ಯಕ್ಷ ಸಾಧಕರು 385
"ಯಕ್ಷಕಲಾ ಹರ್ಷಿತೆ"
ಯಕ್ಷಗಾನ ಮತ್ತು ಭರತನಾಟ್ಯ ಕರ್ನಾಟಕದ ಎರಡು ಅತ್ಯಂತ ಶ್ರೀಮಂತ ಮತ್ತು ವಿಶಿಷ್ಟ ಸಾಂಸ್ಕೃತಿಕ ಕಲಾ ಪ್ರಕಾರಗಳಾಗಿವೆ. ಇವೆರಡೂ ಭಾರತೀಯ ಪುರಾಣಗಳನ್ನು ಆಧರಿಸಿದ್ದರೂ, ಪ್ರದರ್ಶನ ಶೈಲಿ ಮತ್ತು ತಂತ್ರಗಳಲ್ಲಿ ತಮ್ಮದೇ ಆದ ಭಿನ್ನತೆ ಹಾಗೂ ವಿಶೇಷತೆಯನ್ನು ಹೊಂದಿವೆ. ಈ ಎರಡು ಕಲೆಯಲ್ಲಿಯೂ ತಮ್ಮ ಕಲಾ ಪ್ರತಿಭೆಯನ್ನು ತೋರ್ಪಡಿಸುತ್ತಿರುವ ಕಲಾವಿದೆ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕಡತೋಕಾದ ಹರ್ಷಿತಾ ಎಸ್ ವಿ.
ಶ್ಯಾಮಲ ಹಾಗೂ ಕೆ ವೆಂಕಟೇಶ್ ದಂಪತಿಯ ಸುಪುತ್ರಿಯಾಗಿ 03.08.1997ರಂದು ಹರ್ಷಿತಾ ಅವರ ಜನನ. ಎಂ.ಕಾಂ, ಭರತನಾಟ್ಯದಲ್ಲಿ ವಿದ್ವತ್ ಮತ್ತು ಎಂ.ಎ. ಪದವಿ ಇವರ ವಿದ್ಯಾಭ್ಯಾಸ.
ಭರತನಾಟ್ಯ ಗುರುಗಳು:-
ಡಾ. ಸಹನಾ ಭಟ್
ಯಕ್ಷಗಾನ ಗುರುಗಳು:-
ಶ್ರೀ ಉಮೇಶ ಭಟ್ ಬಾಡ
ನೆಚ್ಚಿನ ಪ್ರಸಂಗಗಳು:-
ಸುಧನ್ವಾರ್ಜುನ, ಲವ-ಕುಶ, ದ್ರೌಪದಿ ಪ್ರತಾಪ, ನರಕಾಸುರ ವಧೆ ಇತ್ಯಾದಿ.
ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು:-
ಶ್ರೀ ಸುಬ್ರಮಣ್ಯ ಭಟ್, ಬಾಡ.
ನೆಚ್ಚಿನ ಭಾಗವತರು:-
ಶ್ರೀ ಉಮೇಶ ಭಟ್ ಬಾಡ, ಶ್ರೀ ರಾಘವೇಂದ್ರ ಆಚಾರ್ಯ, ಜನ್ಸಾಲೆ.
ಪಾತ್ರದ ಬಗ್ಗೆ ಅಧ್ಯಯನ , ಪದ್ಯದ ಬಳಕೆ, ಹಿರಿಯ ಕಲಾವಿದರಲ್ಲಿ ಮಾಹಿತಿ ಪಡೆದು ಅಧ್ಯಯನ ಮಾಡಿ ಕಾರ್ಯಕ್ರಮ ನೀಡುವ ಮೊದಲು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಹರ್ಷಿತಾ ಎಸ್ ವಿ.
ಶ್ರೀ ಉಮೇಶ ಭಟ್ ಬಾಡ, ಶ್ರೀ ಗಣಪತಿ ಭಟ್ ಕಣ್ಣಿಮನೆ ಮುಂತಾದವರು ನನ್ನ ಕಲಾಯಾನದಲ್ಲಿ ಸ್ಪೂರ್ತಿ ನೀಡಿದ ಕಲಾವಿದರು ಹಾಗೂ ನಾಟ್ಯಶಾಸ್ತ್ರ, ಯಕ್ಷಗಾನ ಹಸ್ತಾಭಿನಯ ದರ್ಪಣ ಕಲಾಯಾನದಲ್ಲಿ ಸ್ಪೂರ್ತಿ ನೀಡಿದ ಪುಸ್ತಕಗಳು.
ಯಕ್ಷಗಾನದಲ್ಲಿ ಯಾವುದೇ ಕುಟುಂಬ ಹಿನ್ನಲೆ ಇರಲಿಲ್ಲ. ಹಾಗಾಗಿ ಯಕ್ಷಗಾನವನ್ನು ಕಲಿಯಲು ಮೊದಲಿನಿಂದ ಯಾವ ವಿಶೇಷ ಪ್ರೇರಣೆ ಇರಲಿಲ್ಲ. ನನ್ನ ಗುರುಗಳಾದ ಶ್ರೀ ಉಮೇಶ ಭಟ್ ಬಾಡ ಇವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಸೇವೆ ಮಾಡುವ ಯೋಗ ಸಿಕ್ಕಿತು ಹಾಗೂ ಕಳೆದ 20 ವರ್ಷಗಳಿಂದ ರಂಗದಲ್ಲಿ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ ಹರ್ಷಿತಾ ಎಸ್ ವಿ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕೆಲವರು ಯಕ್ಷಗಾನದ ಸಾಹಿತ್ಯ ಭಾವ ಮತ್ತು ಸಾಂಪ್ರದಾಯಿಕತೆಗಿಂತ ಹೆಚ್ಚು ಮನರಂಜನ ಅಂಶಗಳಿಗೆ ಹೆಚ್ಚು ಒತ್ತು ನೀಡುತ್ತಾ ಇರುವುದು ಕಂಡುಬರುತ್ತದೆ. ಇದರಿಂದ ಕಲೆಯ ಮೂಲ ಸ್ವರೂಪಕ್ಕೆ ಧಕ್ಕೆ ಆಗುವ ಸಾಧ್ಯತೆ ಇದೆ. ಇನ್ನು ಯಕ್ಷಗಾನದ ಸಾಹಿತ್ಯ ಸಂಗೀತ ಅಭಿನಯ ಹಾಗೂ ಆಹಾರ್ಯದ ಸೂಕ್ಷ್ಮತೆಯನ್ನು ಗಮನಿಸಿ ವೀಕ್ಷಿಸುವ ಪ್ರೇಕ್ಷಕರು ಇದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಯಕ್ಷಗಾನವು ಇನ್ನಷ್ಟು ಜನರನ್ನು ತಲುಪುತ್ತಿರುವುದರಿಂದ ಹೊಸ ಪ್ರೇಕ್ಷಕರ ವರ್ಗವು ಬೆಳೆಯುತ್ತಿದೆ. ಯುವ ಪೀಳಿಗೆ ಪ್ರೇಕ್ಷಕರ ಸಂಖ್ಯೆಯು ಹೆಚ್ಚುತ್ತಿರುವುದು ಸಂತಸದ ವಿಷಯ.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಯಕ್ಷಗಾನದ ಆಹಾರ್ಯ ಈ ಕಲೆಯ ವೈಶಿಷ್ಟ್ಯ. ಆದ್ದರಿಂದ ಇದರ ಮೂಲ ಸ್ವರೂಪ ಸಾಂಪ್ರದಾಯಿಕ ವೇಷ ಭೂಷಣಗಳು ಕಿರೀಟ ಆಭರಣ ಬಣ್ಣಗಾರಿಕೆ ಇದನ್ನು ಸಾಂಪ್ರದಾಯಿಕವಾಗಿ ಉಳಿಸುವುದು ಅತ್ಯಂತ ಅಗತ್ಯ. ಕಾಲಕ್ರಮೇಣ ಬದಲಾವಣೆಗಳನ್ನು ಅಳವಡಿಸಿಕೊಂಡರು ಆಹಾರ್ಯದ ಮೂಲ ತತ್ವಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದಿನ ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗಗಳ ಜೊತೆಗೆ ಸಾಮಾಜಿಕ ಪ್ರಸಂಗಗಳ ಪ್ರದರ್ಶನ ಹೆಚ್ಚುತ್ತಿರುವುದು ಕಂಡು ಬರುತ್ತದೆ. ಇದರಿಂದ ಯಕ್ಷಗಾನವು ಹೊಸ ಪ್ರೇಕ್ಷಕರಿಗೆ ತಲುಪುತ್ತಿದೆ. ಆದರೂ ಪೌರಾಣಿಕ ಪ್ರಸಂಗಗಳು, ಸಾಂಪ್ರದಾಯಿಕ ಮೌಲ್ಯಗಳು ಪ್ರೇಕ್ಷಕರಿಗೆ ಸಂಪೂರ್ಣವಾಗಿ ತಲುಪದ ಪರಿಸ್ಥಿತಿ ಕಂಡುಬರುತ್ತಿದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಪಾತ್ರ ನಿರ್ವಹಣೆಯ ಕೌಶಲ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳುವುದು. ಯಕ್ಷಗಾನದ ಸಾಂಪ್ರದಾಯಿಕ ಮೌಲ್ಯಗಳನ್ನು ಉಳಿಸಿಕೊಂಡು ಹೆಚ್ಚಿನ ಪ್ರೇಕ್ಷಕರಿಗೆ ಕಲೆಯನ್ನು ತಲುಪಿಸುವುದು.
ಭರತನಾಟ್ಯ ಕಲೆಯೆಡೆಗೆ ಆಕರ್ಷಿತರಾದದ್ದು ಹೇಗೆ ಹಾಗೂ ಭರತನಾಟ್ಯ ಕಲಾವಿದೆಯಾಗಿ ಬೆಳೆದ ಬಗೆ ಹೇಗೆ:-
ನನ್ನ ನಾಲ್ಕನೇ ವರ್ಷದಿಂದ ಯಕ್ಷಗಾನ ಕಲಿಯಲು ಪ್ರಾರಂಭಿಸಿದೆ, ಅದರ ಒಟ್ಟಿಗೆ ಭರತನಾಟ್ಯದಲ್ಲಿಯು ಆಸಕ್ತಿ ಬೆಳೆಯಿತು. ಭರತನಾಟ್ಯನ್ನು ನನ್ನ ಆರನೇ ವರ್ಷದಿಂದ ಕಲಿಯಲು ಪ್ರಾರಂಭಿಸಿದೆ. ಹಾಗೆ ಮುಂದುವರಿದು ವಿದ್ವತ್ MA ಪದವಿಯನ್ನು ಪಡೆದು, ಹಲವಾರು ಮಕ್ಕಳಿಗೆ ತರಗತಿಯನ್ನು ಮಾಡುತ್ತಿದ್ದೇನೆ.
ನೀವು ಭರತನಾಟ್ಯ ಶಿಕ್ಷಕಿಯಾಗಿ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ನೀವೇನು ಉಪಾಯ ಮಾಡುತ್ತೀರಿ:-
ಹೌದು, ನೃತ್ಯವನ್ನು ಕಲಿಸುವಾಗ ಕೇವಲ ಪಾಠದಂತೆ ಅಲ್ಲದೆ ಕಥೆ ಸಂಗೀತ ಚಲನಗಳ ಮೂಲಕ ಕಲೆಯನ್ನು ಕಲಿಸುವ ಪ್ರಯತ್ನ ಮಾಡುತ್ತೇನೆ. ಮಕ್ಕಳಿಗೆ ಸಣ್ಣ ಸಣ್ಣ ವೇದಿಕೆ ಪ್ರದರ್ಶನಗಳ ಅವಕಾಶ ನೀಡುವುದರಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗೂ ಹೆಚ್ಚಿನ ಆಸಕ್ತಿಯನ್ನು ಹೊಂದುತ್ತಾರೆ.
ಚಲನಚಿತ್ರ / ಪಾಶ್ಚಾತ್ಯ ಸಂಗೀತ ನೃತ್ಯಗಳಿಗೆ ಆಕರ್ಷಿತರಾಗುವ ಕಾಲಘಟ್ಟದಲ್ಲಿ ಭರತನಾಟ್ಯ ಕಲೆಯನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿ ಉಳಿಸಿ ಬೆಳೆಸಲು ಏನು ಮಾಡಬಹುದು:-
ಗುರು ಶಿಷ್ಯ ಪರಂಪರೆಯನ್ನು ಬಲಪಡಿಸಿ ಶಿಸ್ತುಬದ್ಧ ತರಬೇತಿಯನ್ನು ಮುಂದುವರಿಸಬೇಕು. ಶಾಲಾ ಕಾಲೇಜುಗಳಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಹೆಚ್ಚಿನ ಅವಕಾಶ ನೀಡಬೇಕು. ಜೊತೆಗೆ ಅದರ ಪ್ರದರ್ಶನಗಳಿಗೂ ಅವಕಾಶ ಕಲ್ಪಿಸಿ ಕೊಡಬೇಕು. ಕಲೆಯ ಮೂಲ ಶಾಸ್ತ್ರೀಯ ನಿಯಮಗಳು ಮತ್ತು ಪರಂಪರೆಯನ್ನು ಯಾವುದೇ ರೀತಿಯಲ್ಲಿ ಬದಲಾಯಿಸಬಾರದು.
ಈಗಿನ ಕಲಾಪ್ರೇಕ್ಷಕರ ಕುರಿತು ನಿಮ್ಮ ಅಭಿಪ್ರಾಯ:-
ಈ ದಿನ ಕಲಾ ಪ್ರೇಕ್ಷಕರು ಕೇವಲ ಮನರಂಜನೆಗೆ ಮಾತ್ರವಲ್ಲ, ಕಲೆಯ ಗುಣಮಟ್ಟ ಅಭಿನಯದ ನೈಪುಣ್ಯ ಹೊಸತನಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ಅವರು ಉತ್ತಮ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಾರೆ.
ಭರತನಾಟ್ಯ ಕಲೆಗೆ ನಿಮ್ಮ ಕೊಡುಗೆ ಎಂದು ಮುಂದಿನವರು ಯಾವುದನ್ನ ಗುರುತಿಸಬಹುದು:-
ನನ್ನ ಗುರುಗಳಿಂದ ನಾನು ಕಲಿತ ಪಾಠಗಳನ್ನು ನಿಷ್ಠೆಯಿಂದ ಪಾಲಿಸಿ, ತಾಳಲಯಗಳಲ್ಲಿ ನಿಖರತೆಯನ್ನು ಕಾಯ್ದುಕೊಂಡಿರುತ್ತೇನೆ, ಗುರುಗಳ ಮಾರ್ಗದರ್ಶನವನ್ನು ಗೌರವಿಸಿ ಕಲೆಯನ್ನು ಮುಂದಿನ ಪೀಳಿಗೆಗೆ ಸರಿಯಾಗಿ ಹಂಚುವ ಪ್ರಯತ್ನವು ನನ್ನ ಕೊಡುಗೆಯ ಭಾಗವಾಗಿರಬಹುದು.
ನೃತ್ಯಾಭ್ಯಾಸಿಗಳಿಗೆ ನಿಮ್ಮ ಸಲಹೆ ಏನು:-
ನಿಯಮಿತವಾಗಿ ಸ್ಟ್ರೆಚಿಂಗ್ ಹಾಗೂ ಯೋಗಾಭ್ಯಾಸದಿಂದ ದೇಹದ flexibility ಹೆಚ್ಚಿಸಿಕೊಳ್ಳುವುದು,
ತಾಳ ಲಯದ ಮೇಲೆ ಗಮನ. ಅಭಿನಯದಲ್ಲಿ ಪಕ್ವತೆಯ ಬಗ್ಗೆ ನಿರಂತರ ಅಭ್ಯಾಸವನ್ನು ಮಾಡುವುದು.
ಮಹಿಳಾ ಯಕ್ಷಗಾನದಲ್ಲಿ ನೀವು ಕಂಡುಕೊಂಡ ಸಾಧಕ ಹಾಗೂ ಬಾಧಕಗಳು:-
ಮಹಿಳೆಯರು ಈ ಸಾಂಪ್ರದಾಯಿಕ ಕಲೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವುದರಿಂದ, ಯಕ್ಷಗಾನಕ್ಕೆ ಹೊಸ ಉತ್ಸಾಹ ಹಾಗೂ ವ್ಯಾಪಕತೆ ದೊರೆತಿದೆ.
ಇನ್ನೊಂದೆಡೆ ಕೆಲವು ಸಂದರ್ಭಗಳಲ್ಲಿ ಅವಕಾಶಗಳ ಹಾಗೂ ವೃತ್ತಿಪರ ಮಟ್ಟದ ಪ್ರೋತ್ಸಾಹದ ಕೊರತೆ ಸವಾಲಾಗಿ ಕಾಣಬಹುದು.
ಭರತನಾಟ್ಯ ಕಲೆ ಯಕ್ಷಗಾನದ ಮೇಲೆ ಯಾವ ರೀತಿಯಲ್ಲಿ ಸಹಕಾರಿಯಾಗಿದೆ:-
ಭರತನಾಟ್ಯದಲ್ಲಿ ಕಲಿಯುವ ಹಲವಾರು ಹಸ್ತ ಮುದ್ರೆಗಳು ಸಹಾಯವಾಗುತ್ತದೆ.
ಕೆಲವು ತಾಳಗಳ ನಡುವೆ ಸಾಮ್ಯತೆ ಇರುವುದರಿಂದ ಕೆಲವು ಹೆಜ್ಜೆಯನ್ನು ಯಕ್ಷಗಾನದಲ್ಲಿ ಅಳವಡಿಸಿಕೊಳ್ಳಬಹುದು.
ಶ್ರೀ ಸಿದ್ಧಿವಿನಾಯಕ ಚಿಣ್ಣರ ಮೇಳ, ತಿರುಗಾಟ ಗುಂಡಬಾಳ, ಮಂದಾರ್ತಿ ಮೇಳದಲ್ಲಿ ಸೇವೆಯನ್ನು ಮಾಡಿರುತ್ತಾರೆ.
ಸನ್ಮಾನ ಹಾಗೂ ಪ್ರಶಸ್ತಿ:-
♦️ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ,
♦️ "ರವಿದಾತಾರ್ ಕಲಾ ಪುರಸ್ಕಾರ",
♦️ ಗುಂಟೂರು ಆಂಧ್ರಪ್ರದೇಶದಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಕ್ಕೆ "ಯುವ ಕಲಾ ರತ್ನ".
ಗುರುಗಳಾದ ಡಾ. ಸಹನಾ ಭಟ್ ಇವರೊಂದಿಗೆ ದುಬೈ ನಲ್ಲಿ ಭರತನಾಟ್ಯ ಪ್ರದರ್ಶನವನ್ನು ನೀಡಿರುತ್ತಾರೆ.
ತಂದೆ, ತಾಯಿ ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಹರ್ಷಿತಾ ಎಸ್ ವಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment