ಯಕ್ಷ ಸಾಧಕರು 396

"ಪ್ರತಿಭಾಪೂರ್ಣ ಯಕ್ಷನಿಧಿ"

ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದ. ಊರಿನಲ್ಲಿ ಸುತ್ತಮುತ್ತ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳು ಇವರು ಯಕ್ಷಗಾನ ಕಲಿಯಲು ಪ್ರೇರಣೆ.
ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಶ್ರೀ ಸದಾನಂದ ಐತಾಳ್‌ ಗುಂಡ್ಮಿ ಮತ್ತು ಶ್ರೀ ದೇವದಾಸ ರಾವ್‌ ಕೂಡ್ಲಿ ಇವರ ಯಕ್ಷಗಾನ ಗುರುಗಳು.
ಕಳೆದ 12 ವರ್ಷಗಳಿಂದ ವಡ್ಡರ್ಸೆಯ ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ) ಸಂಸ್ಥೆಯಲ್ಲಿ ಅಲ್ಲದೆ ವಿವೇಕ ಯಕ್ಷರಂಗ ಮಧುವನ ಅಚ್ಲಾಡಿ ಮತ್ತು ಯಕ್ಷಮಿತ್ರರು ಹೊನ್ನಾರಿ ಗಿಳಿಯಾರು ಸಂಸ್ಥೆಯಲ್ಲಿ ಅತಿಥಿಯಾಗಿ ವೇಷಗಳನ್ನು ಮಾಡುತ್ತಾ ಇಂದು ಯಕ್ಷಗಾನ ರಂಗದಲ್ಲಿ ಹಲವು ವರ್ಷಗಳಿಂದ ಸೇವೆಯನ್ನು ಮಾಡುತ್ತಿರುವ ಕಲಾವಿದ ನಾಗರಾಜ ಆಚಾರ್ಯ ವಿ.




ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ವಡ್ಡರ್ಸೆಯ ರುದ್ರ ಆಚಾರ್ಯ ಹಾಗೂ ಜಲಜ ಇವರ ಮಗನಾಗಿ 29.07.1979ರಂದು ನಾಗರಾಜ ಆಚಾರ್ಯ ವಿ ಅವರ ಜನನ. ಬಿ.ಎ ಮತ್ತು ಟಿ.ಸಿ.ಎಚ್ ಇವರ ವಿದ್ಯಾಭ್ಯಾಸ.
ಪ್ರಸ್ತುತ ಪಿ.ಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆಕ್ಕಟ್ಟೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲಿಸುತ್ತಿದ್ದಾರೆ.

ಯಕ್ಷಗಾನ ರಂಗದಲ್ಲಿ ಬರುವ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ವಡ್ಡರ್ಸೆ ವಸುಂಧರೆ (ಗುರುಗಳಾದ ಶ್ರೀ ಪ್ರಸಾದ್ ಕುಮಾರ್‌ ಮೊಗೆಬೆಟ್ಟು ವಿರಚಿತ ವಡ್ಡರ್ಸೆಯ ಇತಿಹಾಸವನ್ನು ಆಧರಿಸಿದ ಐತಿಹಾಸಿಕ ಪ್ರಸಂಗ)ಯ ವಡ್ಡರಸ, ರಾಮಾಶ್ವಮೇಧದ ಶತ್ರುಘ್ನ ಮತ್ತು ರಾಮ, ಕಂಸ ದಿಗ್ವಿಜಯದ ಮಾಗಧ, ಶನೀಶ್ವರ ಮಹಾತ್ಮೆಯ ವಿಭಾಕರ ಮತ್ತು ಬೇತಾಳ, ಶ್ವೇತಕುಮಾರ ಚರಿತ್ರೆಯ ಯಮ, ಸುಧನ್ವ ಕಾಳಗದ ಅರ್ಜುನ, ದ್ರೌಪದಿ ಪ್ರತಾಪದ ಅರ್ಜುನ, ಸುದರ್ಶನ ವಿಜಯದ ಲಕ್ಷ್ಮೀ ಮತ್ತು ಸುದರ್ಶನ, ಕನಕಾಂಗಿ ಕಲ್ಯಾಣದ ಬಲರಾಮ, ಭೀಷ್ಮ ಪ್ರತಿಜ್ಞೆಯ ಶಂತನು, ಬೇಡರ ಕಣ್ಣಪ್ಪದ ಕೈಲಾಸ ಶಾಸ್ತ್ರಿ ಇತ್ಯಾದಿ ಇವರ ನೆಚ್ಚಿನ ವೇಷಗಳು.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಗುರುಗಳಾದ ಪ್ರಸಾದ್ ಕುಮಾರ್‌ ಮೊಗೆಬೆಟ್ಟು ಇವರು ಟ್ರಯಲ್‌ನಲ್ಲಿ ನೀಡುವ ಸೂಚನೆಗಳನ್ನು ಪಾಲಿಸುತ್ತೇನೆ. ಪ್ರಸಂಗ ಪ್ರತಿ ಮತ್ತು ಪೂರಕ ಪೌರಾಣಿಕ ಕಥೆಗಳ ಅಧ್ಯಯನ, ನಮ್ಮ ಶ್ರೀ ಮಹಾಲಿಂಗೇಶ್ವರ ಕಲಾರಂಗದ ಸಹ ಕಲಾವಿದರೊಂದಿಗೆ ಚರ್ಚಿಸಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ನಾಗರಾಜ್.






ನಿಮ್ಮ ವೇಷಕ್ಕೆ ಯಾರಾದರೂ ಮಾದರಿ ಕಲಾವಿದರು ಇದ್ದಾರ:-
ಗುರುಗಳೇ ನನಗೆ ಮಾದರಿ. ಆದರೆ ಅವರು ಹೇಳಿಕೊಟ್ಟ ಶೇಕಡಾ 10ರಷ್ಟನ್ನು ಮಾತ್ರ ನಿರ್ವಹಿಸಲು ನನ್ನಿಂದ ಸಾಧ್ಯ ಅಷ್ಟೆ.

ಪೌರಾಣಿಕ ಯಕ್ಷಗಾನದಲ್ಲಿ ನಿಮ್ಮ ಒಲವು:-
ಹಿಂದೆ ಪೌರಾಣಿಕ ಮತ್ತು ಸಾಮಾಜಿಕ ಪ್ರಸಂಗಗಳೆರಡನ್ನೂ ನೋಡುತ್ತಿದ್ದೆ. ಆದರೆ ಇತ್ತೀಚಿನ ಸಿನಿಮಾ ಕಥೆ ಆಧಾರಿತ ಪ್ರಸಂಗಗಳನ್ನು ನೋಡಿ ಬೇಸರಗೊಂಡು ಸಾಮಾಜಿಕ ಪ್ರಸಂಗಗಳನ್ನು ನೋಡುವುದನ್ನೇ ಬಿಟ್ಟಿದ್ದೇನೆ.

ಯಕ್ಷಗಾನದ ಇಂದಿನ ಸ್ಥಿತಿಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಇಂದಿನ ಸ್ಥಿತಿಗತಿ ವಿಮರ್ಶಿಸುವಷ್ಟು ಜ್ಞಾನ ನನಗಿಲ್ಲ.
ಹವ್ಯಾಸಿ ಕಲಾರಂಗದ ಪ್ರೇಕ್ಷಕರು ನಮ್ಮ ಪ್ರದರ್ಶನಗಳನ್ನು ವೀಕ್ಷಿಸಿ ಉತ್ತಮಾಂಶಗಳನ್ನು ಪ್ರಶಂಸಿಸುತ್ತಾರೆ ಮತ್ತು ವ್ಯತ್ಯಾಸಗಳಿದ್ದಲ್ಲಿ ತಿದ್ದಿಕೊಳ್ಳಲು ಸಲಹೆಗಳನ್ನು ನೀಡುತ್ತಾರೆ ಎಂದು ಹೇಳುತ್ತಾರೆ ನಾಗರಾಜ್.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಕಾಲ ಬದಲಾದಂತೆ ಬೆಳಕಿನ ವ್ಯವಸ್ಥೆಗೆ ಸರಿಯಾಗಿ ಆಹಾರ್ಯದಲ್ಲಿ ಬದಲಾವಣೆಗಳಾಗುವುದು ಸಹಜ. ಆದರೆ ಕೃಷ್ಣ, ಅರ್ಜುನ, ಕರ್ಣ ಇತ್ಯಾದಿ ವೇಷಗಳನ್ನು ಸಾಂಪ್ರದಾಯಿಕವಾಗಿ ಮಾಡಿದರೇ ಚೆಂದ.

ವೃತ್ತಿಯಲ್ಲಿ ನೀವು ಶಿಕ್ಷಕ ಹಾಗೂ ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದ. ಎರಡಕ್ಕೂ ಯಾವ ರೀತಿಯಲ್ಲಿ ನೀವು ಸಮಯ ಮಾಡಿಕೊಳ್ಳುತ್ತೀರಿ:-
ವೃತ್ತಿಯಲ್ಲಿ ಶಿಕ್ಷಕನಾದುದರಿಂದ ಹೆಚ್ಚಿನ ಸಮಯವನ್ನು ಮಕ್ಕಳ ಕಲಿಕೆಯನ್ನು ವೃದ್ಧಿಸಲು ಅಗತ್ಯವಾದ ಅಧ್ಯಯನ ಮತ್ತು ಕಲಿಕೋಪಕರಣಗಳ ತಯಾರಿಗೆ ಬಳಸುತ್ತೇನೆ. ಸಾಮಾನ್ಯವಾಗಿ ಬೇಸಿಗೆಯ ರಜಾದಿನಗಳನ್ನು ಪ್ರವೃತ್ತಿಗಾಗಿ ಬಳಸಿಕೊಳ್ಳುತ್ತೇನೆ.




ಈಗಾಗಲೇ ಕಲಾರಂಗದಿಂದ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಿದ್ದೇವೆ. ಅದನ್ನು ಮುಂದುವರಿಸಿಕೊಂಡು ಹೋಗುವುದು ಮುಂದಿನ ಯೋಜನೆ ಎಂದು ಹೇಳುತ್ತಾರೆ ನಾಗರಾಜ್.

ಸನ್ಮಾನ ಪ್ರಶಸ್ತಿ:-
ವೃತ್ತಿ ರಂಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಶಸ್ತಿ ಮತ್ತು ಪ್ರವೃತ್ತಿ ರಂಗದಲ್ಲಿ ಸುಮಾರು ಆರೇಳು ವರ್ಷಗಳ ಹಿಂದೆ ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಅಭಿನವ ಕಲಾವೇದಿಕೆಯವರು ಏರ್ಪಡಿಸಿದ ಜಿಲ್ಲಾ ಮಟ್ಟದ ಆಯ್ದ ಹವ್ಯಾಸಿ ತಂಡಗಳ ಯಕ್ಷಗಾನ ಸ್ಪರ್ಧೆಯ 2ನೇ ವೇಷ ವಿಭಾಗದಲ್ಲಿ ಪ್ರಥಮ ಬಹುಮಾನ.

ಹವ್ಯಾಸಗಳು:-
ಕಳೆದ ಎಂಟು ವರ್ಷಗಳಿಂದ ನಮ್ಮ ಕಲಾರಂಗದ ಮಕ್ಕಳಿಂದ ಪ್ರದರ್ಶಿತಗೊಳ್ಳುವ  ಪ್ರಸಂಗಗಳ ಅರ್ಥ ರಚನೆ. ಪಂಚತಂತ್ರ ಆಧಾರಿತ ಮಕ್ಕಳ ಯಕ್ಷಗಾನ ಪ್ರಸಂಗ “ಚಂದ್ರ-ಚಮೂರ” ದ ಬರೆವಣಿಗೆ.
ಗುರುಳಾದ ಶ್ರೀ ಗುಂಡ್ಮಿ ಸದಾನಂದ ಐತಾಳರಲ್ಲಿ ಭಾಗವತಿಕೆ ಅಭ್ಯಾಸ ನಡೆಸಿದೆ. ಆದರೆ ಕಾರಣಾಂತರಗಳಿಂದ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅದನ್ನು ಪ್ರಸ್ತುತ  ಗುರುಗಳಾದ ದೇವದಾಸ ರಾವ್‌ ಕೂಡ್ಲಿ ಇವರಲ್ಲಿ ಮುಂದುವರಿಸುತ್ತಿದ್ದೇನೆ. ಜೊತೆಯಲ್ಲಿ ಪುಸ್ತಕಗಳನ್ನು ಓದುವುದು. ನಾಟಕಗಳ ವೀಕ್ಷಣೆ ಮತ್ತು ಅಭಿನಯ.

ನಾಗರಾಜ ಆಚಾರ್ಯ ವಿ ಅವರು ವಿನುತಾ ಅವರನ್ನು ಮದುವೆಯಾಗಿ ಮಕ್ಕಳಾದ ಧೀರಜ ಮತ್ತು ಧೀಮಂತ ಜೊತೆಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.


ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ನಾಗರಾಜ ಆಚಾರ್ಯ ವಿ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Post a Comment

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395