ಯಕ್ಷ ಸಾಧಕರು 378
"ಯಕ್ಷ ಕಲಾ ಚತುರೆ"
ಬಾಲ್ಯದಲ್ಲಿ ತಂದೆಯೊಂದಿಗೆ ಯಕ್ಷಗಾನ ನೋಡಲು ಹೋಗುತ್ತಿದ್ದ ಇವರು ಯಕ್ಷಗಾನ ಕ್ಷೇತ್ರದೆಡೆಗೆ ಆಕರ್ಷಣೆಯಾಗಿ ಮುಂದೆ ನಾಟ್ಯ ಕಲಿಯಬೇಕೆಂಬ ಆಸೆ ಮೂಡಿತು. ಆದರೆ ತಂದೆ ಭಾಗವತಿಕೆ ಕಲಿಯುವಂತೆ ಪ್ರೇರೇಪಿಸಿದರು. ಮುಂದೆ ತಂದೆ ತಾಯಿಯ ಪ್ರೋತ್ಸಾಹದಿಂದ ಯಕ್ಷಗಾನ ರಂಗದಲ್ಲಿ ಯುವ ಭಾಗವತರಾಗಿ ಕೆಲವು ಮೇಳಗಳಲ್ಲಿ ಅತಿಥಿ ಭಾಗವತರಾಗಿ ಭಾಗವಹಿಸಿ ಕಳೆದ 7 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಲಾವಿದೆ ರಚನಾ ಚಿದ್ಗಲ್ಲು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಕೂತ್ಕುಂಜ ಗ್ರಾಮದ ಚಿದ್ಗಲ್ಲು ಮನೆಯ ಗೋಪಾಲ ಗೌಡ ಚಿದ್ಗಲ್ಲು ಹಾಗೂ ಹೊನ್ನಮ್ಮ ಚಿದ್ಗಲ್ಲು ಇವರ ಮಗಳಾಗಿ 07.04.2004ರಂದು ರಚನಾ ಚಿದ್ಗಲ್ಲು ಅವರ ಜನನ.
ವಿದ್ಯಾಭ್ಯಾಸ:-
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ - ಕೆ ಎಸ್ ಗೌಡ ಆಂಗ್ಲ ಮಾಧ್ಯಮ ಶಾಲೆ ನಿಂತಿಕಲ್ಲು
ಪದವಿ ಪೂರ್ವ ಶಿಕ್ಷಣ - ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು, ಸುಬ್ರಹ್ಮಣ್ಯ
ಬಿ ಬಿ ಎ ಪದವಿ - ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು, ಸುಬ್ರಹ್ಮಣ್ಯ.
ಪ್ರಸ್ತುತ ಸುಳ್ಯದ ಕೆ ವಿ ಜಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಪ್ರಥಮ ವರ್ಷದ ಎಂ ಬಿ ಎ ವ್ಯಾಸಂಗ ಮಾಡುತ್ತಿದ್ದಾರೆ.
ಮೊದಲಿಗೆ ಬಾಲ ಪಾಠವನ್ನು ಸುಭಾಷ್ ಪಂಜ ಇವರಲ್ಲಿ ಅಭ್ಯಸಿಸಿ ನಂತರ ಹೆಚ್ಚಿನ ಅಭ್ಯಾಸವನ್ನು ದಿ. ಪದ್ಯಾಣ ಗಣಪತಿ ಭಟ್ ಇವರಲ್ಲಿ ಅಭ್ಯಸಿಸಿ ಪ್ರಸ್ತುತ ಶ್ರೀ ವಿಶ್ವ ವಿನೋದ ಬನಾರಿ ಹಾಗೂ ಶ್ರೀ ವೆಂಕಟರಾಮ ಭಟ್ ಸುಳ್ಯ ಇವರಲ್ಲಿ ಪ್ರಸಂಗ ನಡೆಗಳನ್ನು ಹಾಗೂ ಹೆಚ್ಚಿನ ಮಾಹಿತಿಗಳನ್ನು ಕಲಿಯುತ್ತಿದ್ದಾರೆ ರಚನಾ.
ನೆಚ್ಚಿನ ಪ್ರಸಂಗಗಳು:-
ಶ್ರೀ ದೇವಿ ಮಹಾತ್ಮೆ, ಸುಧನ್ವಾರ್ಜುನ ಕಾಳಗ, ಕೃಷ್ಣಾರ್ಜುನ ಕಾಳಗ, ಶೂರಪದ್ಮಾಸುರ ಕಾಳಗ, ವಾಲಿವಧೆ, ಜಾಂಬವತಿ ಕಲ್ಯಾಣ ಇತ್ಯಾದಿ.
ನೆಚ್ಚಿನ ರಾಗ:-
ಮೋಹನ, ಶುದ್ಧ ಸಾವೇರಿ, ಅಭೇರಿ, ಮಧ್ಯಮಾವತಿ ಹೀಗೆ ಎಲ್ಲಾ ರಾಗಗಳನ್ನೂ ನಾನು ಮೆಚ್ಚುತ್ತೇನೆ. ಸಂದರ್ಭ, ಭಾವ, ರಸಗಳಿಗೆ ಅನುಗುಣವಾಗಿ ನನ್ನ ಮನೋಧರ್ಮದಂತೆ ಅವುಗಳನ್ನು ಪ್ರಯೋಗಿಸುತ್ತೇನೆ. ಕೇವಲ ರಾಗದ ರಂಜನೆಗೂ, ವಿಸ್ತಾರಕ್ಕೂ ಭಾಗವತಿಕೆ ಇರುವುದಲ್ಲ. ಭಾವ ಪ್ರಕಟಣೆಗೆ.
ನೆಚ್ಚಿನ ಭಾಗವತರು:-
ಗುರುಗಳಾದ ಪದ್ಯಾಣ ಗಣಪತಿ ಭಟ್ ಅವರು, ಮತ್ತೆ ಎಲ್ಲಾ ಭಾಗವತರು ನೆಚ್ಚಿನವರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದಲ್ಲಿ ಈಗ ಅದರ ಮೂಲ ಸ್ವರೂಪವನ್ನು ಬಿಟ್ಟು ಸಿನಿಮೀಯ ಶೈಲಿಯ ಪದ್ಯಗಳನ್ನು ಪ್ರದರ್ಶಿಸುವುದು ಹಾಗೂ ಜನರು ಅದನ್ನು ಮೆಚ್ಚಿ ಹೊಗಳುವುದು ದುಃಖದ ಸಂಗತಿ..
ಯಕ್ಷಗಾನವು ಪ್ರೇಕ್ಷಕ ಕೇಂದ್ರಿತ ಕಲೆ ಆಗಿರುವುದರಿಂದ ಪ್ರೇಕ್ಷಕರಿಗೆ ಅನುಗುಣವಾಗಿ ಬದಲಾವಣೆ ತಂದರೆ ಉತ್ತಮ. ಆದರೆ ಆ ಬದಲಾವಣೆ ಯಕ್ಷಗಾನದ ಚೌಕಟ್ಟನ್ನು ಮೀರಬಾರದು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಪ್ರೇಕ್ಷಕರಲ್ಲಿ ಪೀಳಿಗೆ ಕಳೆದಂತೆ ಏಕಾಗ್ರತೆ ಅವಧಿ ಕಡಿಮೆ ಆಗಿರುವುದರಿಂದ, ಯಕ್ಷಗಾನವು ಪುರಾಣದ ಕಥೆಗಳನ್ನು ಜನರಿಗೆ ತಲುಪಿಸುವ ಮುಖ್ಯ ಉದ್ದೇಶದಿಂದ ಹೊರಗುಳಿದು ಮನೋರಂಜನೆಯ ಒಂದು ಮಾಧ್ಯಮವಾಗಿ ಮಾರ್ಪಾಡಾಗುತ್ತಿದೆ.
ಹಿಂದೆ ಪ್ರೇಕ್ಷಕರು ಕಥೆಗೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ಆದರೆ ಈಗ ಪ್ರೇಕ್ಷಕರು ಕೆಲಸದ ಒತ್ತಡದಿಂದ ಕಥೆಯನ್ನು ಬಿಟ್ಟು ಯಕ್ಷಗಾನದ ಪದ್ಯ ಹಾಗೂ ನೃತ್ಯದ ಮೇಲೆ ಹೆಚ್ಚು ಗಮನ ಕೊಡುತ್ತಿರುವುದನ್ನು ಕಾಣಬಹುದು..
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಆಹಾರ್ಯವು ಯಕ್ಷಗಾನದಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನಡೆಯುವ ಎಲ್ಲ ಬೆಳವಣಿಗೆಗಳೂ ಸ್ವಾಗತಾರ್ಹ.
ಯಕ್ಷರಂಗದಲ್ಲಿ ಮುಂದಿನ ಯೋಜನೆ:-
ಯಕ್ಷಗಾನದ ಚೌಕಟ್ಟನ್ನು ಮೀರದೆ ಇನ್ನಷ್ಟು ಅಧ್ಯಯನ ಮಾಡಿ ಈ ಕ್ಷೇತ್ರದಲ್ಲಿ ಮುಂದುವರಿಯುವುದು ಹಾಗೂ ಹೆಚ್ಚಿನ ಪರಿಣತಿ ಪಡೆದ ನಂತರ ಆಸಕ್ತರಿಗೆ ಪಾಠ ಮಾಡಬೇಕೆಂದಿದ್ದೇನೆ.
ಸಂಗೀತ, ಭರತನಾಟ್ಯ, ಯಕ್ಷಗಾನ ಇವರ ಹವ್ಯಾಸಗಳು.
ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮೊದಲಿಗೆ ಶ್ರೀಮತಿ ರೇಖಾ ರೇವತಿ ಹೊನ್ನಾಡಿ ಇವರಲ್ಲಿ ಅಭ್ಯಸಿಸಿ ಸೀನಿಯರ್ ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ಪೂರೈಸಿ ಪ್ರಸ್ತುತ ಡಾ. ವಿದ್ವಾನ್ ಅನೀಶ್ ವಿ ಭಟ್ ಇವರಲ್ಲಿ ವಿದ್ವತ್ ವಿಭಾಗವನ್ನು ಅಭ್ಯಸಿಸುತ್ತಿದ್ದಾರೆ. ಭರತನಾಟ್ಯವನ್ನು ಶ್ರೀಮತಿ ಸ್ವಸ್ತಿಕಾ ರೈ ಇವರಲ್ಲಿ ಅಭ್ಯಸಿಸಿ ಜೂನಿಯರ್ ಪರೀಕ್ಷೆಯನ್ನು ಪೂರೈಸಿರುತ್ತಾರೆ.
ಶ್ರೀ ವೆಂಕಟರಾಮ ಭಟ್ ಸುಳ್ಯ ಹಾಗೂ ಪ್ರಕಾಶ ಮೂಡಿತ್ತಾಯ ಇವರ ನಿರ್ದೇಶನದಲ್ಲಿ ಮೂಡಿ ಬಂದ ಇಂಗ್ಲೀಷ್ ಯಕ್ಷಗಾನದಲ್ಲಿ ಇಂಗ್ಲೀಷ್ ನಲ್ಲಿ ಭಾಗವತಿಕೆಯನ್ನು ಮಾಡಿರುತ್ತಾರೆ. ಕನ್ನಡ, ತುಳು, ಅರೆಭಾಷೆ, ಇಂಗ್ಲೀಷ್ ನಲ್ಲಿ ಭಾಗವತಿಕೆಯನ್ನು ಮಾಡಿರುತ್ತಾರೆ ರಚನಾ.
ಸನ್ಮಾನ ಹಾಗೂ ಪ್ರಶಸ್ತಿ:-
♦️ ಶ್ರವಣರಂಗ ಪ್ರತಿಷ್ಠಾನ (ರಿ.) ಸವಣೂರು ಯಕ್ಷಗಾನ ಭಾಗವತ ದಿ. ರಾಮಚಂದ್ರ ಅರ್ಬಿತ್ತಾಯ ಸ್ಮರಣಾರ್ಥ ನೀಡುವ "ಶ್ರವಣಸ್ವರ" ಪ್ರಶಸ್ತಿ.
ಸನ್ಮಾನಗಳು:-
♦️ ದಿ. ಸಣ್ಣಣ್ಣ ಮಾಸ್ಟರ್ ಸ್ಮಾರಕ, ಚೌಕಿಮನೆ ಪಂಜ ಇವರಿಂದ ಪ್ರತಿಭಾ ಪುರಸ್ಕಾರ.
♦️ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ.
♦️ ಲಯನ್ಸ್ ಕ್ಲಬ್ ಪಂಜ.
♦️ ಜೇಸಿಐ ಪಂಜ ಪಂಚಶ್ರೀ.
♦️ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್.
♦️ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ.
♦️ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು, ಪಂಜ ಹೋಬಳಿ ಘಟಕದ "ಸಿರಿಗನ್ನಡ ಸನ್ಮಾನ".
♦️ ಶ್ರೀ ದುರ್ಗಾ ಮಹಿಳಾ ಮಂಡಲ (ರಿ.) ಕೂತ್ಕುಂಜ.
♦️ ಶಿವಾಜಿ ಯುವಕ ಮಂಡಲ (ರಿ.) ಕೂತ್ಕುಂಜ.
ಹೀಗೆ ಹಲವು ಸಂಘ ಸಂಸ್ಥೆಗಳು ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ತಂದೆ, ತಾಯಿ ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ರಚನಾ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈
Comments
Post a Comment