ಯಕ್ಷ ಸಾಧಕರು 388

"ಯಕ್ಷ ಕಲಾ ಕನ್ಯೆ"

ಇವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆಯ ಕೈರಂಗಳ. ಈ ಹೆಸರು ಉಚ್ಚರಿಸಿದಾಗಲೇ ಅನೇಕ ಯಕ್ಷಗಾನ ಪ್ರೇಮಿಗಳ ಮನಸ್ಸಿನಲ್ಲಿ ಗೌರವ ಮೂಡುತ್ತದೆ. ಯಾಕೆಂದರೆ ಇದು ತಲೆತಲಾಂತರಗಳಿಂದ ಯಕ್ಷಗಾನಕ್ಕೆ ತನ್ನ ಬದುಕನ್ನೇ ಸಮರ್ಪಿಸಿದ ಕಲಾವಿದರನ್ನು ನೀಡಿದ ಊರು. ಈ ಊರಿನ ಜನರಿಗೆ ಯಕ್ಷಗಾನ ಒಂದು ಹವ್ಯಾಸವಲ್ಲ; ಅದು ಜೀವನದ ಒಂದು ಭಾಗ. ಈ ಊರಿನಲ್ಲಿ 14.09.1993ರಂದು ವಿನುತಾ ಡಿ ಗಟ್ಟಿ ಯಾನೆ ವಿನುತಾ ಕಿಶನ್ ರಾಜ್ ಅವರ ಜನನ. ತಾಯಿ ಜಲಜಾ. ತಂದೆಯ ಬಗ್ಗೆ ನನ್ನಲ್ಲಿ ಉತ್ತರವಿಲ್ಲ. ನಾನು ಹುಟ್ಟಿದ ನಂತರ ಅವರ ನೆರಳನ್ನೂ ಕಂಡವಳಲ್ಲ ಅಮ್ಮನ ಬಳಿಯೂ ಕೇಳಿದವಳಲ್ಲ ಎನ್ನುತ್ತಾರೆ ವಿನುತಾ.





ಮಂಗಳೂರು ವಿಶ್ವವಿದ್ಯಾನಿಲಯದಿಂದ ದ್ವಿತೀಯ ರಾಂಕ್ ನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ. ಪ್ರಸ್ತುತ ಎನಪೋಯ ಆಯುರ್ವೇದ ಕಾಲೇಜಿನಲ್ಲಿ ಗ್ರಂಥಪಾಲಕಿಯಾಗಿ ಉದ್ಯೋಗ ಹಾಗೂ ಮೈಸೂರ್ ವಿಶ್ವವಿದ್ಯಾನಿಲಯದ ದೂರ ಶಿಕ್ಷಣದ ಅಡಿಯಲ್ಲಿ ಕನ್ನಡ ಎಂ.ಎ. ಅಧ್ಯಯನ ಮಾಡುತ್ತಿದ್ದಾರೆ.

ಯಕ್ಷಗಾನಕ್ಕೆ ಬರಲು ಪ್ರೇರಣೆ:-
ಅಜ್ಜ ತಿಮ್ಮಪ್ಪ ಗಟ್ಟಿ. ಅವರು ಪ್ರಸಿದ್ಧ ಮಹಿಷಾಸುರ ವೇಷಧಾರಿ. ಅವರ ಹೆಸರು ಕೇಳಿದರೆ ಹಿರಿಯ ಕಲಾಭಿಮಾನಿಗಳು ಗೌರವದಿಂದ ತಲೆಬಾಗುವಂತಹ ವ್ಯಕ್ತಿತ್ವ. ಇಬ್ಬರು ಮಾವಂದಿರೂ ಹವ್ಯಾಸಿ ಯಕ್ಷಗಾನ ಕಲಾವಿದರು. ಹೀಗೆ ಕಲೆಯ ವಾತಾವರಣದಲ್ಲಿ ಬೆಳೆದರೂ ಬದುಕು ಯಾವಾಗಲೂ ಸುಲಭವಾಗಿರಲಿಲ್ಲ.

ನಾನು ಇನ್ನೂ ಬಾಲ್ಯದಲ್ಲೇ ತಂದೆಯ ನೆರಳನ್ನು ಕಳೆದುಕೊಂಡೆ. ಆ ಒಂದು ಘಟನೆ ನಮ್ಮ ಕುಟುಂಬದ ಬದುಕನ್ನು ಬದಲಿಸಿತು. ಅಪ್ಪನ ಕೈಹಿಡಿದು ಶಾಲೆಗೆ ಹೋಗುವ ಅದೃಷ್ಟ ನನಗಿರಲಿಲ್ಲ. ಅಪ್ಪನ ಮಡಿಲಲ್ಲಿ ಕುಳಿತು ಕಥೆ ಕೇಳುವ ಭಾಗ್ಯವೂ ಸಿಗಲಿಲ್ಲ. ಆದರೆ ದೇವರು ಒಂದು ಕೈಯಿಂದ ಕಸಿದುಕೊಂಡಾಗ ಮತ್ತೊಂದು ಕೈಯಿಂದ ಆಶ್ರಯ ಕೊಡುತ್ತಾನೆ ಎಂಬ ಮಾತಿದೆ.
ನನ್ನ ಬದುಕಿನಲ್ಲಿ ಆಶ್ರಯವಾಗಿ ನಿಂತವರು ನನ್ನ ಅಜ್ಜಿ.
ಅವರು ಕೇವಲ ನನ್ನ ಅಜ್ಜಿ ಅಲ್ಲ; ನನ್ನ ಬದುಕಿನ ಮೊದಲ ಗುರು, ಮೊದಲ ಧೈರ್ಯ, ಮೊದಲ ದೇವರು. ಅವರು ನನ್ನ ಅಮ್ಮ, ನನ್ನ ಅಣ್ಣ ಮತ್ತು ನನ್ನನ್ನು ತನ್ನ ಮಕ್ಕಳಂತೆ ಸಾಕಿ ಬೆಳೆಸಿದರು. ಅವರ ಜೊತೆಗೆ ನನ್ನ ಅಜ್ಜ, ನನ್ನ ಮಾವಂದಿರು, ಚಿಕ್ಕಮ್ಮನವರು ಅತ್ತೆಯಂದಿರು ಹಾಗೂ ಊರಿನ ಬಂಧು-ಬಳಗ ನಮ್ಮ ಬದುಕಿಗೆ ಆಸರೆಯಾದರು.

ವಿಶೇಷವಾಗಿ ವಿಠಲ ಕುಲಾಲ್ ಅವರ ಕುಟುಂಬ ನೀಡಿದ ಪ್ರೀತಿ, ಕಾಳಜಿ ಮತ್ತು ಬೆಂಬಲವನ್ನು ನಾನು ಎಷ್ಟೇ ವರ್ಷ ಕಳೆದರೂ ಮರೆಯಲಾರೆ. ರಕ್ತಸಂಬಂಧವಿಲ್ಲದಿದ್ದರೂ ಹೃದಯದ ಸಂಬಂಧ ಎಷ್ಟು ದೊಡ್ಡದು ಎಂಬುದನ್ನು ಅವರ ಕುಟುಂಬದಿಂದ ಕಲಿತೆ. ಆ ದಿನಗಳಲ್ಲಿ ಬದುಕು ಸುಲಭವಾಗಿರಲಿಲ್ಲ. ಆದರೆ ಕಷ್ಟಗಳ ಮಧ್ಯೆಯೂ ನನ್ನ ಮನದಲ್ಲಿ ಆಸೆ ಎಂದಿಗೂ ಸಾಯಲಿಲ್ಲ. ಪ್ರತಿಯೊಂದು ಹಬ್ಬದಲ್ಲೂ, ಪ್ರತಿಯೊಂದು ದೇವರ ಜಾತ್ರೆಯಲ್ಲೂ, ಪ್ರತಿಯೊಂದು ಯಕ್ಷಗಾನ ಪ್ರದರ್ಶನದಲ್ಲೂ ನಾನು ಕಲೆಯನ್ನು ಕಣ್ತುಂಬಿಸಿಕೊಳ್ಳುತ್ತಿದ್ದೆ.  ಆಗ ನನಗೆ ಒಂದು ಪ್ರಶ್ನೆ ಮೂಡುತ್ತಿತ್ತು.
ಒಂದು ದಿನ ನಾನು ಕೂಡ ಈ ರಂಗಸ್ಥಳದಲ್ಲಿ ನಿಲ್ಲಬಹುದೇ?

ಆ ಪ್ರಶ್ನೆಗೆ ಆಗ ಉತ್ತರ ಇರಲಿಲ್ಲ. ಆಸೆ ಮಾತ್ರ ಇತ್ತು.
ನಮ್ಮ ಊರಿನಲ್ಲಿ ಯಕ್ಷಗಾನವೇ ದೊಡ್ಡ ಕಲಾ ಶಾಲೆ. ಬೇರೆ ಯಾವುದೇ ರೀತಿಯ ನೃತ್ಯ, ಸಂಗೀತ ತರಬೇತಿ ಕೇಂದ್ರಗಳಿರಲಿಲ್ಲ. ಆ ಕಲಾ ಶಾಲೆಯೇ "ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ (ರಿ). ಕೈರಂಗಳ". ಅಲ್ಲಿಗೆ ಹೋಗಿ ಹೇಗೆ ಸೇರಿಕೊಳ್ಳುವುದೆಂದು ತಿಳಿದಿರಲಿಲ್ಲ. ಆಗ ಕಲಿಯಬೇಕು ಎಂಬ ಹಂಬಲ ಇದ್ದರೂ ದಾರಿ ಕಾಣುತ್ತಿರಲಿಲ್ಲ. ಕೆಲವೊಮ್ಮೆ ನಮ್ಮ ಬದುಕಿನಲ್ಲಿ ಕನಸುಗಳಿಗಿಂತ ಅವಕಾಶಗಳೇ ದೊಡ್ಡದಾಗಿರುತ್ತವೆ.

ಆ ಅವಕಾಶ ನನ್ನ ಬದುಕಿನ ಬಾಗಿಲನ್ನು ತಟ್ಟಿದ್ದು ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ.
ಒಂದು ದಿನ ಶಾಲೆಯಲ್ಲಿ ಶಿಕ್ಷಕರು ಒಂದು ಸುದ್ದಿ ಹೇಳಿದರು "ನಮ್ಮ ಶಾಲೆಯಲ್ಲಿ ಯಕ್ಷಗಾನ ತರಬೇತಿ ಆರಂಭವಾಗುತ್ತಿದೆ. ಆಸಕ್ತಿ ಇರುವ ವಿದ್ಯಾರ್ಥಿಗಳು ಸೇರಬಹುದು."

ಆ ಒಂದು ವಾಕ್ಯ ನನ್ನ ಜೀವನದ ದಿಕ್ಕನ್ನೇ ಬದಲಿಸಿತು.
ಇಂದಿಗೂ ನಾನು ಆ ಕ್ಷಣವನ್ನು ನೆನಪಿಸಿಕೊಂಡಾಗ ರೋಮಾಂಚನವಾಗುತ್ತದೆ. ಒಂದು ವೇಳೆ ನಾನು ಆಗ ಎಂಟನೇ ತರಗತಿಯಲ್ಲಿ ಇದ್ದಿದ್ದರೆ, ಆ ಅವಕಾಶ ನನಗೆ ಸಿಗುತ್ತಿರಲಿಲ್ಲ. ಬಹುಶಃ ನಾನು ಯಕ್ಷಗಾನ ಕಲಾವಿದೆಯಾಗಿಯೂ ರೂಪುಗೊಳ್ಳುತ್ತಿರಲಿಲ್ಲ. ಕೆಲವು ಸಂದರ್ಭಗಳಲ್ಲಿ ಜೀವನವನ್ನು ಬದಲಿಸುವುದು ದೊಡ್ಡ ಘಟನೆಗಳಲ್ಲ; ಒಂದು ಸರಳ ಅವಕಾಶ. ಆ ಅವಕಾಶವೇ ನನ್ನನ್ನು ಯಕ್ಷಗಾನದ ರಂಗದತ್ತ ಕರೆದುಕೊಂಡು ಹೋಯಿತು. ಆ ದಿನ ನನಗೆ ಗೊತ್ತಿರಲಿಲ್ಲ—ನಾನು ಕೇವಲ ಒಂದು ಕಲೆಯನ್ನು ಕಲಿಯಲು ಹೋಗುತ್ತಿಲ್ಲ; ನನ್ನ ಬದುಕಿನ ನಿಜವಾದ ದಾರಿಯನ್ನು ಕಂಡುಕೊಳ್ಳಲು ಹೊರಟಿದ್ದೇನೆ ಎಂದು.
ಆ ಚಿಕ್ಕ ಹೆಜ್ಜೆಯೇ ಮುಂದೆ ನನ್ನನ್ನು ಅನೇಕ ಗುರುಗಳ ಶಿಷ್ಯೆಯನ್ನಾಗಿ, ಹಲವು ಪಾತ್ರಗಳ ಕಲಾವಿದೆಯನ್ನಾಗಿ, ವಿಶ್ವವಿದ್ಯಾನಿಲಯದ ಅತಿಥಿ ಕಲಾವಿದೆಯನ್ನಾಗಿ, ಸಂಶೋಧನೆಯ ಕನಸು ಕಾಣುವ ವಿದ್ಯಾರ್ಥಿನಿಯನ್ನಾಗಿ ರೂಪಿಸಲಿದೆ ಎಂಬುದನ್ನು  ಊಹಿಸಿಯೂ ಇರಲಿಲ್ಲ.
ಆದರೆ ವಿಧಿ ಈಗಾಗಲೇ ನನ್ನ ಜೀವನದ ಮುಂದಿನ ಅಧ್ಯಾಯವನ್ನು ಬರೆಯಲು ಆರಂಭಿಸಿತ್ತು…

"ಗುರುವಿಲ್ಲದ ವಿದ್ಯೆ ಗಾಳಿಯಲ್ಲಿ ಕಟ್ಟಿದ ಗೋಪುರ."
ಈ ಮಾತಿನ ಅರ್ಥವನ್ನು ನಾನು ಯಕ್ಷಗಾನದ ಮೂಲಕ ಬದುಕಿನಲ್ಲಿ ಅನುಭವಿಸಿದ್ದೇನೆ. ಒಬ್ಬ ಕಲಾವಿದನಿಗೆ ಪ್ರತಿಭೆ ಹುಟ್ಟಿನಿಂದ ಬಂದಿರಬಹುದು. ಆದರೆ ಆ ಪ್ರತಿಭೆಗೆ ರೂಪ ಕೊಡುವವರು ಗುರುಗಳು. ಕಲ್ಲಿನೊಳಗಿನ ಶಿಲ್ಪವನ್ನು ಶಿಲ್ಪಿ ಹೊರತೆಗೆದಂತೆ, ಕಲಾವಿದನೊಳಗಿನ ಸಾಮರ್ಥ್ಯವನ್ನು ಹೊರತರುವವರು ಗುರುಗಳು. ಯಕ್ಷಗಾನ ಪಯಣವೂ ಗುರುಗಳ ಆಶೀರ್ವಾದದಿಂದಲೇ ಅರಳಿತು.

ಏಳನೇ ತರಗತಿಯಲ್ಲಿ ಶಾಲೆಯಲ್ಲಿ ಯಕ್ಷಗಾನ ತರಬೇತಿ ಆರಂಭವಾದಾಗ ನನ್ನನ್ನು ಮೊದಲ ಬಾರಿಗೆ ಕೈಹಿಡಿದವರು ಶ್ರೀ ಕೃಷ್ಣ ಮೂಲ್ಯ ಕೈರಂಗಳ ಮತ್ತು ಶ್ರೀ ನಾಗೇಶ್ ಆಚಾರ್ಯ. ಮುಂದೆ ಸಬ್ಬಣಕೋಡಿ ರಾಮ ಭಟ್ , ರಾಘವೇಂದ್ರ ರಾವ್ ಮಂಜನಾಡಿ ಮತ್ತು ಅವರ ಮಕ್ಕಳು, ಕೃಷ್ಣಪ್ಪ ಕೋಟೆಕಾರ್, ಸದಾಶಿವ ಶೆಟ್ಟಿಗಾರ್, ದೀವಿತ್ ಕೋಟ್ಯಾನ್, ಶರತ್ ಕುಡ್ಲ, ಅಕ್ಷಯ್ ಭಟ್, ಕೃಷ್ಣಪ್ಪ ಕಿನ್ಯ ಹಾಗೂ ಕೈರಂಗಳ ಗೋಪಾಲಕೃಷ್ಣ ಸಂಘದ ಎಲ್ಲಾ ಮಾರ್ಗದರ್ಶಕರು ಅದರಲ್ಲಿ ಮುಖ್ಯವಾಗಿ ದಿವಂಗತ ಆನೆಗುಂಡಿ ಗಣಪತಿ ಭಟ್ ರವರು. ಅವರ ಮಾರ್ಗದರ್ಶನ ನನ್ನ ಕಲಾ ಬದುಕಿನ ಅಮೂಲ್ಯ ಸಂಪತ್ತು.

ಅವರು ಪಾತ್ರವನ್ನು ಕಲಿಸುತ್ತಿರಲಿಲ್ಲ; ಪಾತ್ರದೊಳಗಿನ ಆತ್ಮವನ್ನು ಹುಡುಕಲು ಕಲಿಸುತ್ತಿದ್ದರು.
ಒಮ್ಮೆ ಅಭ್ಯಾಸದ ವೇಳೆ ಅವರು ಹೇಳಿದ ಮಾತು ಇಂದಿಗೂ ನನ್ನ ಕಿವಿಯಲ್ಲಿ ಮೊಳಗುತ್ತದೆ:
"ಪ್ರೇಕ್ಷಕರು ನಿನ್ನನ್ನು ನೋಡಬಾರದು... ನೀನು ಮಾಡುವ ಪಾತ್ರವನ್ನು ಮಾತ್ರ ನೋಡಬೇಕು. ಆ ದಿನ ನೀನು ನಿಜವಾದ ಕಲಾವಿದೆ"ಎಂದು.
ಆ ಒಂದು ವಾಕ್ಯ ನನ್ನ ಕಲಾ ಬದುಕಿನ ದಾರಿದೀಪವಾಯಿತು. ಹಾಗೆಯೇ ನನ್ನ ಬದುಕಿನಲ್ಲಿ ಪ್ರೋತ್ಸಾಹ ನೀಡಿದವರ ಸಾಲು ಕೂಡ ಅಷ್ಟೇ ದೊಡ್ಡದು. ಅವರಲ್ಲಿ ಸಂಧ್ಯಾ ರಾವ್, ಧನಂಜಯ್ ಕುಂಬ್ಳೆ ಸರ್ ಮತ್ತು ಸತೀಶ್ ಕೊಣಾಜೆ ಸರ್ ಹಾಗೂ ಸಹ ಕಲಾವಿದರಾದ ವಿನುತಾ ನಿತೇಶ್ ಪೂಜಾರಿ, ಪವಿತ್ರಲಕ್ಷ್ಮಿ, ಭೂಮಿಕಾ, ವಿದ್ಯಾ, ಸಾಯಿಸುಮ, ಪ್ರಜ್ಞಾ, ಕಾಜಲ್ ಅವರ ಪ್ರೋತ್ಸಾಹ ನನಗೆ ಯಾವಾಗಲೂ ಹೊಸ ಉತ್ಸಾಹವನ್ನು ನೀಡುತ್ತಿತ್ತು. ಕೆಲವೊಮ್ಮೆ ಒಬ್ಬ ಕಲಾವಿದನಿಗೆ ಬಹುಮಾನಕ್ಕಿಂತ ಒಂದು ಪ್ರೋತ್ಸಾಹದ ಮಾತೇ ಹೆಚ್ಚು ಶಕ್ತಿ ನೀಡುತ್ತದೆ. ಅಂತಹ ಮಾತುಗಳನ್ನು ನಾನು ಇವರಿಂದ ಅನೇಕ ಬಾರಿ ಕೇಳಿದ್ದೇನೆ.

ನೆಚ್ಚಿನ ಪ್ರಸಂಗಗಳು:-
ದ್ರುಪದ ಗರ್ವಭಂಗ, ಬಪ್ಪನಾಡು ಕ್ಷೇತ್ರ ಮಹಾತ್ಮೆ , ಶ್ರೀದೇವಿ ಮಹಾತ್ಮೆ , ಇಂದ್ರಜಿತು ಕಾಳಗ, ಸುದರ್ಶನ ಗರ್ವಭಂಗ, ದಕ್ಷಾಧ್ವರ, ಅಂಧಕಾಸುರ ಮೋಕ್ಷ, ಸೀತಾ ಕಲ್ಯಾಣ, ವೀರವರ್ಮ ಕಾಳಗ, ತರಣಿಸೇನ ಕಾಳಗ, ಶಶಿಪ್ರಭಾ ಪರಿಣಯ, ಜಾಂಬವತಿ ಕಲ್ಯಾಣ,
ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು:-
ಚೆಂಡೆ ವಾದಕರಲ್ಲಿ ರೋಹಿತ್ ಉಚ್ಚಿಲ ಅವರ ವಾದನ ನನಗೆ ಬಹಳ ಇಷ್ಟ. ಮದ್ದಳೆ ವಾದಕರಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯರ ಮದ್ದಳೆ ವಾದನ ನನಗೆ ಅಚ್ಚುಮೆಚ್ಚು.
ನೆಚ್ಚಿನ ಭಾಗವತರು:-
ರಾಜಾರಾಮ ಹೊಳ್ಳ, ಪ್ರದೀಪ್ ಗಟ್ಟಿ, ರವಿಚಂದ್ರ ಕನ್ನಡಿಕಟ್ಟೆ ಹಾಗೂ ಧೀರಜ್ ರೈ ಸಂಪಾಜೆ ಅವರ ಭಾಗವತಿಕೆ ನನಗೆ ಬಹಳ ಪ್ರಿಯ.








ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದು ಯಕ್ಷಗಾನ ಉತ್ತಮ ಬೆಳವಣಿಗೆಯ ಹಾದಿಯಲ್ಲಿದೆ. ಯುವಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ತಂತ್ರಜ್ಞಾನದಿಂದ ಯಕ್ಷಗಾನ ವಿಶ್ವದಾದ್ಯಂತ ತಲುಪುತ್ತಿದೆ. ಆದರೆ ಅದರ ಸಂಪ್ರದಾಯ, ಸಾಹಿತ್ಯ ಮತ್ತು ಆಹಾರ್ಯದ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ಪ್ರೇಕ್ಷಕರು ಕಲೆಯ ಬಗ್ಗೆ ಹೆಚ್ಚು ಅರಿವು ಹೊಂದಿದ್ದಾರೆ. ಉತ್ತಮ ಅಭಿನಯ, ಶುದ್ಧ ಸಂಭಾಷಣೆ ಮತ್ತು ಸಂಪ್ರದಾಯಬದ್ಧ ಪ್ರದರ್ಶನವನ್ನು ಅವರು ಮೆಚ್ಚುತ್ತಾರೆ. ಕಲಾವಿದರು ನಿರಂತರವಾಗಿ ಕಲಿಯುತ್ತಾ ತಮ್ಮನ್ನು ತಾವು ಉತ್ತಮಗೊಳಿಸಿಕೊಳ್ಳಬೇಕಾಗಿದೆ.

ಮಹಿಳಾ ಯಕ್ಷಗಾನದಲ್ಲಿ ನೀವು ಕಂಡುಕೊಂಡ ಸಾಧಕ ಹಾಗೂ ಬಾಧಕಗಳು:-
ಮಹಿಳೆಯರಿಗೆ ಇಂದು ಯಕ್ಷಗಾನದಲ್ಲಿ ಹೆಚ್ಚಿನ ಅವಕಾಶಗಳು ದೊರೆಯುತ್ತಿರುವುದು ಸಂತಸದ ವಿಷಯ. ಅನೇಕ ಪ್ರತಿಭಾವಂತ ಕಲಾವಿದೆಯರು ಹೊರಹೊಮ್ಮುತ್ತಿದ್ದಾರೆ. ಆದರೆ ನಿರಂತರ ಅಭ್ಯಾಸ, ಅಧ್ಯಯನ ಮತ್ತು ಸಂಪ್ರದಾಯದ ಅರಿವು ಇನ್ನಷ್ಟು ಗಟ್ಟಿಯಾಗಬೇಕು. ಮಹಿಳೆಯರು ಯಕ್ಷಗಾನವನ್ನು ಹವ್ಯಾಸವಾಗಿ ಮಾತ್ರವಲ್ಲ, ಅಧ್ಯಯನದ ವಿಷಯವಾಗಿಯೂ ಪರಿಗಣಿಸಬೇಕು ಎಂಬುದು ನನ್ನ ಆಶಯ.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:⁠-
ಯಕ್ಷಗಾನದ ಆಹಾರ್ಯವೇ ಅದರ ವೈಭವ. ಹೊಸತನವನ್ನು ಸ್ವಾಗತಿಸಬಹುದು. ಆದರೆ ಸಂಪ್ರದಾಯವನ್ನು ಕಳೆದುಕೊಳ್ಳಬಾರದು. ಆಹಾರ್ಯ, ಮುಖವರ್ಣಿಕೆ, ವೇಷಭೂಷಣ ಮತ್ತು ಪಾತ್ರದ ಮೂಲ ಸ್ವರೂಪವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ. ಹಾಗೆಯೇ ಯಕ್ಷಗಾನ ಕೇವಲ ವೇದಿಕೆಗೆ ಸೀಮಿತವಾಗಿರದೆ ಅಧ್ಯಯನದ ವಿಷಯವಾಗಬೇಕು, ಸಂಶೋಧನೆಯ ವಿಷಯವಾಗಬೇಕು, ಮುಂದಿನ ಜನಾಂಗಕ್ಕೆ ಸಂಸ್ಕೃತಿಯ ಪರಂಪರೆಯಾಗಿ ಉಳಿಯಬೇಕು.

ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆಗಳು:-
ಪ್ರಸ್ತುತ ಕನ್ನಡ ಎಂ.ಎ. ಅಧ್ಯಯನ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಯಕ್ಷಗಾನದ ಕುರಿತು ಸಂಶೋಧನೆ ನಡೆಸುವ ಆಸೆಯಿದೆ. ಯಕ್ಷಗಾನವನ್ನು ಕೇವಲ ರಂಗದಲ್ಲಷ್ಟೇ ಅಲ್ಲ, ಅಧ್ಯಯನ ಮತ್ತು ಸಂಶೋಧನೆಯ ಮೂಲಕವೂ ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂಬುದು ನನ್ನ ಕನಸು.








ಪ್ರತಿಭಾ ಕಾರಂಜಿಯಲ್ಲಿ ಅನೇಕ ಬಹುಮಾನಗಳು, ಜಿಲ್ಲಾ ಮಟ್ಟದ ರಂಗೋಲಿಯಲ್ಲಿ ಪ್ರಥಮ ಬಹುಮಾನ,  ಗಣರಾಜ್ಯೋತ್ಸವ ಶಿಬಿರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿಲು ಸಿಕ್ಕಿದ ಅವಕಾಶ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ದ್ವಿತೀಯ ರಾಂಕ್, ಮಂಗಳೂರು ವಿಶ್ವವಿದ್ಯಾನಿಲಯದ ಕನಕ ಪೀಠದಿಂದ ಕುಣಿತ ಭಜನೆಗಾಗಿ ಕನಕ ಪುರಸ್ಕಾರ ಹಾಗೂ ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳಲ್ಲಿ ಅತಿಥಿ ಕಲಾವಿದೆಯಾಗಿ ಭಾಗವಹಿಸುವ ಅವಕಾಶಗಳು ನನ್ನ ಜೀವನದ ಅಮೂಲ್ಯ ಗೌರವಗಳು.

ಶಾಲೆ, ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿವಿಧ ಹವ್ಯಾಸಿ ಯಕ್ಷಗಾನ ತಂಡಗಳೊಂದಿಗೆ ಕಳೆದ 20 ವರ್ಷಗಳಿಂದ ಯಕ್ಷರಂಗದಲ್ಲಿ ಕಲಾಸೇವೆ ಸಲ್ಲಿಸುತ್ತಿದ್ದಾರೆ ವಿನುತಾ.




ಹವ್ಯಾಸಗಳು:-
ಯಕ್ಷಗಾನ, ಓದು, ಸಾಹಿತ್ಯ ಅಧ್ಯಯನ, ರಂಗೋಲಿ, ಮೆಹೆಂದಿ,  ಜಾನಪದ ಕಲೆಗಳು, ಹಾಗೂ ಬರವಣಿಗೆ ಪ್ರಮುಖ ಹವ್ಯಾಸಗಳು.

ವಿನುತಾ ಡಿ ಗಟ್ಟಿ ಅವರು 30.01.2020ರಂದು ಕಿಶನ್ ರಾಜ್ ಅವರನ್ನು ಮದುವೆಯಾಗಿ ಸುಖೀ ಸಂಸಾರ ನಡೆಸುತ್ತಿದ್ದಾರೆ. ಪತಿ ಹಾಗೂ ಅವರ ಕುಟುಂಬ ನನ್ನ ಕಲಾ ಪಯಣಕ್ಕೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ.




ಕೊನೆಯದಾಗಿ
"ಯಕ್ಷಗಾನ ನನ್ನ ವೃತ್ತಿಯಲ್ಲ...
ನನ್ನ ಹವ್ಯಾಸವೂ ಅಲ್ಲ...
ಅದು ನನ್ನ ಬದುಕಿನ ಉಸಿರು, ನನ್ನ ಅಸ್ತಿತ್ವ, ನನ್ನ ಆತ್ಮ."
ರಂಗದ ಪರದೆ ಒಂದು ದಿನ ಮುಚ್ಚಬಹುದು.
ದೀಪಗಳ ಬೆಳಕು ಒಂದು ದಿನ ಆರಬಹುದು
ಆದರೆ...
ಯಕ್ಷಗಾನಕ್ಕಾಗಿ ಮಿಡಿದ ಹೃದಯ ಎಂದಿಗೂ ಮೌನವಾಗುವುದಿಲ್ಲ.
ಅದರ ಬಡಿತದಲ್ಲಿ ನಾನು ಇರುತ್ತೇನೆ. ನನ್ನ ಊರು ಇರುತ್ತದೆ. ನನ್ನ ಕುಟುಂಬ ಇರುತ್ತದೆ.
ಮತ್ತು...
ಯಕ್ಷಗಾನ ಎಂದೆಂದಿಗೂ ಜೀವಂತವಾಗಿರುತ್ತದೆ.

ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎನ್ನುತ್ತಾರೆ ವಿನುತಾ ಕಿಶನ್ ರಾಜ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395