ಯಕ್ಷ ಸಾಧಕರು 386


"ಯಕ್ಷ ರಂಗದ ಚತುರ ಪ್ರತಿಭೆ"

ಇವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರಿಗೆ ಯಕ್ಷಗಾನದ ಕಲೆಯ ಮೇಲೆ ಬಹಳ ಆಸಕ್ತಿ. ಯಕ್ಷಗಾನ ರಂಗಕ್ಕೆ ಬರಲು ಇವರ ತಂದೆಯವರೇ ಮೊದಲ ಪ್ರೇರಣೆ. ಅವರಿಗೆ ಬಾಲ್ಯದಿಂದಲೇ ಯಕ್ಷಗಾನದ ಮೇಲೆ ಅಪಾರ ಅಭಿಮಾನವಿತ್ತು. ಅವರು ಕಲಾವಿದರಾಗಿರದಿದ್ದರೂ ಒಬ್ಬ ನಿಜವಾದ ಯಕ್ಷಗಾನಾಸಕ್ತರಾಗಿದ್ದರು. ಅವರೊಂದಿಗೆ ಯಕ್ಷಗಾನ ವೀಕ್ಷಿಸುತ್ತಾ ಬೆಳೆದ ಇವರ, ಕಲೆಯ ವೇಷಭೂಷಣ, ಸಂಗೀತ ಹಾಗೂ ಅಭಿನಯದ ಲೋಕಕ್ಕೆ ಆಕರ್ಷಿತರಾದರು. ಅವರಿಂದಲೇ ಯಕ್ಷಗಾನದ ಮೇಲಿನ ಆಸಕ್ತಿ ಚಿಗುರೊಡೆದು, ಇಂದು ಒಬ್ಬ ಯಕ್ಷಗಾನ ಕಲಾವಿದನಾಗಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ ಸಚಿನ್ ಪೂಜಾರಿ, ಭಿವಂಡಿ.

1.11.1996ರಂದು ಶೇಖರ್ ಪೂಜಾರಿ ಹಾಗೂ ಯಮುನಾ ಪೂಜಾರಿ ಇವರ ಮಗನಾಗಿ ಸಚಿನ್ ಪೂಜಾರಿ, ಭಿವಂಡಿ ಅವರ ಜನನ. ಬಿ.ಕಾಂ (ಅಕೌಂಟಿಂಗ್ ಮತ್ತು ಫೈನಾನ್ಸ್) ವಿದ್ಯಾಭ್ಯಾಸ.



ಯಕ್ಷಗಾನ ಗುರುಗಳು:-
ಯಕ್ಷಗಾನ ಪಯಣದಲ್ಲಿ ಶ್ರೀ ನಾಗೇಶ್ ಕುಮಾರ್ ಪೊಳಲಿ ಅವರು ಪ್ರಮುಖ ಗುರುಗಳಾಗಿ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ ಗುರು ನಾರಾಯಣ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದರ ಪ್ರೋತ್ಸಾಹ, ಸಲಹೆ ಮತ್ತು ಮಾರ್ಗದರ್ಶನ ನನ್ನ ಕಲಾಜೀವನಕ್ಕೆ ಭದ್ರ ಬುನಾದಿಯಾಗಿದೆ. ಅವರಿಂದಲೇ ವೇಷಧಾರಣೆಯ ಸೂಕ್ಷ್ಮತೆ, ಪಾತ್ರದ ಆಳ, ರಂಗಪ್ರಜ್ಞೆ ಹಾಗೂ ಕಲೆಯ ಮೌಲ್ಯಗಳನ್ನು ಅರಿಯುವ ಅವಕಾಶ ದೊರೆತಿದೆ.

ನೆಚ್ಚಿನ ಪ್ರಸಂಗಗಳು:-
ತುಳು ಸಾಮಾಜಿಕ ಪ್ರಸಂಗಗಳಲ್ಲಿ ವಿಶೇಷ ಆಸಕ್ತಿ. ಕಾಡ ಮಲ್ಲಿಗೆ, ಗೆಜ್ಜೆದ ಪೂಜೆ, ಕೋಟಿ-ಚೆನ್ನಯ, ಕಚ್ಚೂರ ಮಾಲ್ದಿ , ಮಹಿಮೆದಪ್ಪೆ ಮಂತ್ರದೇವತೆ, ದೇವೀ ಮಹಾತ್ಮೆ ಹಾಗೂ ಸ್ವಾಮಿ ಕೊರಗಜ್ಜ ಅತ್ಯಂತ ನೆಚ್ಚಿನ ಪ್ರಸಂಗಗಳು.

ನೆಚ್ಚಿನ ವೇಷಗಳು:-
ದೇವೀ ಮಹಾತ್ಮೆಯಲ್ಲಿ ಮಾಲಿನಿ ದೂತ, ದೇವಿ ಹಾಗೂ ಪಾತ್ರಿ, ಕಟೀಲು ಕ್ಷೇತ್ರ ಮಹಾತ್ಮೆಯ ಜಾಬಾಲಿ, ನಂದಿನಿ, ಕೋಟಿ-ಚೆನ್ನಯದಲ್ಲಿ ಕೋಟಿ, ಕಾಡ ಮಲ್ಲಿಗೆಯಲ್ಲಿ ಸಿದ್ದು, ಗೆಜ್ಜೆದ ಪೂಜೆಯಲ್ಲಿ ಕಾಳು ಹಾಗೂ ಮಹಿಳಾ ಪಾತ್ರ, ಮಹಿಮೆದಪ್ಪೆ ಮಂತ್ರದೇವತೆಯಲ್ಲಿ ಮಂತ್ರದೇವತೆ ಹಾಗೂ ಸ್ವಾಮಿ ಕೊರಗಜ್ಜದಲ್ಲಿ ಕೊರಗ ತನಿಯ ಪಾತ್ರಗಳು ನೆಚ್ಚಿನ ವೇಷಗಳು.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗದ ಕಥಾವಸ್ತು, ಪಾತ್ರದ ಹಿನ್ನೆಲೆ ಹಾಗೂ ಅದರ ಭಾವಲೋಕವನ್ನು ಮೊದಲು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಗುರು ನಾರಾಯಣ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದರಾದ ಟಿ.ಆರ್. ಶೆಟ್ಟಿ, ಪ್ರಕಾಶ್ ಪಣಿಯೂರು, ವಾಸುದೇವ ಮಾರ್ನಾಡ್, ನಾಗೇಶ್ ಪೊಳಲಿ, ಸದಾನಂದ ಶೆಟ್ಟಿ ಕಟೀಲು, ಮನೋಜ್ ಹೆಜಮಾಡಿ, ನರೇಂದ್ರ ಸುವರ್ಣ, ಸಂತೋಷ್ ದೇವಾಡಿಗ, ಸದಾನಂದ ಶೆಟ್ಟಿ ಮನಾಡಿ, ನಾರಾಯಣ ಶೆಟ್ಟಿ, ರಾಮಚಂದ್ರ ಸಾಲ್ಯಾನ್, ಭಾಗವತರಾದ ಮುದ್ದು ಅಂಚನ್ ಹಾಗೂ ಜಯಲಕ್ಷ್ಮಿ ದೇವಾಡಿಗ ಅವರ ಸಲಹೆ-ಸೂಚನೆಗಳನ್ನು ಪಡೆದು ಪಾತ್ರದ ಸಿದ್ಧತೆ ನಡೆಸುತ್ತೇನೆ. ಕಲಿಯುವ ಪ್ರಕ್ರಿಯೆ ನಿರಂತರವಾಗಿರಬೇಕು ಎಂಬುದು ಇವರ ನಂಬಿಕೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಇಂದು ಉತ್ತಮ ಬೆಳವಣಿಗೆಯ ಹಾದಿಯಲ್ಲಿದೆ. ಯುವಪೀಳಿಗೆ ಮತ್ತೆ ಈ ಕಲೆಯತ್ತ ಆಕರ್ಷಿತರಾಗುತ್ತಿರುವುದು ಸಂತಸದ ಸಂಗತಿ. ಅನೇಕ ಪ್ರತಿಭಾವಂತ ಕಲಾವಿದರು ಹೊರಹೊಮ್ಮುತ್ತಿದ್ದು, ಯಕ್ಷಗಾನದ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ ಎಂಬ ವಿಶ್ವಾಸವಿದೆ.







ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ಪ್ರೇಕ್ಷಕರು ಕಲೆಯ ಬಗ್ಗೆ ಉತ್ತಮ ಅರಿವು ಹೊಂದಿದ್ದಾರೆ. ಅವರು ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ ಕಲೆಯ ಮೌಲ್ಯವನ್ನು ಅರಿತು ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಪ್ರೇಕ್ಷಕರ ಪ್ರೀತಿ, ಮೆಚ್ಚುಗೆ ಮತ್ತು ಚಪ್ಪಾಳೆಯೇ ಕಲಾವಿದರಿಗೆ ದೊಡ್ಡ ಶಕ್ತಿ ಹಾಗೂ ಪ್ರೇರಣೆಯಾಗಿದೆ.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಯಕ್ಷಗಾನವು ಕೇವಲ ಒಂದು ಕಲೆಯಲ್ಲ; ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಕಲಾಪ್ರಕಾರವಾಗಿದೆ. ಅದರ ಆಹಾರ್ಯ, ವೇಷಭೂಷಣ, ಬಣ್ಣಗಾರಿಕೆ, ನೃತ್ಯ, ಸಂಗೀತ ಹಾಗೂ ರಂಗಶೈಲಿ ಯಕ್ಷಗಾನದ ಆತ್ಮವಾಗಿವೆ. ಇವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬ ಯಕ್ಷಗಾನ ಕಲಾವಿದನ ಹಾಗೂ ಅಭಿಮಾನಿಯ ಜವಾಬ್ದಾರಿಯಾಗಿದೆ.
ಕಾಲ ಬದಲಾದಂತೆ ಹೊಸತನವನ್ನು ಸ್ವೀಕರಿಸುವುದು ಅಗತ್ಯವಾದರೂ, ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅದರ ಸಾಂಪ್ರದಾಯಿಕತೆಯನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ಯುವಪೀಳಿಗೆಯಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸಿ, ತರಬೇತಿ ಹಾಗೂ ಪ್ರದರ್ಶನಗಳ ಮೂಲಕ ಅವರನ್ನು ಈ ಕಲೆಯತ್ತ ಸೆಳೆಯುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಯಕ್ಷಗಾನದ ಘನತೆ, ಗೌರವ ಮತ್ತು ವೈಶಿಷ್ಟ್ಯವನ್ನು ಉಳಿಸಿಕೊಂಡು ಅದನ್ನು ಇನ್ನಷ್ಟು ಜನರಿಗೆ ತಲುಪಿಸುವುದು ನನ್ನ ಯಕ್ಷಗಾನೀಯ ನಿಲುವಾಗಿದೆ.

ನಾಟಕ ರಂಗವು ಯಕ್ಷಗಾನ ರಂಗದಲ್ಲಿ ಪಾತ್ರ ಮಾಡುವಾಗ ಯಾವ ರೀತಿಯಲ್ಲಿ ಸಹಕಾರಿಯಾಗಿದೆ:-
ನಾಟಕ ಮತ್ತು ಯಕ್ಷಗಾನ ಎರಡೂ ಅಭಿನಯ ಪ್ರಧಾನ ಕಲಾಪ್ರಕಾರಗಳಾಗಿದ್ದು, ಒಂದು ಕಲೆಯಲ್ಲಿ ದೊರೆತ ಅನುಭವ ಮತ್ತೊಂದು ಕಲೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಗುತ್ತದೆ. ನಾಟಕ ರಂಗವು ನನಗೆ ಭಾವಾಭಿವ್ಯಕ್ತಿ, ಸಂಭಾಷಣೆಯ ಸ್ಪಷ್ಟತೆ, ಪಾತ್ರದ ಆಳವಾದ ಅಧ್ಯಯನ, ಸಮಯಪ್ರಜ್ಞೆ ಹಾಗೂ ರಂಗಶಿಸ್ತನ್ನು ಕಲಿಸಿದೆ. ಯಾವುದೇ ಪಾತ್ರದ ಮನೋಭಾವವನ್ನು ಅರ್ಥಮಾಡಿಕೊಂಡು ಅದನ್ನು ಸಹಜವಾಗಿ ಪ್ರೇಕ್ಷಕರ ಮುಂದೆ ತಲುಪಿಸುವ ಸಾಮರ್ಥ್ಯವನ್ನು ನಾಟಕ ರಂಗ ಬೆಳೆಸಿದೆ. ಈ ಅನುಭವ ಯಕ್ಷಗಾನದಲ್ಲಿ ಪಾತ್ರಗಳನ್ನು ಇನ್ನಷ್ಟು ಜೀವಂತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ನೆರವಾಗುತ್ತದೆ. ವಿಶೇಷವಾಗಿ ತುಳು ಸಾಮಾಜಿಕ ಪ್ರಸಂಗಗಳಲ್ಲಿ ನಾಟಕದ ಅನುಭವವು ಬಹಳ ಉಪಯುಕ್ತವಾಗಿದೆ. ನನ್ನ ದೃಷ್ಟಿಯಲ್ಲಿ ನಾಟಕ ಮತ್ತು ಯಕ್ಷಗಾನ ಪರಸ್ಪರ ಪೂರಕವಾಗಿದ್ದು, ಕಲಾವಿದನ ಸರ್ವತೋಮುಖ ಬೆಳವಣಿಗೆಗೆ ಎರಡೂ ಮಹತ್ತರ ಪಾತ್ರ ವಹಿಸುತ್ತವೆ.

ಮುಂಬೈನಲ್ಲಿ ಯಕ್ಷಗಾನ ಕಲೆಗೆ ಯಾವ ರೀತಿಯ ಪ್ರೋತ್ಸಾಹ ಸಿಗುತ್ತದೆ ಹಾಗೂ ಅಲ್ಲಿನ ಪ್ರೇಕ್ಷಕರು ಯಾವ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಾರೆ:-
ಮುಂಬೈಯಲ್ಲಿ ಯಕ್ಷಗಾನಕ್ಕೆ ಅತ್ಯುತ್ತಮ ಪ್ರೋತ್ಸಾಹ ದೊರೆಯುತ್ತಿದೆ. ವಿವಿಧ ಕನ್ನಡ, ತುಳು ಹಾಗೂ ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿ ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸುತ್ತಿವೆ. ತುಳುನಾಡಿನಿಂದ ದೂರವಿದ್ದರೂ ಇಲ್ಲಿನ ಪ್ರೇಕ್ಷಕರು ಯಕ್ಷಗಾನವನ್ನು ತಮ್ಮ ಸಂಸ್ಕೃತಿಯ ಪ್ರತೀಕವಾಗಿ ಕಾಣುತ್ತಿದ್ದು ಅಪಾರ ಪ್ರೀತಿ ಮತ್ತು ಬೆಂಬಲ ನೀಡುತ್ತಿದ್ದಾರೆ.



ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನ ಮತ್ತು ನಾಟಕ ಕ್ಷೇತ್ರದಲ್ಲಿ ಇನ್ನಷ್ಟು ಅರ್ಥಪೂರ್ಣ ಪಾತ್ರಗಳನ್ನು ನಿರ್ವಹಿಸುವ ಆಸೆಯಿದೆ. ಯುವಜನರಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಯಕ್ಷಗಾನ, ನಾಟಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದ್ದೇನೆ.

ಸನ್ಮಾನ ಹಾಗೂ ಪ್ರಶಸ್ತಿ:-
♦️ ಬಿಲ್ಲವ ಅಸೋಸಿಯೇಷನ್ ಮುಂಬೈ ವತಿಯಿಂದ ಪ್ರದಾನವಾದ ಅಚೀವರ್ಸ್ ಅವಾರ್ಡ್ (2022),
♦️ ಕಲಾ ಜಗತ್ತು ಮುಂಬೈ ವತಿಯಿಂದ ನೀಡಲಾದ ತೌಳವ ಸಿರಿ ಪ್ರಶಸ್ತಿ (2025),
♦️ ಚಾರ್ಕೋಪ್ ಕನ್ನಡಿಗರ ಬಳಗ ಪುರಸ್ಕಾರ (2025),
♦️ ಬಿಲ್ಲವ ಅಸೋಸಿಯೇಷನ್ ಮುಂಬೈ ನಾಟಕೋತ್ಸವದಲ್ಲಿ ಲಭಿಸಿದ ಪ್ರಥಮ ಅತ್ಯುತ್ತಮ ನಟ ಪ್ರಶಸ್ತಿ (2025) ಹಾಗೂ
♦️ ತುಳು ಕೂಟ ಉಡುಪಿ ಆಯೋಜಿಸಿದ ನಾಟಕೋತ್ಸವದಲ್ಲಿ ದೊರೆತ ತೀರ್ಪುಗಾರರ ಮೆಚ್ಚುಗೆ ನಟ ಪ್ರಶಸ್ತಿ (2025) ಪ್ರಮುಖವಾಗಿವೆ.
ಇವುಗಳ ಜೊತೆಗೆ ವಿವಿಧ ಯಕ್ಷಗಾನ, ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಂದರ್ಭಗಳಲ್ಲಿ ಅನೇಕ ಸಂಘ-ಸಂಸ್ಥೆಗಳು, ಕಲಾಭಿಮಾನಿಗಳು ಮತ್ತು ಸಂಘಟಕರು ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ. ಈ ಎಲ್ಲ ಗೌರವಗಳು ನನಗೆ ಮತ್ತಷ್ಟು ಜವಾಬ್ದಾರಿಯೊಂದಿಗೆ ಕಲಾಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿವೆ.




ತಿರುಗಾಟ ಮಾಡಿದ ಯಕ್ಷಗಾನ ಮಂಡಳಿ ಹಾಗೂ ಬಳಗ:-
♦️ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ, ಸಾಂತಾಕ್ರೂಜ್.
♦️ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ, ಅಸಲ್ಫಾ.
♦️ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ, ಸಾಕಿನಾಕಾ.
♦️ ಶ್ರೀ ಭ್ರಾಮರಿ ಯಕ್ಷ ನೃತ್ಯ ನಿಲಯ ಚಾರಿಟೇಬಲ್ ಟ್ರಸ್ಟ್, ಮುಂಬೈ.
♦️ ನಾಗೇಶ್ ಪೊಳಲಿ ಬಳಗ.
♦️ ಮನೋಜ್ ಕುಮಾರ್ ಬಳಗ.

ಹವ್ಯಾಸಗಳು:-
ಯಕ್ಷಗಾನ ಹಾಗೂ ನಾಟಕಗಳಲ್ಲಿ ಅಭಿನಯಿಸುವುದು, ನಿರೂಪಣೆ ಮಾಡುವುದು ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಪ್ರಮುಖ ಹವ್ಯಾಸಗಳಾಗಿವೆ. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನನಗೆ ಅಪಾರ ಸಂತೋಷವನ್ನು ನೀಡುತ್ತದೆ.

ಈ ಉದ್ದೇಶದಿಂದ 2019ರಲ್ಲಿ ನಾನು “ಕಲ್ಚರಲ್ ಸೇವಾ ಸಂಸ್ಥೆ, ಭಿವಂಡಿ”ಯನ್ನು ಸ್ಥಾಪಿಸಿ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕಳೆದ ಆರು ವರ್ಷಗಳಿಂದ ಈ ಸಂಸ್ಥೆಯ ಮೂಲಕ ಯಕ್ಷಗಾನ, ನಾಟಕ, ಕುಣಿತ ಭಜನೆ ಹಾಗೂ ಇತರೆ ಸಾಂಸ್ಕೃತಿಕ ಕಲಾಪ್ರಕಾರಗಳ ತರಬೇತಿ, ಪ್ರದರ್ಶನ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಪ್ರಸ್ತುತ ಸಂಸ್ಥೆಯಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕಲಾ ಪ್ರಕಾರಗಳಲ್ಲಿ ತರಬೇತಿ ಪಡೆಯುತ್ತಿದ್ದು, ಹಲವರು ವೇದಿಕೆಯಲ್ಲಿ ಯಶಸ್ವಿಯಾಗಿ ಪ್ರದರ್ಶನ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ. ಯುವಪೀಳಿಗೆಯಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸಂಸ್ಥೆಯು ಮಹತ್ವದ ಪಾತ್ರ ವಹಿಸುತ್ತಿದೆ.
ಇತ್ತೀಚೆಗೆ ಸಂಸ್ಥೆಯು ತನ್ನ ಆರನೇ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ಆಚರಿಸಿದ್ದು, ಈ ಅವಧಿಯಲ್ಲಿ ಹಲವಾರು ಯಕ್ಷಗಾನ, ನಾಟಕ, ಕುಣಿತ ಭಜನೆ, ಸಾಂಸ್ಕೃತಿಕ ಉತ್ಸವಗಳು ಹಾಗೂ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಲೆಯನ್ನು ಕೇವಲ ಮನರಂಜನೆಯ ಸಾಧನವಾಗಿ ಮಾತ್ರವಲ್ಲದೆ, ಸಮಾಜವನ್ನು ಒಗ್ಗೂಡಿಸುವ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಾಧ್ಯಮವಾಗಿಯೂ ಬಳಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.
ಕಲಾಸೇವೆ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯೇ ನನ್ನ ಹವ್ಯಾಸದ ಜೊತೆಗೆ ಜೀವನದ ಧ್ಯೇಯವೂ ಆಗಿದೆ.

ಈ ಕಲಾ ಪಯಣದಲ್ಲಿ ನನ್ನ ತಂದೆ ಶ್ರೀ ಶೇಖರ್ ಪೂಜಾರಿ ಅವರ ಯಕ್ಷಗಾನದ ಮೇಲಿನ ಅಭಿಮಾನವೇ ನನಗೆ ಮೊದಲ ಪ್ರೇರಣೆಯಾಗಿದೆ. ನನ್ನ ತಾಯಿ ಯಮುನಾ ಪೂಜಾರಿ ಅವರ ಆಶೀರ್ವಾದ, ತ್ಯಾಗ ಮತ್ತು ನಿರಂತರ ಪ್ರೋತ್ಸಾಹ ನನ್ನ ಸಾಧನೆಗಳ ಹಿಂದಿನ ದೊಡ್ಡ ಶಕ್ತಿಯಾಗಿದೆ. ನನ್ನ ಸಹೋದರಿ ಸ್ವಾತಿ ಪ್ರತಿಯೊಂದು ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತು ನನಗೆ ಆತ್ಮವಿಶ್ವಾಸ ತುಂಬಿದ್ದಾಳೆ. ನನ್ನ ಕುಟುಂಬದ ಸದಸ್ಯರು, ಗುರುಗಳು, ಹಿರಿಯ ಕಲಾವಿದರು, ಸ್ನೇಹಿತರು, ಹಿತೈಷಿಗಳು ಹಾಗೂ ಕಲಾಭಿಮಾನಿಗಳ ಪ್ರೀತಿ, ಪ್ರೋತ್ಸಾಹ ಮತ್ತು ಆಶೀರ್ವಾದವೇ ನನ್ನನ್ನು ಇಂದಿನ ಹಂತಕ್ಕೆ ತಲುಪಿಸಿದೆ. ಅವರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಮುಂದೆಯೂ ಯಕ್ಷಗಾನ, ನಾಟಕ ಮತ್ತು ನಮ್ಮ ಸಂಸ್ಕೃತಿಯ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುವ ಸಂಕಲ್ಪ ಹೊಂದಿದ್ದೇನೆ ಎಂದು ಹೇಳುತ್ತಾರೆ ಸಚಿನ್ ಪೂಜಾರಿ, ಭಿವಂಡಿ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395