ಯಕ್ಷ ಸಾಧಕರು 392
"ಯಕ್ಷ ಕಲಾ ಕುವರ"
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ದೇವಂಗಿಯ ಉಂಟೂರಿನ ಕೃಷ್ಣಮೂರ್ತಿ ಹಾಗೂ ಪದ್ಮಾವತಿ ಇವರ ಮಗನಾಗಿ 9.04.1991ರಂದು ಪ್ರಸನ್ನ ದೇವಂಗಿ ಜನನ. ಬಿ ಗಣಪತಿ ಸಹ್ಯಾದ್ರಿ ವಾರ್ತೆ ಸಂಪಾದಕರು, ತಂದೆ, ತಾಯಿ ಹಾಗೂ ತಂಗಿಯ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದ ಇವರು ಗುತ್ಯಮ್ಮ ಮೇಳ, ಮಂದಾರ್ತಿ ಮೇಳ, ಮಾರಣಕಟ್ಟೆ ಮೇಳ, ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡಿ ಯಕ್ಷಗಾನ ರಂಗದಲ್ಲಿ ಗುರುಗಳಾಗಿ 300ಕ್ಕೂ ಹೆಚ್ಚು ಮಂದಿಗೆ ಯಕ್ಷಗಾನ ಕಲಿಸುತ್ತಾ ಕಳೆದ 20 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಪ್ರಸನ್ನ.
ಪ್ರಸಾದ್ ಮೊಗೆಬೆಟ್ಟು ಅವರಲ್ಲಿ ಯಕ್ಷಗಾನದ ತಾಳ ಅಭ್ಯಸಿಸಿ ನಂತರದಲ್ಲಿ ಸಂಜೀವ ಸುವರ್ಣ ಬನ್ನಂಜೆ, ಗಣೇಶ ಚೇರ್ಕಾಡಿ, ಮಂಜುನಾಥ ಕುಲಾಲ್ ಐರೋಡಿಯವರಿಂದ ಯಕ್ಷಗಾನ ಕಲಿತರು.
ನೆಚ್ಚಿನ ಪ್ರಸಂಗಗಳು:-
ಸುಧನ್ವ ಮೋಕ್ಷ, ಬಬ್ರುವಾಹನ, ವಾಲಿ ವಧೆ, ಅಭಿಮನ್ಯು ಕಾಳಗ, ಸತ್ಯಹರೀಶ್ಚಂದ್ರ, ಕರ್ಣ ಪರ್ವ, ದೇವಿ ಮಹಾತ್ಮೆ, ದಕ್ಷಯಜ್ಞ, ಚಂದ್ರಹಾಸ, ಕುಶಲವ, ಜಾಂಬವತಿ ಕಲ್ಯಾಣ, ವೃಷಸೇನ, ವೀರ ಬಾರ್ಬರಿಕ, ಕೃಷ್ಣ ಲೀಲೆ ಇತ್ಯಾದಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಹಿರಿಯ ಕಲಾವಿದರಲ್ಲಿ ಮಾಹಿತಿ ಪಡೆದು ಅಧ್ಯಯನ ಮಾಡಿ, ಭಾಗವತರಲ್ಲಿ ಕೇಳಿ ವೇಷದ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪ್ರಸನ್ನ ದೇವಂಗಿ.
ನಿಮ್ಮ ವೇಷಕ್ಕೆ ಯಾರಾದರೂ ಮಾದರಿ ಕಲಾವಿದರು ಇದ್ದಾರ:-
ಈ ಹಿಂದಿನ ಹಿರಿಯ ಪುರುಷ ವೇಷಧಾರಿ ಹಾಗೂ ಪುಂಡು ವೇಷದವರು ನನಗೆ ಮಾದರಿ ಕಲಾವಿದರು ಎಂದು ಹೇಳುತ್ತಾರೆ ಪ್ರಸನ್ನ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದು ಯಕ್ಷಗಾನ ಉತ್ತಮ ಬೆಳವಣಿಗೆಯ ಹಾದಿಯಲ್ಲಿದೆ. ಯುವಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ತಂತ್ರಜ್ಞಾನದಿಂದ ಯಕ್ಷಗಾನ ವಿಶ್ವದಾದ್ಯಂತ ತಲುಪುತ್ತಿದೆ.
ತಪ್ಪು ಸರಿಗಳನ್ನು ವಿಮರ್ಶೆ ಮಾಡುವ ಬದಲು ಯಕ್ಷಗಾನಕ್ಕೆ ಬಂದ ಪ್ರೇಕ್ಷಕರ ಮನಸ್ಸನ್ನು ತೃಪ್ತಿ ಪಡಿಸುವುದೇ ಮೂಲ ಉದ್ದೇಶವಾಗಿದೆ.
ಯಕ್ಷಗಾನ ರಂಗದ ಮುಂದಿನ ಯೋಜನೆ:-
ಯಕ್ಷಗಾನವನ್ನು ಇನ್ನೊಬ್ಬರಿಗೆ ಕಲಿಸಿ ಅವರನ್ನು ರಂಗಕ್ಕೆ ತರುವುದು. ಸಂಘ ಸಂಸ್ಥೆಗಳಲ್ಲಿ ಹಾಗೂ ಶಾಲೆಗಳಲ್ಲಿ ಯಕ್ಷಗಾನವನ್ನು ಹೇಳಿ ಕೊಡುವುದು ಮುಂದಿನ ಯೋಜನೆ ಎಂದು ಹೇಳುತ್ತಾರೆ ಪ್ರಸನ್ನ.
ಸನ್ಮಾನ ಹಾಗೂ ಪ್ರಶಸ್ತಿ:-
♦️ ಮಂಗಳೂರಿನ ಕಲಾ ಸಂಗಮ ಸಾಂಸ್ಕೃತಿಕ ವೇದಿಕೆ ಸಂಸ್ಥೆಯಿಂದ ಸನ್ಮಾನ.
♦️ ಕಲಾ ಸಂಗಮ ಪ್ರತಿಭಾ ಪುರಸ್ಕಾರ.
ಮರಾಠಿ ಸೇವಾ ಸಮಾಜದಿಂದ ಸನ್ಮಾನ.
♦️ ಪೆರ್ಡೂರು ಮೇಳದ ರಂಗಸ್ಥದಲ್ಲಿ ಊರಿನವರ ಸನ್ಮಾನ.
♦️ ಸರ್ವೇ ಕಲ್ಚರ್ ಅಕಾಡಮಿ(ರಿ) ಬೆಂಗಳೂರು ಇವರಿಂದ ಸನ್ಮಾನ.
♦️ ಶಿವಮೊಗ್ಗದಲ್ಲಿ ಕರ್ನಾಟಕ ಕಂಠೀರವ ಪ್ರಶಸ್ತಿ.
ಹಾಗೂ ಇನ್ನು ಹಲವು ಪ್ರಶಸ್ತಿ ಹಾಗೂ ಸನ್ಮಾನಗಳು ದೊರೆತಿರುತ್ತದೆ.
ಮನೆಯಲ್ಲಿ ಕೃಷಿ ಚಟುವಟಿಕೆ ಇವರ ಹವ್ಯಾಸಗಳು.
ಗುತ್ಯಮ್ಮ ಜನಪದ ಕಲಾ ಕೇಂದ್ರದಿಂದ 120 ಮಕ್ಕಳಿಗೆ ಯಕ್ಷಗಾನ ತರಬೇತಿ.
ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಯಕ್ಷ ಶಿಕ್ಷಣದ ಅಡಿಯಲ್ಲಿ 205 ಮಕ್ಕಳಿಗೆ ಯಕ್ಷಗಾನ ತರಬೇತಿ.
ಪ್ರಸನ್ನ ದೇವಂಗಿ ಅವರು 4.07.2017ರಂದು ಅನಿತಾ ಅವರನ್ನು ಮದುವೆಯಾಗಿ ಮಗಳು ಕಾತ್ಯಾಯಿನಿ ಜೊತೆಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.
ತಂದೆ ತಾಯಿ, ತಂಗಿ, ಹೆಂಡತಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎನ್ನುತ್ತಾರೆ ಪ್ರಸನ್ನ ದೇವಂಗಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಮಂದಾರ್ತಿ ದುರ್ಗಾಪರಮೇಶ್ವರೀ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment