ಯಕ್ಷ ಸಾಧಕರು 391
"ಯಕ್ಷ ಕಲಾ ಚೈತನ್ಯ"
ಕಲೆ ಎಂಬುವುದು ಕೇವಲ ಮನೋರಂಜನೆಗೆ ಸೀಮಿತವಾದುದಲ್ಲ. ಒಂದು ನೆಲದ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಮಾಧ್ಯಮ. ಯಕ್ಷಗಾನವು ಜನಪದ ಕಲೆಯಾಗಿ ಗುರುತಿಸಿಕೊಂಡರು ಅದು ಒಂದು ಆರಾಧನಾ ಕಲೆ. ಹಾಗಾಗಿ ನಮ್ಮ ದೇಹ ಭಾಗವನ್ನು ಮರೆಸಿ ದೈವೀ ಭಾವಕ್ಕೆ ಕರೆದೊಯ್ದು ಜೀವನಕ್ಕೆ ಸಂಸ್ಕಾರ ನೀಡಬಲ್ಲ ಕಲಾ ಮಾಧ್ಯಮದಲ್ಲಿ ಯಕ್ಷಗಾನದ ಪಾತ್ರ ಮಹತ್ವಪೂರ್ಣವಾದುದು. ಇಂತಹ ಶ್ರೇಷ್ಠ ಕಲೆಯ ಕಾಯಕದಲ್ಲಿ ಪುಂಡು ವೇಷಧಾರಿಯಾಗಿ ಕಲಾ ಸರಸ್ವತಿಯ ಸೇವೆ ಮಾಡುತ್ತಿರುವ ಕಲಾವಿದ ರಾಘವ ಆಚಾರ್ಯ ಅಮಾಸೆಬೈಲ್.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲ್ ನ ರಾಮ ಆಚಾರ್ಯ ಹಾಗೂ ಲಕ್ಷ್ಮೀ ಅವರ ಮಗನಾಗಿ 13.10.1999ರಂದು ಜನನ. ಎಸ್.ಎಸ್.ಎಲ್. ಸಿ ವರೆಗೆ ವಿದ್ಯಾಭ್ಯಾಸ.
7ನೇ ತರಗತಿಯಿಂದ ಶ್ರೀ ರಟ್ಟೇಶ್ವರ ಸಂಘದಲ್ಲಿ ಯಕ್ಷಗಾನ ಕಲಿಕೆ. ಯಕ್ಷಗಾನದಲ್ಲಿ ಮೊದಲ ಗುರುಗಳು ವಿಶ್ವೇಶ್ವರಯ್ಯ ಸೋಮಯಾಜಿ ಸಿದ್ದಾಪುರ. ಎಸ್.ಎಸ್.ಎಲ್. ಸಿ ಮುಗಿದ ಮೇಲೆ ಮಂದಾರ್ತಿಯಲ್ಲಿ ಮಹೇಶ್ ಮಂದಾರ್ತಿ ಹಾಗೂ ಕೃಷ್ಣಯ್ಯ ಆಚಾರ್ ರಿಂದ ಹೆಜ್ಜೆ ತಾಳ ಅಭ್ಯಾಸ ಮಾಡಿ 2017ರಲ್ಲಿ ಮಂದಾರ್ತಿ ಮೇಳದಲ್ಲಿ ಬಾಲಗೋಪಾಲ ವೇಷಧಾರಿಯಾಗಿ 1ವರ್ಷ, ಕಮಲಶಿಲೆ ಮೇಳದಲ್ಲಿ 4 ವರ್ಷ, ಗೋಳಿಗರಡಿ ಮೇಳದಲ್ಲಿ 3 ವರ್ಷ ತಿರುಗಾಟ ಮಾಡಿ ಪ್ರಸ್ತುತ ಹಾಲಾಡಿ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು 9 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ರಾಘವ ಆಚಾರ್ಯ ಅಮಾಸೆಬೈಲ್.
ಯಕ್ಷಗಾನ ಕಲಿಯಲು ಹಾಗೂ ಮೇಳಕ್ಕೆ ಸೇರಲು ಪ್ರೇರಣೆ ಮಾಡಿದವರು ರವಿ ಪೂಜಾರಿ ಸೂರಿಕೋಡ್ಲು (ರಟ್ಟೇಶ್ವರ ಸಂಘದಲ್ಲಿ ಜೊತೆಗೆ ಕಲಿಕೆ).
ಯಕ್ಷಗಾನದಲ್ಲಿ ನನ್ನ ಪ್ರೇರಣೆ ಹಾಗೂ ಆದರ್ಶ ವಿಶ್ವನಾಥಧ್ವಯರು (ತೊಂಬಟ್ಟು ಹಾಗೂ ಹೆನ್ನಾಬೈಲ್ ) .
ನೆಚ್ಚಿನ ಪ್ರಸಂಗ:-
ಚಕ್ರ ಚಂಡಿಕೆ, ಸುಧನ್ವ ಮೋಕ್ಷ, ಬಬ್ರುವಾಹನ, ವಾಲಿ ವಧೆ, ಅಭಿಮನ್ಯು ಕಾಳಗ, ಸತ್ಯಹರೀಶ್ಚಂದ್ರ, ರುದ್ರಕೋಪ, ಗುಣಸುಂದರಿ, ಕರ್ಣ ಪರ್ವ ಇತ್ಯಾದಿ.
ನೆಚ್ಚಿನ ವೇಷ:-
ಬರ್ಬರಿಕ, ಅಭಿಮನ್ಯು, ಕೃಷ್ಣ, ಸುಧನ್ವ, ಲೋಹಿತ ನೇತ್ರ, ಪ್ರಹ್ಲಾದ, ವೃಷಸೇನಾ, ಬಬ್ರುವಾಹನ, ವಿಷ್ಣು, ವಿದ್ಯುನ್ಮಾಲಿ, ರಕ್ತಬೀಜ.
ಹಾಗೂ ಪೌರಾಣಿಕದ ಎಲ್ಲಾ ಪ್ರಸಂಗ ತುಂಬಾನೇ ಇಷ್ಟ.
ಹಾಲಾಡಿ ಮೇಳದ ಹೊಸ ಪ್ರಸಂಗಗಳ ಜನಪ್ರಿಯತೆಯ ಹಿಂದೆ ಕಲಾವಿದರಾದ ನಿಮ್ಮೆಲ್ಲರ ಪ್ರಯತ್ನ ಹೇಗೆ ಇದೆ:-
ಹೊಸ ಪ್ರಸಂಗ ಕುರಿತು ನಾವು ಎಲ್ಲರೂ ಕೂತು ಮಾತಾಡಿ ತಪ್ಪು ಸರಿ ಬಗ್ಗೆ ವಿಮರ್ಶೆ ಮಾಡಿ ಈಗಿನ ಕಾಲದ ಜನರ ಮನಸ್ಥಿತಿಗೆ ಬೇಗ ಮುಟ್ಟುವ ಹಾಗೆ ಸಮಷ್ಟಿಯಾಗಿ (ಹಿಮ್ಮೇಳ & ಮುಮ್ಮೇಳ) ಪ್ರಯತ್ನ ಮಾಡುತ್ತೇವೆ.
ಪೌರಾಣಿಕ ಯಕ್ಷಗಾನದಲ್ಲಿ ನಿಮ್ಮ ಒಲವು:-
ಯಕ್ಷಗಾನ ರಂಗದಲ್ಲಿ ಹೊಸ ಪ್ರಸಂಗದಲ್ಲಿ ಏನೇ ವೇಷ ಮಾಡಿದರು ಪುರಾಣ ಆಧಾರಿತ ಉದಾಹರಣೆಗಳನ್ನೇ ಕೊಟ್ಟೆ ಮಾತಾಡಲು ಅತೀ ಪ್ರಯತ್ನ ಮಾಡುತ್ತೇನೆ.
ಪೌರಾಣಿಕ ಪ್ರಸಂಗಕ್ಕೆ ನಾನು ಹೆಚ್ಚಾಗಿ ಹಿರಿಯ ಕಲಾವಿದರಲ್ಲಿ ಕೇಳಿಕೊಂಡು, ಭಾಗವತರಲ್ಲಿ ಕೇಳಿಕೊಂಡು ತಯಾರಿ ಮಾಡಿಕೊಂಡು ಹಿರಿಯರು ಮಾಡಿ ಇಟ್ಟ ಕಲೆಗೆ ಎಂದಿಗೂ ಅವಮಾನ ಮಾಡದೇ, ಯಕ್ಷಗಾನ ಚೌಕಟ್ಟನ್ನು ಅತೀಯಾಗಿ ಅತಿಕ್ರಮಿಸದೆ ಜನರ ಮನಸ್ಸು ಗೆಲ್ಲುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳುತ್ತಾರೆ ರಾಘವ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಆಗಿನ ಕಾಲದ ಅಭಿಮಾನಿಗಳು ಈಗಿನ ಕಾಲದ ಅಭಿಮಾನಿಗಳ ವ್ಯತ್ಯಾಸ ಮಾಡುವ ಬದಲು ಅಭಿಮಾನಿಗಳ ಅಭಿರುಚಿಯಂತೆ ಕಲೆಗೆ ಒಗ್ಗಿಕೊಂಡು ಪ್ರದರ್ಶನ ನೀಡುವುದು ಕಲಾವಿದನ ಹೊಣೆಗಾರಿಕೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದು ಯಕ್ಷಗಾನ ಉತ್ತಮ ಬೆಳವಣಿಗೆಯ ಹಾದಿಯಲ್ಲಿದೆ. ಯುವಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ತಂತ್ರಜ್ಞಾನದಿಂದ ಯಕ್ಷಗಾನ ವಿಶ್ವದಾದ್ಯಂತ ತಲುಪುತ್ತಿದೆ.
ತಪ್ಪು ಸರಿಗಳನ್ನು ವಿಮರ್ಶೆ ಮಾಡುವ ಬದಲು ಯಕ್ಷಗಾನಕ್ಕೆ ಬಂದ ಪ್ರೇಕ್ಷಕರ ಮನಸ್ಸನ್ನು ತೃಪ್ತಿ ಪಡಿಸುವುದೇ ಮೂಲ ಉದ್ದೇಶವಾಗಿದೆ.
ಯಕ್ಷಗಾನದಲ್ಲಿ ಮುಂದಿನ ಯೋಜನೆ:-
ಮುಂದೆ ಬರುವ ಕಲಾವಿದರಿಗೆ ರೋಲ್ ಮೋಡಲ್ ಆಗಿರ್ಬೇಕು. ಹಾಗೆ ಯಕ್ಷಗಾನ ಅಭಿಮಾನಿಗಳ ಹೃದಯದಲ್ಲಿ ನನ್ನ ಉಸಿರು ನಿಂತರು ಹೆಸರು ಶಾಶ್ವತವಾಗಿ ಉಳಿಬೇಕು ಇದುವೇ ಮುಂದಿನ ಯೋಜನೆ ಎಂದು ಹೇಳುತ್ತಾರೆ ರಾಘವ ಆಚಾರ್ಯ ಅಮಾಸೆಬೈಲ್.
ನಾಟ್ಯ ಚತುರ, ಸಿಡಿಲಮರಿ, ರಂಗದಕೋಲ್ಮಿಂಚು ಹೀಗೆ ಅನೇಕ ಬಿರುದು ಸನ್ಮಾನ ದೊರೆತಿರುತ್ತದೆ.
ಚಿತ್ರ ಬಿಡಿಸುವುದು, ಪುಸ್ತಕ ಓದುವುದು ಇವರ ಹವ್ಯಾಸ.
ಹಿರಿಯ ಕಲಾವಿದರು ಗುಂಡಿಬೈಲ್ ಗಣಪತಿ ಭಟ್, ಉದಯಕುಮಾರ ತಾರೇಕೋಡ್ಲು, ಹೆನ್ನಾಬೈಲ್, ತೊಂಬಟ್ಟು, ಸುಧೀರ್ ಉಪ್ಪೂರು, ವಿಜಯ್ ಗಾಣಿಗ, ಐರಬೈಲ್, ಪಂಜು ಪೂಜಾರಿ, ಜಯರಾಮ ಕೊಠರಿ, ಬೆದ್ರಡಿ ನರಸಿಂಹ, ಹಾಲಾಡಿ ಸತೀಶ್ ಹಾಸ್ಯಗಾರ ಇನ್ನೂ ಹಲವಾರು ಕಲಾವಿದರು ನನ್ನ ವೇಷಕ್ಕೆ ಮಾದರಿ ಕಲಾವಿದರು ಎಂದು ಹೇಳುತ್ತಾರೆ ರಾಘವ ಆಚಾರ್ಯ ಅಮಾಸೆಬೈಲ್.
ತಂದೆ ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎನ್ನುತ್ತಾರೆ ರಾಘವ ಆಚಾರ್ಯ ಅಮಾಸೆಬೈಲ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment