗೆ ಕೊಡುವುದಕ್ಕೆ ಹೆಚ್ಚೇನು ಇಲ್ಲ. ನಾನು ಆಶೀರ್ವಾದ ಪೂರ್ವಕವಾಗಿ ಕೊಡುವ ನೂರು ರೂಪಾಯಿಯನ್ನು ಇಟ್ಟುಕೋ, ದೇವರು ನಿನಗೆ ಒಳ್ಳೆಯದು ಮಾಡಲಿ" ಎಂದು ಆಶೀರ್ವದಿಸಿದರು. ನನ್ನ 10ನೇ ತರಗತಿಯ ಸಮಯದಲ್ಲಿ ಈ ಕುರಿತು ನನಗೇನು ಅನಿಸಿರಲಿಲ್ಲ. ಆದರೆ ಈಗ ಆಲೋಚಿಸಿದರೆ ಎಲ್ಲಾ ಪ್ರಶಸ್ತಿಗಳಿಗಿಂತ ಹೆಚ್ಚಿನದ್ದು ಎಂದು ನನಗನಿಸುತ್ತಿದೆ.
ಗುರುಗಳ ನಿರ್ದೇಶನದಲ್ಲಿ ಮಂಗಳೂರು ಪುರಭವನದಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ "ಶ್ರೀರಾಮ ವನಗಮನ"ದಲ್ಲಿ ನನ್ನ ಕೈಕೇಯಿಯ ಪಾತ್ರವನ್ನು ವೀಕ್ಷಿಸಿದ ಸನ್ಮಾನ್ಯ ಡಾ. ಮೋಹನ ಆಳ್ವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನನ್ನ ಕೈಕೇಯಿಯ ಪಾತ್ರವನ್ನು ಪೂಜ್ಯ ಕೋಳ್ಯೂರರ ಪಾತ್ರಕ್ಕೆ ಹೋಲಿಸಿದ್ದು ನಿಜಕ್ಕೂ ಅವಿಸ್ಮರಣೀಯ.
ಅದರೊಂದಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಎರಡು ಬಾರಿ ಪ್ರತಿಭಾ ಪುರಸ್ಕಾರ ಹಾಗೂ ಕಲ್ಕೂರ ಪ್ರತಿಷ್ಠಾನದ ಯಕ್ಷಕೃಷ್ಣ ವಿಭಾಗದಲ್ಲಿ ಪ್ರಥಮ ಸ್ಥಾನ.
ಹವ್ಯಾಸಗಳು:-
ಯಕ್ಷಗಾನದೊಂದಿಗೆ ಭರತನಾಟ್ಯ, ನಾಟಕ, ಸಂಗೀತ, ಚಿತ್ರಕಲೆಗಳನ್ನು ಅಭ್ಯಸಿಸುತ್ತಿದ್ದೇನೆ ಎಂದು ಹೇಳುತ್ತಾರೆ ಅನನ್ಯ.
ಮೂಲತಃ ನಾನು ಭರತನಾಟ್ಯ ಕಲಾವಿದೆ. ಮೂರನೇ ವಯಸ್ಸಿನಲ್ಲಿ ಗುರುಗಳಾದ ಶ್ರೀಮತಿ ರಶ್ಮಿ ಕೋಟ್ಯಾನ್ ರವರಿಂದ ಭರತನಾಟ್ಯದ ಮೊದಲ ಪಾಠವನ್ನು ಪಡೆದು ಮುಂದಕ್ಕೆ ಜೂನಿಯರ್ ಗ್ರೇಡ್ ಪರೀಕ್ಷೆಯನ್ನು ವಿದುಷಿ ಶ್ರೀಮತಿ ಜ್ಯೋತಿ ಪುರುಷೋತ್ತಮ್ ಅವರ ಬಳಿ ಮುಂದುವರೆಸಿದೆ. ಮುಂದಕ್ಕೆ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಗುರುಗಳಾದ ಕಲಾತಪಸ್ವಿ ವಿದ್ವಾನ್ ಬಾಲಕೃಷ್ಣ ಮಂಜೇಶ್ವರರವರ ಬಳಿ ಕಲಿತು, ಕರ್ನಾಟಕ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದೆ. ಇದೀಗ ವಿದ್ವತ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ.
ಭರತನಾಟ್ಯದಲ್ಲಿ ಕೇಂದ್ರ ಸರ್ಕಾರ ನೀಡುವ CCRT , ಶಿಷ್ಯ ವೇತನ, ಕರ್ನಾಟಕ ಸರ್ಕಾರದ ಸಂಗೀತ ನೃತ್ಯ ಅಕಾಡೆಮಿ ನೀಡುವ ಶಿಷ್ಯವೇತನ, ಪ್ರತಿಭಾ ಕಾರಂಜಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪುತ್ತೂರು ವಿಭಾಗಕ್ಕೆ ಪ್ರಥಮ ಹಾಗೂ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್. ಇದರೊಂದಿಗೆ ಕಲಿಕೆಯಲ್ಲಿ SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 9ನೇ ರಾಂಕ್, ಡಿಗ್ರಿಯಲ್ಲಿ ಚಿನ್ನದ ಪದಕ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ದ್ವಿತೀಯ ರಾಂಕ್.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆಗಳು:-
ಯೋಜನೆಗಳೆಂದೇನೂ ಇಲ್ಲ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ, ಕಲಾಮಾತೆಯ ಸೇವೆಯನ್ನು ಮಾಡಲು ಸದಾ ಸಿದ್ಧ ಎಂದು ಹೇಳುತ್ತಾರೆ ಅನನ್ಯ.
ತಂದೆ, ತಾಯಿ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಅನನ್ಯ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment