ಯಕ್ಷ ಸಾಧಕರು 394

"ಉತ್ಸಾಹಿ ಕಲಾವಿದ"

ಉಡುಪಿ ಜಿಲ್ಲೆಯ ಕುಂದಾಪುರದ ಕಿರಿಮಂಜೇಶ್ವರ ಗ್ರಾಮದ ನಾಗೂರಿನ ರಾಮಕೃಷ್ಣ ದೇವಾಡಿಗ ಹಾಗೂ ಸಾವಿತ್ರಿ ಇವರ ಮೂರು ಜನ ಮಕ್ಕಳಲ್ಲಿ ಮೊದಲ ಮಗನಾಗಿ 20.02.2004 ರಂದು ರೋಶನ ದೇವಾಡಿಗ ಅವರ ಜನನ. K.R Hegde College Of Paramedical Sciences College ನಲ್ಲಿ (DMLT - Diploma In Medical Laboratory Technology) ಹಾಗೂ Acharya Institute Of Health Sciences Bangalore ನಲ್ಲಿ BSC - (Bsc In Medical Laboratory Technology) ಇವರ ವಿದ್ಯಾಭ್ಯಾಸ.




ತಂದೆ ತರುತ್ತಿದ್ದ ಯಕ್ಷಗಾನದ ಮುದ್ರಿಕೆಗಳನ್ನು(CD) ನೋಡಿ ನಾನು ಯಕ್ಷಗಾನ ಕಲಿಯಬೇಕು, ವೇಷ ಮಾಡಬೇಕೆಂದು ಆಸೆ ಪಟ್ಟು ಯಕ್ಷಗಾನ ಇನ್ನೂ ಕಲಿಯಬೇಕು ಎಂಬ ಪ್ರೇರಣೆಯಿಂದ ಬಿ.ವಿಶ್ವೇಶ್ವರ ಅಡಿಗ ಹಾಗೂ ಪ್ರಶಾಂತ ಮಯ್ಯ ಬಳಿ ಪ್ರಾಥಮಿಕ ಅಭ್ಯಾಸ ಮಾಡಿ ಮುಂದೆ ಮರವಂತೆ ದೇವರಾಜ ದಾಸ ಅವರ ಬಳಿ ಅಭ್ಯಾಸ ಮಾಡಿ 15 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಹವ್ಯಾಸಿ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ ರೋಶನ.

ನೆಚ್ಚಿನ ಪ್ರಸಂಗಗಳು:-
ಚಕ್ರ ಚಂಡಿಕೆ, ಲಂಕಾ ದಹನ, ಸುದರ್ಶನ ವಿಜಯ, ಚಂದ್ರಹಾಸ, ಶ್ವೇತಕುಮಾರ, ರುದ್ರಕೋಪ ಇತ್ಯಾದಿ.
ನೆಚ್ಚಿನ ವೇಷ:-
ಸುದರ್ಶನ, ಕೃಷ್ಣ, ಈಶ್ವರ, ಚಂದ್ರಹಾಸ, ಬಾರ್ಬರಿಕ ಇತ್ಯಾದಿ.

ಯಕ್ಷಗಾನ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗದ ಪ್ರತಿ ಹಾಗೂ ಪದ್ಯಗಳನ್ನು ತಿಳಿದುಕೊಂಡು ಭಾಗವತರಲ್ಲಿ ಹಾಗೂ ಹಿರಿಯ ಕಲಾವಿದರಲ್ಲಿ ಸಲಹೆಯನ್ನು, ಪ್ರಸಂಗ ನಡೆಯನ್ನು ತಿಳಿದುಕೊಂಡು, ಸಹ ಕಲಾವಿದರೊಂದಿಗೆ ವೇಷದ ಬಗ್ಗೆ ಚರ್ಚಿಸಿ ಹಾಗೂ ನನ್ನ ಕಲ್ಪನೆಯನ್ನು ಸ್ವಲ್ಪ ಸೇರಿಸಿ ಯಕ್ಷಗಾನಕ್ಕೆ ಯಾವುದೇ ಲೋಪ ಆಗದ ಹಾಗೆ ಸಿದ್ಧತೆ ಮಾಡಿಕೊಂಡು ರಂಗಪ್ರವೇಶ ಮಾಡುತ್ತೇನೆ ಎಂದು ಹೇಳುತ್ತಾರೆ ರೋಶನ.




ಪೌರಾಣಿಕ ಪ್ರಸಂಗದ ಬಗ್ಗೆ ಒಲವು:-
ಪೌರಾಣಿಕ ಪ್ರಸಂಗಗಳು ಯಕ್ಷಗಾನದ ಅಡಿಪಾಯ ಇದ್ದ ಹಾಗೆ. ಪೌರಾಣಿಕ ಪ್ರಸಂಗದ ಜ್ಞಾನ ಪ್ರತಿಯೊಬ್ಬ ಕಲಾವಿದನಿಗೆ ಮುಖ್ಯ ಆಗ ಮಾತ್ರ ಒಬ್ಬ ಕಲಾವಿದ ಒಂದು ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಬಲ್ಲ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಆಗಿನ ಕಾಲಕ್ಕೂ ಈಗಿನ ಸ್ಥಿತಿಗೂ ಅಜಗಜಾಂತರ ಇದೆ. ಕೆಲವೊಂದು ಯಕ್ಷಗಾನಕ್ಕೆ ಒಳ್ಳೆಯದೆ, ಆದರೆ ಇನ್ನೂ ಕೆಲವು ಕಲಾವಿದನಿಗೂ ಪ್ರೇಕ್ಷಕರಿಗೆ ಅನುಕೂಲಕ್ಕೆ ಬೇಕಾಗಿ ಬದಲಾಗಿದೆ. ವೇಷ ಭೂಷಣದ ವಿಷಯಕ್ಕೆ ಬರುವುದಾದರೆ ತುಂಬಾ ಸುಧಾರಿಸಿದೆ. ಕಲಾವಿದರಿಗೆ ರಂಗದಲ್ಲಿ ತನ್ನನ್ನು ತಾನೂ ತೊಡಗಿಸಿಕೊಳ್ಳಲು ಅನುಕೂಲ, ವಿನ್ಯಾಸ, ಆಕಾರ ಎಲ್ಲವೂ ನೋಡುವುದಕ್ಕೆ ಚೆಂದ. ಯುವ ಪೀಳಿಗೆ ಯಕ್ಷಗಾನಕ್ಕೆ ಆಸಕ್ತಿ ತೋರುತ್ತಿದ್ದಾರೆ.
ಕಾಲಮಿತಿ ಯಕ್ಷಗಾನ ಇಂದು ಕಲಾವಿದರಿಗೆ ಹಾಗೂ ಪ್ರೇಕ್ಷಕರಿಗೆ ಅನುಕೂಲ ಆದರೆ ಕಲೆಗೆ ಮಾರಕವೇ. ಯಾಕೆಂದರೆ ಕಾಲಮಿತಿಯ ಕಾರಣದಿಂದ ಒಂದು ಪ್ರಸಂಗದಲ್ಲಿ ಹಲವಾರು ಸನ್ನಿವೇಶ ಹಾಗೂ ಪಾತ್ರವನ್ನು ತೆಗೆದುಕೊಳ್ಳುವುದಿಲ್ಲ.
ಸಾಮಾಜಿಕ ಪ್ರಸಂಗಗಳು:-
ಯಕ್ಷಗಾನ ಮನೋರಂಜನೆ ಕಲೆ. ಹಾಗಾಗಿ ಪೌರಾಣಿಕ ಪ್ರಸಂಗದ ಜೊತೆಗೆ ಸಾಮಾಜಿಕ ಪ್ರಸಂಗಗಳು ಪ್ರೇಕ್ಷಕರನ್ನು ಯಕ್ಷಗಾನದತ್ತ ಆಕರ್ಷಿಸುತ್ತದೆ. ಆದರೆ ಸಾಮಾಜಿಕ ಪ್ರಸಂಗಗಳು ಯಕ್ಷಗಾನಕ್ಕೆ ಯಾವುದೇ ಹಾನಿಯಾಗದೆ ಹಾಗೆ ಯಕ್ಷಗಾನದ ಚೌಕಟ್ಟನ್ನು ಮೀರದೆ ಇರಬೇಕಾದದ್ದು ಮುಖ್ಯ.
ಪರಿವರ್ತನೆ ಜಗದ ನಿಯಮ ಹಾಗೆಂದು ಮೂಲ ಯಾವ ಕಾರಣಕ್ಕೂ ಮರೆಯಬಾರದು.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ಪ್ರೇಕ್ಷಕರು ಯಕ್ಷಗಾನದ ಬಗ್ಗೆ ಹಾಗೂ ಪುರಾಣದ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದಾರೆ. ಕಲಾವಿದ ಸಣ್ಣ ತಪ್ಪನ್ನು ಮಾಡಿದರು ಅದನ್ನು ಕಂಡು ಹಿಡಿಯಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ಕಲಾವಿದನಾದವ ಸಂಪೂರ್ಣ ತಯಾರಿಯಲ್ಲಿ ಆದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕಲಾವಿದ ಮಾಡಿದ ತಪ್ಪನ್ನು ಕಲಾವಿದನಲ್ಲಿ ಹೇಳಿ ಅದನ್ನು ಸರಿ ಮಾಡಿಸುವ ಪ್ರಯತ್ನವನ್ನು ಪ್ರತಿಯೊಬ್ಬ ಪ್ರೇಕ್ಷಕರು ಮಾಡಬೇಕು.
ಸಾಮಾಜಿಕ ಜಾಲತಾಣದಲ್ಲಿ ಟಿಪ್ಪಣಿ ಬರೆಯುವುದಕ್ಕಿಂತ ಆ ಸಮಸ್ಯೆಯನ್ನು ಕಲಾವಿದರಲ್ಲೆ ಮಾತಾಡಿ ಬಗೆ ಹರಿಸಿಕೊಳ್ಳುವುದು ಒಳ್ಳೆಯದು. ಇದು ಒಬ್ಬ ಕಲಾವಿದನ ಬೆಳವಣಿಗೆಗೆ ಒಳ್ಳೆಯದು.


ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಯಕ್ಷಗಾನ ತನ್ನದೇ ಆದ ಆಹಾರ್ಯ ವಿನ್ಯಾಸ ಹೊಂದಿದೆ. ಯಕ್ಷಗಾನ ಇದರಿಂದ ಇನ್ನಷ್ಟು ಸುಂದರವಾಗಿ ಕಾಣುತ್ತದೆ ಮತ್ತು ಯುವ ಪೀಳಿಗೆಯನ್ನು ಯಕ್ಷಗಾನದತ್ತ ಆಕರ್ಷಿಸಲು ಇದು ಕಾರಣ. ಮೊದಲಾಗಿ ವಿನ್ಯಾಸ, ಬಣ್ಣಗಾರಿಕೆಗಳನ್ನು ಉಳಿಸಿ ಬೆಳೆಸಬೇಕಾದ್ದು ಪ್ರತಿಯೊಬ್ಬ ಕಲಾವಿದನ ಕರ್ತವ್ಯ. ವಿಶೇಷ ಕಲ್ಪನೆಯಲ್ಲಿ ಕಾಲಕ್ರಮೇಣ ಹೊಸ ಶೈಲಿಯ, ಹೊಸ ವಿನ್ಯಾಸದ ಆಹಾರ್ಯದ ಕ್ರಮಗಳು ಸೃಷ್ಟಿ ಆಯಿತು ಮತ್ತು ಆಗುತ್ತಲೆ ಇದೆ. ಇವೆಲ್ಲ ಯಕ್ಷಗಾನದ ಪರಂಪರೆ ಹಾಗೂ ಯಕ್ಷಗಾನದ ಚೌಕಟ್ಟಿನಲ್ಲೆ ಇದ್ದು ಹೊಸತನದೊಂದಿಗೆ ಪರಂಪರೆಯನ್ನು ಕಾಪಾಡಿಕೊಂಡು ಯಕ್ಷಗಾನದ ಮಿತಿಯಲ್ಲಿರುವುದು ಉತ್ತಮ.

ಯಕ್ಷಗಾನ ರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಹವ್ಯಾಸಿಯಾಗಿ ಇನ್ನೂ ಹೆಚ್ಚಿನ ಕಲಾ ಸೇವೆಯನ್ನು ಮಾಡಬೇಕೆಂಬುದು ಪ್ರಮುಖ ಗುರಿ. ಪಾತ್ರ ನಿರ್ವಹಣೆಯ ಕೌಶಲ್ಯ, ಅರ್ಥಗಾರಿಕೆಯಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಿ ಕೊಳ್ಳುವುದು, ನನ್ನಿಂದ ಒಂದಿಷ್ಟು ಜನರಿಗೆ ಒಳ್ಳೆಯ ಸಂದೇಶ ಹಾಗೂ ಯಕ್ಷಗಾನ ಮತ್ತು ಅದರ ಶ್ರೀಮಂತಿಕೆಯನ್ನು ಸಾರಿ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕು.

ಚಿತ್ರಕಲೆ, ಪುಸ್ತಕ ಓದುವುದು, ಯಕ್ಷಗಾನ ನೋಡುವುದು ಇವರ ಹವ್ಯಾಸಗಳು.

ತಂದೆ, ತಾಯಿ, ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎನ್ನುತ್ತಾರೆ ರೋಶನ ದೇವಾಡಿಗ.




ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395