ಯಕ್ಷ ಸಾಧಕರು 381
"ಯಕ್ಷ ಚತುರ"
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಾಣಿಮಜಲಿನ ಕೃಷ್ಣಪ್ಪ ಪೂಜಾರಿ ಹಾಗೂ ರತ್ನಾವತಿ ಅವರ ಮಗನಾಗಿ 24.04.1989ರಂದು ರಾಜೇಶ್ ಪೂಜಾರಿ ಬೆಳ್ಳಾರೆ ಅವರ ಜನನ. 10ನೇ ತರಗತಿವರೆಗೆ ವಿದ್ಯಾಭ್ಯಾಸ.
ಪದ್ಮನಾಭ ಪೂಜಾರಿ, ಲಕ್ಷ್ಮೀಶ ರೈ ಕಳಂಜ ಇವರ ಯಕ್ಷಗಾನ ಗುರುಗಳು.
2007ರಲ್ಲಿ ಹೊಸನಗರ ಮೇಳದಲ್ಲಿ ನೇಪಥ್ಯ ಕಲಾವಿದರಾಗಿ ಸೇರಿದ ಇವರು 6 ವರ್ಷ ರಂಗಸ್ಥಳದ ಒಳಗಂಟುಗಳನ್ನು ಕಲಿತರು. 2013ರಲ್ಲಿ ಕಟೀಲು ಮೇಳಕ್ಕೆ ಸಂಗೀತಗಾರನಾಗಿ ಸೇರಿ 2014ರಿಂದ ವೃತ್ತಿಪರ ವೇಷಧಾರಿಯಾಗಿ ಅಧಿಕೃತವಾಗಿ ಸೇರ್ಪಡೆಗೊಂಡು ಕಳೆದ 13 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಸ್ತ್ರೀ ವೇಷದಲ್ಲಿ ಅವರ ಅಭಿನಯ ತುಂಬಾ ಭಾವಪೂರ್ಣವಾಗಿದೆ. ದೇವಿ, ಮಾಲಿನಿ, ನಂದಿನಿ, ಯಶೋಮತಿ, ಮೋಹಿನಿ, ಲಲಿತಾಂಬೆ, ದಮಯಂತಿ, ಚಿತ್ರಾಂಗದೆ, ಸುಭದ್ರೆ, ದ್ರೌಪದಿ, ಸೀತೆ, ಸೈರಂಧ್ರಿ, ತಾರೆ, ಕಯಾದು, ಲಕ್ಷಣೆ, ಲೋಪಮುದ್ರೆ, ಸಾವಿತ್ರಿ ಮುಂತಾದ ಪಾತ್ರಗಳಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಪುಂಡು, ಕಿರೀಟ ವೇಷವನ್ನು ಮಾಡಿದ ಅನುಭವ ಕೂಡ ಇವರಿಗೆ ಇದೆ.
ಪುತ್ತೂರು ಶ್ರೀಧರ ಭಂಡಾರಿ ಅವರ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯಲ್ಲಿ 11 ವರ್ಷ ತಿರುಗಾಟ ಮಾಡಿದ ಅನುಭವ ಇವರಿಗೆ ಇದೆ.
ಯಕ್ಷಗಾನ ರಂಗದಲ್ಲಿ ಇರುವ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗದ ಕುರಿತಾಗಿ ಅಧ್ಯಯನ. ಪಾತ್ರದ ಪದ್ಯಗಳನ್ನು ಓದಿಕೊಳ್ಳುವುದು, ಹಿರಿಯರು ನಿರ್ವಹಿಸಿದ ಪಾತ್ರಗಳ ತುಣುಕುಗಳನ್ನು ನೋಡುವುದು. ಭಾಗವತರಲ್ಲಿ ಕೇಳಿ ತಿಳಿಯುವುದು, ಜೊತೆಗೆ ಹೋಗುವ ವೇಷದವರೊಂದಿಗೆ ಕೇಳಿಕೊಳ್ಳುವುದು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಇಂದು ಜಾಗತಿಕ ಮಟ್ಟಕ್ಕೆ ಹಬ್ಬಿ ಎಲ್ಲಾ ವರ್ಗದ ಜನರಿಂದ ಪ್ರಶಂಸೆಗೊಳಗಾಗಿದೆ. ಆರ್ಥಿಕ ಪರಿಸ್ಥಿತಿಯಲ್ಲಿಯೂ ಸಹ ಉನ್ನತಮಟ್ಟವನ್ನು ಏರಿ ಬಹಳಷ್ಟು ಹಿರಿಯ - ಕಿರಿಯ ಕಲಾವಿದರಿಗೆ ಜೀವನಕ್ಕೆ ಆಧಾರವಾಗಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರತೀಯೊಂದು ವಿಷಯದಲ್ಲೂ ನಾವೀನ್ಯತೆಯನ್ನು ಹುಡುಕುವ ಈ ಪೀಳಿಗೆ ಅಂತಹದರಲ್ಲಿ ನಮ್ಮ ಈ ಯಕ್ಷಗಾನ ಕಲೆಯ ಶಿಸ್ತಿನ ಚೌಕಟ್ಟನ್ನು ಗೌರವಿಸಿ, ನಾವೀನ್ಯತೆಯನ್ನು ಸ್ವೀಕರಿಸುವಂತಹ ಈ ಕಾಲದ ಪ್ರೇಕ್ಷಕರು.
ಯಕ್ಷಗಾನ ಉಳಿಯಬೇಕು ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ನಮ್ಮಿಂದಾಗುವ ಪ್ರಯತ್ನವನ್ನು ನಾವು ಮಾಡುತ್ತೇವೆ. ನಾನು ನನ್ನ ಜೀವನವನ್ನು ಯಕ್ಷಗಾನದಲ್ಲೆ ಕಳೆಯಬೇಕು ಎನ್ನುವ ಆಸೆ ನನ್ನದು. ಕಟೀಲು ಭ್ರಮರಾಂಬೆಯ ಅನುಗ್ರಹ ಬೇಕು ಅವರು ಹೇಗೆ ನಡೆಸುತ್ತಾರೋ ಹಾಗೆ.
ರಾಜೇಶ್ ಪೂಜಾರಿ ಬೆಳ್ಳಾರೆ ಅವರು ಜಲಜಾಕ್ಷಿ ಅವರನ್ನು ಮದುವೆಯಾಗಿ ಮಗಳು ಕಾರುಣ್ಯ ಹಾಗೂ ಮಗ ರಕ್ಷಣ್ ಜೊತೆಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.
ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ರಾಜೇಶ್ ಪೂಜಾರಿ ಬೆಳ್ಳಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment