ಯಕ್ಷ ಸಾಧಕರು 382
"ಯಕ್ಷ ಕಲಾ ರಂಜನಿ"
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಿರೇಗುತ್ತಿಯ ಮಾರುತಿ ಹಾಗೂ ನಾಗಶ್ರೀ ಇವರ ಮಗಳಾಗಿ 8.09.2009ರಂದು ಸಂಜನಾ ಹಿರೇಗುತ್ತಿ ಅವರ ಜನನ. ಬಾಲ್ಯದಲ್ಲಿ ಇವರ ಅಜ್ಜನ ವೇಷಗಳನ್ನು ನೋಡುತ್ತಾ ಬೆಳೆದ ಇವರಿಗೆ ಅಜ್ಜನ ವೇಷಗಳು ಇವರು ಯಕ್ಷಗಾನ ಕಲಿಯಲು ಪ್ರೇರಣೆಯಾಯಿತು. ಶಂಕರ್ ಭಟ್ ಬ್ರಹ್ಮೂರು ಇವರ ಯಕ್ಷಗಾನ ಗುರುಗಳು. ಯಕ್ಷಗಾನ ರಂಗದಲ್ಲಿ ಭಾಗವತಿಕೆ ಹಾಗೂ ವೇಷಗಳನ್ನು ಮಾಡುತ್ತಾ ಕಳೆದ 9 ವರ್ಷಗಳಿಂದ ಸೇವೆಯನ್ನು ಮಾಡುತ್ತಿರುವ ಕಲಾವಿದೆ ಸಂಜನಾ ಹಿರೇಗುತ್ತಿ.
ಗುರುಗಳಾದ ಶಂಕರ್ ಭಟ್ ಬ್ರಹ್ಮೂರು ಇವರ ನೆಚ್ಚಿನ ಭಾಗವತರು.
ಶಂಕರ್ ಭಾಗವತ ಯಲ್ಲಾಪುರ ಹಾಗೂ ರಾಕೇಶ್ ಮಲ್ಯ ಹಳ್ಳಾಡಿ ನೆಚ್ಚಿನ ಮದ್ದಲೆ ಹಾಗೂ ಚೆಂಡೆ ವಾದಕರು.
ನೆಚ್ಚಿನ ರಾಗಗಳು:-
ದೇಶ್ ರಾಗ, ಕಲ್ಯಾಣಿ ರಾಗ, ಕೇದಾರ ರಾಗ
ನೆಚ್ಚಿನ ಪ್ರಸಂಗಗಳು:-
ಶ್ರೀ ಕೃಷ್ಣ ಸಂಧಾನ, ಗದಾಯುದ್ಧ, ಕೃಷ್ಣಾರ್ಜುನ ಕಾಳಗ.
ನೆಚ್ಚಿನ ವೇಷಗಳು:-
ಗದಾಯುದ್ಧದ ಕೃಷ್ಣ, ಕನಕಾಂಗಿಯ ಅಭಿಮನ್ಯು, ಶರಸೇತುಬಂಧನದ ಅರ್ಜುನ, ಸುಧನ್ವಾರ್ಜುನದ ಪ್ರಭಾವತಿ ಇತ್ಯಾದಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿಮಾಡಿಕೊಳ್ಳುತ್ತೀರಿ:-
ಕಥೆ/ಪ್ರಸಂಗ ಅಧ್ಯಯನ:-
ಆ ದಿನದ ಪ್ರಸಂಗ ಯಾವುದು, ಅದರಲ್ಲಿ ನನ್ನ ಪಾತ್ರ ಏನು, ಯಾವ ಸಂದರ್ಭಕ್ಕೆ ಪ್ರವೇಶ ಅಂತ ತಿಳಿದುಕೊಳ್ಳೋದು. ಭಾಗವತರು ಯಾವ ಪದ್ಯ ಹೇಳ್ತಾರೆ ಅಂತ ಗೊತ್ತಿರಬೇಕು.
ಪದ್ಯ-ಅರ್ಥ ಕಂಠಪಾಠ:-
ಮಾತುಗಾರಿಕೆ ಇರುವ ವೇಷಗಳಿಗೆ ಪದ್ಯದ ಅರ್ಥ, ಸಂಧರ್ಭಕ್ಕೆ ತಕ್ಕ ಮಾತು ತಯಾರಿ ಮಾಡಿಕೊಳ್ಳೋದು.
ಹೆಜ್ಜೆ-ಕುಣಿತ ಅಭ್ಯಾಸ:-
ಹೊಸ ನಡೆ, ತಿರುವು, ಜುಮ್ಮನೆ ಹೆಜ್ಜೆ ಇದ್ರೆ ಮೊದಲೇ ನೋಡಿಕೊಳ್ಳೋದು.
ಮಾನಸಿಕ ತಯಾರಿ:-
4-5 ಗಂಟೆ ಆ ವೇಷದಲ್ಲೇ ಇರಬೇಕು. ಆ ಪಾತ್ರವೇ ಆಗಿ ಬಿಡಬೇಕು. ರಾವಣನಾದರೆ ಅಹಂಕಾರ, ರಾಮನಾದರೆ ಶಾಂತತೆ – ಅದನ್ನು ಮನಸ್ಸಲ್ಲಿ ತುಂಬಿಕೊಳ್ಳೋದು.
ದೈಹಿಕ ತಯಾರಿ:-
ವೇಷದ ತೂಕ 15-20 ಕೆಜಿ ಇರುತ್ತೆ. ಊಟ, ನಿದ್ದೆ ಸರಿಯಾಗಿ ಮಾಡಿಕೊಂಡು ರಂಗ ಏರುವ ಸಿದ್ಧತೆಯಲ್ಲಿರುವುದು.
ಹಿರಿಯ ಕಲಾವಿದರು ಹೇಳೋದು “ರಂಗಕ್ಕೆ ಹೋಗೋದು ಯುದ್ಧಕ್ಕೆ ಹೋಗೋ ಹಾಗೆ, ತಯಾರಿ ಇಲ್ಲದಿದ್ದರೆ ಸೋಲು ಖಚಿತ".
ಯಕ್ಷಗಾನದಲ್ಲಿ ಮಹಿಳೆಯರು ತೊಡಗಿಸಿಕೊಂಡಾಗ ಸಾಮಾಜಿಕ ಸ್ಪಂದನೆ:-
ಇದು ಈಗ ತುಂಬಾ ಬದಲಾಗಿದೆ.
ಹಿಂದೆ 1980-90 ರವರೆಗೂ ಯಕ್ಷಗಾನ ಗಂಡಸರ ಕಲೆ. ಹೆಣ್ಮಕ್ಕಳು ರಾತ್ರಿ ಬಯಲಾಟದಲ್ಲಿ ವೇಷ ಹಾಕೋದು “ಸರಿ ಅಲ್ಲ” ಅನ್ನೋ ಮನೋಭಾವ ಇತ್ತು. ಸ್ತ್ರೀ ವೇಷವನ್ನೂ ಗಂಡಸರೇ ಮಾಡ್ತಿದ್ರು. ಸಾಮಾಜಿಕ ವಿರೋಧ, ಆಡಿಕೊಳ್ಳೋದು ಇತ್ತು.
ಈಗ, ಸಕಾರಾತ್ಮಕ ಸ್ಪಂದನೆ ಜಾಸ್ತಿ. ತೆಂಕು-ಬಡಗು ತಿಟ್ಟು ಎರಡರಲ್ಲೂ ಹೆಣ್ಮಕ್ಕಳು ರಾಜ - ಪುಂಡು ವೇಷ ಹಾಕಿ ಶಹಬ್ಬಾಸ್ ಗಿಟ್ಟಿಸ್ತಿದ್ದಾರೆ. ಯಕ್ಷಗಾನ ಶಾಲೆಗಳಲ್ಲಿ 50%ಕ್ಕಿಂತ ಹೆಚ್ಚು ಹೆಣ್ಣು ಮಕ್ಕಳೇ ಕಲಿಯುತ್ತಿದ್ದಾರೆ.
ಪ್ರೇಕ್ಷಕರ ಮೆಚ್ಚುಗೆ:-
ದ್ರೌಪದಿ, ಸೀತೆ ಪಾತ್ರವನ್ನು ಹೆಣ್ಮಕ್ಕಳೇ ಮಾಡಿದಾಗ ಸಹಜತೆ, ಭಾವನೆ ಜಾಸ್ತಿ ಅಂತ ಜನ ಇಷ್ಟಪಡ್ತಾರೆ. ಚಪ್ಪಾಳೆ ಜೋರಾಗೇ ಬೀಳುತ್ತೆ.
ಸವಾಲುಗಳು ಇನ್ನೂ ಇವೆ:-
ರಾತ್ರಿ ಇಡೀ ಆಟ, ದೂರದ ಊರಿಗೆ ಪ್ರಯಾಣ, ಭಾರದ ವೇಷ – ಕುಟುಂಬದ ಬೆಂಬಲ ಬೇಕು. ಕೆಲವು ಹಳ್ಳಿಗಳಲ್ಲಿ ಇನ್ನೂ “ಹೆಣ್ಮಕ್ಳು ಯಾಕೆ ಕುಣಿತಾರೆ” ಅನ್ನೋರು ಇದ್ದಾರೆ.
ಹೆಮ್ಮೆಯ ವಿಷಯ:-
ಇಂದು ಎಲ್ಲಾ ಕಡೆಯಲ್ಲಿ ಮಹಿಳಾ ಕಲಾವಿದರಿದ್ದಾರೆ. ಅವರಿಂದಾಗಿ ಯಕ್ಷಗಾನಕ್ಕೆ ಹೊಸ ಪ್ರೇಕ್ಷಕ ವರ್ಗ, ಹೊಸ ಗೌರವ ಸಿಕ್ಕಿದೆ.
ಒಟ್ಟಿನಲ್ಲಿ ಹೇಳೋದಾದ್ರೆ ಯಕ್ಷಗಾನ ಈಗ ಗಂಡು-ಹೆಣ್ಣು ಅನ್ನೋ ಭೇದ ಇಲ್ಲದ ಕಲೆ ಆಗ್ತಾ ಇದೆ. ಪ್ರತಿಭೆ ಇದ್ರೆ ರಂಗ ನಿಮ್ಮದು. ರಂಗಕ್ಕೆ ಹೋಗುವ ಮೊದಲು, ನನ್ನ ಗುರುಗಳಲ್ಲಿ ಸಾವಿರಾರು ಸಲ ಆ ಪ್ರತ್ಯೇಕ ವೇಷದ ಪದ್ಯಗಳ ಹಾಗೂ ಅರ್ಥಗಳ ಬಗ್ಗೆ ಕೇಳ್ತೇನೆ. ಹಾಗೆ ಸಮಯ ಮಾಡಿಕೊಂಡು ಜಾಲತಾಣದಲ್ಲಿ ಸಿಗುವ ಅದೇ ಪ್ರಸಂಗಕ್ಕೆ ಸಂಬಂಧಪಟ್ಟ ವೀಡಿಯೊ ಅಥವಾ ರೆಕಾರ್ಡ್ಗಳನ್ನು ನೋಡಿ, ಕೇಳಿ ಕಷ್ಟವಾದಂತದನ್ನು ಬರೆದಿಟ್ಟುಕೊಂಡು ಅದರ ಮೇಲೆ ಜಾಸ್ತಿ ಗಮನ ಕೊಟ್ಟು ಆದಷ್ಟು ಆ ವೇಷವನ್ನು ತುಂಬಲು ಪ್ರಯತ್ನಿಸುತ್ತೇನೆ.
ಯಕ್ಷಗಾನ ಒಂದು ಗಂಡು ಕಲೆ ಆದ್ದರಿಂದ ಕೆಲವೊಂದು ಆಟದ ಪೋಸ್ಟರ್ ಚಾಪಿಸಿ ಅದನ್ನು ಪ್ರಚಾರಿಸಿದಾಗ, ಕಂಡ ಕೆಲವರು, ಹುಡುಗಿ ಅಥವಾ ಹುಡುಗಿಯರಿದ್ದಾರೆ ಎಂದು ತಿಳಿದು ಇವರು ಹೇಗೆ ಪ್ರಸ್ತುತಿಸಬಹುದು ಅಥವಾ ಭಾಗವತಿಕೆಗೆ ಹೋದರೆ ಇವಳು ಯಾವ ಶ್ರುತಿಯಲ್ಲಿ ಹಾಡಬಹುದು ಎಂಬ ಕುತೂಹಲ ಹೊತ್ತು ಬರುವವರಿರ್ತಾರೆ, ಆ ದಿವಸದ ಕಾರ್ಯಕ್ರಮ ಹೇಗೆ ಆಗಲಿ, ನಂತರ ಚೌಕಿ ಮನೆಗೆ ಬಂದು ನಮ್ಮನ್ನು ಮಾತಾಡಿಸಿ ಖುಷಿ ಪಟ್ಟು ಹೋಗ್ತಾರೆ. ಇನ್ನೂ ಕೆಲವರು "ಏನಮ್ಮ ರಾತ್ರೆ ಹೇಗೆ ಹೋಗಿ ಬಂದು ಮಾಡ್ತಿ ? ಮನೆಯಲ್ಲಿ ಏನು ಹೇಳಲ್ವಾ" ಅಂತ ಕೇಳಿ ಹೋಗ್ತಾರೆ. ಕೆಲವು ಕಡೆ ಮಹಿಳೆಯರು ಬರ್ತಾರೆ ಎಂದಾಗ ಊಟದ್ದಾಗಲಿ ಮತ್ತೊಂದರದ್ದಾಗಲಿ ಜವಾಬ್ದಾರಿಯಿಂದ ವ್ಯವಸ್ಥೆ ಮಾಡಿಸಿರ್ತಾರೆ, ತೊಂದ್ರೆ ಆಗ್ವಂತೆ ನೋಡಿಕೊಳ್ಳೋದಿಲ್ಲ.
ತಂದೆ, ತಾಯಿ ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಸಂಜನಾ ಹಿರೇಗುತ್ತಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment