ಯಕ್ಷ ಸಾಧಕರು 393

"ಯಕ್ಷಕಲಾ ಪ್ರತಿಭಾ ಸಂಪನ್ನೆ"

ವೃತ್ತಿಯಲ್ಲಿ ಇವರು ಶಿಕ್ಷಕಿ, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ. MA in ಜ್ಯೋತಿಷ್ಯ ಇವರ ವಿದ್ಯಾಭ್ಯಾಸ.
ಮನೆಯಲ್ಲಿ ಅಜ್ಜ ಮಟಪಾಡಿ ರಾಮಮೋಹನ ಆಚಾರ್ಯ ಹಾಗೂ ಅಪ್ಪನಿಗೆ ಇವರು ಯಕ್ಷಗಾನ ಕಲಿಯಬೇಕು, ಯಕ್ಷಗಾನದಲ್ಲಿ ಸಾಧನೆ ಮಾಡಬೇಕು ಎಂದು ಆಸೆ. ಡೊಡ್ಡಜ್ಜ ಮಟಪಾಡಿ ರಾಜಗೋಪಾಲ ಆಚಾರ್ಯರು ಕೆಲವು ಸಂಸ್ಕೃತ ಯಕ್ಷಗಾನ ಪ್ರಸಂಗ ಬರೆದಿದ್ದರು. ಅದನ್ನೆಲ್ಲ ಕೇಳಿ ಇವರಿಗೆ ಯಕ್ಷಗಾನ ಹೆಚ್ಚು ಕಲಿಯಬೇಕೆಂದು ಆಸೆ.
ಯಕ್ಷಗಾನದಲ್ಲಿ ವೇಷ ಮಾಡು ಎಂದು ಹುರಿದುಂಬಿಸುವವರು ಎಮ್.ಸಿ.ಕಲ್ಕೂರು. ಈ ಆಸೆ ಸಹಕಾರಗೊಳಿಸಲು ಬಡಗುತಿಟ್ಟು ಯಕ್ಷಗಾನವನ್ನು  ಗುರುಗಳಾದ ಕೃಷ್ಣಸ್ವಾಮಿ ಜೋಯಿಸ್, ಹರಿಕೃಷ್ಣ ಹೊಳ್ಳ, ಪ್ರತೀಶ್ ಕುಮಾರ್, ಕೇಶವ್ ಆಚಾರಿ, ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಬಳಿ ಕಲಿತು; ತೆಂಕುತಿಟ್ಟು ಯಕ್ಷಗಾನವನ್ನು ರಕ್ಷಿತ್ ಶೆಟ್ಟಿ ಪಡ್ರೆ, ರಾಮಪ್ರಕಾಶ್ ಕಲ್ಲೂರಾಯ, ಲಕ್ಷ್ಮಣ್ ಕುಮಾರ್ ಮರಕಡ ಬಳಿ ಅಭ್ಯಾಸ ಮಾಡಿ ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಕಲಾವಿದೆ ಸ್ವಸ್ತಿಶ್ರೀ ಸಾಮಗ.




ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಟಪಾಡಿಯ ಸಾಮಗ ಎಮ್ ನರಸಿಂಹ ಆಚಾರ್ಯ ಹಾಗೂ ಮಾಲಿನೀ ಇವರ ಮಗಳಾಗಿ 12.08.2001 ರಂದು ಸ್ವಸ್ತಿಶ್ರೀ ಸಾಮಗ ಅವರ ಜನನ.

ನೆಚ್ಚಿನ ಪ್ರಸಂಗಗಳು:-
ಶ್ರೀ ದೇವೀ ಮಹಾತ್ಮೆ, ಶಬರಿ ಮೋಕ್ಷ, ಗದಾಯುದ್ಧ , ಅಭಿಮನ್ಯು ಕಾಳಗ, ಸುಧನ್ವಾರ್ಜುನ, ರಾವಣ ವಧೆ, ಬಕಾಸುರ ವಧೆ, ಮಾಯಾಪುರಿ (ಭೀಮಸೇನನ ಯಾವ್ದೆಲ್ಲ ಪ್ರಸಂಗ ಇದೆಯೋ ಅದೆಲ್ಲವೂ ಇಷ್ಟವೇ).
ನೆಚ್ಚಿನ ವೇಷಗಳು:-
ಭೀಮಸೇನ, ಶ್ರೀದೇವೀ, ಶಬರಿ, ಅಸಿಕೆ, ಮದನಾಕ್ಷಿ, ಶುಂಭ (ಬಣ್ಣದ ವೇಷ ಎಲ್ಲವೂ ಇಷ್ಟ).

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಗುರುಗಳ ಹತ್ತಿರ ಕೇಳಿ ಹಾಗೆ ಪದ್ಯವನ್ನು ನೋಡಿಕೊಂಡು, ಸೋಶಿಯಲ್ ಮೀಡಿಯಾ ಇರುವ ಕಾರಣ ಹೊಸ ಹೊಸ ಯಕ್ಷಗಾನದ ವಿಚಾರವನ್ನು ತಿಳಿದುಕೊಳ್ಳಲು ಸುಲಭವಾಗಿದೆ. ಸಡನ್ ಏನಾದ್ರೂ ಹೊಸ ವೇಷ ಸಿಕ್ಕಿದಾಗ ಯುಟ್ಯೂಬ್ ಮೂಲಕ ವಿಚಾರವನ್ನು ತಿಳಿದುಕೊಂಡು ರಂಗಕ್ಕೆ ಹೋಗುತ್ತೇನೆ ಎಂದು ಹೇಳುತ್ತಾರೆ ಸ್ವಸ್ತಿಶ್ರೀ.

ಪೌರಾಣಿಕ ಯಕ್ಷಗಾನದಲ್ಲಿ ನಿಮ್ಮ ಒಲವು:-
ಪೌರಾಣಿಕ ಪ್ರಸಂಗಗಳಲ್ಲಿ ನನಗೆ ಬಡಗು ತಿಟ್ಟಿನ ಕೆಲವು ಪ್ರಸಂಗಗಳು ತುಂಬಾ ಇಷ್ಟ. ಉದಾಹರಣೆಗೆ ಗದಾಯುದ್ಧ, ಸುದರ್ಶನ ವಿಜಯ, ಕೀಚಕ ವಧೆ, ರಾಮಾಂಜನೇಯ ಇತ್ಯಾದಿ.

ನಿಮ್ಮ ವೇಷಕ್ಕೆ ಯಾರಾದರೂ ಮಾದರಿ ಕಲಾವಿದರು ಇದ್ದಾರ:-
ಬಣ್ಣದ ವೇಷದ ಮೇಲೆ ಹೆಚ್ಚಿನ ಒಲವಿರುವ ಕಾರಣ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರ ವೇಷ ಹಾಗೆಯೇ ಶಂಭು ಹೆಗಡೆಯವರ ವೇಷ ತುಂಬಾ ಇಷ್ಟ. ಇವರ ಹಾಗೇ ವೇಷ ನನ್ನದೂ ಆಗಬೇಕೆಂಬ ಆಸೆ, ಇದು ಕಷ್ಟವೇ ಆದರೆ ಆಸೆ ಪಡುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಭಾವನೆ.






ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಈಗಿನ ಕಾಲದಲ್ಲಿ ಯಕ್ಷಗಾನದ ಕೆಲವು ಮೇಳಗಳಲ್ಲಿ ಹಾಸ್ಯವನ್ನು ತುಂಬಾ ಕೆಟ್ಟದಾಗಿ ತೋರಿಸ್ತಾರೆ ಇದೊಂದು ತುಂಬಾ ಬೇಸರ ನನಗೆ. ಯಕ್ಷಗಾನವನ್ನು ಪೂಜಿಸುವವರು ಕಮ್ಮಿ ಆಗಿದ್ದಾರೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕೆಲವು ಪ್ರೇಕ್ಷಕರು ಚೆನ್ನಾಗಿ ವರ್ತಿಸುತ್ತಾರೆ. ಯಕ್ಷಗಾನವನ್ನು ಸರಿಯಾಗಿ ನೋಡುತ್ತಾರೆ ಬಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ ಕೆಲವರು ಸುಮ್ಮನೆ ಬಂದು ಎದುರು ಕೂತ್ಕೊಂಡು ಮಾತನಾಡ್ತಾ ಇರ್ತಾರೆ ಅಥವಾ ಮೊಬೈಲ್ ನೋಡ್ತಾರೆ.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಯಕ್ಷಗಾನದ ಆಹಾರ್ಯದ ಬಗ್ಗೆ ಹೇಳಬೇಕೆಂದರೆ ಇದು ನಮ್ಮ ಪರಂಪರೆಯ ಹಾಗೂ ಸಂಸ್ಕಾರದ ಗುರುತು. ಅದರ ಮೂಲ ಸ್ವರೂಪವನ್ನು ಹಾಳುಮಾಡದೇ ಉಳಿಸಿಕೊಂಡು ಹೋಗಬೇಕು. ಹೊಸ ಪೀಳಿಗೆಗೆ ಅದರ ಮಹತ್ವವನ್ನು ತಿಳಿಸಿ ಕೊಡಬೇಕು, ಯಕ್ಷಗಾನದ ನೈಜತೆಯನ್ನು ಸಂರಕ್ಷಿಸಬೇಕು .

ವೃತ್ತಿಯಲ್ಲಿ ನೀವು ಶಿಕ್ಷಕಿ ಹಾಗೂ ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ ಎರಡನ್ನು ಯಾವ ರೀತಿಯಲ್ಲಿ ನೀವು ಬ್ಯಾಲೆನ್ಸ್ ಮಾಡಿಕೊಳ್ಳುತ್ತೀರಿ:-
ಕೆಲವೊಮ್ಮೆ ಯಕ್ಷಗಾನವನ್ನು ಮುಗಿಸಿ ಮನೆಗೆ ಬರುವಾಗ ತುಂಬಾ ಲೇಟಾಗಿರುತ್ತದೆ. ಮರು ದಿನ ಪುನಃ ಕಾಲೇಜು ಇರ್ತದೆ. ಹಾಗಾಗಿ ಕೆಲವೊಮ್ಮೆ ಕಷ್ಟ ಆಗುತ್ತೆ ಆದರೆ ಈಗ ಅಭ್ಯಾಸ ಆಗಿದೆ. ಹಾಗೆ ಸಂಜೆ ಮೇಲೆ ಯಕ್ಷಗಾನ ಇದ್ದಾಗ ಕಾಲೇಜು ಮುಗಿಸಿ ಸೀದ ಹೋಗಬೇಕಾಗ್ತದೆ. ರೆಸ್ಟ್ ಸಿಗುವುದು ಕಮ್ಮಿ. ನಮಗೆ ಒಮ್ಮೊಮ್ಮೆ ಆಟ ಇರುವುದು, ಆದರೆ ಮೇಳದಲ್ಲಿ ಇರುವ ಕಲಾವಿದರಿಗೆ ಪ್ರತಿ ದಿನ ಇದೇ ವೃತ್ತಿ ಆಗಿರುತ್ತದೆ. ಅವರನ್ನು ನೋಡುವಾಗ ಯಕ್ಷಗಾನದ ಮೇಲೆ ಹಾಗೆಯೆ ಕಲಾವಿದರ ಮೇಲೆ ಗೌರವ ಹೆಚ್ಚಾಗುತ್ತದೆ.







ಮಹಿಳಾ ಯಕ್ಷಗಾನದಲ್ಲಿ ನೀವು ಕಂಡುಕೊಂಡ ಸಾಧಕ ಹಾಗೂ ಬಾಧಕಗಳು:-
ಸಾಧಕ:-

ಮಹಿಳೆಯರು ಯಕ್ಷಗಾನ ಕಲೆಯ ಎಲ್ಲಾ ವಿಭಾಗಗಳಲ್ಲಿಯೂ ಅತ್ಯುತ್ತಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಶಿಸ್ತು, ಪರಿಶ್ರಮ ಹಾಗೂ ಪಾತ್ರದ ಮೇಲಿನ ಬದ್ಧತೆಯಿಂದ ಕಲೆಗೆ ಹೊಸ ಆಯಾಮ ನೀಡುತ್ತಿದ್ದಾರೆ. ಮಹಿಳಾ ಕಲಾವಿದರ ಪ್ರದರ್ಶನದಿಂದ ಯಕ್ಷಗಾನ ಜನಪ್ರಿಯವಾಗುತ್ತಿದ್ದು, ಹೊಸ ತಲೆಮಾರಿನ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗುತ್ತಿದೆ.
ಬಾಧಕ:-
ಮಹಿಳೆಯರಿಗೆ ಇನ್ನೂ ಹೆಚ್ಚಿನ ಪ್ರದರ್ಶನದ ಅವಕಾಶಗಳು ಮತ್ತು ವೃತ್ತಿಪರ ವೇದಿಕೆಗಳ ಅಗತ್ಯವಿದೆ. ಕುಟುಂಬ ಹಾಗೂ ವೈಯಕ್ತಿಕ ಜವಾಬ್ದಾರಿಗಳ ಕಾರಣದಿಂದ ನಿರಂತರ ಅಭ್ಯಾಸಕ್ಕೆ ಕೆಲವೊಮ್ಮೆ ತೊಂದರೆ ಉಂಟಾಗುತ್ತದೆ. ಕೆಲವು ಪಾತ್ರಗಳಿಗೆ ಅಗತ್ಯವಿರುವ ದೈಹಿಕ ಸಾಮರ್ಥ್ಯ ಮತ್ತು ನಿರಂತರ ಪ್ರವಾಸ ಸವಾಲಾಗಬಹುದು. ಮಹಿಳಾ ಕಲಾವಿದರಿಗೆ ಸಮಾಜದಿಂದ ಇನ್ನಷ್ಟು ಪ್ರೋತ್ಸಾಹ ಮತ್ತು ಬೆಂಬಲ ದೊರೆಯಬೇಕು.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಹಿಮ್ಮೇಳ ಸರಿಯಾಗಿ ಕಲಿಯಬೇಕೆಂದು ಆಸೆ ಇದೆ ಅದಕ್ಕೆ ಗುರುಗಳು ರಾಮಪ್ರಕಾಶ್ ಕಲ್ಲೂರಾಯರು ಇದ್ದಾರೆ. ಆದ್ರೆ ನನಗೆ ಸಮಯ ಸರಿಯಾಗಿ ಸಿಕ್ತಾ ಇಲ್ಲ. ಯಕ್ಷಗಾನವನ್ನು ಪೂರ್ಣವಾಗಿ ಕಲಿಯಬೇಕು, ಹಾಗೆ ಬಣ್ಣದ ವೇಷದ ಮೇಲೆ ಹೆಚ್ಚು ಒಲವಿರುವ ಕಾರಣ ಅದನ್ನು ಇನ್ನೂ ಹೆಚ್ಚಾಗಿ ಸರಿಯಾಗಿ ಕಲಿಯಬೇಕೆಂದು ಆಸೆ.




ಪ್ರಮೋದ್ ತಂತ್ರಿಯವರ ಶ್ರೀ ಭಗವತೀ ಯಕ್ಷಕಲಾ ಬಳಗ (ರಿ.) ಪುತ್ತೂರು, ಉಡುಪಿ ತಂಡದಲ್ಲಿ ಹಾಗೂ ಕೆಲವು ಸಂಘಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿರುತ್ತೇನೆ. ಬೇರೆ ಸಂಘಗಳಲ್ಲಿ ವೇಷ ಮಾಡುವಾಗ ಒಳ್ಳೆಯ ಅನುಭವ ಆಗಿದೆ. ಹೊಸಬರ ಪರಿಚಯ ಆಗ್ತದೆ, ಎಲ್ಲಾ ರೀತಿಯ ವೇಷದ ಅನುಭವ ಆಗುತ್ತದೆ ಎಂದು ಹೇಳುತ್ತಾರೆ ಸ್ವಸ್ತಿಶ್ರೀ.

ಮುಂಬೈ ಅಲ್ಲಿ ಅಜೆಕಾರು ಕಲಾಭಿಮಾನಿ ಬಳಗದವರು ಸನ್ಮಾನಿಸಿದ್ದಾರೆ.
ಗಾರ್ಡನಿಂಗ್, ಫೋಟೋಗ್ರಾಫಿ ಇವರ ಹವ್ಯಾಸಗಳು.

ತಂದೆ, ತಾಯಿ, ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎನ್ನುತ್ತಾರೆ ಸ್ವಸ್ತಿಶ್ರೀ ಸಾಮಗ.




ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395