ಯಕ್ಷ ಸಾಧಕರು 389
"ಯಕ್ಷ ಕಲಾ ಭಾಮಿನಿ"
ಓದಿದ್ದು ಬಿ ಎ ಜರ್ನಲಿಸಂ. ಭರತನಾಟ್ಯ ಹಾಗೂ ಯಕ್ಷಗಾನ ಕಲೆಯ ಮೇಲೆ ಬಹಳ ಆಸಕ್ತಿ. 'ಮಗಳು ಭರತನಾಟ್ಯದಲ್ಲಿ ಸಾಧನೆ ಮಾಡಬೇಕು' ಎಂಬುದು ಅಮ್ಮನ ಕನಸು. ಹಾಗಾಗಿ ಸಣ್ಣದಿರುವಾಗ ಭರತನಾಟ್ಯ ತರಬೇತಿಗೆ ಸೇರಿಸಿದ್ದರು. ಹಾಗೆ ಕಲೆಯ ಮೇಲೆ ಆಸಕ್ತಿ ಹೆಚ್ಚಿತು. ಮಾವಂದಿರಾದ ಸುಧೀರ್ ಭಟ್ ಪೆರ್ಡೂರು ಹಾಗೂ ಆನಂದ್ ಭಟ್ ಪೆರ್ಡೂರು ಯಕ್ಷಗಾನ ರಂಗದಲ್ಲಿ ಇದ್ದುದರಿಂದ ಯಕ್ಷಗಾನ ಕಲೆಯ ಮೇಲೆ ಆಸಕ್ತಿ ಆಗಿ ಕಳೆದ 8 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ತಮ್ಮ ಪ್ರತಿಭೆಯ ಮೂಲಕ ಮಿಂಚುತ್ತಿರುವ ಯುವ ಕಲಾವಿದೆ ಕಾವ್ಯ ತಂತ್ರಿ.
ಉಡುಪಿಯ ವಾಸುದೇವ ತಂತ್ರಿ ಹಾಗೂ ಉಷಾ ವಿ ತಂತ್ರಿ ಇವರ ಮಗಳಾಗಿ ಜುಲೈ 19 ರಂದು ಜನನ. ಅಣ್ಣ ಶೇಷಗಿರಿ ತಂತ್ರಿ. ಸಣ್ಣದಿರುವಾಗ ನಾನು ಮತ್ತು ಅಣ್ಣ ಜೊತೆಯಾಗಿ ಯಕ್ಷಗಾನ ತರಗತಿಗೆ ಹೋಗುತ್ತಿದ್ದೆವು. ನನ್ನೆಲ್ಲ ಸಾಧನೆಗೆ ಅಣ್ಣ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು ಎನ್ನುತ್ತಾರೆ ಕಾವ್ಯ.
ಯಕ್ಷಗಾನದ ಮೊದಲ ಗುರುಗಳು ಪ್ರಸಾದ್ ಮೊಗೆಬೆಟ್ಟು ನಂತರ ಸತೀಶ್ ಉಪಾಧ್ಯಾಯ ಅಂಬಲಪಾಡಿ. ತದನಂತರ ಉಡುಪಿ ಕೇಂದ್ರ ಕೃಷ್ಣಮೂರ್ತಿ ಗುರುಗಳು. ಶ್ರೀಮತಿ ಭವ್ಯ ಮಂಜುನಾಥ್ ಇವರ ಭರತನಾಟ್ಯ ಗುರುಗಳು.
ನೆಚ್ಚಿನ ಪ್ರಸಂಗಗಳು:-
ರುದ್ರಕೋಪ, ತಾಮ್ರಧ್ವಜ, ಚಂದ್ರಾವಳಿ ವಿಲಾಸ, ಸುದರ್ಶನ ವಿಜಯ, ಅಭಿಮನ್ಯು ಕಾಳಗ.
ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು:-
ರಾಕೇಶ್ ಮಲ್ಯ, ಶಿವಾನಂದ ಕೋಟ, ಸುಜನ್ ಹಾಲಾಡಿ, ಶ್ರೀನಿವಾಸ್ ಪ್ರಭು, ಆನಂದ್ ಭಟ್ ಪೆರ್ಡೂರ್, ಅಕ್ಷಯ್ ಬಿದ್ಕಲ್ ಕಟ್ಟೆ, ಶಶಾಂಕ್ ಆಚಾರ್ಯ.
ನೆಚ್ಚಿನ ಭಾಗವತರು:-
ಸುಧೀರ್ ಭಟ್ ಪೆರ್ಡೂರ್, ಹಿಲ್ಲೂರು, ಚಂದ್ರಕಾಂತ್ ಮೂಡುಬೆಳ್ಳೆ, ಸುರೇಶ್ ಶೆಟ್ಟಿ ಶಂಕರನಾರಾಯಣ, ಪ್ರಸಾದ್ ಮೊಗೆಬೆಟ್ಟು.
ಕಾರ್ಯಕ್ರಮ ನೀಡುವಾಗ ಮಾಡಿಕೊಳ್ಳುವ ಅಧ್ಯಯನ, ಸಿದ್ಧತೆಗಳೇನು:-
ಪ್ರತೀ ದಿನ ತುಂಬಾ ಪ್ರಾಕ್ಟೀಸ್ ಮಾಡ್ತೇನೆ. ಪಾತ್ರದ ಬಗ್ಗೆ ಅಧ್ಯಯನ , ಪದ್ಯದ ಬಳಕೆ, ಹಿರಿಯ ಕಲಾವಿದರಲ್ಲಿ ಮಾಹಿತಿ ಪಡೆದು ಅಧ್ಯಯನ ಮಾಡಿ ಕಾರ್ಯಕ್ರಮ ನೀಡುವ ಮೊದಲು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಕಾವ್ಯ.
ನೃತ್ಯಾಭ್ಯಾಸಿಗಳಿಗೆ ನಿಮ್ಮ ಸಲಹೆ ಏನು:-
ಕಲಿಯುವಾಗ ಆಸಕ್ತಿಯಿಂದ ಕಲಿಯಬೇಕು. ಇಲ್ಲವಾದರೆ ಅದು ವ್ಯರ್ಥ. ಆ ಕಲೆಯನ್ನು ಇಷ್ಟ ಪಡಬೇಕು. ಕಷ್ಟದಿಂದ ಮಾಡ್ಬಾರ್ದು. ತಾಳ ಲಯದ ಮೇಲೆ ಗಮನ. ಅಭಿನಯದಲ್ಲಿ ಪಕ್ವತೆಯ ಬಗ್ಗೆ ನಿರಂತರ ಅಭ್ಯಾಸವನ್ನು ಮಾಡುವುದು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದು ಯಕ್ಷಗಾನ ಉತ್ತಮ ಬೆಳವಣಿಗೆಯ ಹಾದಿಯಲ್ಲಿದೆ. ಯುವಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ತಂತ್ರಜ್ಞಾನದಿಂದ ಯಕ್ಷಗಾನ ವಿಶ್ವದಾದ್ಯಂತ ತಲುಪುತ್ತಿದೆ. ಆದರೆ ಅದರ ಸಂಪ್ರದಾಯ, ಸಾಹಿತ್ಯ ಮತ್ತು ಆಹಾರ್ಯದ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ಪ್ರೇಕ್ಷಕರು ಕಲೆಯ ಬಗ್ಗೆ ಹೆಚ್ಚು ಅರಿವು ಹೊಂದಿದ್ದಾರೆ. ಉತ್ತಮ ಅಭಿನಯ, ಶುದ್ಧ ಸಂಭಾಷಣೆ ಮತ್ತು ಸಂಪ್ರದಾಯಬದ್ಧ ಪ್ರದರ್ಶನವನ್ನು ಅವರು ಮೆಚ್ಚುತ್ತಾರೆ. ಕಲಾವಿದರು ನಿರಂತರವಾಗಿ ಕಲಿಯುತ್ತಾ ತಮ್ಮನ್ನು ತಾವು ಉತ್ತಮಗೊಳಿಸಿಕೊಳ್ಳಬೇಕಾಗಿದೆ.
ಈಗಿನ ಕಲಾಪ್ರೇಕ್ಷಕರ ಕುರಿತು ನಿಮ್ಮ ಅಭಿಪ್ರಾಯ:-
ಈ ದಿನ ಕಲಾ ಪ್ರೇಕ್ಷಕರು ಕೇವಲ ಮನರಂಜನೆಗೆ ಮಾತ್ರವಲ್ಲ, ಕಲೆಯ ಗುಣಮಟ್ಟ ಅಭಿನಯದ ನೈಪುಣ್ಯ ಹೊಸತನಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ಅವರು ಉತ್ತಮ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು:-
ತುಂಬಾ ಒಳ್ಳೆಯ ಕಲಾವಿದೆ ಆಗಬೇಕು ಅನ್ನುವ ಆಸೆ.
ಸುಮಾರು 4 ವರ್ಷದಿಂದ 'ಚಿನ್ಮಯಿ ಕಲಾ ಪ್ರತಿಷ್ಠಾನ' ಎಂಬ ನನ್ನದೇ ಆದ ಒಂದು ಯಕ್ಷಗಾನ ಸಂಸ್ಥೆಯನ್ನು ನಡೆಸುತ್ತಿದ್ದೇನೆ. ಆ ಸಂಸ್ಥೆಯ ಮೂಲಕ ಇನ್ನೂ ಅನೇಕ ಕಾರ್ಯಕ್ರಮಗಳನ್ನು ನೀಡಬೇಕು ಹಾಗೂ ಕಲೆಗೆ ಪ್ರೋತ್ಸಾಹ ನೀಡಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ ಕಾವ್ಯ.
ಸೀರೆಗೆ ಕುಚ್ಚು ಹಾಕುವುದು, ಮೆಹೆಂದಿ ಹಾಕುವುದು, ಬೈಕ್ ರೈಡಿಂಗ್ ಇವರ ಹವ್ಯಾಸಗಳು.
ರಾಷ್ಟ್ರೀಯ ನಾಟ್ಯ ರಾಣಿ ಅಭಿನವ ಶಾಂತಲೆ ಪುರಸ್ಕಾರ ಕಾವ್ಯ ಅವರಿಗೆ ದೊರೆತಿರುತ್ತದೆ.
ತಂದೆ ತಾಯಿ ಹಾಗೂ ಅಣ್ಣನ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎನ್ನುತ್ತಾರೆ ಕಾವ್ಯ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈
Comments
Post a Comment