ಯಕ್ಷ ಸಾಧಕರು 387
"ಯಕ್ಷ ಕಲಾಕಿರಣ"
ಇವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ. ಪ್ರಸ್ತುತ ಮಂಗಳೂರಿನ ಕೊಂಚಾಡಿಯಲ್ಲಿ ವಾಸ. ಸಣ್ಣ ವಯಸ್ಸಿನಲ್ಲಿ ಕಟೀಲು ಮೇಳದ ರಂಗದಲ್ಲಿ ವೇಷ ಮಾಡಬೇಕು, ಕುಣಿಯಬೇಕು ಎಂಬುದು ಒಂದು ಕನಸು. ಇಂದು ಆ ಕನಸನ್ನು ನನಸು ಮಾಡಿ ಕಟೀಲು 4ನೇ ಮೇಳದಲ್ಲಿ 7 ವರ್ಷ ತಿರುಗಾಟ ಮಾಡಿ ಕಳೆದ ವರ್ಷ ಕಟೀಲು 7ನೇ ಮೇಳದಲ್ಲಿ ತಿರುಗಾಟ ಮಾಡಿ ಯಕ್ಷಗಾನ ರಂಗದಲ್ಲಿ ಕಳೆದ 8 ವರ್ಷಗಳಿಂದ ತಿರುಗಾಟ ಮಾಡುತ್ತಿರುವ ಕಲಾವಿದ ಕಿರಣ್ ಕೊಂಚಾಡಿ.
06.04.2001ರಂದು ಕೃಷ್ಣಪ್ಪ ಹಾಗೂ ಶಾರದಾ ಇವರ ಮಗನಾಗಿ ಜನನ. ದ್ವಿತೀಯ ಪಿಯುಸಿ ಹಾಗೂ ರಿಟೈಲ್ ಸೇಲ್ಸ್ ಹಾಗೂ ವೆಬ್ ಡಿಸೈನ್ ಕೋರ್ಸ್ ಇವರ ವಿದ್ಯಾಭ್ಯಾಸ.
ಯಕ್ಷಗಾನ ಗುರುಗಳು:-
ಲಕ್ಷ್ಮಣ್ ಕುಮಾರ್ ಮರಕಡ ಹಾಗೂ ದಿನಕರ್ ಪಚ್ಚನಾಡಿ.
ನೆಚ್ಚಿನ ಪ್ರಸಂಗಗಳು:-
ಸತ್ಯ ಹರಿಶ್ಚಂದ್ರ, ಭಕ್ತ ಧ್ರುವ, ಭಕ್ತ ಪ್ರಹ್ಲಾದ, ಕಟೀಲು ಕ್ಷೇತ್ರ ಮಹಾತ್ಮೆ ಇತ್ಯಾದಿ...
ನೆಚ್ಚಿನ ವೇಷಗಳು:-
ಧ್ರುವ, ಲೋಹಿತಾಶ್ವ, ಪ್ರಹ್ಲಾದ, ಭಾವನಾತ್ಮಕ ಪಾತ್ರಗಳು ಅತಿ ಹೆಚ್ಚು ಆಸಕ್ತಿ ಹಾಗೂ ಪ್ರಿಯವಾದುದು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಭಾಗವತರಲ್ಲಿ ಮೊದಲಾಗಿ ಪಾತ್ರದ ಬಗ್ಗೆ ಮಾತಾಡಿ ಕ್ರಮ ಹೇಗೆ ಎಷ್ಟು ಪದ್ಯ ಎಂಬುದನ್ನು ನೋಡಿ ಆಮೇಲೆ ಹಿರಿಯ ಕಲಾವಿದರಲ್ಲಿ ಮಾತಾಡಿ ಆ ಬಳಿಕ ಜೊತೆ ವೇಷದವರ ಜೊತೆಗೆ ಮಾತಾಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಕಿರಣ್.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಮೊದಲಿನ ಕ್ರಮಗಳನ್ನು ಬಿಡದೆ ಈಗಿನ ಪ್ರೇಕ್ಷಕರಿಗೆ ಬೇಕಾದ ಹಾಗೆ ರಂಗದಲ್ಲಿ ಪ್ರದರ್ಶಿಸುವ ಕಲಾವಿದರು ಎಷ್ಟೋ ಜನ ಇದ್ದಾರೆ. ಪರಂಪರೆಯನ್ನು ಉಳಿಸುತ್ತಾ ಪುರಾಣಕ್ಕೆ ಚ್ಯುತಿ ಬಾರದ ಹಾಗೆ ಮಾಡುವುದು ಉತ್ತಮದ ವಿಚಾರ. ಹೀಗೆ ಕಲೆ ಉಳಿಯಲಿ ಎನ್ನುವ ಆಶಯ, ಕಾರಣ ಕೆಲವರಿಗೆ ಕಲೆಯೇ ಬದುಕು ಇನ್ನೂ ಕೆಲವರಿಗೆ ಬದುಕಿಗಾಗಿ ಕಲೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಈಗಿನ ಪ್ರಸ್ತುತ ಕಾಲದಲ್ಲಿ ತಮ್ಮ ಕೆಲಸಗಳನ್ನು ಬಿಟ್ಟು ಬರುವ ಪ್ರೇಕ್ಷಕರಲ್ಲಿ ಕೆಲವರು ದೇವರ ಭಕ್ತಿಯಿಂದ ಬರುವವರು, ಕೆಲವರು ಕಲೆಯ ಅಭಿಮಾನದಿಂದ ಬರುವವರು, ಇನ್ನೂ ಕೆಲವರು ಅವರ ಪ್ರೀತಿಯ ಕಲಾವಿದರ ವೇಷವನ್ನು ನೋಡಲು ಬರುವವರು. ಹೀಗೆ ಹಲವು ವಿಧದ ಅಭಿಮಾನಿಗಳು. ಕಲೆ ಉಳಿಯಬೇಕೆಂದರೆ ಕಲಾವಿದ ಹೇಗೆ ಮುಖ್ಯವೋ ಹಾಗೆ ಕಲಾ ಪೋಷಕರು ಪ್ರೇಕ್ಷಕರು ಅತ್ಯಗತ್ಯ. ಅವರಿದ್ದರೆ ನಾವು ಅವರಿಂದಲೇ ನಾವು. ನಮ್ಮಂತ ಅದೆಷ್ಟೋ ಕಲಾವಿದರನ್ನು ಲೋಕಕ್ಕೆ ಪರಿಚಯ ಮಾಡಿಸುವ ಹಾಗೆ ಮಾಡುವವರು.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಯಕ್ಷಗಾನ ಉಳಿಯಬೇಕೆಂದರೆ ಕಲಾವಿದನಿಗೆ ಆ ಕಲೆಯ ಬಗ್ಗೆ ಭಕ್ತಿ ಇರಬೇಕು ತಾನು ಮಾಡುವ ಉದ್ಯೋಗದಲ್ಲಿ ನಿಷ್ಠೆ ಇರಬೇಕು. ನೋಡುಗರಿಗೆ ಹಿತ ಅನಿಸಬೇಕು. ಹಾಗಂತ ಪುರಾಣವನ್ನು ಆಡುತ್ತಾ ಈಗಿನ ಯುವ ಜನರಿಗೆ ನಮ್ಮ ಸಂಸ್ಕೃತಿಯನ್ನು ತಿಳಿಸಲು ಪ್ರಯತ್ನ ಪಟ್ಟರೆ ಒಳ್ಳೆಯದು.
ನೀವು ತಿರುಗಾಟ ಮಾಡುತ್ತಿರುವ ಕಟೀಲು ಮೇಳದ ಅನುಭವ ಹಾಗೂ ಹಿರಿಯ ಕಲಾವಿದರ ಜೊತೆಗಿನ ಒಡನಾಟದ ಅನುಭವ:-
ಜೀವನದಲ್ಲಿ ಯಶಸ್ವಿ ಆಗಬೇಕಾದರೆ ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಯಕ್ಷಗಾನದಲ್ಲಿ ಗುರುಗಳು ಕಲಿಸಿದ ಪಾಠ ಹೇಗೆ ಮುಖ್ಯವೋ ಹಾಗೆಯೇ ಯಕ್ಷಗಾನದ ತಿರುಗಾಟದಲ್ಲಿ ಹಿರಿಯ ಕಲಾವಿದರ ಒಡನಾಟವು ಅತ್ಯಗತ್ಯ. ಅದರಲ್ಲಿಯೂ ನಾನು ಹೆಮ್ಮೆಯಿಂದ ಹೇಳುತ್ತೇನೆ ನನ್ನನ್ನು ರಂಗದಲ್ಲಿ ತಯಾರು ಮಾಡಿದವರು ರವಿಶಂಕರ್ ವಳಕ್ಕುಂಜ ಹಾಸ್ಯಗಾರರು. ಹಾಗೆಯೇ ಸಣ್ಣ ಕಲಾವಿದನಲ್ಲಿ ಪ್ರಶ್ನೆಗೆ ಪ್ರಶ್ನೆ ಕೇಳುತ್ತಾ ನೀನು ಹೀಗೆ ತಯಾರಾಗಬೇಕೆಂದು ಹೇಳಿಕೊಟ್ಟವರು ಕನ್ನಡಡಿಕಟ್ಟೆ ಗಣೇಶಣ್ಣ. ಜೊತೆಗೆ ಶಿಸ್ತು ಹಾಗೂ ಒಳ್ಳೊಳ್ಳೆ ವೇಷ ಕೊಟ್ಟು ನಿನ್ನಿಂದ ಆಗುತ್ತದೆ ಎಂದು ಹೇಳಿದವರು ಬಳ್ಳಮಂಜ ಶ್ರೀನಿವಾಸ ಭಾಗವತರು. ಒಳ್ಳೆಯ ವೇಷ ಒದಗಿಸಿಕೊಟ್ಟವರು ಶರ್ಮಾ ಮಾವ. ಹೀಗೆ ಅದೆಷ್ಟೋ ಹಿರಿಯ ಕಲಾವಿದರು ಕೋಳ್ಯೂರು ಸಂದೀಪ್ಅಣ್ಣ, ಅಕ್ಷಯ್ ಮಾರ್ನಾಡ್, ಚಂದ್ರಮಂಡಲ ಗಣೇಶಣ್ಣ ಹೀಗೆ ಅನೇಕರು. ಅದರಲ್ಲಿ ಮುಖ್ಯವಾದವರು ನನ್ನ ಪ್ರೀತಿಯ ಮ್ಯಾನೇಜರ್ ಪ್ರಕಾಶ್ ಶೆಟ್ರು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ನನ್ನ ಜೀವನದಲ್ಲಿ ಕೊನೆಯವರೆಗೂ ಯಕ್ಷಗಾನದಲ್ಲಿಯೇ ಇದ್ದು ಏನಾದರೂ ಸಾಧನೆ ಮಾಡಬೇಕು, ಕಿರಣ್ ಕೊಂಚಾಡಿ ಎನ್ನುವ ಕಲಾವಿದನ ವೇಷ ಬಹಳ ಉತ್ತಮ ಎನ್ನುವ ಮಾತು ಕೇಳಬೇಕು. ಇರುವುದರಲ್ಲಿ ತೃಪ್ತಿ ಇದೆ. ಕೊಟ್ಟ ವೇಷ ಚೆಂದ ಮಾಡಬೇಕು ಎನ್ನುವ ಬಯಕೆ ಅಷ್ಟೇ ಎಂದು ಹೇಳುತ್ತಾರೆ ಕಿರಣ್.
ಹಲವು ಕಡೆ ಸನ್ಮಾನ ದೊರಕಿದೆ ಮೊದಲಾಗಿ ಪಾಂಡೇಶ್ವರದಲ್ಲಿ ದೊರೆತ ಸನ್ಮಾನವನ್ನು ಪಡೆದ ನಾನು ಅದೆಷ್ಟೋ ಸನ್ಮಾನಗಳನ್ನು ಪಡೆದುಕೊಂಡೆ. ಆದರೆ ಒಂದು ಆಸೆ ಇತ್ತು ಕಟೀಲು ಮೇಳದ ರಂಗದಲ್ಲಿ ನಾನು ಸನ್ಮಾನ ಪಡೆಯಬೇಕು ಎನ್ನುವ ಹಾಗೆ. ಆ ಆಸೆಯು ಈ ತಿರುಗಾಟದಲ್ಲಿ ನಮ್ಮ 7ನೇ ಸೆಟ್ಟಿನ ಮ್ಯಾನೇಜರ್ ಪೂರ್ಣವಾಗಿಸಿದರು. 2ಕಡೆಯಲ್ಲಿ ನನಗೆ ಕಟೀಲು ಮೇಳದ ರಂಗಸ್ಥಳದಲ್ಲಿ ಸೇವಾಕರ್ತರಿಂದ ಸನ್ಮಾನಗಳನ್ನು ಪಡೆದುಕೊಂಡೆ. ಅದರಲ್ಲೂ ಸಂತಸದ ವಿಚಾರ ಆಸ್ರಣ್ಣರು ಹಾಗೂ ಅರವಿಂದ ಬೋಳಾರ್, ವಾಲ್ಟರ್ ನಂದಳಿಕೆ ಇವರ ಸಮ್ಮುಖದಲ್ಲಿ ಸನ್ಮಾನ ಪಡೆದದ್ದು ಸಂತಸದ ವಿಚಾರ.
ಹವ್ಯಾಸಗಳು:-
ಪುರಾಣಗಳ ಅಧ್ಯಯನ, ಅಧ್ಯಯನ ಮಾಡಿದ್ದನ್ನು ಮಿತ್ರರೊಂದಿಗೆ ಚರ್ಚೆ ಮಾಡುವುದು, ಗೆಳೆಯರೊಂದಿಗೆ ಪ್ರವಾಸ ಹೋಗುವ ಹುಚ್ಚು, ಬರೆಯುವುದು ಓದುವುದು.
ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ತಂದೆ, ತಾಯಿ, ಮನೆಯವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಕಿರಣ್ ಕೊಂಚಾಡಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment