ಯಕ್ಷ ಸಾಧಕರು 380
"ಯಕ್ಷ ಕನ್ನಿಕೆ"
ತಂದೆಯೇ ಇವರ ಯಕ್ಷ ಪಯಣಕ್ಕೆ ಪ್ರೇರಣೆ. ಜೊತೆಗೆ ಚಿಕ್ಕ ವಯಸ್ಸಿನಲ್ಲಿ ತಂದೆಯೊಂದಿಗೆ ಯಕ್ಷಗಾನ ನೋಡಲು ಹೋಗುತ್ತಿದ್ದಾಗ ಅವರಿಗೆ ಆಗುತ್ತಿದ್ದ ಅನುಭವವೂ ಇವರು ಯಕ್ಷಗಾನ ಕಲಿಯಲು ಪ್ರೇರಣೆ. ಅಜ್ಜಿ ಹೇಳುತ್ತಿದ್ದ ಪುರಾಣ ಕಥೆಗಳು ಕಣ್ಣ ಮುಂದೆ ನಡೆಯುತ್ತಿದೆಯೋ ಎನ್ನುವ ಅನುಭವ. ಕುಣಿತದ ಜ್ಞಾನ ಇಲ್ಲದಿದ್ದರೂ ಸರಳವಾದ ಮಾತು ಹಾಗೂ ಅಭಿನಯಗಳಿಂದ ಯಕ್ಷಗಾನ ಬೀರಿದ ಪರಿಣಾಮವೂ ಮುಂದೆ ಯಕ್ಷಗಾನದಲ್ಲಿ ಕಲಿಯುವ ಹುಮ್ಮಸ್ಸು ಮೂಡಿಸಿತು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಪ್ರಸ್ತುತ ಉಡುಪಿಯಲ್ಲಿ ನೆಲೆಸಿರುವ ನಿರಂಜನ್ ಭಟ್ ಮುನ್ನೂರು ಹಾಗೂ ಶ್ರೀಮತಿ ಸುಜಾತಾ ಬಿ ಇವರ ಮಗಳಾಗಿ 21.05.1995ರಂದು ಆದ್ಯತಾ ಎನ್ ಭಟ್ ಅವರ ಜನನ.
ನಿಟ್ಟೆಯ NMAM Institute Of Technology ವಿಶ್ವವಿದ್ಯಾಲಯದಿಂದ B.E ಪದವಿ ಪಡೆದು ಪ್ರಸ್ತುತ "Cornerstone OnDemand" ಕಂಪೆನಿಯಲ್ಲಿ Senior Software Engineer ಆಗಿ ಉದ್ಯೋಗ ಮಾಡುತ್ತಿದ್ದಾರೆ.
ಯಕ್ಷಗಾನ ಗುರುಗಳು:-
ತೆಂಕುತಿಟ್ಟಿನ ಗುರುಗಳು:-
ತಂದೆ ನಿರಂಜನ್ ಭಟ್, ಬಾಯಾರು ಸೂರ್ಯನಾರಾಯಣ ಪದಕಣ್ಣಾಯ, ಪ್ರಸ್ತುತ ರಾಕೇಶ್ ರೈ ಅಡ್ಕ.
ತೆಂಕುತಿಟ್ಟಿನ ಭಾಗವತಿಕೆ:- ರಾಮ್ ಪ್ರಕಾಶ್ ಕಲ್ಲೂರಾಯ
ತೆಂಕುತಿಟ್ಟಿನ ಚೆಂಡೆ:- ಕಟೀಲು ಮುರಳೀಧರ ಭಟ್
ಬಡಗುತಿಟ್ಟು ಗುರುಗಳು:-
ಸತೀಶ್ ಉಪಾಧ್ಯ ಅಂಬಲಪಾಡಿ, ಗುಂಡ್ಮಿ ಸದಾನಂದ ಐತಾಳ್, ಪ್ರಸ್ತುತ ಗುರು ಬನ್ನಂಜೆ ಸಂಜೀವ ಸುವರ್ಣ.
ಬಡಗುತಿಟ್ಟಿನ ಭಾಗವತಿಕೆ:- ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ.
ತೆಂಕು ಹಾಗೂ ಬಡಗುತಿಟ್ಟಿನ ಹವ್ಯಾಸಿ ಕಲಾವಿದೆಯಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲದೆ, ಹೊರ ರಾಜ್ಯಗಳಲ್ಲೂ ಪ್ರದರ್ಶನ ನೀಡಿರುತ್ತಾರೆ. ಕಳೆದ 3 ವರ್ಷಗಳಿಂದ ಉಡುಪಿ ಯಕ್ಷಗಾನ ಕಲಾರಂಗದ ಯಕ್ಷಶಿಕ್ಷಣ ಯೋಜನೆಯಡಿ ಪ್ರೌಢಶಾಲೆಗಳಲ್ಲಿ ಯಕ್ಷ ಶಿಕ್ಷಣ ನೀಡುತ್ತಾ, 2 ವರ್ಷಗಳಿಂದ ಕಲಾರಂಗದ ಯಕ್ಷ ಶಿಕ್ಷಣ ಸನಿವಾಸ ಶಿಬಿರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ಗುರುಗಳಾಗಿ ತರಬೇತಿ ನೀಡುತ್ತಾರೆ.
ಸಾವಂತ್ವಾಡಿಯಲ್ಲಿ ಮರಾಠಿ ಯಕ್ಷಗಾನ ಪ್ರದರ್ಶನ ನೀಡಿದ ಅನುಭವ ವಿಶೇಷವಾದದ್ದು. ಯಕ್ಷಗಾನದ ಜೊತೆಯಲ್ಲಿ ಶ್ರೀಮತಿ ಮಾನಸಿ ಸುಧೀರ್ ರಲ್ಲಿ ಭರತನಾಟ್ಯ ಹಾಗೂ ಶ್ರೀಮತಿ ಉಮಾಶಂಕರಿ ಇವರಲ್ಲಿ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿರುತ್ತಾರೆ ಆದ್ಯತಾ.
ನೆಚ್ಚಿನ ಪ್ರಸಂಗಗಳು:-
ಜಾಂಬವತಿ ಕಲ್ಯಾಣ, ಭೀಷ್ಮ ವಿಜಯ, ದಕ್ಷ ಯಜ್ಞ, ದೇವಿ ಮಹಾತ್ಮೆ, ಪಾಂಚಜನ್ಯ, ಅಭಿಮನ್ಯು ಕಾಳಗ, ಪಂಚವಟಿ, ಅಂಧಕಾಸುರ ಮೋಕ್ಷ, ಮಾನಿಷಾದ.
ನೆಚ್ಚಿನ ವೇಷಗಳು:-
ಕೃಷ್ಣ, ಅಂಬೆ, ದಾಕ್ಷಾಯಿಣಿ, ಸೀತೆ, ಅಭಿಮನ್ಯು, ರಕ್ತಬೀಜ, ಕಂಸ, ಅಂಧಕಾಸುರ, ಶ್ರೀದೇವಿ, ಮಾಲಿನಿ, ವಿಷ್ಣು, ಮೀನಾಕ್ಷಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗದಲ್ಲಿ ಆ ಪಾತ್ರದ ಚೌಕಟ್ಟು, ರಂಗನಡೆ, ಇರಲೇಬೇಕಾದ ಕೆಲವು ಅಂಶಗಳು, ವಿಷಯಗಳನ್ನು ಗುರುಗಳಿಂದ ತಿಳಿದು ಹೆಚ್ಚಿನ ಪಾತ್ರ ಚಿತ್ರಣಕ್ಕೆ ಹಿರಿಯ ಕಲಾವಿದರನ್ನು ನೋಡಿ ಕೇಳಿ ತಿಳಿದು ಪಾತ್ರಕ್ಕೆ ನನ್ನಿಂದ ಲೋಪ ಬಾರದಂತೆ ಎಚ್ಚರ ವಹಿಸುವ ಪ್ರಯತ್ನ ಮಾಡುತ್ತೇನೆ. ಪಾತ್ರ ಜ್ಞಾನಕ್ಕಾಗಿ ಹಾಗೂ ರಂಗದಲ್ಲಿ ಮಾತಿನ ಸರಳತೆಗೆ ಅನುಕೂಲವಾಗಲು ಪ್ರಸಂಗ ಪುಸ್ತಕಗಳನ್ನು ಓದಿ, ಪ್ರಸಂಗಗಳನ್ನು ನೋಡಿ ತಿಳಿದು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಆದ್ಯತಾ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದ ಮೇಲೆ ಯುವ ಪೀಳಿಗೆ ತೋರುತ್ತಿರುವ ಒಲವು ಪ್ರಶಂಸನಾರ್ಹ. ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಕುಳಿತಲ್ಲೇ ಎಲ್ಲವೂ ಕೈಗೆಟಕುವಷ್ಟು ಅನುಕೂಲವಿರುವಾಗ, ಯಕ್ಷಗಾನವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾದರೂ, ಗುರುಮುಖೇನ ಕಲಿಯದೇ ಕೇವಲ ಮೋಜಿಗಾಗಿ ಕೆಲವು ಸೂಕ್ತವಲ್ಲದ ವೇದಿಕೆಗಳಲ್ಲಿ ಚೌಕಟ್ಟು ಮೀರಿ ಯಕ್ಷಗಾನದ ಬಳಕೆಯಾಗುತ್ತಿರುವುದು ಬೇಸರದ ಸಂಗತಿ. ಮುಂದಿನ ಜನಾಂಗಕ್ಕೆ ಯಕ್ಷಗಾನದ ಮೂಲ ಹಾಗೂ ಸೊಗಡನ್ನು ದಾಟಿಸುವುದು ನಮ್ಮೆಲ್ಲರ ಕರ್ತವ್ಯವೆಂಬುದು ನನ್ನ ಭಾವನೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಮನೋರಂಜನೆಗೆ ಬಹಳಷ್ಟು ಮಾಧ್ಯಮಗಳು ಅನುಕೂಲವಿರುವ ಈ ಕಾಲಘಟ್ಟದಲ್ಲೂ ಯಕ್ಷಗಾನಕ್ಕೆ ಪ್ರೇಕ್ಷಕರು ನೀಡುತ್ತಿರುವ ಪ್ರಾಶಸ್ತ್ಯ ಪ್ರಶಂಸನೀಯ. ಯಕ್ಷಗಾನವು ಕೇವಲ ಮನೋರಂಜನೆಗಲ್ಲದ ಆರಾಧನಾ ಕಲೆಯಾಗಿರುವುದರಿಂದ ಈ ಕಲೆ ನಡೆದು ಬಂದ ಹಾದಿಯನ್ನು ಗಮನದಲ್ಲಿಟ್ಟು ಘನತೆಯನ್ನು ಕಾಪಾಡುವಲ್ಲಿ ಇವತ್ತಿನ ಪ್ರೇಕ್ಷಕರ ಸಹಕಾರವೂ ಅತೀ ಮುಖ್ಯ.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಯಕ್ಷಗಾನದ ಆಹಾರ್ಯ ವಿಶ್ವ ವ್ಯಾಪಿ ಪ್ರಸಿದ್ಧಿ ಹಾಗೂ ಪ್ರಶಂಸನೆಗೆ ಪಾತ್ರವಾದದ್ದು. ಕಾಲಘಟ್ಟಕ್ಕೆ ತಕ್ಕಂತೆ ಆಹಾರ್ಯದಲ್ಲಿ ಬದಲಾವಣೆಗಳು ನಡೆಯುತ್ತಲೇ ಇವೆ. ಯಕ್ಷಗಾನವು ಇಂದು ಉನ್ನತ ಸ್ಥಾನಕ್ಕೆ ಏರಲು ಆಹಾರ್ಯವೂ ಮುಖ್ಯ ಕಾರಣ ಎಂದರೆ ತಪ್ಪಾಗಲಾರದು. ಇಲ್ಲಿಯವರೆಗೆ ಹಿರಿಯರು ಉಳಿಸಿಕೊಂಡು ಬಂದಂತಹ ಆಹಾರ್ಯದ ಸ್ಥಾನ ಗೌರವವನ್ನು ಮುಂದುವರೆಸುವುದು ನಮ್ಮಂತಹ ಯುವ ಪೀಳಿಗೆಯ ಕರ್ತವ್ಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ತಂದೆಯವರೊಂದಿಗೆ “ಕಲ್ಯಾಣಿ ಕಲಾಕೇಂದ್ರ(ರಿ.)” ಸಂಸ್ಥೆಯನ್ನು ಸ್ಥಾಪಿಸಿ ಕಳೆದ 4 ವರ್ಷಗಳಿಂದ ಸುತ್ತಲಿನ ಮಕ್ಕಳಿಗೆ ಯಕ್ಷಗಾನ ತರಗತಿಗಳನ್ನು ನಡೆಸುತ್ತಾ, ನಾವು ಗುರುಗಳಿಂದ ಕಲಿತ ವಿದ್ಯೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನದಲ್ಲಿದ್ದೇವೆ. ಪರಂಪರೆಯ ಯಕ್ಷಗಾನದ ಬಗ್ಗೆ ಒಲವು ಇರುವುದರಿಂದ ಹೆಚ್ಚಿನ ಅಧ್ಯಯನ ನಡೆಸಿ, ಯಕ್ಷಗಾನದ ಶುದ್ಧತೆಯನ್ನು ಉಳಿಸುವಲ್ಲಿ ನನ್ನೊಂದಿಗೆ ಮಕ್ಕಳನ್ನೂ ಸಿದ್ಧಗೊಳಿಸುವ ಉದ್ದೇಶ ಹೊಂದಿದ್ದೇನೆ. ಜೊತೆಗೆ ನುರಿತ ಗುರುಗಳಿಂದ ಯಕ್ಷಗಾನದ ನಿರಂತರ ಕಲಿಕೆಯನ್ನೂ ಮುಂದುವರೆಸುತ್ತೇನೆ. ಹಿಮ್ಮೇಳ ಅಭ್ಯಾಸ ಮುಂದುವರೆಸಿ ಯಕ್ಷಗಾನದ ಎಲ್ಲಾ ವಿಭಾಗಗಳ ಪರಿಚಯ ಪಡೆದು ಯಕ್ಷಗಾನ ಕಲಿತು ಬೆಳೆಸಿ ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಹಂಬಲವಿದೆ.
ಜಿಲ್ಲಾ ವಿಪ್ರ ಮಹಿಳಾ ಸಭಾ ವತಿಯಿಂದ “ಮಹಿಳಾ ಸಾಧಕಿ” ನೆಲೆಯಲ್ಲಿ ಗುರುತಿಸಿ ಸನ್ಮಾನ.
ಹವ್ಯಾಸಗಳು:-
ನಮ್ಮದೇ ಕಲ್ಯಾಣಿ ಕಲಾಕೇಂದ್ರದ ಯಕ್ಷಗಾನ ತರಗತಿಗಳ ಜೊತೆಯಲ್ಲಿ, ವಿವಿಧ ಕಲಾಚಟುವಟಿಕೆಗಳ, ಮಕ್ಕಳ ಕಲಾಶಿಬಿರದ ಸಂಯೋಜನೆ, ಸಂಗೀತ, ನೃತ್ಯ, ರಂಗಭೂಮಿ ನಾಟಕಗಳು, ಶಾರ್ಟ್ ಫಿಲಂಗಳು ಹಾಗೂ ಸಿನೆಮಾಗಳಲ್ಲೂ ತೊಡಗಿಸಿಕೊಂಡಿರುತ್ತೇನೆ.
ಬಿಡುವಿನ ಸಮಯದಲ್ಲಿ ಕ್ರಾಫ್ಟ್, ಗಾರ್ಡನಿಂಗ್, ಕ್ರೋಷೆ, ಸ್ವಿಮ್ಮಿಂಗ್, ಸ್ಟಿಚ್ಚಿಂಗ್ ಮಾಡುವುದು ಇವರ ಹವ್ಯಾಸ.
ತಂದೆ, ತಾಯಿ ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಆದ್ಯತಾ ಎನ್ ಭಟ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈
Comments
Post a Comment